ರಾಜ್ಯ ಸರ್ಕಾರ ಆಯೋಜಿಸಿದ್ದ ಜಾಗತಿಕ ಹೂಡಿಕೆದಾರರ ಸಮಾವೇಶವು ₹10.27 ಲಕ್ಷ ಕೋಟಿ ಹೂಡಿಕೆ ಒಪ್ಪಂದ ಹಾಗೂ ಆರು ಲಕ್ಷ ಉದ್ಯೋಗ ಸೃಷ್ಟಿಯ ಭರವಸೆಯೊಂದಿಗೆ ಸಮಾಪ್ತಿಗೊಂಡಿದೆ. ‘₹6.23 ಲಕ್ಷ ಕೋಟಿ ಮೊತ್ತದ ಹೂಡಿಕೆಯ ಒಪ್ಪಂದಗಳಾಗಿವೆ. ₹4.03 ಲಕ್ಷ ಕೋಟಿ ಹೂಡಿಕೆ ಮಾಡುವುದಾಗಿ ಪ್ರತಿಷ್ಠಿತ ಕಂಪನಿಗಳು ಘೋಷಿಸಿದ್ದು, ಈ ಸಂಬಂಧದ ಒಪ್ಪಂದಗಳಿಗೆ ಶೀಘ್ರ ಸಹಿಬೀಳಲಿದೆ. ಒಟ್ಟು ಮೊತ್ತದಲ್ಲಿ ಉತ್ತರ ಕರ್ನಾಟಕದಲ್ಲಿ ಶೇಕಡ 45ರಷ್ಟು ಹೂಡಿಕೆ ಮಾಡುವ ಪ್ರಸ್ತಾವಗಳು ಇವೆ. ಮುಕ್ಕಾಲು ಪಾಲು ಹೂಡಿಕೆಯು ಬೆಂಗಳೂರಿನಿಂದ ಆಚೆಗೆ ಆಗಲಿದೆ’ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು ಸಮಾವೇಶದ ಕೊನೆಯ ದಿನ ಹೇಳಿದ್ದಾರೆ. ಹೂಡಿಕೆದಾರರನ್ನು ಆಕರ್ಷಿಸಲು ರಾಜ್ಯಗಳ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಇಂತಹ ಸನ್ನಿವೇಶದಲ್ಲಿ ಉದ್ಯಮ ಸ್ಥಾಪನೆ ಹಾಗೂ ಉದ್ಯೋಗ ಅವಕಾಶಗಳ ಸೃಷ್ಟಿಯು ಯಾವುದೇ ರಾಜ್ಯಕ್ಕೆ ಸವಾಲು ಇದ್ದಂತೆ. ಕರ್ನಾಟಕದ ಮಟ್ಟಿಗೆ ಈ ರೀತಿಯ ಸಮಾವೇಶಗಳು ಹೊಸತೇನಲ್ಲ. ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹೂಡಿಕೆದಾರರನ್ನು ಸೆಳೆಯುವ ಇಂತಹ ಪ್ರಯತ್ನಗಳು ಶುರುವಾದವು. ಇದು, ಆರನೆಯ ಸಮಾವೇಶ. 25 ವರ್ಷಗಳಲ್ಲಿ ನಡೆದ ಇಂತಹ ಸಮಾವೇಶಗಳಲ್ಲಿ ಹೂಡಿಕೆಯಾಗಲಿದೆ ಎಂದು ಘೋಷಿಸಲಾದ ಒಟ್ಟು ಮೊತ್ತವೇ ಅಂದಾಜು ₹25 ಲಕ್ಷ ಕೋಟಿ ದಾಟುತ್ತದೆ. ಆದರೆ, ನಿಜವಾಗಿ ಅನುಷ್ಠಾನಗೊಂಡ ಯೋಜನೆಗಳ ಒಟ್ಟು ಮೊತ್ತ ₹5 ಲಕ್ಷ ಕೋಟಿ ಮೀರಿಲ್ಲ ಎಂಬ ಮಾತಿದೆ. ಆ ಪರಿಪಾಟ ಪುನರಾವರ್ತನೆ ಆಗಬಾರದು. ಹೂಡಿಕೆ ಒಪ್ಪಂದಗಳು ಕಾಲಮಿತಿಯಲ್ಲಿ ಅನುಷ್ಠಾನಕ್ಕೆ ಬರುವಂತೆ ಮಾಡಲು ದಕ್ಷ ಅಧಿಕಾರಿಗಳ ನೇತೃತ್ವದಲ್ಲಿ ಮೇಲುಸ್ತುವಾರಿ ಸಮಿತಿ ರಚಿಸಿ, ಕಾಲಕಾಲಕ್ಕೆ ಯೋಜನೆಯ ಪ್ರಗತಿಯ ಮೇಲೆ ನಿಗಾ ಇಡುವಂತೆ ನೋಡಿಕೊಳ್ಳಬೇಕು. ಮೂರು ತಿಂಗಳಿಗೊಮ್ಮೆಯಾದರೂ ಸಚಿವರೇ ಪ್ರಗತಿ ಪರಿಶೀಲನೆ ನಡೆಸಬೇಕು. ಯೋಜನೆಗಳ ಅನುಷ್ಠಾನದಲ್ಲಿ ಏನಾದರೂ ತೊಡಕುಗಳು ಎದುರಾದರೆ, ಅವುಗಳನ್ನು ನಿವಾರಿಸಬೇಕು.

ಸಮಾವೇಶದಲ್ಲಿ ಉದ್ಯಮಿಗಳ ಜತೆ ಒಪ್ಪಂದ ಮಾಡಿಕೊಳ್ಳುವ ಹಂತದಲ್ಲೇ ಬೆಂಗಳೂರು ಮಹಾನಗರದಿಂದ ಹೊರಗೆ ಹೂಡಿಕೆ ಮಾಡಿದರೆ ಹೆಚ್ಚಿನ ಉತ್ತೇಜನ ನೀಡುವಂತಹ ಪ್ರಸ್ತಾವವನ್ನು ಮುಂದಿಡಲಾಗಿತ್ತು. ಎರಡು ಮತ್ತು ಮೂರನೇ ಹಂತದ ನಗರಗಳ ಅಭಿವೃದ್ಧಿಗೆ ಈ ನಡೆ ಪೂರಕ. ಇದು ಕಾರ್ಯಗತಗೊಂಡರೆ, ಒಂದೇ ಪ್ರದೇಶದ ಮೇಲಿನ ಒತ್ತಡ ತಪ್ಪುತ್ತದೆ. ಹಿಂದುಳಿದ ಪ್ರದೇಶಗಳು ಆರ್ಥಿಕವಾಗಿ ಸಬಲೀಕರಣಗೊಂಡು, ಪ್ರಾದೇಶಿಕ ಅಸಮತೋಲನ ನಿವಾರಣೆಗೂ ದಾರಿಯಾಗುತ್ತದೆ. ಈ ಬಾರಿಯ ಸಮಾವೇಶದಲ್ಲಿ ನೂತನ ಕೈಗಾರಿಕಾ ನೀತಿಯನ್ನು ಘೋಷಿಸಿದ ಸರ್ಕಾರ, ಅದಕ್ಕೆ ಪೂರಕವಾಗಿ ಹಲವು ಉಪಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿದೆ. ಮುಂದಿನ ಐದು ವರ್ಷಗಳಲ್ಲಿ ರಾಜ್ಯದಾದ್ಯಂತ ₹7.5 ಲಕ್ಷ ಕೋಟಿ ಹೂಡಿಕೆ ಹಾಗೂ 20 ಲಕ್ಷ ಉದ್ಯೋಗ ಸೃಷ್ಟಿಯ ಗುರಿಯನ್ನು ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ. ಇದರ ಜತೆಗೆ, ಕೈಗಾರಿಕೆಗಳ ಸ್ಥಾಪನೆ ಮತ್ತು ಕಾರ್ಯನಿರ್ವಹಣೆಗೆ ಸಂಬಂಧಿಸಿದ 150ಕ್ಕೂ ಹೆಚ್ಚು ಅನುಮೋದನೆ ಹಾಗೂ ಅನುಮತಿಗಳಿಗೆ ಒಂದೇ ಕಡೆ ಅರ್ಜಿ ಸಲ್ಲಿಸಲು ಅವಕಾಶವಿರುವ ಏಕಗವಾಕ್ಷಿ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ರಾಷ್ಟ್ರ ಮಟ್ಟದ ಏಕಗವಾಕ್ಷಿ ವ್ಯವಸ್ಥೆಯೊಂದಿಗೆ ಕರ್ನಾಟಕದ ವ್ಯವಸ್ಥೆಯನ್ನು ಬೆಸೆಯಲಾಗಿದೆ. ಉದ್ಯಮಸ್ನೇಹಿ ವಾತಾವರಣ ಸೃಷ್ಟಿಗೆ ಈ ನಡೆ ಪೂರಕವಾಗಿದೆ. ಈ ಸಮಾವೇಶಕ್ಕೆ ಕೇಂದ್ರದ ಸಚಿವರನ್ನು ಆಮಂತ್ರಿಸಿ, ಆ ಮೂಲಕ ಅಭಿವೃದ್ಧಿ ವಿಷಯದಲ್ಲಿ ಪಕ್ಷ ರಾಜಕೀಯ ಸಲ್ಲದು ಎಂಬ ಸಂದೇಶವನ್ನು ರಾಜ್ಯ ಸರ್ಕಾರ ನೀಡಿರುವುದು ಸರಿಯಾದ ನಡೆ. ಕೇಂದ್ರ ಸಚಿವರಾದ ರಾಜನಾಥ ಸಿಂಗ್, ಪೀಯೂಷ್ ಗೋಯಲ್, ಪ್ರಲ್ಹಾದ ಜೋಶಿ, ವಿ. ಸೋಮಣ್ಣ, ಶೋಭಾ ಕರಂದ್ಲಾಜೆ ಸಮಾವೇಶದಲ್ಲಿ ಭಾಗಿಯಾಗಿದ್ದುದು ಸಕಾರಾತ್ಮಕ ಬೆಳವಣಿಗೆ. ಎಲ್ಲ ಅನುಕೂಲಗಳನ್ನೂ ಬಳಸಿಕೊಂಡು ಸಮಾವೇಶದ ಗರಿಷ್ಠ ಪ್ರಯೋಜನ ನಾಡಿಗೆ ದಕ್ಕುವಂತೆ ರಾಜ್ಯ ಸರ್ಕಾರ ನೋಡಿಕೊಳ್ಳಬೇಕು. ಸ್ಥಳೀಯರಿಗೆ ಹೆಚ್ಚು ಉದ್ಯೋಗ ಕೊಡಿಸಲು ಮುತುವರ್ಜಿ ವಹಿಸಬೇಕು. ಕೈಗಾರಿಕೆಗಳಿಗೆ ಫಲವತ್ತಾದ ಕೃಷಿ ಜಮೀನು ಸ್ವಾಧೀನಪಡಿಸಿಕೊಂಡು ರೈತರಿಗೆ ತೊಂದರೆ ಕೊಟ್ಟಿರುವ ಕೆಲವು ಪ್ರಕರಣಗಳು ವರದಿಯಾಗಿವೆ. ಉದ್ಯಮಿ–ಕಾರ್ಮಿಕರ ಹಿತ ಕಾಪಾಡುವುದರ ಜತೆಗೆ ರೈತರ ಹಿತಕ್ಕೂ ಧಕ್ಕೆ ಆಗದಂತೆ ಎಚ್ಚರ ವಹಿಸಬೇಕಾದುದು ಸರ್ಕಾರದ ಕರ್ತವ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.