ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಶಾಸಕ– ಸಚಿವರ ವೇತನ ಹೆಚ್ಚಳ ಅನುಚಿತ, ಅಸೂಕ್ಷ್ಮ ನಡೆ

ಜನ ಕಷ್ಟದಲ್ಲಿರುವಾಗ ಶಾಸಕ– ಸಚಿವರ ಸಂಬಳ, ಭತ್ಯೆ ಹೆಚ್ಚಳಕ್ಕೆ ಉತ್ಸುಕತೆ ತೋರಿರುವುದು ಸರಿಯಲ್ಲ
Last Updated 27 ಫೆಬ್ರುವರಿ 2022, 23:30 IST
ಅಕ್ಷರ ಗಾತ್ರ

ಇಡೀ ವಿಶ್ವವನ್ನು ಹೈರಾಣ ಮಾಡಿದ ಕೋವಿಡ್‌ ಸಾಂಕ್ರಾಮಿಕವು ನಾಡಿನ ಇಂಚಿಂಚೂ ವ್ಯಾಪಿಸಿತು. ಕೃಷಿಕರು, ಉದ್ಯೋಗಸ್ಥರು, ಬೀದಿಬದಿ ವ್ಯಾಪಾರಿಗಳು, ಹೋಟೆಲ್‌ ಉದ್ಯಮಿಗಳು–ಕಾರ್ಮಿಕರು, ಸಾರಿಗೆ ವ್ಯವಸ್ಥೆ ಕಲ್ಪಿಸುವವರು ಹೀಗೆ ಸಕಲರನ್ನೂ ಸದೆಬಡಿಯಿತು. ಸಿಡಿಲಿನಂತೆ ಎರಗಿದ ಕೋವಿಡ್‌ ಸಾಂಕ್ರಾಮಿಕ ಹಾಗೂ ಅದರ ನಿರ್ವಹಣೆಯಲ್ಲಿ ಆದ ವೈಫಲ್ಯದ ಕಾರಣಕ್ಕೆ ಒಂದು ತಲೆಮಾರು ಸಂಕಷ್ಟಕ್ಕೆ ಸಿಲುಕಿತು. ಇಂತಹ ಕಷ್ಟಕಾಲದಲ್ಲಿ ಜನಸಮುದಾಯದ ಸಮಸ್ಯೆಗಳ ನಿವಾರಣೆಗೆ ಮಿಡಿಯಬೇಕಾದುದು ಜನಪ್ರತಿನಿಧಿಗಳ ಕರ್ತವ್ಯ. ಅದನ್ನು ಮರೆತು ಸಚಿವರು, ಶಾಸಕರು ತಮ್ಮ ವೇತನ–ಭತ್ಯೆಗಳನ್ನು ಶೇ 50ರಿಂದ 60ರವರೆಗೆ ಹೆಚ್ಚಿಸಿಕೊಂಡಿರುವುದು ಜನಮೆಚ್ಚುವ ಕ್ರಮವಲ್ಲ.

ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ಇಲ್ಲದೇ ಇದ್ದಾಗ, ಮಳೆ–ಬೆಳೆ ಚೆನ್ನಾಗಿ ಆಗಿ ಜನರು ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದಾಗ ವೇತನ ಹೆಚ್ಚಿಸಿಕೊಂಡಿದ್ದರೆ ಯಾರ ಆಕ್ಷೇಪವೂ ಇರುತ್ತಿರಲಿಲ್ಲ. ಕೋವಿಡ್‌ ತಂದಿತ್ತ ಸಂಕಷ್ಟದಿಂದಾಗಿ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ವೇತನಗಳಲ್ಲಿ ಭಾರಿ ಪ್ರಮಾಣದಲ್ಲಿ ಕಡಿತವಾಗಿದೆ. ಬಂಡವಾಳ ಹಾಕಿ ಹೋಟೆಲ್ ಆರಂಭಿಸಿದವರು ಸಾಲದ ಹೊರೆಹೊತ್ತು ನಲುಗುತ್ತಿದ್ದಾರೆ. ಸಿನಿಮಾ, ಹೋಟೆಲ್ ಕಾರ್ಮಿಕರು, ಕಲಾಪ್ರದರ್ಶನವನ್ನೇ ಹೊಟ್ಟೆಪಾಡಿಗೆ ನೆಚ್ಚಿಕೊಂಡಿದ್ದ ಕಲಾವಿದರು, ಬಾಡಿಗೆ ವಾಹನಗಳನ್ನು ನಡೆಸಿ ಜೀವನ ಸಾಗಿಸುತ್ತಿದ್ದವರು ಆಘಾತದಿಂದ ಇನ್ನೂ ಹೊರಬಂದಿಲ್ಲ.

ಅವರೆಲ್ಲರಿಗೆ ಊರುಗೋಲಾಗಿ ನಿಂತು, ಬದುಕನ್ನು ಹಳಿಗೆ ತರಲು ಅವರಿಗೆ ದಾರಿ ತೋರಿಸಬೇಕಾದ ಹೊಣೆ ಜನಪ್ರತಿನಿಧಿಗಳು ಹಾಗೂ ಸರ್ಕಾರದ್ದಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಅವನ್ನು ಕಡೆಗಣಿಸಿ ತಮ್ಮ ವೇತನವನ್ನು ಹೆಚ್ಚಿಸಿಕೊಳ್ಳಲು ಉತ್ಸುಕತೆ ತೋರಿದ ಜನಪ್ರತಿನಿಧಿಗಳ ನಡೆ ಪ್ರಜಾತಂತ್ರ ವ್ಯವಸ್ಥೆಯೊಳಗೆ ಉತ್ತಮ ಮಾದರಿಯಲ್ಲ.

ಅಲ್ಪಪ್ರಮಾಣದ ಗೌರವಧನಕ್ಕಾಗಿ ದಿನವಿಡೀ ದುಡಿಯುವ, ಸರ್ಕಾರದ ಎಲ್ಲ ಕಾರ್ಯಕ್ರಮಗಳನ್ನೂ ಜನರಿಗೆ ತಲುಪಿಸುವ ಅಂಗನವಾಡಿ, ಆಶಾ ಕಾರ್ಯಕರ್ತೆಯರು ತಮ್ಮ ವೇತನ ಹೆಚ್ಚಳಕ್ಕೆ ಒತ್ತಾಯಿಸುತ್ತಲೇಇದ್ದಾರೆ. ಅತಿಥಿ ಉಪನ್ಯಾಸಕರು, ಪೊಲೀಸರು ತಮ್ಮ ವೇತನ ಹೆಚ್ಚಳದ ಬೇಡಿಕೆ ಮುಂದಿಡುತ್ತಲೇ ಇದ್ದಾರೆ. ಆರೋಗ್ಯ ಕ್ಷೇತ್ರದ ಸಿಬ್ಬಂದಿ, ಪೌರಕಾರ್ಮಿಕರು, ಗುತ್ತಿಗೆ ನೌಕರರು ಕಡಿಮೆ ಪಗಾರದಲ್ಲೇ ಜೀವನವನ್ನು ಸಾಗಿಸುವ ಇಕ್ಕಟ್ಟಿಗೆ ಸಿಲುಕಿದ್ದಾರೆ. ರೈತ ಸಂಕುಲವಂತೂ ವೈಜ್ಞಾನಿಕ ಬೆಲೆ ಸಿಗದೇ ಪತರಗುಟ್ಟಿ ಹೋಗಿದೆ. ಇವರೆಲ್ಲರೂ ಪರಿತಾಪದಲ್ಲೇ ಬೇಯುತ್ತಿರುವಾಗ ತರಾತುರಿಯಿಂದ ವೇತನ–ಸೌಲಭ್ಯವನ್ನು ಹೆಚ್ಚಿಸಿಕೊಂಡಿರುವ ಕ್ರಮ ಸರಿಯಲ್ಲ.

ಅದರಲ್ಲೂ ವಿಧಾನಮಂಡಲದಲ್ಲಿ ಕಾಂಗ್ರೆಸ್ ಶಾಸಕರು ಧರಣಿ ನಿರತರಾಗಿದ್ದಾಗ, ಯಾವುದೇ ಚರ್ಚೆಯೂ ನಡೆಯದಿರುವಾಗ ತರಾತುರಿಯಲ್ಲಿ ವೇತನ ಹೆಚ್ಚಳದ ಮಸೂದೆಗೆ ಅನುಮೋದನೆ ಪಡೆಯಲಾಗಿದೆ. ಮುಖ್ಯಮಂತ್ರಿ ವೇತನವನ್ನು ₹75 ಸಾವಿರಕ್ಕೆ, ಸಂಪುಟ ದರ್ಜೆ ಸಚಿವರ ವೇತನವನ್ನು ₹60 ಸಾವಿರಕ್ಕೆ, ರಾಜ್ಯ ಸಚಿವರ ವೇತನವನ್ನು ₹50 ಸಾವಿರಕ್ಕೆ ಏರಿಸಲಾಗಿದೆ. ಮನೆಬಾಡಿಗೆ ಭತ್ಯೆಯನ್ನು ₹1.2 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಶಾಸಕರ ವೇತನವನ್ನು ₹40 ಸಾವಿರಕ್ಕೆ ಹೆಚ್ಚಿಸಲಾಗಿದೆ. ಆತಿಥ್ಯ ಭತ್ಯೆಯನ್ನು ವರ್ಷಕ್ಕೆ ₹3 ಲಕ್ಷದಿಂದ ₹4.5 ಲಕ್ಷಕ್ಕೆ ಏರಿಸಲಾಗಿದೆ. ಒಟ್ಟಾರೆ ಈ ಹೆಚ್ಚಳದಿಂದಾಗಿ ಬೊಕ್ಕಸಕ್ಕೆ ವಾರ್ಷಿಕ ₹92.40 ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಿದ ಮೇಲೆ ಪರಿಷ್ಕರಣೆಗೆ ಒತ್ತು ಕೊಟ್ಟಿದ್ದರೆ ಅದಕ್ಕೊಂದು ಸಮರ್ಥನೆಯಾದರೂ
ಇರುತ್ತಿತ್ತು. 2015ರಿಂದ ವೇತನ ಹೆಚ್ಚಳವಾಗಿರಲಿಲ್ಲ; ಶಾಸಕರಿಗೂ ಕಷ್ಟಗಳಿವೆ ಎಂದು ವೇತನ ಹೆಚ್ಚಳದ ಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮರ್ಥಿಸಿಕೊಂಡಿದ್ದಾರೆ. ಸಚಿವರು, ಶಾಸಕರ ದಿನಚರಿ, ಕಾರ್ಯವೈಖರಿ ಕಂಡವರು ಹೇಳುವಂತೆ ಶೇ 70ಕ್ಕಿಂತ ಹೆಚ್ಚಿನ ಜನಪ್ರತಿನಿಧಿಗಳಿಗೆ ವೇತನ–ಭತ್ಯೆ ಎಂಬುದು ಪುಡಿಗಾಸಿಗೆ ಸಮಾನ. ಸರ್ಕಾರ ನೀಡುವ ವೇತನವೆಂಬುದು ವಾರದ ಖರ್ಚಿಗೂ ಸಾಲುವುದಿಲ್ಲ ಎಂದು ಶಾಸಕರೇ ಹೇಳುವುದುಂಟು.

ವಾಸ್ತವ ಇದಾಗಿರುವಾಗ ವೇತನ ಹೆಚ್ಚಿಸಿಕೊಳ್ಳುವ ತುರ್ತಾದರೂ ಏನಿತ್ತು? ನೌಕರರು, ಉಪನ್ಯಾಸಕರು, ಪೊಲೀಸರು ಹೀಗೆ ಯಾವುದೇ ಸಮುದಾಯ ವೇತನ ಹೆಚ್ಚಳದ ಬೇಡಿಕೆ ಇಟ್ಟಾಗ ಬೆಲೆ ಏರಿಕೆ, ದೈನಂದಿನ ಖರ್ಚಿನಲ್ಲಿ ಹೆಚ್ಚಳ, ನೆರೆರಾಜ್ಯಗಳ ವೇತನ ವ್ಯವಸ್ಥೆಯನ್ನು ಅಧ್ಯಯನ ಮಾಡಲು ವೇತನ ಸಮಿತಿಯನ್ನೋ ಆಯೋಗವನ್ನೋ ರಚಿಸಿ ವರದಿ ಪಡೆಯಲಾಗುತ್ತದೆ. ಅದರ ಶಿಫಾರಸಿನಲ್ಲಿ ಅರ್ಧದಷ್ಟನ್ನು ಮಾತ್ರ ಅನುಷ್ಠಾನಕ್ಕೆ ತರುವ ಔದಾರ್ಯವನ್ನು ಸರ್ಕಾರ ತೋರುತ್ತದೆ. ಜನಸೇವೆಯೇ ತಮ್ಮ ಕಾಯಕ ಎಂದು ಬಿಂಬಿಸಿಕೊಳ್ಳುವ ಜನಪ್ರತಿನಿಧಿಗಳು ತಮ್ಮ ವೇತನ ಹೆಚ್ಚಿಸಿಕೊಳ್ಳುವಾಗ, ಅದರ ಸಮರ್ಥನೆಗೆ ವೈಜ್ಞಾನಿಕ ಅಧ್ಯಯನದ ಮಾನದಂಡಗಳನ್ನಾದರೂ ಅನುಸರಿಸಬೇಕಿತ್ತು. ಅದನ್ನೂ ಮಾಡದೆ ಅಧಿಕಾರ ಇದೆ ಎಂಬ ಕಾರಣಕ್ಕೆ ವೇತನ
ಹೆಚ್ಚಿಸಿಕೊಂಡಿರುವುದು ಯೋಗ್ಯ ನಡೆಯಂತೂ ಅಲ್ಲವೇ ಅಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT