ಸೋಮವಾರ, ಜನವರಿ 18, 2021
23 °C

ಹಿರಿಯ ನಾಗರಿಕರ ಹಿತಾಸಕ್ತಿ ರಕ್ಷಣೆ: ಸ್ಪಷ್ಟ ಯೋಜನೆ–ಕಾರ್ಯತಂತ್ರ ಅಗತ್ಯ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಹಿರಿಯ ನಾಗರಿಕರು, ಮಕ್ಕಳು ಮತ್ತು ಮಹಿಳೆಯರ ಸ್ಥಿತಿಗತಿಯು ಸಮಾಜದ ಆರೋಗ್ಯವನ್ನು ಸೂಚಿಸುವ ಮಾನದಂಡಗಳಲ್ಲೊಂದು. ದೇಶದಲ್ಲಿನ ಹಿರಿಯ ನಾಗರಿಕರು ಅವಗಣನೆಗೆ ಒಳಗಾಗಿದ್ದಾರೆ ಎನ್ನುವುದು ಸಾಮಾಜಿಕ ಸ್ವಾಸ್ಥ್ಯ ಹಾಗೂ ಕೌಟುಂಬಿಕ ಸಂಬಂಧಗಳನ್ನು ಗಂಭೀರವಾಗಿ ಪರಿಗಣಿಸಿದವರು ಆತಂಕಪಡಬೇಕಾದ ಸಂಗತಿ. ವೃದ್ಧರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿರುವ ರಾಜ್ಯಗಳಲ್ಲಿ ಬಿಹಾರ ಮೊದಲ ಸ್ಥಾನ ಪಡೆದಿದ್ದರೆ, ಪಶ್ಚಿಮ ಬಂಗಾಳ ಹಾಗೂ ಉತ್ತರಪ್ರದೇಶವು ಕರ್ನಾಟಕದ ನಂತರದಲ್ಲಿವೆ. ಕರ್ನಾಟಕದಲ್ಲಿನ ಶೇಕಡ 10ರಷ್ಟು ವೃದ್ಧರು ತಾವು ನಿರ್ಲಕ್ಷ್ಯಕ್ಕೆ ಒಳಗಾಗಿದ್ದೇವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾಡಿಸಿರುವ ಸಮೀಕ್ಷೆಯಲ್ಲಿ ಅಳಲು ತೋಡಿಕೊಂಡಿದ್ದಾರೆ. ಹಿರಿಯ ನಾಗರಿಕರ ಆರೋಗ್ಯ, ಸಾಮಾಜಿಕ, ಆರ್ಥಿಕ ಸ್ಥಿತಿಗತಿಯ ಬಗ್ಗೆ ಮಾಹಿತಿ ಕಲೆಹಾಕುವ ಉದ್ದೇಶದಿಂದ ದೇಶದಲ್ಲಿ ಇದೇ ಮೊದಲ ಬಾರಿಗೆ ಇಂತಹದೊಂದು ಸಮೀಕ್ಷೆ ನಡೆಸಲಾಗಿತ್ತು. ವೃದ್ಧರ ದೈನಂದಿನ ಅಗತ್ಯ ಚಟುವಟಿಕೆಗಳಿಗೆ ಸೂಕ್ತ ನೆರವು ದೊರೆಯದಿರುವುದನ್ನು ಸಮೀಕ್ಷೆ ಪ್ರಮುಖವಾಗಿ ಪ್ರಸ್ತಾಪಿಸಿದ್ದು, ದೇಶದ ಶೇ 14ರಷ್ಟು ಹಿರಿಯ ನಾಗರಿಕರು ತಮ್ಮನ್ನು ಕೆಟ್ಟದಾಗಿ ನೋಡಿಕೊಳ್ಳಲಾಗುತ್ತಿದೆ ಎಂದು ದೂರಿದ್ದಾರೆ. ಎಪ್ಪತ್ತು ಸಾವಿರಕ್ಕೂ ಹೆಚ್ಚು ಹಿರಿಯರನ್ನು ಸಮೀಕ್ಷೆಗೆ ಒಳಪಡಿಸಲಾಗಿದ್ದು, ಅವರಲ್ಲಿ ಶೇ 75ರಷ್ಟು ಮಂದಿ ದೀರ್ಘಾವಧಿಯ ಅನಾರೋಗ್ಯದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಶೇ 20ರಷ್ಟು ವೃದ್ಧರು ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಶೇ 40ರಷ್ಟು ಮಂದಿ ದೈಹಿಕ ನ್ಯೂನತೆಗಳ ಬಾಧೆಗೊಳಗಾಗಿದ್ದಾರೆ. ಶೇ 10ರಷ್ಟು ಮಂದಿಗೆ ನಿದ್ರಾಹೀನತೆಯ ಸಮಸ್ಯೆಯಿದೆ. ದೃಷ್ಟಿದೋಷ, ಶ್ರವಣದೋಷ ಹಾಗೂ ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಹಿರಿಯರನ್ನು ಕಾಡುತ್ತಿರುವ ಸಾಮಾನ್ಯ ಸಮಸ್ಯೆಗಳಾಗಿವೆ. ಇವುಗಳ ಜೊತೆಗೆ ಅನೇಕ ವೃದ್ಧರು ಸ್ನಾನ, ಶೌಚಾಲಯ ಬಳಕೆ ಸೇರಿದಂತೆ ವೈಯಕ್ತಿಕ ಕೆಲಸಗಳನ್ನು ಮಾಡಿಕೊಳ್ಳುವಲ್ಲಿ ಅಸಮರ್ಥರಾಗಿದ್ದಾರೆ. ದುರದೃಷ್ಟವಶಾತ್‌, ಈ ಅಸಹಾಯಕ ಹಿರಿಯರಿಗೆ ಅಗತ್ಯ ನೆರವು ಮತ್ತು ಸಹಾನುಭೂತಿ ಮನೆಮಂದಿಯಿಂದ ದೊರೆಯುತ್ತಿಲ್ಲ.

ವೃದ್ಧರ ತವಕ– ತಲ್ಲಣಗಳ ಕುರಿತಾದ ಸಮೀಕ್ಷೆಯು ನಮ್ಮ ಕೌಟುಂಬಿಕ ನಂಬಿಕೆಗಳ ಮರುಪರಿಶೀಲನೆಗೆ ಒತ್ತಾಯಿಸುವಂತಿದೆ. ನಮ್ಮ ಸಂಸ್ಕೃತಿಯ ಪ್ರಧಾನ ಲಕ್ಷಣಗಳಲ್ಲಿ ಹಿರಿಯ ನಾಗರಿಕರ ಬಗೆಗಿನ ಕೌಟುಂಬಿಕ ಕಾಳಜಿಯೂ ಒಂದೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ನಾವು, ಈಗ ದಾರಿತಪ್ಪಿರುವುದೆಲ್ಲಿ ಎನ್ನುವುದರ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. 2011ರ ಜನಗಣತಿಯ ಪ್ರಕಾರ, ದೇಶದಲ್ಲಿರುವ ಹಿರಿಯ ನಾಗರಿಕರ ಸಂಖ್ಯೆ ಸುಮಾರು 10 ಕೋಟಿ. ಮುಂದಿನ ಮೂರು ದಶಕಗಳಲ್ಲಿ ಈ ಪ್ರಮಾಣ ಮೂರು ಪಟ್ಟು ಹೆಚ್ಚಲಿದೆ. ಈ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ಹಿರಿಯ ನಾಗರಿಕರಿಗೆ ಅಗತ್ಯವಾದ ಕಾರ್ಯಕ್ರಮ, ಯೋಜನೆಗಳನ್ನು ರೂಪಿಸುವುದಕ್ಕಿದು ಸಕಾಲ. ನಮ್ಮ ಕುಟುಂಬಗಳು ಕೂಡ ಹಿರಿಯ ನಾಗರಿಕರ ಹಿತಾಸಕ್ತಿಗೆ ಒತ್ತು ನೀಡಬೇಕು. ಹಿರಿಯರ ವೈದ್ಯಕೀಯ ವೆಚ್ಚವನ್ನು ಭರಿಸುವ ಆರ್ಥಿಕ ಸಾಮರ್ಥ್ಯ ಇಲ್ಲದಿರುವುದು ಕೆಲವು ಕುಟುಂಬಗಳಲ್ಲಿ ಬಿಕ್ಕಟ್ಟಿಗೆ ಕಾರಣವಾಗುತ್ತದೆ. ಮತ್ತೆ ಕೆಲವರು ಆರ್ಥಿಕವಾಗಿ ಸಬಲರಾಗಿದ್ದರೂ ದೈನಂದಿನ ಕೆಲಸಗಳ ಒತ್ತಡದಲ್ಲಿ ಮನೆಯಲ್ಲಿರುವ ಪೋಷಕರ ಅಗತ್ಯಗಳ ಬಗ್ಗೆ ಹೆಚ್ಚಿನ ನಿಗಾ ಹರಿಸುವುದು ಕಷ್ಟವಾಗಬಹುದು. ಆದರೆ, ಇಂಥ ಯಾವ ಕಾರಣಗಳೂ ವೃದ್ಧರನ್ನು ನಿರ್ಲಕ್ಷಿಸಲು ಸಮರ್ಥನೆಯಾಗುವುದಿಲ್ಲ. ಕುಟುಂಬದಲ್ಲಿನ ಹಿರಿಯರನ್ನು ಪ್ರೀತಿಯಿಂದ ಕಾಣುವ ಮೂಲಕ ಅವರ ಬದುಕು ಸಹನೀಯವಾಗಿ ಇರುವಂತೆ ನೋಡಿಕೊಳ್ಳಬೇಕಾದುದು ಮನೆಮಂದಿಯ ಕರ್ತವ್ಯ. ಬಹುತೇಕ ಸಂದರ್ಭಗಳಲ್ಲಿ ಭೌತಿಕ ಕೊರತೆಗಳಿಗಿಂತಲೂ ತಾಳ್ಮೆ ಇಲ್ಲದಿರುವುದರಿಂದಲೇ ವೈಮನಸ್ಸು ಉಂಟಾಗುತ್ತದೆ. ಮನೆಗಳಲ್ಲಿ ಮಾತ್ರವಲ್ಲ, ಸಮಾಜದಲ್ಲೂ ವೃದ್ಧರಿಗೆ ಅನುಕೂಲಕರ ವಾತಾವರಣ ಇರಬೇಕು. ಸಾರ್ವಜನಿಕ ಸಾರಿಗೆ, ಕಚೇರಿಗಳಲ್ಲಿ ಅವರಿಗೆ ಆದ್ಯತೆಯಿರಬೇಕು. ನಮ್ಮ ಇಂದಿನ ಬದುಕಿನ ತಳಹದಿಯು ಹಿರಿಯರ ಶ್ರಮದಿಂದ ರೂಪುಗೊಂಡಿರುವಂತಹದ್ದು. ಅವರ ಬಗೆಗಿನ ಕಾಳಜಿ ನಮ್ಮ ಹೊಣೆಗಾರಿಕೆಯಷ್ಟೇ ಅಲ್ಲ, ಎಳೆಯ ತಲೆಮಾರಿಗೆ ನೈತಿಕ ಮಾದರಿಯೊಂದನ್ನು ತಲುಪಿಸುವ ವಿಧಾನವೂ ಹೌದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು