ಭಾನುವಾರ, ಫೆಬ್ರವರಿ 28, 2021
23 °C

ಉತ್ತರದಾಯಿತ್ವ ಕಾಪಾಡಬೇಕಾದವರ ನೈತಿಕ ಪ್ರಜ್ಞೆಯ ಅಧಃಪತನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಶಾಸಕರು ತಮಗೆ ಒದಗಿಸಿರುವ ವೈದ್ಯಕೀಯ ವೆಚ್ಚದ ಸವಲತ್ತನ್ನು ಐಷಾರಾಮಕ್ಕೆ ಬಳಸಿರುವ ವಿವರಗಳು ಈಗ ಬಯಲಿಗೆ ಬಂದಿವೆ. ದುಬಾರಿ ಕನ್ನಡಕ ಖರೀದಿಯಿಂದ ಆರಂಭಿಸಿ ‘ಸುಖ ಚಿಕಿತ್ಸೆ’ಯ ತನಕ ವಿಸ್ತರಿಸಿಕೊಂಡಿರುವ ಈ ವಿವರಗಳು, ಇಡೀ ಆಡಳಿತ ವ್ಯವಸ್ಥೆಯ ಉತ್ತರದಾಯಿತ್ವವನ್ನು ಕಾಯಲು ಆಯ್ಕೆಯಾಗಿರುವ ಜನಪ್ರತಿನಿಧಿಗಳು ಎಷ್ಟರಮಟ್ಟಿಗೆ ಜನರಿಗೆ ಉತ್ತರದಾಯಿಗಳಾಗಿದ್ದಾರೆ ಎಂಬುದನ್ನು ತೋರಿಸಿಕೊಡುತ್ತಿವೆ.

ಕಳೆದ ಹಲವು ವರ್ಷಗಳಿಂದ ಇದೊಂದು ‘ದಂಧೆ’ಯಂತೆ ನಡೆಯುತ್ತಿರುವುದನ್ನು ಮಾಧ್ಯಮ ವರದಿಯೊಂದು ತೆರೆದಿಟ್ಟಿದೆ. ಜನಪ್ರತಿನಿಧಿಗಳಾಗಿ ಆಯ್ಕೆಯಾಗಿರುವವರು ವೈದ್ಯಕೀಯ ವೆಚ್ಚವನ್ನು ಮನಸೋಇಚ್ಛೆ ಪಡೆಯುವುದಕ್ಕೆ ಬಳಸಿರುವ ತಂತ್ರಗಳು ಹಲವು. ವೈದ್ಯಕೀಯ ವಿಮೆಯನ್ನು ಬಳಸಿಕೊಂಡವರು ಅದೇ ಬಿಲ್ಲುಗಳನ್ನು ಬಳಸಿ ಸರ್ಕಾರದಿಂದಲೂ ಹಣ ಪಡೆದಿದ್ದಾರೆ. ನಿಯಮಗಳ ಅನ್ವಯ ಕನ್ನಡಕ ಖರೀದಿಗೆ ಹಣ ಪಡೆಯಲು ಸಾಧ್ಯವಿಲ್ಲ. ಆದರೆ ಶಾಸಕರು ತಮ್ಮ ಪ್ರಭಾವ ಬಳಸಿ ಅದನ್ನೂ ಪಡೆದುಕೊಂಡಿದ್ದಾರೆ.

2016ರ ತನಕ ಶಾಸಕರು ನೀಡುವ ಬಿಲ್ಲುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಕ್ರಮವೂ ಇರಲಿಲ್ಲ. ಪರಿಣಾಮವಾಗಿ ಅತ್ಯಂತ ಸರಳ ಚಿಕಿತ್ಸೆಗಳಿಗೂ ಲಕ್ಷಾಂತರ ರೂಪಾಯಿಗಳನ್ನು ಪಡೆದವರಿದ್ದಾರೆ. 2016ರ ನಂತರ ಬಿಲ್ಲುಗಳನ್ನು ಪರಿಶೀಲಿಸುವ ಕ್ರಮವನ್ನು ವಿಧಾನಮಂಡಲದ ಸಚಿವಾಲಯ ಜಾರಿಗೊಳಿಸಿತು. ಇದಕ್ಕೂ ಮುನ್ನ ನಡೆದಿರುವ ದುರ್ಬಳಕೆ ಪ್ರಮಾಣ ಹುಬ್ಬೇರಿಸುವಂತಹುದು. ವ್ಯವಸ್ಥೆಯೊಂದರ ಉತ್ತರದಾಯಿತ್ವವನ್ನು ಖಾತರಿಪಡಿಸುವ ಸಭೆಯ ಸದಸ್ಯರಾಗಿರುವವರು ತಮಗೆ ದೊರೆತಿರುವ ಸವಲತ್ತು
ಗಳನ್ನು ದುರ್ಬಳಕೆ ಮಾಡಬಾರದು ಎಂಬ ನೈತಿಕ ಪ್ರಜ್ಞೆಯನ್ನು ಪ್ರದರ್ಶಿಸದೇ ಇರುವುದು ನಿಜಕ್ಕೂ ಶೋಚನೀಯ. ಅಷ್ಟೇ ಅಲ್ಲ, ನಮ್ಮ ಸಂಸದೀಯ ವ್ಯವಸ್ಥೆ ನೈತಿಕವಾಗಿ ಶಿಥಿಲಗೊಂಡಿರುವುದಕ್ಕೆ ಇದು ಒಂದು ಜ್ವಲಂತ ಉದಾಹರಣೆಯೂ ಹೌದು.

ಶಾಸಕರು ಮತ್ತು ಮಾಜಿ ಶಾಸಕರು ಸರ್ಕಾರಿ ಆಸ್ಪತ್ರೆಗಳಲ್ಲೇ ಚಿಕಿತ್ಸೆ ಪಡೆಯಬೇಕು. ಒಂದು ವೇಳೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯವಿಲ್ಲದೆ ಇದ್ದರಷ್ಟೇ ಇತರ ಆಸ್ಪತ್ರೆಗಳಲ್ಲಿ ಪಡೆಯಬಹುದು ಎಂದು ವಿಧಾನಸಭಾ ಅಧ್ಯಕ್ಷರು ಸುತ್ತೋಲೆಯೊಂದನ್ನು ಈ ವರ್ಷದ ಜುಲೈನಲ್ಲೇ ಹೊರಡಿಸಿದ್ದಾರೆ. ಇದರ ಅನ್ವಯಕ್ಕೆ ಸಂಬಂಧಿಸಿದ ತಾಂತ್ರಿಕ ತಕರಾರುಗಳೇನೇ ಇದ್ದರೂ ಶಾಸಕರು ಕನಿಷ್ಠ ನೈತಿಕ ಕಾರಣಕ್ಕಾಗಿ ಇದನ್ನು ಪಾಲಿಸಬೇಕಿತ್ತು. ಹಲವು ಶಾಸಕರ ನೈತಿಕ ಪ್ರಜ್ಞೆ ಎಷ್ಟರಮಟ್ಟಿಗೆ ಕುಸಿದಿದೆ ಎಂದರೆ ಈ ಸುತ್ತೋಲೆಯ ಕುರಿತು ಆಕ್ಷೇಪ ವ್ಯಕ್ತಪಡಿಸಿರುವುದನ್ನೂ ಮಾಧ್ಯಮ ವರದಿ ಹೇಳುತ್ತಿದೆ. ಶಾಸಕರಿಗೆ ನೈತಿಕತೆಯನ್ನು ಬೋಧಿಸುವುದರಲ್ಲಿ ಅರ್ಥ ಉಳಿದಿಲ್ಲ ಎಂಬುದನ್ನು ಈ ತನಕದ ಘಟನಾವಳಿಗಳು ಹೇಳುತ್ತಿವೆ.

ವೈದ್ಯಕೀಯ ವೆಚ್ಚ ಭರಿಸುವ ಸವಲತ್ತಿನ ದುರ್ಬಳಕೆಯನ್ನು ತಡೆಯುವುದಕ್ಕೆ ಇರುವ ಅತ್ಯುತ್ತಮ ಮಾರ್ಗವೆಂದರೆ ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಸಚಿವಾಲಯ ಪಾರದರ್ಶಕತೆಯನ್ನು ಪಾಲಿಸುವುದು. ಶಾಸಕರು ಸರ್ಕಾರದಿಂದ ಪಡೆಯುವ ಪ್ರತಿಯೊಂದು ಸವಲತ್ತಿನ ವಿವರವನ್ನೂ ಆಯಾ ಪಾವತಿಗಳು ನಡೆದ ತಕ್ಷಣವೇ ವೆಬ್‌ಸೈಟ್ ಒಂದರಲ್ಲಿ ಬಹಿರಂಗವಾಗಿ ಪ್ರಕಟಿಸುವ ವ್ಯವಸ್ಥೆಯೊಂದನ್ನು ರೂಪಿಸಬೇಕು.

ವಿಧಾನಸಭೆ ಮತ್ತು ವಿಧಾನ ಪರಿಷತ್ತುಗಳ ವೆಬ್‌ಸೈಟಿನಲ್ಲಿ ಒಬ್ಬೊಬ್ಬ ಶಾಸಕನ ಹೆಸರಿನಡಿಯಲ್ಲೇ ಈ ವಿವರಗಳು ದೊರೆಯಬೇಕು. ಜನಪ್ರತಿನಿಧಿಗಳು ತಮ್ಮ ಸ್ವಂತ ಖರ್ಚಿಗೆ ಜನರ ತೆರಿಗೆ ಹಣವನ್ನು ಹೇಗೆಲ್ಲಾ ಬಳಸುತ್ತಾರೆ ಎಂಬ ವಿವರವಾದರೂ ಜನರಿಗೆ ದೊರೆಯಬೇಕು. ಇದರಿಂದ ಬಹುದೊಡ್ಡ ಬದಲಾವಣೆಯೇನೂ ಆಗದೇ ಇರಬಹುದು. ಇದರಿಂದ ಕೆಲವರಿಗಾದರೂ ನಾಚಿಕೆಯಾದರೆ ಅಷ್ಟರಮಟ್ಟಿಗೆ ಈ ವ್ಯವಸ್ಥೆ ಯಶಸ್ಸು ಪಡೆದಂತೆ.

ಇನ್ನು ವೈದ್ಯಕೀಯ ವೆಚ್ಚವನ್ನು ನಿರ್ವಹಿಸುವುದಕ್ಕೆ ವಿಮಾ ವ್ಯವಸ್ಥೆಯನ್ನೂ ರೂಪಿಸುವುದಕ್ಕೆ ಸಾಧ್ಯವಿದೆ. ಶಾಸಕರು ನೀಡುವ ಬಿಲ್ಲುಗಳನ್ನು ಪಡೆದು ಸರ್ಕಾರವೇ ಆ ಮೊತ್ತವನ್ನು ಪಾವತಿಸುವುದಕ್ಕಿಂತ ಇದು ಹೆಚ್ಚು ಉತ್ತಮ ವ್ಯವಸ್ಥೆಯಾಗಬಹುದು. ಏಕೆಂದರೆ ಸರ್ಕಾರಿ ಅಧಿಕಾರಿಗಳ ಮೇಲೆ ಒತ್ತಡ ಹೇರುವಂತೆ ವಿಮಾ ಸಂಸ್ಥೆಗಳ ಮೇಲೆ ಒತ್ತಡ ಹೇರಲು ಸಾಧ್ಯವಾಗುವುದಿಲ್ಲ. ಮೊದಲೇ ಹೇಳಿದಂತೆ ಶಾಸನಸಭೆ ಎಂಬುದು ಇಡೀ ಸರ್ಕಾರಿ ವ್ಯವಸ್ಥೆಯ ಉತ್ತರದಾಯಿತ್ವವನ್ನು ಕಾಯುವ ವ್ಯವಸ್ಥೆ. ಮಹಾಲೇಖಪಾಲರ ವರದಿಯೂ ಸಾರ್ವಜನಿಕ ಲೆಕ್ಕಪತ್ರ ಸಮಿತಿಯಲ್ಲಿ ಚರ್ಚೆಯಾಗಬೇಕಾಗುತ್ತದೆ. ಇಂಥದ್ದೊಂದು ವ್ಯವಸ್ಥೆಯ ಸದಸ್ಯರ ನೈತಿಕತೆ ಮತ್ತು ಉತ್ತರದಾಯಿತ್ವವನ್ನು ಸಂಶಯಿಸಬೇಕಾದ ಪರಿಸ್ಥಿತಿ ಉದ್ಭವಿಸಿರುವುದೇ ಆತಂಕ ಮತ್ತು ನೋವಿನ ಸಂಗತಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು