ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಪ್ರತಿಜೈವಿಕಗಳ ಅತಿಯಾದ ಬಳಕೆ; ಮತ್ತೊಂದು ಆರೋಗ್ಯ ಸಮಸ್ಯೆಯ ಭೀತಿ

Published 23 ಜನವರಿ 2024, 20:34 IST
Last Updated 23 ಜನವರಿ 2024, 20:34 IST
ಅಕ್ಷರ ಗಾತ್ರ

ಪ್ರತಿಜೈವಿಕಗಳ (ಆ್ಯಂಟಿಬಯಾಟಿಕ್ಸ್) ಬಳಕೆಯ ವಿಚಾರವಾಗಿ ಆರೋಗ್ಯಸೇವೆಗಳ ಮಹಾನಿರ್ದೇಶ ನಾಲಯವು (ಡಿಜಿಎಚ್‌ಎಸ್‌) ವೈದ್ಯರು ಮತ್ತು ಔಷಧಾಲಯಗಳ ನಿರ್ವಾಹಕರಿಗೆ ನೀಡಿರುವ ಮಾರ್ಗಸೂಚಿಯು ದೇಶದಲ್ಲಿ ಅವುಗಳ ಬಳಕೆಯನ್ನು ನಿಯಂತ್ರಿಸಲು ನೆರವಾಗಬಹುದು ಎಂಬ ಆಶಾಭಾವ ಮೂಡಿಸುವಂತಿದೆ. ಪ್ರತಿಜೈವಿಕಗಳು ಸೇರಿದಂತೆ ‘ಸೂಕ್ಷ್ಮಾಣು ನಿರೋಧಕ’ ಔಷಧಗಳನ್ನು ತೆಗೆದುಕೊಳ್ಳುವಂತೆ ಸೂಚಿಸುವಾಗ ವೈದ್ಯರು ಸಂಬಂಧಪಟ್ಟ ‘ಲಕ್ಷಣಗಳನ್ನು, ಕಾರಣಗಳನ್ನು ಹಾಗೂ ಸಮರ್ಥನೆಗಳನ್ನು’ ಉಲ್ಲೇಖಿಸಬೇಕು ಎಂದು ಡಿಜಿಎಚ್‌ಎಸ್ ಹೇಳಿದೆ

ವೈದ್ಯರ ಶಿಫಾರಸು ಇದ್ದಾಗ ಮಾತ್ರ ಪ್ರತಿಜೈವಿಕಗಳನ್ನು ಮಾರಾಟ ಮಾಡಬೇಕು ಎಂದು ಕೂಡ ಅದು ಔಷಧಾಲಯ ನಿರ್ವಾಹಕರಿಗೆ ಸೂಚನೆ ನೀಡಿದೆ. ಮಾರ್ಗಸೂಚಿಯಲ್ಲಿ ಇರುವ ಸೂಕ್ಷ್ಮಾಣು ಔಷಧಗಳ ಪಟ್ಟಿಯಲ್ಲಿ ಪ್ರತಿಜೈವಿಕಗಳು, ವೈರಾಣು ನಿರೋಧಕ ಔಷಧಗಳು, ಶಿಲೀಂಧ್ರ ನಿರೋಧಕಗಳು ಸೇರಿದಂತೆ ಕೆಲವು ವರ್ಗಗಳಿಗೆ ಸೇರಿದ ಔಷಧಗಳು ಇವೆ. ಔಷಧ ಮತ್ತು ಸೌಂದರ್ಯವರ್ಧಕಗಳ ನಿಯಮ– 1945, ಪ್ರತಿಜೈವಿಕಗಳನ್ನು ಕೂಡ ಒಳಗೊಂಡಿದೆ. ನೋಂದಾಯಿತ ವೈದ್ಯರ ಶಿಫಾರಸು ಇಲ್ಲದೆ ಇವುಗಳನ್ನು ಮಾರಾಟ ಮಾಡುವಂತೆ ಇಲ್ಲ ಎಂದು ನಿಯಮ ಹೇಳುತ್ತದೆ. ಆದರೆ, ಈ ನಿಯಮಗಳನ್ನು ಬಿಗಿಯಾಗಿ ಅನುಷ್ಠಾನಕ್ಕೆ ತಂದಿಲ್ಲ. ನಿಯಮಗಳ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಕೂಡ ಇಲ್ಲ. ಇದರಿಂದಾಗಿ, ಪ್ರತಿಜೈವಿಕಗಳ ಅನಿಯಂತ್ರಿತ ಬಳಕೆಯ ಅಪಾಯವು ಹೆಚ್ಚಾಗಿದೆ. ಈ ಔಷಧಗಳನ್ನು ಯಾವ ವೈದ್ಯರ ಶಿಫಾರಸು ಕೂಡ ಇಲ್ಲದೆ, ಔಷಧಾಲಯಗಳಲ್ಲಿ ಹಾಗೇ ಮಾರಾಟ ಮಾಡುವುದೂ ಇದೆ. ಈಗ ಮಹಾನಿರ್ದೇಶನಾಲಯವು ಹೊರಡಿಸಿರುವ ಮಾರ್ಗಸೂಚಿಯು ನೆನಪೋಲೆಯಂತೆ ಇದೆ. ಇಂಥವನ್ನು ಹಿಂದೆ ಕೂಡ ಹೊರಡಿಸಲಾಗಿತ್ತು.

ಭಾರತದಲ್ಲಿ ಹಾಗೂ ವಿಶ್ವದ ಇತರೆಡೆಗಳಲ್ಲಿ ರೋಗಕಾರಕಗಳು ಪ್ರತಿಜೈವಿಕಗಳಿಗೆ ನಿರೋಧಕ ಶಕ್ತಿಯನ್ನು ಬೆಳೆಸಿಕೊಂಡಿರುವುದು ಬಹಳ ದೊಡ್ಡ ಆರೋಗ್ಯ ಸಮಸ್ಯೆಯಾಗಿ ಪರಿಣಮಿಸಿದೆ. ಪ್ರತಿ ಜೈವಿಕಗಳನ್ನು ಅತಿಯಾಗಿ ಹಾಗೂ ವಿವೇಚನೆ ಇಲ್ಲದೆ ಬಳಸಿದರೆ, ರೋಗಕಾರಕಗಳು ಅವುಗಳಿಗೆ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುತ್ತವೆ. ಕೆಲವು ಸಂದರ್ಭ ಗಳಲ್ಲಿ ಕಾಯಿಲೆಯು ತ್ವರಿತವಾಗಿ ಗುಣವಾಗಲಿ ಎಂಬ ಉದ್ದೇಶದಿಂದ ವೈದ್ಯರು ಪ್ರತಿಜೈವಿಕಗಳ ಬಳಕೆಗೆ ಶಿಫಾರಸು ಮಾಡುವುದಿದೆ. ಅಲ್ಲದೆ, ರೋಗಿಗಳು ಕೂಡ ಪ್ರತಿಜೈವಿಕ ನೀಡುವಂತೆ ವೈದ್ಯರಲ್ಲಿ ಕೇಳುವುದಿದೆ. ಬಳಕೆಯಲ್ಲಿ ಇರುವ ಪ್ರತಿಜೈವಿಕಗಳ ಸಂಖ್ಯೆ ಸೀಮಿತ. ಇವು ತಮ್ಮ ಪರಿಣಾಮವನ್ನು ಕಳೆದುಕೊಂಡಲ್ಲಿ, ಹಲವು ಬಗೆಯ ಕಾಯಿಲೆಗಳಿಗೆ ಮದ್ದು ಇರುವುದೇ ಇಲ್ಲ. ಅಂದರೆ, ವಿಶ್ವವು ಪ್ರತಿ ಜೈವಿಕಗಳನ್ನು ಅಭಿವೃದ್ಧಿಪಡಿಸುವುದಕ್ಕೂ ಮೊದಲು ಇದ್ದ ಸ್ಥಿತಿಗೆ ಮರಳಬಹುದು ಎಂಬ ಭೀತಿ ಒಂದೆಡೆ ಇದೆ.

ಈ ವಿಚಾರವಾಗಿ ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ) ಹಲವು ವರ್ಷಗಳಿಂದ ಕಳವಳ ವ್ಯಕ್ತ ಪಡಿಸುತ್ತಾ ಬಂದಿದೆ. ಅಷ್ಟೇಅಲ್ಲ, ಡಬ್ಲ್ಯುಎಚ್‌ಒ ಕಾಲಕಾಲಕ್ಕೆ ಈ ವಿಚಾರವಾಗಿ ಸಲಹೆಗಳನ್ನು ಕೂಡ ನೀಡುತ್ತಾ ಬಂದಿದೆ. ಯಾವ ರೋಗಕಾರಕಗಳಿಗೆ ಪ್ರತಿಜೈವಿಕಗಳನ್ನು ತ್ವರಿತವಾಗಿ ಅಭಿವೃದ್ಧಿಪಡಿಸಬೇಕಿದೆ ಎಂಬ ಪಟ್ಟಿಯನ್ನು ಕೂಡ ಅದು ಕಾಲಕಾಲಕ್ಕೆ ಪ್ರಕಟಿಸುತ್ತಿದೆ. ಹೊಸ ‍ಪ್ರತಿಜೈವಿಕಗಳ ಸಂಶೋಧನೆ ಮತ್ತು ಅಭಿವೃದ್ಧಿಗೆ ಉತ್ತೇಜನ ಕೊಡುವ ಉದ್ದೇಶವನ್ನು ಅದು ಹೊಂದಿದೆ. 2019ರಲ್ಲಿ ವಿಶ್ವದಲ್ಲಿ ಸಂಭವಿಸಿದ 12.7 ಲಕ್ಷ ಜನರ ಸಾವಿಗೆ ರೋಗಕಾರಕಗಳು ಬೆಳೆಸಿಕೊಂಡ ನಿರೋಧಕ ಶಕ್ತಿಯೇ ನೇರ ಕಾರಣ ಎಂಬ ಅಂದಾಜು ಇದೆ.

ರೋಗಕಾರಕಗಳು ಪ್ರತಿಜೈವಿಕಗಳಿಗೆ ನಿರೋಧಕ ಶಕ್ತಿಯನ್ನು ಬೆಳೆಸಿಕೊಂಡರೆ, ರೋಗಶಮನವು ನಿಧಾನವಾಗುತ್ತದೆ ಹಾಗೂ ರೋಗಿಯು ಸಾಯುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಮಹಾನಿರ್ದೇಶನಾಲಯವು ಎಚ್ಚರಿಸಿದೆ. 2016ರಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ‘ಕೆಂಪು ರೇಖೆ’ ಅಭಿಯಾನವನ್ನು ಆರಂಭಿಸಿತ್ತು. ಲಂಬವಾಗಿ ಕೆಂಪು ರೇಖೆ ಇರುವ ಔಷಧಗಳನ್ನು (ಇದರಲ್ಲಿ ಪ್ರತಿಜೈವಿಕಗಳೂ ಸೇರಿವೆ) ವೈದ್ಯರ ಶಿಫಾರಸು ಇಲ್ಲದೆ ಬಳಸಬಾರದು ಎಂದು ಜನರಲ್ಲಿ ಮನವಿ ಮಾಡಿತ್ತು. ಮಾರ್ಗಸೂಚಿಗಳನ್ನು ಹಾಗೂ ನಿರ್ದೇಶನಗಳನ್ನು ಹೊರಡಿಸುವುದಷ್ಟೇ ಅಲ್ಲದೆ, ಅವುಗಳ ಅನುಷ್ಠಾನವು ಸರಿಯಾಗಿ ಆಗುತ್ತಿದೆ ಎಂಬುದನ್ನು ಕೂಡ ಆರೋಗ್ಯ ಸಚಿವಾಲಯದ ಅಧಿಕಾರಿಗಳು ಖಾತರಿಪಡಿಸಿ ಕೊಳ್ಳಬೇಕು. ಮಾರ್ಗಸೂಚಿಗಳ ಪಾಲನೆ ಸರಿಯಾಗಿ ಆಗುತ್ತಿದೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆಯೇ, ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಲಾಗುತ್ತಿದೆಯೇ ಎಂಬ ಬಗ್ಗೆ ಮಾಹಿತಿ ಇಲ್ಲ.

ಪ್ರತಿಜೈವಿಕಗಳ ಅತಿಯಾದ ಬಳಕೆಯ ಅಪಾಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದ ಅಭಿಯಾನಗಳು ವ್ಯಾಪಕವಾಗಿ ನಡೆಯಬೇಕು. ಅಷ್ಟೇಅಲ್ಲ, ಎಲ್ಲ ಬಗೆಯ ಔಷಧಗಳ ಅನಗತ್ಯ ಬಳಕೆಯಿಂದ ಆಗುವ ಅಪಾಯಗಳ ಬಗ್ಗೆಯೂ ಅರಿವು ಮೂಡಿಸುವ ಕೆಲಸ ಆಗಬೇಕು. ದೇಶದ ಸಾರ್ವಜನಿಕ ಆರೋಗ್ಯ ಸೇವಾ ವಲಯವು ಈಗಾಗಲೇ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಪ್ರತಿ ಜೈವಿಕಗಳಿಗೆ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುವ ಸಮಸ್ಯೆಯನ್ನು ಹತ್ತಿಕ್ಕದೇ ಇದ್ದಲ್ಲಿ, ಈಗಾಗಲೇ ಇರುವ ಸಮಸ್ಯೆಗಳ ಪಟ್ಟಿಯಲ್ಲಿ ಇದು ಇನ್ನೊಂದಾಗಿ, ನಿಭಾಯಿಸಲು ಅಸಾಧ್ಯವಾಗುವ ಮಟ್ಟವನ್ನು ತಲುಪಿಬಿಡಬಹುದು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT