ಸೋಮವಾರ, ಸೆಪ್ಟೆಂಬರ್ 20, 2021
21 °C

ಮಳೆಯ ಆರ್ಭಟಕ್ಕೆ ತತ್ತರಿಸಿದ ಬದುಕು- ವಿಳಂಬ ಮಾಡದೆ ಜನರ ಕಣ್ಣೀರು ಒರೆಸಿ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ರಾಜ್ಯದಲ್ಲಿ ನೈಋತ್ಯ ಮುಂಗಾರಿನ ಅಬ್ಬರ ಜೋರಾಗಿದೆ. ಉತ್ತರ ಕರ್ನಾಟಕ, ಕರಾವಳಿ ಹಾಗೂ ಮಲೆನಾಡಿನ ಹಲವು ಜಿಲ್ಲೆಗಳಲ್ಲಿ ಮಳೆ ಆರ್ಭಟಿಸಿದೆ. ಅದರಲ್ಲೂ ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳು ಮಳೆಯ ಅಟಾಟೋಪದಿಂದ ನಲುಗಿ ಹೋಗಿವೆ. ಮಹಾರಾಷ್ಟ್ರದಲ್ಲೂ ಭಾರಿ ಪ್ರಮಾಣದ ಮಳೆ ಸುರಿಯುತ್ತಿದ್ದು, ಕೃಷ್ಣಾ ಹಾಗೂ ಅದರ ಉಪನದಿಗಳು ಉಕ್ಕಿ ಹರಿಯುತ್ತಿವೆ. ಇದರಿಂದ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ನೂರಾರು ಗ್ರಾಮಗಳು ಜಲಾವೃತದ ಭೀತಿಯನ್ನೂ ಎದುರಿಸುತ್ತಿವೆ. ಹಲವೆಡೆ ಸೇತುವೆಗಳು ಮುಳುಗಡೆಯಾಗಿ ಸಂಪರ್ಕ ಕಡಿದುಹೋಗಿದೆ. ಬಿತ್ತನೆಯಾಗಿದ್ದ ಸಾವಿರಾರು ಎಕರೆ ಕೃಷಿಭೂಮಿಯಲ್ಲಿ ಈಗ ಹಸಿರೆಲ್ಲ ಮಾಯವಾಗಿ ನೀರು ನಿಂತಿದೆ. ಮೇಲಿಂದ ಮೇಲೆ ಪ್ರವಾಹದ ಪರಿಸ್ಥಿತಿ ಉಂಟಾಗುತ್ತಿರುವ ಕಾರಣ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಯಾದಗಿರಿ ಮತ್ತಿತರ ಜಿಲ್ಲೆಗಳ ಜನ ಬಸವಳಿದು ಹೋಗಿದ್ದಾರೆ. ಅವರ ವಾಸದ ಮನೆ, ದವಸ–ಧಾನ್ಯ, ದನಕರುಗಳ ಕೊಟ್ಟಿಗೆ, ಒಣಮೇವು, ಪಚ್ಚೆಪೈರಿನ ಜತೆಗೆ ಭವಿಷ್ಯದ ಕನಸುಗಳೂ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಈ ಸಮಸ್ಯೆಗೊಂದು ಶಾಶ್ವತ ಪರಿಹಾರವಿಲ್ಲವೇ ಎನ್ನುವುದು ಅವರು ಮುಗ್ಧವಾಗಿ ಮುಂದಿಡುತ್ತಿರುವ ಪ್ರಶ್ನೆ. ಇತ್ತೀಚಿನ ದಿನಗಳಲ್ಲಿ ಪ್ರವಾಹದ ಪರಿಸ್ಥಿತಿ ಪದೇ ಪದೇ ಉಂಟಾಗಲು ಹವಾಮಾನ ಬದಲಾವಣೆಯೂ ಒಂದು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಬೆಟ್ಟ, ಅರಣ್ಯ, ನದಿ ಗಳಂತಹ ಪ್ರಾಕೃತಿಕ ಪರಿಸರದಲ್ಲಿ ನಡೆಸುವ ನಮ್ಮ ಅಭಿವೃದ್ಧಿ ಯೋಜನೆಗಳು ದಿಕ್ಕು ತಪ್ಪಿವೆ. ಹವಾಮಾನ ಬದಲಾವಣೆಗೆ ಇಂತಹ ದಿಕ್ಕು ತಪ್ಪಿದ ಯೋಜನೆಗಳೂ ಕಾರಣವಾಗಿವೆ ಎಂಬುದನ್ನು ವಿಜ್ಞಾನಿಗಳು ಪ್ರತಿಪಾದಿಸುತ್ತಲೇ ಬಂದಿದ್ದಾರೆ. ಕಾಡು–ಮೇಡು, ನದಿ, ಹಳ್ಳ–ಕೊಳ್ಳವನ್ನೂ ಬಿಡದಂತೆ ನಡೆದ ಒತ್ತುವರಿ ಸಹ ಇಂದಿನ ಸ್ಥಿತಿಗೆ ತನ್ನದೇ ಆದ ಕೊಡುಗೆಯನ್ನು ನೀಡಿದೆ. ನದಿ, ಹಳ್ಳಗಳೆಲ್ಲ ತುಂಬಿ ಹರಿದು ನೀರು ತಮ್ಮ ಮನೆಗಳ ತನಕ ಬರುವುದೇಕೆ ಎಂಬ ಬಗ್ಗೆ ಗ್ರಾಮಸ್ಥರೂ ಚಿಂತಿಸಬೇಕಾದ ಕಾಲ ಇದು.  

ಪದೇ ಪದೇ ದುರಂತಗಳ ಕಹಿ ನೆನಪು ಕಾಡಿದರೂ ಹಳೆಯ ತಪ್ಪುಗಳಿಂದ ನಾವೇನೂ ಪಾಠವನ್ನೇ ಕಲಿತಿಲ್ಲ. ಉತ್ತರ ಕರ್ನಾಟಕದ ಇವೇ ಜಿಲ್ಲೆಗಳು ಹನ್ನೆರಡು ವರ್ಷಗಳ ಹಿಂದೆ ಮಹಾಪೂರದ ಹೊಡೆತಕ್ಕೆ ಸಿಲುಕಿ ನಲುಗಿದಾಗ ಆಗಲೂ ಬಿ.ಎಸ್‌. ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿದ್ದರು. ನೂರಾರು ಗ್ರಾಮಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲು ಆಗ ಯೋಜನೆಯನ್ನೂ ರೂಪಿಸಲಾಗಿತ್ತು. ಆ ಯೋಜನೆ ಕಟ್ಟುನಿಟ್ಟಾಗಿ ಅನುಷ್ಠಾನಗೊಂಡಿದ್ದರೆ ಈಗಿನ ಪ್ರವಾಹ ಜನರನ್ನು ಅಷ್ಟಾಗಿ ಬಾಧಿಸುತ್ತಿರಲಿಲ್ಲ. ಬಾರಾ ಕಮಾನಿನಂತೆ ಕೆಲವು ಕಟ್ಟಡಗಳನ್ನು ನಿರ್ಮಿಸಿದ್ದು ಬಿಟ್ಟರೆ, ಗ್ರಾಮಗಳನ್ನು ನಿಜವಾಗಿಯೂ ಸ್ಥಳಾಂತರಿಸುವ ಯಾವುದೇ ಗಂಭೀರ ಪ್ರಯತ್ನಗಳು ಆಗ ಕಾಣಲಿಲ್ಲ. ಈಗಲೂ ಯಡಿಯೂರಪ್ಪನವರೇ ಮುಖ್ಯಮಂತ್ರಿ. ಪ್ರವಾಹಪೀಡಿತ ಬೆಳಗಾವಿ ಜಿಲ್ಲೆಗೆ ಅವರೇನೋ ಭೇಟಿ ನೀಡಿದ್ದಾರೆ. ಆದರೆ, ಜನರ ನೋವಿಗೆ ತುರ್ತಾಗಿ ಸ್ಪಂದಿಸಬೇಕಾದ ಅಧಿಕಾರಸ್ಥರ ಗಮನವೆಲ್ಲ ಈಗ ದೆಹಲಿಯಿಂದ ಬರುವ ‘ಸಂದೇಶ’ದತ್ತ ನೆಟ್ಟಿದೆ. ಹೀಗಾಗಿ ಜನ ಬಿಟ್ಟ ಕಣ್ಣು ಹಾಗೇ ಬಿಟ್ಟುಕೊಂಡು ಆಕಾಶದತ್ತ ನೋಡುವಂತಾಗಿದೆ.

ಸಂಕಷ್ಟದ ಈ ಸನ್ನಿವೇಶದಲ್ಲಿ ಜೀವ ಉಳಿಸುವುದೇ ಆದ್ಯತೆ ಆಗಬೇಕು. ಪ್ರವಾಹದಲ್ಲಿ ಜನ–ಜಾನುವಾರು ಸಿಲುಕದಂತೆ ತಕ್ಷಣ ರಕ್ಷಣಾ ಕಾರ್ಯವನ್ನು ಆರಂಭಿಸಬೇಕು. ವಿಪತ್ತು ನಿರ್ವಹಣಾ ಪಡೆಗಳನ್ನು ಸದಾ ಸನ್ನದ್ಧ ಸ್ಥಿತಿಯಲ್ಲಿಡಬೇಕು. ಪ್ರವಾಹಪೀಡಿತ ಪ್ರದೇಶಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆದು ಕೈತೊಳೆದುಕೊಂಡರೆ ಸಾಲದು. ಸಂತ್ರಸ್ತರಿಗೆ ಅಲ್ಲಿ ಎಲ್ಲ ರೀತಿಯ ಸೌಲಭ್ಯಗಳನ್ನೂ ಒದಗಿಸುವ ಕೆಲಸ ಆಗಬೇಕು. ಕೋವಿಡ್‌ ಕಾಲದ ಈ ಸಂದರ್ಭದಲ್ಲಿ ಸಮರ್ಪಕ ವೈದ್ಯಕೀಯ ಸೌಲಭ್ಯವನ್ನೂ ಒದಗಿಸಬೇಕು. ಅಲ್ಲದೆ, ಈ ಕಾಳಜಿ ಕೇಂದ್ರಗಳು ತಾತ್ಕಾಲಿಕವಾಗಿ ಆಸರೆ ಒದಗಿಸಬಹುದೇ ಹೊರತು ಸಮಸ್ಯೆಗೆ ಶಾಶ್ವತ ಪರಿಹಾರವಲ್ಲ ಎಂಬುದನ್ನೂ ನೆನಪಿಡಬೇಕು. ಇಂತಹ ಪ್ರಾಕೃತಿಕ ವಿಕೋಪಗಳು ಜನರನ್ನು ಮತ್ತೆ ಮತ್ತೆ ಬಾಧಿಸದಂತೆ ಶಾಶ್ವತ ಪರಿಹಾರ ಕಾರ್ಯಗಳತ್ತಲೂ ಗಮನಹರಿಸಬೇಕು. ಮಳೆಯ ಆರ್ಭಟ ಕಡಿಮೆಯಾದ ತಕ್ಷಣವೇ ಸಂತ್ರಸ್ತರು ಮತ್ತೆ ಬದುಕು ಕಟ್ಟಿಕೊಳ್ಳಲು ಸಾಧ್ಯವಿರುವ ಎಲ್ಲ ನೆರವನ್ನು ನೀಡಬೇಕು. ಕುಸಿದುಬಿದ್ದ ಮನೆಗೆ, ಬೆಳೆಹಾನಿಗೆ ಪರಿಹಾರ ನೀಡುವಾಗ ಸಮೀಕ್ಷೆಯ ಹೆಸರಿನಲ್ಲಿ ಅನಗತ್ಯ ವಿಳಂಬ ಆಗದಂತೆ ನೋಡಿಕೊಳ್ಳಬೇಕು. ವಿಕೋಪದ ಸನ್ನಿವೇಶವನ್ನು ಮುಂಚೆಯೇ ಊಹಿಸುವುದು, ಅದಕ್ಕೆ ತಕ್ಕಂತೆ ಕ್ರಿಯಾಯೋಜನೆ ರೂಪಿಸುವುದು ನಮ್ಮ ಆದ್ಯತೆಯಾಗಬೇಕು. ಕೃಷ್ಣಾ, ಕಾವೇರಿಯಂತಹ ನದಿಗಳು 2–3 ರಾಜ್ಯಗಳಲ್ಲಿ ಹರಿದು ಹೋಗುತ್ತವೆ. ಯಾವುದೇ ರಾಜ್ಯದಲ್ಲಿ ಅಧಿಕ ಮಳೆಯಾಗಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾದರೆ ಕೆಳ ಹಂತದ ರಾಜ್ಯಗಳಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಆಯಾ ರಾಜ್ಯದ ಸನ್ನಿವೇಶದ ಮಾಹಿತಿಯನ್ನು ಪರಸ್ಪರ ಹಂಚಿಕೊಳ್ಳುವವ್ಯವಸ್ಥೆಯನ್ನು ಬಲಪಡಿಸಬೇಕು. ಕೇಂದ್ರ ಸರ್ಕಾರವೂ ಅಷ್ಟೇ. ಪರಿಹಾರ ಘೋಷಿಸಲು ಈ ಹಿಂದಿನಂತೆ ವಿಳಂಬ ಮಾಡದೆ, ತಾರತಮ್ಯದ ನೀತಿ ಅನುಸರಿಸದೆ ಬೇಗ ಕಾರ್ಯಪ್ರವೃತ್ತವಾಗಬೇಕು. ರಾಜ್ಯ ಸರ್ಕಾರವು ಕೇಂದ್ರದ ನೆರವಿಗೆ ಅಂಗಲಾಚುತ್ತಾ ಕಾಲಹರಣ ಮಾಡದೆ, ತನ್ನ ಜನರ ಕಣ್ಣೀರು ಒರೆಸುವ ಕಾರ್ಯವನ್ನು ಆದ್ಯತೆಯ ಮೇಲೆ ಮಾಡಬೇಕು. ಸದ್ಯದ ಸನ್ನಿವೇಶದಲ್ಲಿ ಇದಕ್ಕಿಂತ ಗಹನವಾದ ಕೆಲಸ ಬೇರಿಲ್ಲ ಎನ್ನುವುದನ್ನು ನೆನಪಿಡಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು