ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಬಿಡಿಎ ಅಕ್ರಮಗಳ ತಡೆಗೆ ಕಠಿಣ ಕ್ರಮ ಅನಿವಾರ್ಯ

Last Updated 21 ಅಕ್ಟೋಬರ್ 2022, 23:15 IST
ಅಕ್ಷರ ಗಾತ್ರ

ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ವಸತಿ ಸೌಕರ್ಯದ ಕೊರತೆ ನೀಗುವುದು ಮತ್ತು ಮೂಲಸೌಕರ್ಯ ಅಭಿವೃದ್ಧಿಗಾಗಿ ಅಸ್ತಿತ್ವಕ್ಕೆ ಬಂದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಶಿಷ್ಟಾಚಾರ, ನಿಯಮಾವಳಿ ಮತ್ತು ನ್ಯಾಯಾಲಯದ ಆದೇಶಗಳಿಗೆ ಕಿಂಚಿತ್ತೂ ಗೌರವವಿಲ್ಲದಂತೆ ಕೆಲಸ ಮಾಡುತ್ತಿದೆ ಎಂಬುದು ಸುಪ್ರೀಂ ಕೋರ್ಟ್‌ ಇತ್ತೀಚಿನ ದಿನಗಳಲ್ಲಿ ನಡೆಸಿದ ಎರಡು ಪ್ರಮುಖ ಪ್ರಕರಣಗಳ ವಿಚಾರಣೆಗಳಲ್ಲಿ ಬಹಿರಂಗವಾಗಿದೆ.

ಶಿವರಾಮ ಕಾರಂತ ಬಡಾವಣೆ ನಿರ್ಮಾಣದಲ್ಲಿನ ಲೋಪಗಳ ಕುರಿತು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸುತ್ತಿದೆ. ಬಿಡಿಎ ಆಡಳಿತ ಮತ್ತು ಅಲ್ಲಿನ ಅಧಿಕಾರಿಗಳ ಮೇಲೆ ಅವಿಶ್ವಾಸ ವ್ಯಕ್ತಪಡಿಸಿರುವ ನ್ಯಾಯಾಲಯವು ಶಿವರಾಮ ಕಾರಂತ ಬಡಾವಣೆ ನಿರ್ಮಾಣದ ಪ್ರಕ್ರಿಯೆಯ ಮೇಲುಸ್ತುವಾರಿಗಾಗಿ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್‌ ನೇತೃತ್ವದ ತ್ರಿಸದಸ್ಯ ಸಮಿತಿಯನ್ನು ನೇಮಿಸಿದೆ.

ಬಿಡಿಎ ತನ್ನದೇ ನಿಯಮ ಮತ್ತು ಸುಪ್ರೀಂ ಕೋರ್ಟ್‌ ಆದೇಶಗಳನ್ನು ಉಲ್ಲಂಘಿಸಿ ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿದಂತೆ ಕೆಲವು ಪ್ರಭಾವಿ ವ್ಯಕ್ತಿಗಳಿಗೆ ಅಭಿವೃದ್ಧಿ ಹೊಂದಿದ ಬಡಾವಣೆ ಗಳಲ್ಲಿ ದುಬಾರಿ ಬೆಲೆಯ ಬದಲಿ ನಿವೇಶನಗಳ ಹಂಚಿಕೆ ಮಾಡಿದ್ದ ಪ್ರಕರಣವನ್ನೂ ನ್ಯಾಯಾಲಯ ಈಗ ವಿಚಾರಣೆಯ ವ್ಯಾಪ್ತಿಗೆ ತೆಗೆದುಕೊಂಡಿದೆ. ಈ ಪ್ರಕರಣದ ವಿಚಾರಣೆಯಲ್ಲಿ ಬಿಡಿಎ ಆಡಳಿತದಲ್ಲಿನ ಹುಳುಕುಗಳು ಒಂದೊಂದಾಗಿ ಬಯಲಿಗೆ ಬರುತ್ತಿವೆ.

ಬದಲಿ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಕೆಲವು ದಿನಗಳ ಹಿಂದೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್‌, ಐಎಎಸ್‌ ಅಧಿಕಾರಿ ಎಂ.ಬಿ. ರಾಜೇಶ್‌ ಗೌಡ ಅವರನ್ನು ಬಿಡಿಎ ಆಯುಕ್ತರ ಹುದ್ದೆಯಿಂದ ವರ್ಗಾವಣೆ ಮಾಡುವಂತೆ ಆದೇಶಿಸಿತ್ತು. ಇದೇ ಪ್ರಕರಣದಲ್ಲಿ ನಿಯಮ ಉಲ್ಲಂಘಿಸಿರುವ ಆರೋಪದ ಮೇಲೆ ಬಿಡಿಎ ಕಾರ್ಯದರ್ಶಿ ಸಿ.ಎಲ್‌. ಆನಂದ್‌ ಮತ್ತು ಉಪ ಕಾರ್ಯದರ್ಶಿ ಎನ್‌.ವಿ. ಮಧು ಅವರನ್ನೂ ವರ್ಗಾವಣೆ ಮಾಡುವಂತೆ ಈ ಹಿಂದಿನ ವಿಚಾರಣೆ ವೇಳೆ ನ್ಯಾಯಾಲಯ ನಿರ್ದೇಶನ ನೀಡಿದೆ.

2021ರ ಅಕ್ಟೋಬರ್‌ನಲ್ಲಿ ಆದೇಶವೊಂದನ್ನು ಹೊರಡಿಸಿದ್ದ ಸುಪ್ರೀಂ ಕೋರ್ಟ್‌, ‘ಈಗಾಗಲೇ ಅಭಿವೃದ್ಧಿ ಹೊಂದಿದ ಬಡಾವಣೆಗಳಲ್ಲಿ ಲಭ್ಯವಿರುವ ಎಲ್ಲ ನಿವೇಶನಗಳು ಮತ್ತು ಒತ್ತುವರಿದಾರರಿಂದ ವಶಪಡಿಸಿಕೊಂಡ ಜಮೀನುಗಳಲ್ಲಿ ರೂಪಿಸುವ ಎಲ್ಲ ನಿವೇಶನಗಳನ್ನು ಬಹಿರಂಗ ಹರಾಜಿನ ಮೂಲಕವೇ ಮಾರಾಟ ಮಾಡಬೇಕು’ ಎಂದು ನಿರ್ದೇಶನ ನೀಡಿತ್ತು. ಆದರೆ, ಸುಪ್ರೀಂ ಕೋರ್ಟ್‌ ಆದೇಶ ಉಲ್ಲಂಘಿಸಿ ಸಚಿವ ಜ್ಞಾನೇಂದ್ರ ಸೇರಿದಂತೆ ಏಳು ಪ್ರಭಾವಿ ವ್ಯಕ್ತಿಗಳಿಗೆ ಬದಲಿ ನಿವೇಶನ ಹಂಚಿಕೆ ಮಾಡಲಾಗಿದೆ. 2006ರಲ್ಲಿ ‘ಜಿ’ ಕೋಟಾದಡಿ ಎಚ್‌ಎಸ್‌ಆರ್‌ ಬಡಾವಣೆಯಲ್ಲಿ ಹಂಚಿಕೆ ಮಾಡಿದ್ದ ನಿವೇಶನವನ್ನು ಹಸ್ತಾಂತರಿಸಲು ಕಾನೂನು ತೊಡಕುಗಳು ಎದುರಾದ ಕಾರಣದಿಂದ 2021ರಲ್ಲಿ ಆರ್‌ಎಂವಿ ಎರಡನೇ ಹಂತದ ಬಡಾವಣೆಯಲ್ಲಿ ಬದಲಿ ನಿವೇಶನ ಹಂಚಿಕೆ ಮಾಡಲಾಗಿದೆ ಎಂದು ಗೃಹ ಸಚಿವರು ಸಮಜಾಯಿಷಿ ನೀಡಿದ್ದಾರೆ.

ಅವರ ಸಮರ್ಥನೆ ಏನೇ ಇದ್ದರೂ, ಸಾವಿರಾರು ಮಂದಿ ಅರ್ಜಿದಾರರು ಹಲವು ವರ್ಷಗಳಿಂದ ನಿವೇಶನ ಹಂಚಿಕೆಗಾಗಿ ಕಾಯುತ್ತಿರುವಾಗ ಕೆಲವೇ ಮಂದಿ ಗಣ್ಯ ವ್ಯಕ್ತಿಗಳಿಗೆ ಆದ್ಯತೆಯ ಮೇಲೆ ಬದಲಿ ನಿವೇಶನ ಹಂಚಿಕೆ ಮಾಡುವ ಅಗತ್ಯವೇನು ಎಂಬ ಪ್ರಶ್ನೆಗೆ ಬಿಡಿಎ ಉತ್ತರಿಸಬೇಕಾಗುತ್ತದೆ. ಈಗ ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ಮಾತ್ರ ಸುಪ್ರೀಂ ಕೋರ್ಟ್‌ ನಿರ್ದೇಶನವನ್ನು ರಾಜ್ಯ ಸರ್ಕಾರ ಪಾಲಿಸಿದೆ. ನಿಯಮ ಉಲ್ಲಂಘಿಸಿ ಹಂಚಿಕೆ ಮಾಡಿರುವ ಬದಲಿ ನಿವೇಶನಗಳ ಮಂಜೂರಾತಿಯನ್ನು ರದ್ದುಗೊಳಿಸುವುದರ ಜತೆಗೆ ಫಲಾನುಭವಿ ಗಳಿಂದ ಆಸ್ತಿಯನ್ನು ಬಿಡಿಎ ಹೆಸರಿಗೆ ವರ್ಗಾಯಿಸುವ ಪತ್ರಗಳನ್ನೂ ನೋಂದಣಿ ಮಾಡಿಸುವಂತೆ ನ್ಯಾಯಪೀಠ ನಿರ್ದೇಶನ ನೀಡಿತ್ತು. ಈ ಪ್ರಕ್ರಿಯೆಯನ್ನು ಬಿಡಿಎ ಆಡಳಿತ ಈವರೆಗೂ ಪೂರ್ಣಗೊಳಿಸಿಲ್ಲ.

ಪ್ರಭಾವಿ ವ್ಯಕ್ತಿಗಳಿಗೆ ನಿಯಮ ಉಲ್ಲಂಘಿಸಿ ಹಂಚಿಕೆ ಮಾಡಿರುವ ನಿವೇಶನಗಳನ್ನು ವಾಪಸ್‌ ಪಡೆಯಲು ಸುಪ್ರೀಂ ಕೋರ್ಟ್‌ ನಿರ್ದೇಶನದ ಅನುಸಾರ ಎಲ್ಲ ಪ್ರಕ್ರಿಯೆಗಳನ್ನೂ ವಿಳಂಬವಿಲ್ಲದೇ ಪೂರ್ಣಗೊಳಿಸುವುದು ಪ್ರಾಧಿಕಾರದ ಹೊಣೆಗಾರಿಕೆ. ಇದನ್ನು ಚಾಚೂತಪ್ಪದೆ ಪಾಲಿಸುವ ಮೂಲಕ ನಿವೇಶನ ಹಂಚಿಕೆಯ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘನೆಗೆ ಕಡಿವಾಣ ಹಾಕುವ ಮೇಲ್ಪಂಕ್ತಿ ಪ್ರದರ್ಶಿಸಬೇಕಿದೆ.

ಶಿವರಾಮ ಕಾರಂತ ಬಡಾವಣೆ ಕಾಮಗಾರಿ ಕುಂಟುತ್ತಾ ಸಾಗಿದ್ದು, 2,500 ಅರ್ಜಿದಾರರಿಗೆ ಯಾವಾಗ ನಿವೇಶನ ಹಂಚಿಕೆಯಾಗಬಹುದು ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಇಲ್ಲದಂತಾಗಿತ್ತು. ಈಗ ಬಡಾವಣೆ ನಿರ್ಮಾಣದ ಪ್ರಕ್ರಿಯೆಗಳ ಮೇಲುಸ್ತುವಾರಿಗೆ ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್‌ ಸಮಿತಿಯನ್ನು ನೇಮಿಸಿರುವುದರಿಂದ ಒಂದಷ್ಟು ಭರವಸೆ ಮೂಡಿದೆ.

1976ರಲ್ಲಿ ಬಿಡಿಎ ಅಸ್ತಿತ್ವಕ್ಕೆ ಬಂದಾಗಿನಿಂದ ಇದೇ ಮೊದಲ ಬಾರಿಗೆ ಬಡಾವಣೆ ನಿರ್ಮಾಣವು ನ್ಯಾಯಾಂಗದ ಮೇಲುಸ್ತುವಾರಿಯ ವ್ಯಾಪ್ತಿಗೆ ಬಂದಿದೆ. ಅರ್ಕಾವತಿ ಮತ್ತು ಕೆಂಪೇಗೌಡ ಬಡಾವಣೆಗಳಲ್ಲಿ ಮೂಲಸೌಕರ್ಯಗಳ ಕೊರತೆಯಿಂದ ನಿವೇಶನ ಪಡೆದವರು ಮನೆ ನಿರ್ಮಿಸಲಾಗದ ಪರಿಸ್ಥಿತಿ ಇದೆ. ಈ ಬಡಾವಣೆಗಳ ಅಭಿವೃದ್ಧಿಗೆ ಸಂಬಂಧಿಸಿದ ವಿಚಾರಗಳನ್ನೂ ನ್ಯಾಯಾಲಯವು ಮೇಲುಸ್ತುವಾರಿ ಸಮಿತಿಯ ವ್ಯಾಪ್ತಿಗೆ ಒಪ್ಪಿಸಬಹುದು.

ಬಿಡಿಎ ಆಡಳಿತ ಜಡ್ಡುಗಟ್ಟಿದಂತಾಗಿದ್ದು, ನ್ಯಾಯಾಲಯಗಳ ಆದೇಶ ಹೆಚ್ಚೇನೂ ಪರಿಣಾಮ ಬೀರದು ಎಂಬಂತಹ ಸ್ಥಿತಿ ಇದೆ. ಕೇವಲ ಅಧಿಕಾರಿಗಳ ವರ್ಗಾವಣೆಯಿಂದ ಯಾವ ಬದಲಾವಣೆಯೂ ಆಗದು. ಅಕ್ರಮ ಎಸಗುವ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸುವುದು, ತನಿಖೆಗೆ ಆದೇಶಿಸುವುದು ಮುಂತಾದ ಕಠಿಣವಾದ ಶಿಸ್ತು ಕ್ರಮ ಜರುಗಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT