ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರಮಂದಿರ ತೆರೆಯಲು ಅವಕಾಶ: ಪ್ರೇಕ್ಷಕರಲ್ಲಿ ಇರಲಿ ಎಚ್ಚರ

Last Updated 15 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಚಲನಚಿತ್ರವು ನಮ್ಮ ಬಹುಮುಖ್ಯ ಮನರಂಜನಾ ಮಾಧ್ಯಮಗಳಲ್ಲಿ ಒಂದು. ಚಿತ್ರಮಂದಿರದಲ್ಲಿ ಕುಳಿತು ಸಿನಿಮಾ ನೋಡುವ ಅನುಭೂತಿಯೇ ಬೇರೆ. ಕೊರೊನಾ ಕಾರಣದಿಂದ ಆರೇಳು ತಿಂಗಳುಗಳಿಂದ ಥಿಯೇಟರಿಗೆ ಹೋಗಿ ಸಿನಿಮಾ ನೋಡುವ ಅವಕಾಶದಿಂದ ಪ್ರೇಕ್ಷಕರು ವಂಚಿತರಾಗಿದ್ದರು. ಮಲ್ಟಿಪ್ಲೆಕ್ಸ್‌ ಹಾಗೂ ಚಿತ್ರಮಂದಿರಗಳನ್ನು ತೆರೆಯಲು ಈಗ ಅವಕಾಶ ನೀಡಲಾಗಿದೆ. ಸ್ಥಗಿತಗೊಂಡಿದ್ದ ಈ ಉದ್ಯಮವು ವಹಿವಾಟು ಪುನಃ ಆರಂಭಿಸಲು ಸಜ್ಜಾಗಿದೆ. ಆದರೆ, ಪ್ರೇಕ್ಷಕರ ಸುರಕ್ಷತೆಯ ಸಲುವಾಗಿ ಕೋವಿಡ್ ಹರಡುವಿಕೆ ತಡೆ ಮಾರ್ಗಸೂಚಿಯು ಅನೂಚಾನವಾಗಿ ಪಾಲನೆ ಯಾಗುವಂತೆ ನೋಡಿಕೊಳ್ಳಬೇಕಾದ ಸವಾಲು ಈಗ ಈ ಉದ್ಯಮದ ಮುಂದಿದೆ. ಸಿನಿಮಾದ ಒಂದು ಪ್ರದರ್ಶನ ಮುಗಿದ ನಂತರ ಸ್ಯಾನಿಟೈಸ್ ಮಾಡುವುದು,ಸೀಟುಗಳ ನಡುವೆ ಅಂತರ ಕಾಯ್ದುಕೊಳ್ಳುವುದು, ತಿನಿಸು ಹಾಗೂ ಪಾನೀಯವನ್ನು ಗ್ರಾಹಕರು ತೆಗೆದುಕೊಂಡು ಬಂದಿಲ್ಲ ಎನ್ನುವುದನ್ನು ಖಾತರಿಪಡಿಸಿಕೊಳ್ಳುವುದು,ಎಲ್ಲರ ಥರ್ಮಲ್ ಸ್ಕ್ರೀನಿಂಗ್ ಮಾಡುವುದು,ಮಾಸ್ಕ್ ಧರಿಸುವಂತೆ ನಿಗಾ ವಹಿಸುವುದು, ವೃದ್ಧರನ್ನು ಹೆಚ್ಚು ಕಾಳಜಿಯಿಂದ ಗಮನಿಸುವುದು... ಇಂತಹ ಕ್ರಮಗಳನ್ನು ಮಲ್ಟಿಪ್ಲೆಕ್ಸ್‌ ಹಾಗೂ ಚಿತ್ರಮಂದಿರಗಳ ಸಿಬ್ಬಂದಿ ಅನುಸರಿಸುವುದು ಈಗ ಅತ್ಯಗತ್ಯ. ಈ ಸುರಕ್ಷಾ ಕ್ರಮಗಳಲ್ಲಿ ತುಸು ಲೋಪವಾದರೂ ಸೋಂಕು ವ್ಯಾಪಿಸುವ ಆತಂಕ ಇದ್ದೇ ಇದೆ.

ಚಲನಚಿತ್ರ ಉದ್ಯಮವನ್ನೇ ನೆಚ್ಚಿಕೊಂಡು ಬದುಕು ಕಟ್ಟಿಕೊಂಡವರ ಸಂಖ್ಯೆ ದೊಡ್ಡದಿದೆ. ಅವರಲ್ಲಿ ಅನೇಕರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಚಿತ್ರವಿತರಕರು, ಪ್ರದರ್ಶಕರು,ನಿರ್ಮಾಪಕರು, ನಿರ್ದೇಶಕರು, ಚಿತ್ರಕರ್ಮಿಗಳು ಹೀಗೆ ಎಲ್ಲರ ಬದುಕಿನಲ್ಲಿ ಚಿತ್ರಮಂದಿರಗಳು ಮುಖ್ಯ ಪಾತ್ರ ವಹಿಸುತ್ತವೆ. ಅವು ಕಾರ್ಯಾರಂಭ ಮಾಡುವುದರಿಂದ ಎಷ್ಟೋ ಜನರ ತುತ್ತಿನ ಚೀಲಗಳು ತುಂಬುತ್ತವೆ. ಈ ಸಕಾರಾತ್ಮಕ ಅಂಶದ ಹೊರತಾಗಿಯೂ ಕೋವಿಡ್ ಮಾರ್ಗಸೂಚಿಯನ್ನು ಚಾಚೂತಪ್ಪದೆ ಪಾಲಿಸುತ್ತಾ,ದೊಡ್ಡ ಸಂಖ್ಯೆಯಲ್ಲಿ ಜನ ಬಂದರೆ ನಿಭಾಯಿಸುವ ಸಮರ್ಪಕ ವ್ಯವಸ್ಥೆಗೆ ಚಿತ್ರಮಂದಿರಗಳ ಸಿಬ್ಬಂದಿ ಹೊಂದಿಕೊಳ್ಳಲೇ ಬೇಕಿದೆ. ಮಲ್ಟಿಪ್ಲೆಕ್ಸ್‌ನಲ್ಲಂತೂ ಮೈಯೆಲ್ಲ ಕಣ್ಣಾಗಿರ ಬೇಕು. ತಾಲ್ಲೂಕು ಕೇಂದ್ರಗಳಲ್ಲಿ, ಪಟ್ಟಣ ಗಳಲ್ಲಿನ ಏಕಪರದೆಯ ಚಿತ್ರಮಂದಿರಗಳಲ್ಲಾದರೆ ವಿಶಾಲವಾದ ಪ್ರಾಂಗಣ ಇರುತ್ತದೆ. ಅಂತರ ಕಾಯ್ದುಕೊಳ್ಳಲು ಅದರಿಂದ ಅನುಕೂಲವಾಗು ತ್ತದೆ. ಬಾಗಿಲುಗಳನ್ನು ತೆರೆದಿಟ್ಟು ಒಂದಿಷ್ಟು ಗಾಳಿ ಬರುವಂತೆಯೂ ನೋಡಿಕೊಳ್ಳಬಹುದು. ಮಲ್ಟಿಪ್ಲೆಕ್ಸ್‌ನಲ್ಲಿ ಇಂತಹ ಅನುಕೂಲವೂ ಇರದು. ಅಲ್ಲಿನ ಸಿಬ್ಬಂದಿ ಮತ್ತಷ್ಟು ಸೂಕ್ಷ್ಮವಾಗಿ ನಿಗಾ ವಹಿಸಬೇಕು. ನಿಭಾಯಿಸುವಲ್ಲಿ ಎದುರಾಗ ಬಹುದಾದ ಕಷ್ಟ ತಿಳಿದೇ ಎಷ್ಟೋ ತಾಲ್ಲೂಕು ಹಾಗೂ ಪಟ್ಟಣಗಳಲ್ಲಿನ ಚಿತ್ರಮಂದಿರಗಳ ಮಾಲೀಕರು ಕಾಯ್ದು ನೋಡುವ ತಂತ್ರವನ್ನು ಅನುಸರಿಸಲು ಮುಂದಾಗಿದ್ದಾರೆ. ನಗರಗಳಲ್ಲಿ ಪ್ರೇಕ್ಷಕರ ಪ್ರತಿಕ್ರಿಯೆ ಗಮನಿಸಿ, ಚಿತ್ರಮಂದಿರ ತೆರೆಯುವ ಬಗ್ಗೆ ಯೋಚಿಸಲು ತೀರ್ಮಾನಿಸಿದ್ದಾರೆ. ಆರ್ಥಿಕವಾಗಿಯೂ ಕೆಲವು ಹೊಂದಾಣಿಕೆಗಳನ್ನು ಚಿತ್ರಮಂದಿರಗಳ ಮಾಲೀಕರು ಮಾಡಿಕೊಳ್ಳುವ ಸಂದರ್ಭ ಎದುರಾಗಿದೆ. ರಾಜ್ಯದ ಕೆಲವೆಡೆ ಮಲ್ಟಿಪ್ಲೆಕ್ಸ್‌ನಲ್ಲಿಯೂ ಟಿಕೆಟ್‌ ದರದಲ್ಲಿ ಸದ್ಯಕ್ಕೆ ರಿಯಾಯಿತಿ ಪ್ರಕಟಿಸಲಾಗಿದೆ. ವಹಿವಾಟು ಇಲ್ಲದೇ ಇರುವ ಸ್ಥಿತಿಗಿಂತ ಗ್ರಾಹಕರನ್ನು ಹಂತ ಹಂತವಾಗಿ ಒಳಗೊಳ್ಳುವ ನಡೆಯಿದು. ಚಿತ್ರಮಂದಿರದ ಒಳಗೆ ಕಾಲಿಡುವ ಪ್ರೇಕ್ಷಕರು ಪ್ರಜ್ಞಾವಂತಿಕೆಯಿಂದ ವರ್ತಿಸಬೇಕಾದುದು ಬಹಳ ಮುಖ್ಯ. ಪರಸ್ಪರ ಅಂತರ ಕಾಯ್ದುಕೊಳ್ಳುವುದು,ಮಾಸ್ಕ್ ಹಾಕಿಕೊಂಡೇ ಒಳಗೆ ಪ್ರವೇಶಿಸುವುದು,ಜ್ವರ ಅಥವಾ ಮೈಕೈ ನೋವು ಇದ್ದರೆ ಹೋಗದೇ ಇರುವಂತಹ ವಿವೇಕವನ್ನು ಜನ ತೋರಬೇಕು. ಸೋಂಕು ಸುಲಭವಾಗಿ ಹರಡಬಹುದಾದ ಸಾಧ್ಯತೆಯುಳ್ಳ ಚಿತ್ರಮಂದಿರದಂತಹ ಸ್ಥಳಗಳಲ್ಲಿ ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಅಷ್ಟೇ ಅಲ್ಲದೆ,ದಸರಾ ಹಾಗೂ ದೀಪಾವಳಿ ಹಬ್ಬಗಳ ಸಡಗರಕ್ಕೆ ಜನಮನ ತೆರೆದುಕೊಳ್ಳುವ ಸಂದರ್ಭವೂ ಸನ್ನಿಹಿತವಾಗಿದೆ. ರಾಜ್ಯದ ಬಹುತೇಕರಿಗೆ ಇವೆರಡೂ ಪ್ರಮುಖವಾದ ಹಬ್ಬಗಳು. ಆಚರಣೆ,ಸಂಭ್ರಮಕ್ಕೆ ಮುಂದಾಗುವವರಿಗೆ ಕೊರೊನಾ ಸೋಂಕಿನ ಎಚ್ಚರಿಕೆಯ ಗಂಟೆಯೂ ತಲೆಯ ಮೇಲೆ ಇದೆ ಎನ್ನುವ ಅರಿವು ಇರಬೇಕು. ಮನೆಮಟ್ಟಿಗೆ ಸರಳವಾಗಿ ಧಾರ್ಮಿಕ ವಿಧಿ–ವಿಧಾನಗಳನ್ನು ಪೂರೈಸಿ,ಹಬ್ಬದೂಟ ಮಾಡುವಷ್ಟಕ್ಕೇ ಆಚರಣೆಯನ್ನು ಸೀಮಿತಗೊಳಿಸುವುದು ಉತ್ತಮ. ಮಾರುಕಟ್ಟೆಯಲ್ಲಿ ಬೂದುಗುಂಬಳ,ಬಾಳೆಕಂದು,ಹೂ–ಹಣ್ಣು,ಸಿಹಿತಿನಿಸುಗಳನ್ನು ಕೊಳ್ಳಲು ಮುಗಿಬೀಳುವುದು ಈ ಸಂದರ್ಭದಲ್ಲಿ ಸರಿಯಲ್ಲ. ಹೊರಗೆ ಸಹಜ ಚಟುವಟಿಕೆಗೆ ಸರ್ಕಾರ ಅನುವು ಮಾಡಿಕೊಟ್ಟಿದ್ದರೂ ಕೊರೊನಾ ಸೋಂಕಿನ ಆತಂಕ ಇನ್ನೂ ದೂರವಾಗಿಲ್ಲ ಎಂಬುದನ್ನು ಎಲ್ಲರೂ ನೆನಪಿನಲ್ಲಿ ಇಡಬೇಕು. ಹೀಗಾಗಿ, ಅತ್ಯಂತ ವಿವೇಚನೆಯಿಂದ ಎಲ್ಲರೂ ಹೆಜ್ಜೆ ಇಡೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT