ಮಂಗಳವಾರ, ಆಗಸ್ಟ್ 16, 2022
30 °C

ಸಂಪಾದಕೀಯ: ಕಾಲ್ಪನಿಕ ಕಲಿಕಾ ಕೋಣೆ ಬಿಟ್ಟು ‌ಶಾಲಾವರಣಕ್ಕೆ ಬಂದ ‘ವಿದ್ಯಾಗಮ’

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಶಾಲಾ ಮಕ್ಕಳ ನಿರಂತರ ಕಲಿಕೆಗೆ ಪೂರಕವಾಗುವ ‘ವಿದ್ಯಾಗಮ’ ಯೋಜನೆಯನ್ನು ಪರಿಷ್ಕೃತ ರೂಪದಲ್ಲಿ ಜನವರಿ ಒಂದರಿಂದ ಮತ್ತೆ ಜಾರಿ ಮಾಡುವುದಾಗಿ ರಾಜ್ಯ ಸರ್ಕಾರ ಪ್ರಕಟಿಸಿದೆ. ಈ ಬಾರಿ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ ಆವರಣದಲ್ಲಿ ಈ ಕಲಿಕಾ ಪ್ರಕ್ರಿಯೆ ಜರುಗಲಿದೆ. ಈ ಹಿಂದೆ ಈ ಕಾರ್ಯಕ್ರಮವು ಸರ್ಕಾರಿ ಶಾಲಾ ಮಕ್ಕಳಿಗೆ ಮಾತ್ರ ಅನ್ವಯ ಆಗುವಂತೆ ಜಾರಿಯಲ್ಲಿ ಇತ್ತು. ಆಗ, ಮನೆಗಳ ಜಗುಲಿ, ಗಿಡ–ಮರಗಳ ಕೆಳಗೆ, ಚರಂಡಿ ಕಟ್ಟೆ ಮೇಲೆ, ರಸ್ತೆ ಬದಿಯಲ್ಲಿ, ಹೊಲಗಳಲ್ಲಿ... ಹೀಗೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಎಲ್ಲೆಂದರಲ್ಲಿ ಪಾಠ ಹೇಳಿಕೊಡುವಂತಾಗಿತ್ತು. ಪೋಷಕರು ಮತ್ತು ಶಿಕ್ಷಕರು ಈ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಲು ಇ‌ದು ಕೂಡ ಕಾರಣವಾಗಿರಬಹುದು.

ಕಾರ್ಯಕ್ರಮ ಉತ್ತಮ ಆಶಯವನ್ನು ಹೊಂದಿತ್ತಾದರೂ ಸಮರ್ಪಕವಾದ ರೂಪುರೇಷೆ ಇಲ್ಲದ ಪರಿಣಾಮ, ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕಾದ ಅನಿವಾರ್ಯ ಸ್ಥಿತಿ ಸರ್ಕಾರಕ್ಕೆ ಎದುರಾಯಿತು. ಈಗ ಪರಿಷ್ಕೃತ ರೂಪದಲ್ಲಿ ಅನುಷ್ಠಾನಗೊಳ್ಳುತ್ತಿದೆ. ಇದರಿಂದ ಶಿಕ್ಷಕರು, ಪೋಷಕರು ಮತ್ತು ಮಕ್ಕಳಲ್ಲಿ ಸುರಕ್ಷಾಭಾವ ಮೂಡುವ ನಿರೀಕ್ಷೆ ಇದೆ.

ಕೋವಿಡ್‌– 19 ಸಾಂಕ್ರಾಮಿಕದಿಂದಾಗಿ ಪ್ರಸಕ್ತ ಶೈಕ್ಷಣಿಕ ವರ್ಷ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಆನ್‌ಲೈನ್‌ ವ್ಯವಸ್ಥೆ, ದೂರದರ್ಶನ ವಾಹಿನಿ ಮೂಲಕ ತರಗತಿಗಳನ್ನು ನಡೆಸಲಾಗುತ್ತಿದೆ. ಆದರೆ ಇದರ ಪೂರ್ಣ ಪ್ರಯೋಜನ ಎಲ್ಲ ವಿದ್ಯಾರ್ಥಿಗಳಿಗೂ ಲಭಿಸುತ್ತದೆ ಎಂದು ಹೇಳಲಾಗದು. ಈ ವ್ಯವಸ್ಥೆ ಮೂಲಕ ಪಾಠ ಆಲಿಸಲು ಸಾಧ್ಯವಾಗದ ಮಕ್ಕಳು ಹಳ್ಳಿಗಳಲ್ಲಿ ಪೋಷಕರಿಗೆ ಕೆಲಸ–ಕಾರ್ಯದಲ್ಲಿ ನೆರವಾಗುತ್ತಿದ್ದರು. ಅಂತಹವರನ್ನು ಪುನಃ ಓದಿನತ್ತ ಸೆಳೆಯಲು ಮತ್ತು ಬಾಲಕಾರ್ಮಿಕ ಪದ್ಧತಿ ಹಾಗೂ ಬಾಲ್ಯವಿವಾಹದಂತಹ ಅನಿಷ್ಟ ಪದ್ಧತಿಯನ್ನು ತಡೆಯುವ ಉದ್ದೇಶದಿಂದ ಸರ್ಕಾರವು ಆಗಸ್ಟ್‌ನಲ್ಲಿ ‘ವಿದ್ಯಾಗಮ’ ಯೋಜನೆಯನ್ನು ಆರಂಭಿಸಿತು.

ಈಗ ಕೊರೊನಾ ಸೋಂಕಿತರ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಅಲ್ಲದೆ, ಚೇತರಿಸಿಕೊಳ್ಳುವವರ ಪ್ರಮಾಣ ಹೆಚ್ಚಾಗಿದೆ. ಇನ್ನೇನು ಲಸಿಕೆಯೂ ಲಭ್ಯವಾಗುವ ಹಂತಕ್ಕೆ ತಲುಪಿದೆ. ಜತೆಗೆ ಸರ್ಕಾರವು ಶಾಲೆಗಳನ್ನು ಹೊರತುಪಡಿಸಿ ಬಹುತೇಕ ಎಲ್ಲ ಆರ್ಥಿಕ ಚಟುವಟಿಕೆಗಳನ್ನು ಆರಂಭಿಸಲು ಹಂತ ಹಂತವಾಗಿ ಅವಕಾಶ ಮಾಡಿಕೊಟ್ಟಿದೆ. ಕಾಲೇಜುಗಳೂ ಪ್ರಾರಂಭವಾಗಿವೆ. ಆದರೂ ಮಕ್ಕಳನ್ನು ಶಾಲೆಗಳಿಗೆ ಕಳುಹಿಸಲು ಪೋಷಕರಲ್ಲಿ ಇನ್ನೂ ಅಳುಕು ಇದ್ದಂತಿದೆ. ಹಾಗೆಂದು ಸುಮ್ಮನೆ ಇರುವಂತೆಯೂ ಇಲ್ಲ.

ಸೌಲಭ್ಯವಂಚಿತ ಗ್ರಾಮೀಣ ಪ್ರದೇಶದ ಮಕ್ಕಳು ಕಲಿಕೆಯಲ್ಲಿ ತೊಡಗುವಂತೆ ಮಾಡುವ ಸಲುವಾಗಿ ಸರ್ಕಾರ ಮತ್ತೆ ‘ವಿದ್ಯಾಗಮ’ ಯೋಜನೆಯನ್ನು ಅಗತ್ಯ ಮಾರ್ಗಸೂಚಿಗಳೊಂದಿಗೆ ಪರಿಷ್ಕರಿಸಿ ಜಾರಿ ಮಾಡಲು ಮುಂದಾಗಿರುವುದು ಒಳ್ಳೆಯ ನಡೆ.

ಶಿಕ್ಷಕರು ಮತ್ತು ಕೊಠಡಿಗಳ ಲಭ್ಯತೆ ಆಧರಿಸಿ ಮಕ್ಕಳ ಸಂಖ್ಯೆ ನಿಗದಿಪಡಿಸಿ ಅವರನ್ನು ಶಾಲೆಗೆ ಕರೆತರಲು ತೀರ್ಮಾನಿಸಲಾಗಿದೆ. ಅಂದಮಾತ್ರಕ್ಕೆ ಇದು ಶಾಲೆಯ ಆರಂಭ ಎಂದಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಶಾಲಾ ಆವರಣವನ್ನು ಸ್ಯಾನಿಟೈಸ್‌ ಮಾಡುವ ಜವಾಬ್ದಾರಿಯನ್ನು ಸ್ಥಳೀಯ ಸಂಸ್ಥೆಗಳಿಗೆ ನೀಡಲಾಗಿದೆ. ಮಕ್ಕಳು ಪರಸ್ಪರ ಅಂತರ ಕಾಯ್ದುಕೊಳ್ಳಬೇಕು ಮತ್ತು ಮಕ್ಕಳೇ ಮನೆಯಿಂದ ಕುಡಿಯುವ ನೀರು ತರಬೇಕು ಎಂದೂ ಸ್ಪಷ್ಟವಾಗಿ ಸೂಚಿಸಲಾಗಿದೆ.

ಕೊರೊನಾ ಸೋಂಕು ಹರಡದಂತೆ ಎಚ್ಚರ ವಹಿಸಲು ಈ ಎಲ್ಲ ಕ್ರಮಗಳು ಅನಿವಾರ್ಯ. ಇದಕ್ಕೆ ಪೋಷಕರು, ಶಿಕ್ಷಕರು ಸಹಕರಿಸಬೇಕು. ಈ ಬಗೆಯ ವ್ಯವಸ್ಥೆಯನ್ನು ಸರ್ಕಾರ ಮೊದಲೇ ಮಾಡಿಕೊಂಡಿದ್ದರೆ ‘ವಿದ್ಯಾಗಮ’ ಕಾರ್ಯಕ್ರಮ ಸ್ಥಗಿತಗೊಳ್ಳುವುದನ್ನು ತಪ್ಪಿಸಬಹುದಿತ್ತೇನೊ? ಪರಿಷ್ಕೃತ ರೂಪದಲ್ಲಿ ಜಾರಿಯಾಗಲಿರುವ ಕಾರ್ಯಕ್ರಮದ ಉಸ್ತುವಾರಿಯನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ವಹಿಸಿರುವುದು ಹಾಗೂ ಅನುಷ್ಠಾನ ಅಧಿಕಾರಿಗಳನ್ನಾಗಿ ಶಿಕ್ಷಣ ಇಲಾಖೆ ಉಪನಿರ್ದೇಶಕರನ್ನು ನೇಮಿಸುವ ಮೂಲಕ ಜವಾಬ್ದಾರಿಯನ್ನು ನಿಗದಿಪಡಿಸಿರುವುದು ಸ್ವಾಗತಾರ್ಹ. ಮಕ್ಕಳ ಆರೋಗ್ಯದ ವಿಚಾರದಲ್ಲಿ ಯಾವುದೇ ಬಗೆಯ ರಾಜಿ ಇಲ್ಲದೆ, ಅವರು ಒತ್ತಡಮುಕ್ತರಾಗಿ ಕಲಿಯುವಂತಹ ವಾತಾವರಣ ನಿರ್ಮಾಣವಾಗಲಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು