ಶನಿವಾರ, ಏಪ್ರಿಲ್ 1, 2023
23 °C

ಜನಸಂಖ್ಯೆ ನಿಯಂತ್ರಣ: ದೋಷಪೂರಿತ ನೀತಿಯಿಂದ ವ್ಯತಿರಿಕ್ತ ಪರಿಣಾಮ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಜನಸಂಖ್ಯೆಯ ನಿಯಂತ್ರಣಕ್ಕಾಗಿ ಉತ್ತರಪ್ರದೇಶ ಸರ್ಕಾರವು ಕರಡು ಮಸೂದೆಯೊಂದನ್ನು ರೂಪಿಸಿದೆ. ‘ಉತ್ತರಪ್ರದೇಶ ಜನಸಂಖ್ಯಾ (ನಿಯಂತ್ರಣ, ಸ್ಥಿರತೆ ಮತ್ತು ಕಲ್ಯಾಣ) ಮಸೂದೆ–2021’ ಹೆಸರಿನ ಈ ಕರಡುವಿನ ಪ್ರಕಾರ, ‘ಇಬ್ಬರಿಗಿಂತ ಹೆಚ್ಚು ಮಕ್ಕಳನ್ನು ಹೊಂದಿದವರಿಗೆ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸ್ಪರ್ಧಿಸಲು ಅವಕಾಶವಿಲ್ಲ. ಅವರು ಸರ್ಕಾರಿ ನೌಕರಿಗೆ ಅರ್ಜಿ ಸಲ್ಲಿಸುವಂತಿಲ್ಲ. ಅವರಿಗೆ ಬಡ್ತಿ ಮತ್ತು ರಾಜ್ಯ ಸರ್ಕಾರದ ಯಾವುದೇ ಸಹಾಯಧನ ದೊರೆಯುವುದಿಲ್ಲ’. ಈ ಕರಡು ಮಸೂದೆಯನ್ನು ಬಿಡುಗಡೆ ಮಾಡಿರುವ ಸರ್ಕಾರವು ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಿದೆ. ‘ರಾಜ್ಯದ ನೈಸರ್ಗಿಕ ಮತ್ತು ಆರ್ಥಿಕ ಸಂಪನ್ಮೂಲಗಳು ಸೀಮಿತವಾದವು. ಜನಸಂಖ್ಯೆಯ ನಿಯಂತ್ರಣದಿಂದ ಮಾತ್ರವೇ ಈ ಸಂಪನ್ಮೂಲಗಳನ್ನು ಸಮಾನವಾಗಿ ಹಂಚಿಕೆ ಮಾಡಲು ಸಾಧ್ಯ’ ಎಂದೂ ಕರಡುವಿನಲ್ಲಿ ಹೇಳಲಾಗಿದೆ. ಹಾಗೆಯೇ ಎರಡು ಮಕ್ಕಳ ನೀತಿಯನ್ನು ಪಾಲಿಸುವ ಸರ್ಕಾರಿ ನೌಕರರಿಗೆ ಉತ್ತೇಜನ ನೀಡುವ ಸಲುವಾಗಿ ಹಲವು ಉಪಕ್ರಮಗಳನ್ನೂ ಸರ್ಕಾರ ಪ್ರಕಟಿಸಿದೆ. ಅಸ್ಸಾಂ ಸರ್ಕಾರ ಈ ಹಿಂದೆಯೇ ಈ ದಿಕ್ಕಿನಲ್ಲಿ ಪ್ರಯತ್ನ ನಡೆಸಿದೆ. ‘ಇಬ್ಬರು ಮಕ್ಕಳ ಜನಸಂಖ್ಯೆ ನೀತಿಯನ್ನು ಸರ್ಕಾರಿ ಸೌಲಭ್ಯಗಳಿಗೆ ಕೊಂಡಿಯಾಗಿಸಿ ಹಂತ ಹಂತವಾಗಿ ಜಾರಿಗೊಳಿಸಲಾಗುವುದು’ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಹೇಳಿದ್ದಾರೆ. ಬಿಜೆಪಿ ನೇತೃತ್ವದ ಸರ್ಕಾರವನ್ನು ಈ ಎರಡೂ ರಾಜ್ಯಗಳು ಹೊಂದಿವೆ. ಇಬ್ಬರಿಗಿಂತ ಹೆಚ್ಚು ಮಕ್ಕಳನ್ನು ಹೊಂದಿದವರಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನಿರಾಕರಿಸುವ ನಿಯಮವನ್ನು ಕೆಲವು ರಾಜ್ಯ ಸರ್ಕಾರಗಳು ಈಗಾಗಲೇ ಜಾರಿಗೊಳಿಸಿ ಚುನಾವಣೆಗೆ ಸ್ಪರ್ಧಿಸುವ ಜನರ ಹಕ್ಕನ್ನು ಮೊಟಕುಗೊಳಿಸಿವೆ. ಸರ್ಕಾರಿ ಸವಲತ್ತುಗಳಿಗೂ ಮಕ್ಕಳ ಸಂಖ್ಯೆಗೂ ನಂಟು ಕಲ್ಪಿಸುವಂತಹ ಪ್ರಯತ್ನವು ಜನಸಂಖ್ಯಾ ಬೆಳವಣಿಗೆಯನ್ನು ತಪ್ಪಾಗಿ ಗ್ರಹಿಸಿದ ಪರಿಣಾಮ ಎನ್ನದೆ ವಿಧಿಯಿಲ್ಲ. ಇದು ಅವೈಜ್ಞಾನಿಕವೂ ಹೌದು. ಜೊತೆಗೆ ಇದು ಕೋಮು ಆಯಾಮವನ್ನೂ ಹೊಂದಿದೆ. ಅಸ್ಸಾಂ ಮುಖ್ಯಮಂತ್ರಿ ಶರ್ಮಾ ಅವರು ಜನಸಂಖ್ಯಾ ನೀತಿ ಕುರಿತು ವಿವರಿಸುವಾಗ ಮುಸ್ಲಿಂ ಸಮುದಾಯದ ಬಗೆಗೆ ನೇರವಾಗಿ ಪ್ರಸ್ತಾಪಿಸಿರುವುದು ಈ ಅಂಶವನ್ನು ದೃಢಪಡಿಸುತ್ತದೆ.

ಜನಸಂಖ್ಯೆ ಹೆಚ್ಚಳದ ಬಗ್ಗೆ ಕಳೆದ ಶತಮಾನದಲ್ಲಿ ಕಂಡುಬಂದಂತಹ ಆತಂಕ ಈಗಿಲ್ಲ. ಏಕೆಂದರೆ ಜನಸಂಖ್ಯೆ ಏರಿದಂತೆಯೇ ಒಂದು ನಿರ್ದಿಷ್ಟ ಹಂತದಲ್ಲಿ ಇಳಿಕೆಯೂ ಆಗುತ್ತದೆ ಎನ್ನುವುದು ಈಗ ಸಮಾಜ ವಿಜ್ಞಾನಿಗಳು ಕಂಡುಕೊಂಡಿರುವ ಸತ್ಯ. ಭಾರತದ ಜನಸಂಖ್ಯೆ 2050ರ ಹೊತ್ತಿಗೆ ಶೃಂಗಕ್ಕೇರಲಿದ್ದು, ಬಳಿಕ ಇಳಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಇದಕ್ಕೆ ಮುಖ್ಯವಾಗಿ ಕಡಿಮೆಯಾಗುತ್ತಿರುವ ಮನುಷ್ಯ ಫಲವತ್ತತೆಯ ದರ ಕಾರಣವಾಗಲಿದೆ. 1992-93ರಲ್ಲಿ ಭಾರತದಲ್ಲಿ ಒಟ್ಟು ಫಲವತ್ತತೆ ದರ (ಟಿಎಫ್‍ಆರ್) 3.4ರಷ್ಟು ಇದ್ದುದು, 2015-16ರ ಹೊತ್ತಿಗೆ 2.2ಕ್ಕೆ ಇಳಿದಿದೆ ಎಂದು ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆಯೇ ಪ್ರಕಟಿಸಿದೆ. ಫಲವತ್ತತೆ ದರ ಕಡಿಮೆಯಾಗಿರುವ ಈ ವಿದ್ಯಮಾನವು ಹಿಂದೂಗಳು, ಮುಸ್ಲಿಮರು ಸೇರಿದಂತೆ ಎಲ್ಲ ಧರ್ಮೀಯರಲ್ಲೂ ಕಂಡುಬಂದಿದೆ ಎಂದು ಆ ಸಮೀಕ್ಷೆ ಗುರುತಿಸಿದೆ. ಫಲವತ್ತತೆಯ ದರ ಕಡಿಮೆಯಾಗಿರುವುದು ಹಿಂದೂಗಳಿಗಿಂತ ಮುಸ್ಲಿಮರಲ್ಲೇ ಅಧಿಕ ಎಂದೂ ಸಮೀಕ್ಷೆ ಹೇಳಿದೆ. ತಮಿಳುನಾಡು ಮತ್ತು ಆಂಧ್ರ ಪ್ರದೇಶದಲ್ಲಿ ಫಲವತ್ತತೆಯ ದರವು ಮುಸ್ಲಿಮರಲ್ಲಿ, ಜನಸಂಖ್ಯೆ ಪ್ರಮಾಣ ಕಾಯ್ದುಕೊಳ್ಳುವಿಕೆ ದರವಾದ 2.1ರಷ್ಟು ಅಥವಾ ಅದಕ್ಕಿಂತ ಕಡಿಮೆ ಇದೆ. ಇನ್ನೂ ಹಲವು ರಾಜ್ಯಗಳಲ್ಲಿ ಪರಿಸ್ಥಿತಿ ಇದಕ್ಕಿಂತ ಭಿನ್ನವಿಲ್ಲ. ಮುಸ್ಲಿಮರ ವಿದ್ಯಾಭ್ಯಾಸ ಮಟ್ಟ ಕಡಿಮೆಯಾಗಿದ್ದು, ಬಡತನ ಮತ್ತು ಆರೋಗ್ಯ ಸೌಲಭ್ಯಗಳ ಕೊರತೆ ಇರುವ ಕೆಲವು ಪ್ರದೇಶಗಳಲ್ಲಿ ಆ ಸಮುದಾಯದ ಫಲವತ್ತತೆ ದರ ಹೆಚ್ಚು ಇದೆ ಎಂಬುದು ಗಮನಾರ್ಹ ಸಂಗತಿ. ಈ ವಿಷಯಗಳನ್ನು ಗಮನಿಸಿದಾಗ, ದೇಶದಲ್ಲಿ ಮುಸ್ಲಿಮರ ಜನಸಂಖ್ಯೆಯಲ್ಲಿ ತೀವ್ರಗತಿಯಲ್ಲಿ ಏರಿಕೆ ಆಗುತ್ತಿದೆ ಎಂಬ ಸಂಕಥನದಲ್ಲಿ ಹುರುಳಿಲ್ಲ ಎಂಬುದು ಗೊತ್ತಾಗುತ್ತದೆ. ಜನಸಂಖ್ಯೆ ಬೆಳವಣಿಗೆ ಹೆಚ್ಚಿದ್ದ ಸಂದರ್ಭಗಳಲ್ಲೂ ನಿಯಂತ್ರಣ ಕ್ರಮಗಳನ್ನು ಬಲವಂತವಾಗಿ ಹೇರಿದ್ದರ ಪರಿಣಾಮಗಳು ಕೆಟ್ಟದಾಗಿವೆ ಎಂಬುದು ಜಾಗತಿಕ ವಿದ್ಯಮಾನಗಳನ್ನು ಗಮನಿಸಿದಾಗ ತಿಳಿಯುತ್ತದೆ.

ಚೀನಾದಲ್ಲಿ ‘ಒಂದು ಕುಟುಂಬಕ್ಕೆ ಒಂದೇ ಮಗು’ ಎಂಬ ಕಠಿಣ ನೀತಿಯನ್ನು ಸರ್ಕಾರ ಸಡಿಲಿಸಿ ಐದು ವರ್ಷಗಳೇ ಉರುಳಿವೆ. ಈಗ ಅಲ್ಲಿ ಒಂದು ಕುಟುಂಬ ಮೂವರು ಮಕ್ಕಳನ್ನು ಹೊಂದುವುದಕ್ಕೆ ಅನುಮತಿ ನೀಡಲಾಗಿದೆ. ಜನಸಂಖ್ಯೆ ಬೆಳವಣಿಗೆಯನ್ನು ನಿಯಂತ್ರಿಸುವ ಉದ್ದೇಶದಿಂದ ಸರ್ಕಾರಿ ನೌಕರಿ ನಿರಾಕರಣೆ, ಸೌಕರ್ಯ ಕಡಿತ ಮತ್ತು ಪ್ರಜಾತಾಂತ್ರಿಕ ಹಕ್ಕುಗಳನ್ನು ಮೊಟಕುಗೊಳಿಸುವ ನೀತಿಯು ದೋಷಪೂರಿತವಾದುದು. ಕೆಟ್ಟ ಪರಿಣಾಮಗಳಿಗೆ ಕಾರಣವಾಗುವಂತಹುದು. ಬಡವರಿಗೆ, ತುಳಿತಕ್ಕೆ ಒಳಗಾದವರಿಗೆ ಹಾಗೂ ಶಿಕ್ಷಣಮಟ್ಟ ಕಡಿಮೆ ಇರುವ ಕುಟುಂಬಗಳಿಗೆ ಸರ್ಕಾರದ ಸೌಲಭ್ಯಗಳ ಅಗತ್ಯ ಹೆಚ್ಚು. ಇಂತಹ ಕುಟುಂಬಗಳ ಸಾಮಾಜಿಕ– ಆರ್ಥಿಕ ಬಲವರ್ಧನೆಗೆ ಸರ್ಕಾರಗಳು ಶ್ರಮಿಸಬೇಕು. ಮಕ್ಕಳ ಸಂಖ್ಯೆಯ ಹೆಸರಿನಲ್ಲಿ ಸವಲತ್ತು ನಿರಾಕರಿಸುವುದು ತರವಲ್ಲ. ದುರ್ಬಲ ವರ್ಗಗಳ ಸಾಮಾಜಿಕ- ಆರ್ಥಿಕ ಮಟ್ಟವನ್ನು ಎತ್ತರಿಸಲು ಆರೋಗ್ಯ, ಮಾನವ ಸಂಪನ್ಮೂಲ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಬಂಡವಾಳ ಹೂಡುವುದೇ ಸರ್ಕಾರವೊಂದರ ಅತ್ಯುತ್ತಮ ಜನಸಂಖ್ಯಾ ನೀತಿ ಎನ್ನುವುದನ್ನು ಮರೆಯಬಾರದು. ಉತ್ತರಪ್ರದೇಶ ಸರ್ಕಾರ ಮತ್ತು ಅಸ್ಸಾಂ ಸರ್ಕಾರದ ಉದ್ದೇಶಿತ ಜನಸಂಖ್ಯಾ ನೀತಿಯು ರಾಜಕೀಯ ಪ್ರೇರಿತವಾದದ್ದೇ ವಿನಾ ಜನರ ಜೀವನಮಟ್ಟ ಹೆಚ್ಚಿಸುವ ಉದ್ದೇಶದ್ದಲ್ಲ ಎನ್ನುವುದು ಮೇಲ್ನೋಟಕ್ಕೇ ಎದ್ದು ಕಾಣಿಸುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು