ಶನಿವಾರ, ಜೂಲೈ 11, 2020
29 °C
ಕೇಳರಿಯದ ಈ ಸನ್ನಿವೇಶದಲ್ಲಿ ‘ರಾಜಕೀಯೇತರ ಸಂಪುಟ’ ಎಂಬ ಕಂಡರಿಯದ ಪ್ರಯೋಗ ಮಾಡಿದರೆ...

ಅಸಾಮಾನ್ಯ ಸ್ಥಿತಿಗೆ ಅಸಹಜ ಪರಿಹಾರ!

ಚಂದ್ರಕಾಂತ ವಡ್ಡು Updated:

ಅಕ್ಷರ ಗಾತ್ರ : | |

ಕೊರೊನಾ ಎಂಬ ಪುಡಿ ವೈರಾಣು ಇಡೀ ವಿಶ್ವವನ್ನೇ ಹೊಸತರ ಹೊಸ್ತಿಲಲ್ಲಿ ತಂದು ನಿಲ್ಲಿಸಿರುವ ವಿದ್ಯಮಾನಕ್ಕೆ ಒಡ್ಡಿಕೊಂಡಿರುವ, ಒಗ್ಗಿಕೊಳ್ಳುತ್ತಿರುವ ಪೀಳಿಗೆ ನಮ್ಮದು. ವೈದ್ಯಕೀಯ ವ್ಯವಸ್ಥೆ, ಆರ್ಥಿಕ ತಳಹದಿ, ದೈನಂದಿನ ಜೀವನಶೈಲಿ, ನಾಗರಿಕರ ಚಿಂತನಾ ಕ್ರಮ, ಧಾರ್ಮಿಕ ನಂಬಿಕೆ, ಅಂತರರಾಷ್ಟ್ರೀಯ ಸಂಬಂಧ... ಎಲ್ಲವನ್ನೂ ಬುಡಮೇಲು ಮಾಡಿ, ಹೊಸ ಸಂರಚನೆಗೆ ಆಹ್ವಾನ ನೀಡುವಲ್ಲಿ ಈ ವೈರಾಣು ಸಫಲವಾಗಿದೆ. ಆದರೆ ಹಲವು ಶತಮಾನಗಳಿಂದ ವ್ಯವಸ್ಥಿತವಾಗಿ ರೂಢಿಸಿಕೊಂಡು ಬಂದಿದ್ದ ಮಾದರಿಗಳನ್ನು, ಪದರುಗಳನ್ನು ಇದ್ದಕ್ಕಿದ್ದಂತೆ ಬದಲಿಸಿ ಹೊಸ ಯುಗಕ್ಕೆ ಕಾಲಿರಿಸುವ ಪ್ರಕ್ರಿಯೆ ಸುಲಲಿತವೇನಲ್ಲ.


ಚಂದ್ರಕಾಂತ ವಡ್ಡು

ಇದು ಆಯ್ಕೆಗಳೇ ಇರದ ಏಕೈಕ ದಾರಿ ಎಂಬುದು ಎಲ್ಲ ಸ್ತರಗಳ, ಎಲ್ಲಾ ಸ್ವರಗಳ ಪ್ರಜೆಗಳಿಗೆ ಈಗಾಗಲೇ ಮನವರಿಕೆಯಾಗಿ, ಆ ದಿಕ್ಕಿನಲ್ಲಿ ನಿಧಾನವಾಗಿ ಹೆಜ್ಜೆಯೂರುತ್ತಿದ್ದಾರೆ ಕೂಡ. ಆದರೆ ಸನ್ನಿವೇಶದ ನಿರ್ವಹಣೆಯ ಹೊಣೆ ಹೊತ್ತಿರುವ, ಪ್ರಜೆಗಳನ್ನು ಮುನ್ನಡೆಸುತ್ತಿರುವ ಬಹುಪಾಲು ದೇಶಗಳ ಅಧಿಕಾರಸ್ಥರು ಹೊಸ ಹಾದಿಯಲ್ಲಿ ದಯನೀಯವಾಗಿ ಎಡವುತ್ತಿದ್ದಾರೆ. ಹೀಗೆ ಎಡವಿಬೀಳುವವರ ಸಾಲಿಗೆ ದೊಡ್ಡ, ದಡ್ಡ, ದುಷ್ಟ, ನಿಕೃಷ್ಟ, ಶ್ರೇಷ್ಠ ದೇಶಗಳೆಲ್ಲಾ ಸೇರಿವೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಂದ ಹಿಡಿದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್‌ ತನಕ ತಡವರಿಸುತ್ತಿದ್ದಾರೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆಯೂ ತಪ್ಪು ನಿರ್ಧಾರಗಳ ಸರಣಿ ಆರೋಪಗಳಿವೆ.

ಭಾರತದ ಸಂದರ್ಭವನ್ನು ಗಮನಿಸುವುದಾದರೆ, ಇಲ್ಲಿನ ಒಂದೊಂದು ರಾಜ್ಯದ ಸ್ಥಿತಿಗತಿ ಒಂದೊಂದು ರೀತಿ. ಒಕ್ಕೂಟ ವ್ಯವಸ್ಥೆಯ ಭಾಗವಾಗಿರುವ ವಿವಿಧ ರಾಜ್ಯಗಳಲ್ಲಿ ಆಳುವ ರಾಜಕೀಯ ಪಕ್ಷಗಳ ನೀತಿ, ಶೈಲಿ ವಿಭಿನ್ನ. ಎಷ್ಟೋ ಸಾರಿ ಕೇಂದ್ರ ಸರ್ಕಾರದ ರಾಷ್ಟ್ರವ್ಯಾಪಿ ನಿರ್ಧಾರಗಳಿಗೆ ರಾಜ್ಯ ಸರ್ಕಾರಗಳಿಂದ ಪ್ರತಿರೋಧ, ಅಸಹಕಾರ ಉಂಟಾಗುವುದನ್ನು ಕಾಣುತ್ತೇವೆ.

ವೈದ್ಯಕೀಯ ವ್ಯವಸ್ಥೆಗೆ ಸಂಬಂಧಿಸಿದಂತೆ ದೇಶದುದ್ದಕ್ಕೂ ಏಕರೂಪದ ನೀತಿ, ಮಾರ್ಗಸೂಚಿಗಳು ಕಾರ್ಯಸಾಧು ಎನ್ನಿಸಬಹುದು. ಆದರೆ ಆರ್ಥಿಕತೆ ವಿಚಾರದಲ್ಲಿ ಇಡೀ ದೇಶವನ್ನು ಒಂದೇ ಘಟಕವಾಗಿ ಪರಿಗಣಿಸಿ, ನಿರ್ವಹಿಸಲು ಹೊರಟಾಗ ಸಮಸ್ಯೆಗಳು ಸಾಲುಗಟ್ಟಿ ನಿಲ್ಲುತ್ತವೆ. ಈಗ ರಾಜ್ಯಗಳು ಇಂತಹ ಪರಿಸ್ಥಿತಿಗೆ ಈಡಾಗಿ ಪರಿತಪಿಸುವಂತಾಗಿದೆ. ಆದ್ದರಿಂದ ಕೇಂದ್ರ ಸರ್ಕಾರವು ಆರ್ಥಿಕ ಕೊಡುಗೆಗಳು ಮತ್ತು ಹಣಕಾಸು ನೆರವಿನ ವಿಷಯದಲ್ಲಿ ರಾಜ್ಯಗಳನ್ನು ಬಿಡಿಬಿಡಿ ಘಟಕಗಳನ್ನಾಗಿ ವಿಂಗಡಿಸಿ ಪ್ರತ್ಯೇಕ ಸೂತ್ರ ನಿರೂಪಿಸುವ ಅಗತ್ಯವಿದೆ.

ರಾಜ್ಯಗಳು ಕೂಡ ಪೂರ್ತಿಯಾಗಿ ಕೇಂದ್ರ ಸರ್ಕಾರದ ಕಾರ್ಯತಂತ್ರ, ಮಾರ್ಗಸೂಚಿಗಳನ್ನು ಯಾಂತ್ರಿಕವಾಗಿ ಅವಲಂಬಿಸುವ ಬದಲು ತಮ್ಮದೇ ಆದ, ಸ್ಥಳೀಯವಾಗಿ ಕಾರ್ಯಸಾಧು ಎನ್ನಿಸುವ ನೀತಿಗಳನ್ನು ರೂಪಿಸಿಕೊಳ್ಳುವುದು ಅಪೇಕ್ಷಣೀಯ. ಇಂತಹ ಬದಲಾವಣೆ, ಸ್ವತಂತ್ರ ನಿರ್ವಹಣೆ ಕ್ರಮಗಳು ಆಡಳಿತ ವ್ಯವಸ್ಥೆಗಷ್ಟೇ ಸೀಮಿತವಾಗಬೇಕಿಲ್ಲ. ರಾಜಕೀಯ ವ್ಯವಸ್ಥೆಯಲ್ಲೂ ದಕ್ಷತೆ, ವೃತ್ತಿಪರತೆ ಒಳಗೊಳ್ಳುವ ನಿಟ್ಟಿನಲ್ಲಿ ದಿಟ್ಟ ಕ್ರಮ ಕೈಗೊಳ್ಳುವ ಅಭೂತಪೂರ್ವ ಅವಕಾಶವು ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದವರ ವಿವೇಕದ ಬಾಗಿಲು ತಟ್ಟುತ್ತಿದೆ.

ನಮ್ಮ ರಾಜ್ಯದಲ್ಲಿ ಕೊರೊನಾ ಸೋಂಕು ಪ್ರವೇಶ ಪಡೆದ ಆರಂಭದ ದಿನಗಳಿಂದ ಆಗುಹೋಗುಗಳನ್ನು ಅವಲೋಕಿಸುವುದಾದರೆ, ರಾಜಕೀಯ ವ್ಯವಸ್ಥೆಯ ದೌರ್ಬಲ್ಯಗಳು ಉದ್ದಕ್ಕೂ ಮೂಗು ತೂರಿಸುತ್ತಿರುವುದನ್ನು ಗುರುತಿಸಬಹುದು. ಪ್ರಾರಂಭದಲ್ಲಿ ಆರೋಗ್ಯ ಸಚಿವರು ಮತ್ತು ವೈದ್ಯಕೀಯ ಶಿಕ್ಷಣ ಸಚಿವರ ಜುಗಲ್ಬಂದಿ ನೋಡಿದ್ದಾಯಿತು. ಲಾಕ್‍ಡೌನ್ ಘೋಷಣೆ, ಜಾರಿ, ವಿಸ್ತರಣೆ, ಸಡಿಲಿಕೆಗಳು ಗೊಂದಲಗಳಿಗೆ ಹೊರತಾದದ್ದೇ ಇಲ್ಲ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಸಂಪುಟದ ಕೆಲ ಸಹೋದ್ಯೋಗಿಗಳು ವೈರುಧ್ಯದ ಹೇಳಿಕೆಗಳಿಗೆ, ಕೃತ್ಯಗಳಿಗೆ ಯಾವ ಹಂತದಲ್ಲೂ ಒಂದಿನಿತೂ ಕೊರತೆಯಾಗದಂತೆ ತಮ್ಮ ಕಾರ್ಯದಕ್ಷತೆ ತೋರ್ಪಡಿಸಿದರು! ಹಲವು ಜಿಲ್ಲಾಧಿಕಾರಿಗಳ ಕಾರ್ಯತತ್ಪರತೆ, ಮುಂಚೂಣಿ ಯೋಧರ ಕ್ಷಮತೆ, ಪೊಲೀಸ್ ಇಲಾಖೆಯ ಸಹಕಾರದಿಂದ ರಾಜ್ಯದಲ್ಲಿ ಕೋವಿಡ್-19 ಒಂದಿಷ್ಟು ನಿಯಂತ್ರಣದಲ್ಲಿದೆ.

ಪ್ರಸಕ್ತ ಸನ್ನಿವೇಶವನ್ನು ವೈರಾಣು ವಿರುದ್ಧದ ರಣಕಹಳೆ ಎಂದು ಬಿಂಬಿಸಿದ ಟಿ.ವಿ. ವಾಹಿನಿಗಳು, ದೇವರ ಅನುಪಸ್ಥಿತಿಯಲ್ಲಿ ಸರ್ಕಾರದ ಮೇಲೆ ಭಾರ ಹಾಕಿ ಮನಸ್ಸು ಹಗುರ ಮಾಡಿಕೊಂಡ ಜನರು ಅರ್ಧ ಯುದ್ಧ ಗೆದ್ದ ಉಮೇದಿಯಲ್ಲಿದ್ದಾರೆ. ಆದರೆ ಇದೀಗ ನಿರ್ಬಂಧಗಳನ್ನು ತೆರವುಗೊಳಿಸಿದ ಅವಧಿ ಪ್ರವೇಶಿಸಿದ್ದೇವೆ. ಈಗಿನ ನಿರಾಳ ಭಾವ ಹೀಗೇ ಕಾಯಂ ಆಗಿ ಉಳಿಯುವ ಖಾತರಿ ಇಲ್ಲವೇ ಇಲ್ಲ. ಮುಂಬರುವ ದಿನಗಳು ವೈದ್ಯರ, ಸಂಶೋಧಕರ, ಆರ್ಥಿಕ ತಜ್ಞರ, ಆಡಳಿತ ನಿಪುಣರ ಲೆಕ್ಕಾಚಾರಗಳಿಗೇ ನಿಖರವಾಗಿ ನಿಲುಕುತ್ತಿಲ್ಲ. ಹೀಗಿರುವ ಅನಿಶ್ಚಿತ ಪರಿಸ್ಥಿತಿಯಲ್ಲಿ ಈ ರಾಜಕೀಯ ವ್ಯವಸ್ಥೆಯನ್ನು ನಂಬಿ ಕುಳಿತುಕೊಳ್ಳುವುದೆಂತು?

ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಮನಸ್ಸು ಮಾಡಿದರೆ, ಕೇಳರಿಯದ ಸನ್ನಿವೇಶದಲ್ಲಿ ಕಂಡರಿಯದ ಪ್ರಯೋಗ ಒಂದನ್ನು ಮಾಡಲು ಸಾಧ್ಯ. ಅದುವೇ ರಾಜಕೀಯೇತರ ಸಚಿವ ಸಂಪುಟದ ರಚನೆ. ಮೊದಲನೆಯದಾಗಿ, ಈಗಿರುವ ಎಲ್ಲಾ ಸಚಿವರಿಗೆ ತಾತ್ಕಾಲಿಕ ವಿರಾಮ ನೀಡಬೇಕು. ಅವರ ಜಾಗದಲ್ಲಿ ಅಗತ್ಯಕ್ಕೆ ಅನುಗುಣವಾಗಿ, ವಿವಿಧ ಕ್ಷೇತ್ರಗಳಲ್ಲಿ ಛಾಪು ಮೂಡಿಸಿರುವ ತಜ್ಞರು, ವೃತ್ತಿನಿರತರು, ಅನುಭವಿಗಳು, ಮೇಧಾವಿಗಳನ್ನು ಒಳಗೊಂಡ 20-25 ಜನರನ್ನು ನೇರವಾಗಿ ಸಂಪುಟ ಸಚಿವರನ್ನಾಗಿ ಸೇರಿಸಿಕೊಳ್ಳುವುದು. ಇವರ ಸೇವಾವಧಿ ಆರು ತಿಂಗಳು ಮಾತ್ರ. ಹಾಗಾಗಿ ಅವರು ಶಾಸಕರಾಗಿ ಆಯ್ಕೆಯಾಗಿ ಬರುವ ಅಥವಾ ಅವರನ್ನು ನಾಮನಿರ್ದೇಶನ ಮಾಡುವ ಸಂದರ್ಭ ಉದ್ಭವಿಸುವುದಿಲ್ಲ. ಆರು ತಿಂಗಳ ನಂತರ ಈಗಿರುವ ಸಚಿವ ಸಂಪುಟವು ಯಥಾವತ್ತಾಗಿ ಮರುಸ್ಥಾಪನೆ ಆಗುವ ಭರವಸೆ ನೀಡುವುದರಿಂದ ಹಾಲಿ ಸಚಿವರಿಗೆ ಆತಂಕ ಇರಲಾರದು.

ನನ್ನಂತಹವರು ಎಲ್ಲೋ ಕುಳಿತು ಇಂತಹದ್ದೊಂದು ಆದರ್ಶಪ್ರಾಯದ ಪ್ರಸ್ತಾವವನ್ನು ಮುಂದಿಡುವುದು ಸುಲಭ. ಆದರೆ, ಬದುಕಿನುದ್ದಕ್ಕೂ ಅಧಿಕಾರಕ್ಕಾಗಿ ಬಡಿದಾಡುವ ರಾಜಕಾರಣಿಗಳ ವಲಯದಲ್ಲಿ ಇಂತಹ ಚಿಂತನೆ ಉಕ್ಕಿಸಬಹುದಾದ ನಗು ಮತ್ತು ಅವರನ್ನು ಹಾಗೆಂದೇ ಸ್ವೀಕರಿಸಿರುವ ಜನಸಾಮಾನ್ಯರ ಸಿನಿಕತನದ ಸ್ಪಷ್ಟ ಅರಿವು ನನಗಿದೆ.

ವಿಶಿಷ್ಟ ಸನ್ನಿವೇಶದಲ್ಲಿ, ಅಷ್ಟೇ ವಿಚಿತ್ರ ರೀತಿಯಲ್ಲಿ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿರುವ ಯಡಿಯೂರಪ್ಪ ತಮ್ಮ ರಾಜಕೀಯ ಜೀವನದ ಸಂಧ್ಯಾಕಾಲದಲ್ಲಿದ್ದಾರೆ. ಅವರ ಹೋರಾಟದ ಹಿನ್ನೆಲೆ, ದಿಟ್ಟ ಸ್ವಭಾವ, ಪಕ್ಷದೊಳಗಿನ ವಾತಾವರಣ ಇಂಥ ರಿಸ್ಕ್ ತೆಗೆದುಕೊಳ್ಳಲು ಪೂರಕವಾಗಿವೆ. ಅವರಾಗಲೀ, ಅವರ ಪಕ್ಷವಾಗಲೀ, ಸಹಚರರಾಗಲೀ ಬದುಕಿನ ಇಂತಹ ಬಹುದೊಡ್ಡ ನಿರ್ಧಾರ ತೆಗೆದುಕೊಳ್ಳಲು, ಹೊರಗಿನ ಅಬ್ಬರದಿಂದ ಹೊರಬಂದು ಒಂದು ಕ್ಷಣ ತಮ್ಮ ಅಂತರಂಗದ ದನಿಯನ್ನು ಆಲಿಸಬೇಕಷ್ಟೇ.

ಮೊದಲ ನೋಟಕ್ಕೆ ತೀರಾ ಅಸಂಗತವಾಗಿ, ತಮಾಷೆಯಾಗಿ, ಹಗಲುಗನಸಾಗಿ ಕಾಣುವ ‘ರಾಜಕೀಯೇತರ ಸಂಪುಟ ರಚನೆ’ ಜಾರಿಯಾಗಿಯೇ ಬಿಟ್ಟಿತು ಎಂದು ಭಾವಿಸಿ, ಅದರ ಅಲ್ಪಕಾಲಿಕ ಮತ್ತು ದೀರ್ಘಕಾಲಿಕ ಪರಿಣಾಮಗಳನ್ನು ಊಹಿಸುತ್ತಾ ಹೋಗಿ...

ಮನುಕುಲದ ಇತಿಹಾಸವನ್ನು ಅಕಾಡೆಮಿಕ್ ಶಿಸ್ತಿನಿಂದ ಅಧ್ಯಯನ ಮಾಡುವಾಗ ತಜ್ಞರು ಈ ಕಾಲಘಟ್ಟವನ್ನು ಕೊರೊನಾಪೂರ್ವ ಮತ್ತು ಕೊರೊನೋತ್ತರ ಅವಧಿ ಎಂದು ವಿಭಾಗಿಸುವ ಎಲ್ಲಾ ಸಾಧ್ಯತೆಗಳಿವೆ. ಅಷ್ಟು ಪ್ರಬಲ ಪರಿಣಾಮ ಈ ಪುಟ್ಟ ವೈರಾಣುವಿನದು. ಸಮಕಾಲೀನ ಸಂದರ್ಭ ಇಷ್ಟೊಂದು ವಿಚಿತ್ರವೂ ಕಲ್ಪನಾತೀತವೂ ಆಘಾತಕಾರಿಯೂ ಆಗಿರುವಾಗ, ಒಂದು ರಾಜ್ಯ ಸರ್ಕಾರ ಅಳವಡಿಸಿಕೊಳ್ಳಬೇಕಾದ ಅಪೂರ್ವ ಮಾರ್ಪಾಟು ಅಸಾಧ್ಯವೆನಿಸಬಾರದು ಅಲ್ಲವೇ?

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು