ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Editorial- ಕೆಪಿಎಸ್‌ಸಿ |ಕಾರ್ಯಕ್ಷಮತೆ ಹೆಚ್ಚಲಿ: ಕಾಯಕಲ್ಪಕ್ಕೆ ಆದ್ಯತೆ ಸಿಗಲಿ

Published 5 ಡಿಸೆಂಬರ್ 2023, 23:33 IST
Last Updated 5 ಡಿಸೆಂಬರ್ 2023, 23:33 IST
ಅಕ್ಷರ ಗಾತ್ರ

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ವಿಳಂಬ ಧೋರಣೆಗೆ ಪೂರ್ಣವಿರಾಮ ಬೀಳುವಂತೆ ಕಾಣುತ್ತಿಲ್ಲ. ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ಹುದ್ದೆ ಸೇರಿದಂತೆ ಎಲ್ಲ ಬಗೆಯ ನೇಮಕಾತಿಗಳ ವಿಷಯದಲ್ಲೂ ಆಯೋಗದ್ದು ಆಮೆನಡಿಗೆ. ಯಾವ ಕೆಲಸವೂ ಕಾಲಮಿತಿಯಲ್ಲಿ ಆಗುವುದಿಲ್ಲ. ಯಾವಾಗಲೋ ಅಧಿಸೂಚನೆ ಹೊರಡಿಸುವುದು, ಇನ್ಯಾವಾಗಲೋ ಪರೀಕ್ಷೆ ನಡೆಸುವುದು, ಪರೀಕ್ಷೆ ನಡೆದು ವರ್ಷಗಳೇ ಕಳೆದರೂ ಆಯ್ಕೆಪಟ್ಟಿ ಪ್ರಕಟಣೆಗೆ ವಿಳಂಬ ಮಾಡುವುದು ಮಾಮೂಲಿ ಎಂಬಂತಾಗಿಬಿಟ್ಟಿದೆ. ಸ್ವಜನಪಕ್ಷಪಾತ, ಭ್ರಷ್ಟಾಚಾರದ ಆರೋಪಗಳಿಂದ ಮುಕ್ತವಾಗುವುದಕ್ಕೂ ಅದಕ್ಕೆ ಸಾಧ್ಯವಾಗಿಲ್ಲ. ಆಯೋಗದ ಇಂತಹ ಅಸಮರ್ಪಕ ಕಾರ್ಯಶೈಲಿ ಬಗ್ಗೆ ವ್ಯಾಪಕ ಟೀಕೆಗಳು ಕೇಳಿಬಂದಿದ್ದರಿಂದ, ಕೆಲವು ನೇಮಕಾತಿ ಪರೀಕ್ಷೆಗಳನ್ನು ನಡೆಸುವ ಹೊಣೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ವಹಿಸಲಾಗಿದೆ. ಆದರೆ ಅದು ನಡೆಸಿದ ಪ್ರಕ್ರಿಯೆಗಳು ಕೂಡ ಆರೋಪ ಮುಕ್ತವಾಗಿಲ್ಲ. ಇದರಿಂದಾಗಿ ರಾಜ್ಯದ ಯುವಕ–ಯುವತಿಯರು ಸರ್ಕಾರಿ ಹುದ್ದೆಗಳ ನೇಮಕಾತಿಯ ಬಗ್ಗೆ ಭ್ರಮನಿರಸನಗೊಂಡಿದ್ದಾರೆ. ಯುವಜನರಲ್ಲಿನ ಇಂತಹ ಭಾವನೆಯನ್ನು ತುರ್ತಾಗಿ ಹೋಗಲಾಡಿಸುವ ಸಂಬಂಧ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಜವಾಬ್ದಾರಿಯುತ ಸರ್ಕಾರದ ಆದ್ಯ ಕರ್ತವ್ಯ.

ಆಯೋಗವು 2017ನೇ ಸಾಲಿನ ಗ್ರೂಪ್ ‘ಎ’ ಮತ್ತು ಗ್ರೂಪ್ ‘ಬಿ’ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಐದು ವರ್ಷ ತೆಗೆದುಕೊಂಡಿತು. ನೇಮಕಾತಿ ಪ್ರಕ್ರಿಯೆಗೆ ಸಮಯದ ಮಿತಿ ಇಲ್ಲ ಎಂಬುದು ಇದರಿಂದ ಗೊತ್ತಾಗುತ್ತದೆ. ಅಲ್ಲದೆ, ನೇಮಕಾತಿ ಪ್ರಕ್ರಿಯೆಯನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು ಎಂಬ ಬದ್ಧತೆಯೂ ಕಾಣುವುದಿಲ್ಲ. ಇದರಿಂದ, ನಿರುದ್ಯೋಗಿಗಳ ಬಗ್ಗೆ ಆಯೋಗಕ್ಕೆ ಕಾಳಜಿ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ಗೆಜೆಟೆಡ್‌ ಪ್ರೊಬೇಷನರಿ ಅಧಿಕಾರಿಗಳ ಹುದ್ದೆಗೆ ಈ 13 ವರ್ಷಗಳಲ್ಲಿ ನಾಲ್ಕು ಬಾರಿ ಮಾತ್ರ ನೇಮಕಾತಿ ಪ್ರಕ್ರಿಯೆ ನಡೆದಿರುವುದು ಆಯೋಗದ ಕಾರ್ಯವೈಖರಿಗೆ ಕನ್ನಡಿ ಹಿಡಿಯುತ್ತದೆ. ಇದರಿಂದ ಬೇಸತ್ತ ಅಭ್ಯರ್ಥಿಗಳು ಪ್ರತಿಭಟನೆಯ ದಾರಿಯನ್ನೂ ಹಿಡಿದಿದ್ದಾರೆ. ಹಲವು ಹುದ್ದೆಗಳ ಭರ್ತಿಗೆ ಪರೀಕ್ಷೆ ನಡೆಸಿ ವರ್ಷಗಳೇ ಕಳೆದಿದ್ದರೂ ಅಂತಿಮ ಆಯ್ಕೆಪಟ್ಟಿಯನ್ನೇ ಬಿಡುಗಡೆ ಮಾಡಿಲ್ಲ ಎಂದು ದೂರಿ ಆಯೋಗದ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಮನವಿ, ಅಹವಾಲುಗಳನ್ನು ಕೊಟ್ಟು ಒತ್ತಾಯಿಸಿದ್ದಾರೆ. ಇದ್ಯಾವುದೂ ಆಯೋಗಕ್ಕೆ ನಾಟುತ್ತಿಲ್ಲ. ಶಾಸನಬದ್ಧ ಸಂಸ್ಥೆಯಾಗಿರುವ ಆಯೋಗವು
ಶಾಸನಬದ್ಧವಾಗಿ ನಡೆದುಕೊಳ್ಳುವ ರೀತಿ ಇದಲ್ಲ.

ಕೆಪಿಎಸ್‌ಸಿಗೆ ಕಾಯಕಲ್ಪ ನೀಡುವುದಕ್ಕಾಗಿಯೇ 2013ರಲ್ಲಿ ರಾಜ್ಯ ಸರ್ಕಾರವು ಪಿ.ಸಿ.ಹೋಟಾ ಸಮಿತಿಯನ್ನು ರಚಿಸಿತ್ತು. ಆ ಸಮಿತಿಯು  ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿ ಪ್ರಕ್ರಿಯೆಯನ್ನು ಪ್ರತಿವರ್ಷವೂ ನಡೆಸುವಂತೆ ಶಿಫಾರಸು ಮಾಡಿತ್ತು. ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಹೋಟಾ ಸಮಿತಿಯ ಶಿಫಾರಸುಗಳನ್ನು ಒಪ್ಪಿಕೊಂಡಿದ್ದರು. ಆದರೆ ಹತ್ತು ವರ್ಷವಾದರೂ ಈ ಶಿಫಾರಸುಗಳು ಅನುಷ್ಠಾನಕ್ಕೆ ಬಂದಿಲ್ಲ. ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಪರೀಕ್ಷೆಗಳು ನಿಗದಿತ ಸಮಯದಲ್ಲಿ ನಡೆಯುತ್ತವೆ. ಪರೀಕ್ಷೆ, ಸಂದರ್ಶನದ ವೇಳಾಪಟ್ಟಿ ಮೊದಲೇ ನಿಗದಿಯಾಗಿರುತ್ತದೆ. ಆಯ್ಕೆಪಟ್ಟಿಯೂ ಸರಿಯಾದ ಸಮಯಕ್ಕೆ ಹೊರಬರುತ್ತದೆ. ಕರ್ನಾಟಕ ಲೋಕಸೇವಾ ಆಯೋಗವೂ ಅದೇ ರೀತಿ ನಡೆದುಕೊಳ್ಳಬೇಕು ಎಂದು ನಿರೀಕ್ಷಿಸುವುದು ತಪ್ಪಲ್ಲ. ಕೆಪಿಎಸ್‌ಸಿ ಕಾಯಕಲ್ಪಕ್ಕೆ ಈ ಹಿಂದೆ ಹಲವು ಕ್ರಮಗಳನ್ನು ಕೈಗೊಂಡಿದ್ದ ಸಿದ್ದರಾಮಯ್ಯ ಅವರೇ ಈಗ ಮುಖ್ಯಮಂತ್ರಿಯಾಗಿದ್ದಾರೆ. ಈ ಬಗ್ಗೆ ಅವರು ಗಂಭೀರ ಚಿಂತನೆ ನಡೆಸಿ, ಆಯೋಗದ ಕೆಲಸವನ್ನು ಚುರುಕುಗೊಳಿಸುವ ಕಾರ್ಯಕ್ಕೆ ಮುಂದಾಗಬೇಕಿದೆ. 2020ರ ನಂತರ ಗ್ರೂಪ್ ‘ಎ’ ಮತ್ತು ಗ್ರೂಪ್ ‘ಬಿ’ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನೇ ಹೊರಡಿಸದಿರುವುದರಿಂದ ಈ ತಕ್ಷಣವೇ ಅಧಿಸೂಚನೆ ಹೊರಡಿಸಬೇಕು ಮತ್ತು ಅಭ್ಯರ್ಥಿಗಳಿಗೆ ವಯೋಮಿತಿಯ ಸಡಿಲಿಕೆಯನ್ನೂ ನೀಡಬೇಕು. ಈ ಗುಂಪಿನ 465 ಹುದ್ದೆಗಳು ಖಾಲಿ ಇವೆ ಎಂಬ ವರದಿ ಇದೆ. ಎಲ್ಲ ಹುದ್ದೆಗಳಿಗೂ ಏಕಕಾಲಕ್ಕೆ ನೇಮಕಾತಿ ಆಗಬೇಕು. ಖಾಲಿ ಇರುವ ಎಲ್ಲ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಭರವಸೆ ನೀಡಿತ್ತು. ಈ ಭರವಸೆ ಹುಸಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಕೂಡ ಸಿದ್ದರಾಮಯ್ಯ ಅವರ ಮೇಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT