ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ| ಬಳಕೆಯಾಗದ ‘ಶಾಸಕರ ನಿಧಿ’: ಉದಾಸೀನ, ನಿರ್ಲಕ್ಷ್ಯ ಸಲ್ಲದು

Last Updated 13 ಸೆಪ್ಟೆಂಬರ್ 2021, 19:31 IST
ಅಕ್ಷರ ಗಾತ್ರ

ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಶಾಸಕರಿಗೆರಾಜ್ಯ ಸರ್ಕಾರ ಪ್ರತಿವರ್ಷ ನೀಡುವ ತಲಾ ₹ 2 ಕೋಟಿ ಅನುದಾನ ಪೂರ್ಣ ಪ್ರಮಾಣದಲ್ಲಿ ಬಳಕೆ ಆಗದಿರುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ಅತೃಪ್ತಿ ವ್ಯಕ್ತಪಡಿಸಿರುವುದು ಗಮನಾರ್ಹ. ಶಾಸಕರ ನಿಧಿ ಎಂದೇ ಕರೆಯಲಾಗುವ ಈ ಅನುದಾನವನ್ನು ಪೂರ್ಣ ಬಳಕೆ ಮಾಡಿ ಎಂದು ಮುಖ್ಯಮಂತ್ರಿಯವರು ಎಲ್ಲ ಶಾಸಕರಿಗೂ ಪತ್ರ ಬರೆದು ಒತ್ತಾಯಿಸಿದ್ದಾರೆ. ಬಿಡುಗಡೆ ಆಗಿರುವ ಅನುದಾನ ಸಕಾಲದಲ್ಲಿ ಬಳಕೆ ಆಗದಿದ್ದರೆ ರಾಜ್ಯದ ಪ್ರಗತಿ ಕುಂಠಿತಗೊಳ್ಳಲಿದೆ ಎಂದು ಅವರು ಕಾಳಜಿ ವ್ಯಕ್ತಪಡಿಸಿರುವುದು ಸರಿಯಾಗಿಯೇ ಇದೆ. ಖುದ್ದು ಮುಖ್ಯಮಂತ್ರಿಯವರೇ ಪತ್ರ ಬರೆದಿರುವುದನ್ನು ಗಮನಿಸಿಯಾದರೂ ಶಾಸಕರು ತಮ್ಮ ಕ್ಷೇತ್ರದ ಅಭಿವೃದ್ಧಿ ಯತ್ತ ಗಮನ ಹರಿಸಬೇಕಾಗಿದೆ. 2021–22ನೇ ಸಾಲಿಗೆ ಎರಡು ಸಮಾನ ಕಂತುಗಳಲ್ಲಿ ಶಾಸಕರಿಗೆ ತಲಾ ಒಂದು ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಈ ವರ್ಷದ ಜುಲೈ ಅಂತ್ಯದ ವೇಳೆಗೆ ಸರಾಸರಿ ಶೇಕಡ 17.21ರಷ್ಟು ಅನುದಾನ ಮಾತ್ರ ಬಳಕೆಯಾಗಿದೆ ಎನ್ನುವುದು ಶಾಸಕರು ಪಕ್ಷಭೇದ ವಿಲ್ಲದೆ ನಾಚಿಕೆ ಪಟ್ಟುಕೊಳ್ಳುವ ಸಂಗತಿಯೇ ಸರಿ. ಕೋವಿಡ್ ಸಂಕಷ್ಟದಿಂದ ಇಡೀ ರಾಜ್ಯ ಆರ್ಥಿಕ ಹಿನ್ನಡೆ ಕಂಡಿರುವ ಈ ಸಂದಿಗ್ಧ ಸಮಯದಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಈ ನಿಧಿಯಿಂದಾಗಿ ಆರ್ಥಿಕ ಚಟುವಟಿಕೆಗಳು ಹೆಚ್ಚಾದರೆ ಜನರಿಗೆ ಒಳಿತಾಗಬಹುದು. ಶಾಸಕರು ಸೋಂಬೇರಿತನವನ್ನು ಬಿಟ್ಟು ಲಭ್ಯವಿರುವ ಸಂಪನ್ಮೂಲ ಬಳಸಿ ಅಭಿವೃದ್ಧಿ ಕೆಲಸಗಳ ವೇಗ ಹೆಚ್ಚಿಸುವ ಅಗತ್ಯ ಈಗ ಹಿಂದೆಂದಿಗಿಂತ ಹೆಚ್ಚಿದೆ. ಅನುದಾನವು ಚಿತ್ರದುರ್ಗ, ಕಲಬುರ್ಗಿ, ವಿಜಯಪುರ, ಬಳ್ಳಾರಿ, ಕೊಪ್ಪಳ ಈ ಐದು ಜಿಲ್ಲೆಗಳಲ್ಲಿ ಅತಿಕಡಿಮೆ ಬಳಕೆಯಾಗಿದೆ. ‘ಉತ್ತರ ಕರ್ನಾಟಕ ಹಿಂದುಳಿದಿರಲು ಸರ್ಕಾರದ ಮಲತಾಯಿ ಧೋರಣೆಯೇ ಕಾರಣ’ ಎಂದು ಪದೇ ಪದೇ ಬೊಬ್ಬೆ ಹೊಡೆಯುವ ಕೆಲವು ಜನನಾಯಕರು ಈ ವಿಷಯದ ಕಡೆಗೆ ಗಮನ ಹರಿಸಬೇಕು. ಜನಪ್ರತಿನಿಧಿಗಳ ಅದಕ್ಷತೆಯೂ ಹಿಂದುಳಿದಿರುವಿಕೆಗೆ ಒಂದು ಪ್ರಮುಖ ಕಾರಣ ಎನ್ನುವುದನ್ನು ಜನ ಗಮನಿಸಬೇಕು. ಚಿತ್ರದುರ್ಗ ಜಿಲ್ಲೆಯಲ್ಲಿ ಶಾಸಕರ ನಿಧಿ ಶೇ 2.25ರಷ್ಟು ಮಾತ್ರ ಬಳಕೆಯಾಗಿದೆ ಎನ್ನುವುದು ಆ ಜಿಲ್ಲೆಯ ಶಾಸಕರಿಗೆ ಮುಜುಗರ ಉಂಟು ಮಾಡುವುದಿಲ್ಲವೇ? ಕಲಬುರ್ಗಿ (ಶೇ 7.15), ವಿಜಯಪುರ (ಶೇ 8.98), ಬಳ್ಳಾರಿ (ಶೇ 10.25) ಮತ್ತು ಕೊಪ್ಪಳ (ಶೇ 11.63) ಜಿಲ್ಲೆಗಳಲ್ಲಿ ಬಳಕೆ ಯಾದ ಶಾಸಕರ ನಿಧಿಯ ಪ್ರಮಾಣವೂ ಈ ಜಿಲ್ಲೆಗಳು ಏಕೆ ಇನ್ನೂ ಹಿಂದುಳಿದಿವೆ ಎನ್ನುವುದಕ್ಕೆ ದಿಕ್ಸೂಚಿಯಂತಿದೆ. ಅದರಲ್ಲೂ ಚಿತ್ರದುರ್ಗ, ಹೊಸದುರ್ಗ, ಹೊಳಲ್ಕೆರೆ ಮತ್ತು ಚಳ್ಳಕೆರೆ ವಿಧಾನಸಭಾ ಕ್ಷೇತ್ರಗಳಲ್ಲಿ ಜುಲೈ ಅಂತ್ಯದವರೆಗೆ ‘ಪ್ರಗತಿ ಶೂನ್ಯ’ ಎಂದು ಮುಖ್ಯಮಂತ್ರಿಯವರೇ ಉಲ್ಲೇಖಿಸಿದ್ದಾರೆ. ಇದು,ನಾಚಿಕೆಗೇಡು ಸಂಗತಿ. ಇವರಲ್ಲಿ ಒಬ್ಬ ಶಾಸಕರು ತಮಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲ ಎಂದು ಸಾರ್ವಜನಿಕವಾಗಿ ಸಿಟ್ಟು ಪ್ರಕಟಿಸಿದ್ದೂ ಉಂಟು. ಈ ಕ್ಷೇತ್ರಗಳ ಜನ ಪಕ್ಷಭೇದ ಮರೆತು ಈ ಶಾಸಕರ ಬೆನ್ನು ಹತ್ತಿ ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡಿಕೊಡಲು ಒತ್ತಡ ಹೇರಬೇಕಿದೆ.

ಶಾಸಕರ ನಿಧಿಯ ಅನುದಾನ ನೇರವಾಗಿ ಶಾಸಕರ ಖಾತೆಗೆ ಹೋಗದೆ, ಜಿಲ್ಲಾಧಿಕಾರಿಗಳ ಪಿ.ಡಿ. (ವೈಯಕ್ತಿಕ ಠೇವಣಿ) ಖಾತೆಗೆ ಹೋಗುತ್ತದೆ. ಹಣ ಪೋಲಾಗದಂತೆ ಮತ್ತು ಸೂಕ್ತ ಬಾಬ್ತುಗಳಿಗೇ ಖರ್ಚಾಗುವಂತೆ ನೋಡಿಕೊಳ್ಳಲು ಸರ್ಕಾರ ಅನುಸರಿಸುತ್ತಿರುವ ವಿಧಾನ ಇದು. ಸಮುದಾಯ ಭವನ, ದೇವಾಲಯ ನಿರ್ಮಾಣ, ಗ್ರಾಮೀಣ ರಸ್ತೆ, ಚರಂಡಿ, ತುರ್ತು ಕುಡಿಯುವ ನೀರು, ಕ್ರೀಡೆ, ಸಾಂಸ್ಕೃತಿಕ ಕಾರ‍್ಯಕ್ರಮ, ಶಾಲೆ, ಕಾಲೇಜು, ಅಂಗನವಾಡಿ ಕಟ್ಟಡ, ಬೀದಿ ದೀಪ, ಗ್ರಂಥಾಲಯ, ಬಸ್ ತಂಗುದಾಣ, ಪ್ರವಾಸಿ ಸ್ಥಳಗಳಲ್ಲಿ ಮೂಲ ಸೌಕರ್ಯ- ಹೀಗೆ ವಿವಿಧ ಜನೋಪಯೋಗಿ ಕೆಲಸಗಳಿಗೆ ಈ ನಿಧಿಯನ್ನು ಬಳಸಬಹುದು. ಕ್ಷೇತ್ರಾಭಿವೃದ್ಧಿ ಯೋಜನೆಯ ಅಡಿ ಶಾಸಕರು ಶಿಫಾರಸು ಮಾಡುವ ಯೋಜನೆಗಳಿಗೆ ಜಿಲ್ಲಾಧಿಕಾರಿ ಖಾತೆಯಿಂದ ಹಣ ಬಿಡುಗಡೆ ಆಗುತ್ತದೆ. ಕೋವಿಡ್ ಹಿನ್ನೆಲೆಯಲ್ಲಿ ಅನುದಾನ ಬಿಡುಗಡೆ ಮಾಡುವಲ್ಲಿ ಸರ್ಕಾರ ವಿಳಂಬ ಮಾಡಿದೆ ಎನ್ನುವುದು ನಿಜ. ಆದರೆ ಈ ವರ್ಷ ನಿಧಿಯ ಪೂರೈಕೆ ಸಮರ್ಪಕವಾಗಿ ನಡೆದಿರುವುದು ಸುಳ್ಳಲ್ಲ. ಮುಖ್ಯಮಂತ್ರಿಯವರು ಪತ್ರದಲ್ಲಿ ಉಲ್ಲೇಖಿಸಿದಂತೆ ಜಿಲ್ಲಾಧಿಕಾರಿಗಳ ಖಾತೆಗಳಲ್ಲಿ ಒಟ್ಟು ₹ 938.15 ಕೋಟಿ ಅನುದಾನ ಲಭ್ಯವಿದೆ. ಶಾಸಕರು ಸರ್ಕಾರದ ಮೇಲೆ ಗೂಬೆ ಕೂರಿಸುವ ಮೊಂಡುತನವನ್ನು ಬಿಟ್ಟು, ಇಷ್ಟೂ ಹಣದ ಬಳಕೆಗೆ ಸಮರ್ಪಕ ಯೋಜನೆಗಳನ್ನು ರೂಪಿಸಿ ಶೀಘ್ರ ಅನುಷ್ಠಾನಗೊಳಿಸುವುದು ಜರೂರಾಗಿ ಆಗಬೇಕಾದ ಕೆಲಸ. ಕೋವಿಡ್ ಸಂಕಷ್ಟದ ಕಾರಣ ಕೇಂದ್ರ ಸರ್ಕಾರವು ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದು ನಮ್ಮ ಕಣ್ಣೆದುರೇ ಇದೆ. ರಾಜ್ಯದಲ್ಲೂ ಹಾಗಾಗದಂತೆ ನೋಡಿಕೊಳ್ಳಬೇಕಾದ ಹೊಣೆ ಶಾಸಕರದ್ದೇ ಆಗಿದೆ. ಗ್ರಾಮೀಣ ಪ್ರದೇಶದ ಕೊರತೆಗಳನ್ನು ಗಮನಿಸಿ ಸೂಕ್ತ ಕಾಮಗಾರಿಗಳನ್ನು ಮತ್ತು ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡು ಆಯಾ ಪ್ರದೇಶದ ಆರ್ಥಿಕತೆಯ ಚೇತರಿಕೆಗೆ ವೇಗ ಒದಗಿಸುವ ಕೆಲಸ ಶೀಘ್ರ ನಡೆಯಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT