ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ: ಸೆಕ್ಷನ್ 124(ಎ): ಸವಕಲು ಕಾನೂನು ಶಾಶ್ವತವಾಗಿ ಅಳಿಸಿಹಾಕಲು ಸಕಾಲ

Last Updated 10 ಮೇ 2022, 23:00 IST
ಅಕ್ಷರ ಗಾತ್ರ

ಆಲೋಚನೆಗಳು ಮುಕ್ತವಾಗಿ ಹರಿಯಬೇಕಿರುವುದು ಪ್ರಜಾತಂತ್ರ ವ್ಯವಸ್ಥೆಗೆ ಅತ್ಯಗತ್ಯ. ಆಲೋಚನೆಗಳು, ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಅವಕಾಶ ಇದ್ದಾಗ ಮಾತ್ರ ಪ್ರಜೆಗಳಿಗೆ ವ್ಯವಸ್ಥೆಯ ಬಗ್ಗೆ ಸರಿಯಾದ ಮಾಹಿತಿ ಇರುತ್ತದೆ. ಆಗ ಆಡಳಿತವು ಹೆಚ್ಚು ಉತ್ತಮವಾಗುತ್ತದೆ. ಇದು ಸಾಧ್ಯವಾಗಬೇಕು ಎಂದಾದರೆ ಅಧಿಕಾರಸ್ಥರ ಒಲವು–ನಿಲುವುಗಳಿಗೆ ವಿರುದ್ಧವಾದ ಇನ್ನೊಂದು ಅಭಿಪ್ರಾಯವನ್ನುವ್ಯಕ್ತಪಡಿಸಿದ ಒಂದೇ ಕಾರಣಕ್ಕೆ ಕೆಟ್ಟ ಪರಿಣಾಮ ಎದುರಿಸಬೇಕಾಗಬಹುದು ಎಂಬ ಭೀತಿ ಜನರಲ್ಲಿ ಇರಬಾರದು. ಇದೇ ನೆಲೆಯ ಮಾತನ್ನು ಎಸ್. ಖುಷ್ಬೂ ಮತ್ತು ಕನ್ನಿಯಮ್ಮಾಳ್ ಹಾಗೂ ಇತರರ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಹೇಳಿದೆ. ಆದರೆ, ಮುಕ್ತ ಅಭಿವ್ಯಕ್ತಿಗೆ ಇಂದು ದೊಡ್ಡ ಅಪಾಯವಾಗಿ ನಿಂತಿರುವುದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124(ಎ). ಈ ಸೆಕ್ಷನ್ ಬಳಸಿ ರಾಜಕೀಯ ವಿರೋಧಿಗಳ ಮೇಲೆ, ಸಾಮಾಜಿಕ ಕಾರ್ಯಕರ್ತರ ಮೇಲೆ ಸರ್ಕಾರಗಳು ಪ್ರಕರಣಗಳನ್ನು ದಾಖಲಿಸಿದ್ದಿದೆ.

ಸಾಮಾಜಿಕ ಕಳಕಳಿಯಿಂದ ಕೆಲಸ ಮಾಡಿದ ವ್ಯಕ್ತಿಗಳಿಗೆ ‘ದೇಶದ್ರೋಹಿ’ ಎಂಬ ಪಟ್ಟ ಕಟ್ಟಲು ಇದೇ ಸೆಕ್ಷನ್ ಬಳಕೆಯಾಗಿದೆ. ಸಮುದಾಯಕ್ಕೆ ಮೀಸಲಾತಿ ಬೇಕು ಎಂದು ಹೋರಾಟ ನಡೆಸಿದವರ ವಿರುದ್ಧ, ಹನುಮಾನ್ ಚಾಲೀಸಾ ಪಠಿಸಲು ಮುಂದಾದವರ ವಿರುದ್ಧ ಕೂಡ ‘ದೇಶದ್ರೋಹ’ದ ಆರೋಪವನ್ನು ಈ ಸೆಕ್ಷನ್ ಬಳಸಿ ಹೊರಿಸಲಾಗಿದೆ. ನಾಗರಿಕರ ಹಕ್ಕುಗಳನ್ನು ದಮನ ಮಾಡುವ ರೀತಿಯಲ್ಲಿಯೂ ಈ ಸೆಕ್ಷನ್‌ ಬಳಕೆಯಾಗಿದೆ. ಆದರೆ, ಈಗ ಈ ಸೆಕ್ಷನ್‌ ಬಗ್ಗೆ ಪುನರ್‌ಪರಿಶೀಲನೆ ನಡೆಸುವುದಾಗಿ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಮಾತು ಕೊಟ್ಟಿರುವುದು ಸ್ವಾಗತಾರ್ಹ ನಡೆ. ಮರು ಪರಿಶೀಲನೆ ಪೂರ್ಣಗೊಳ್ಳುವವರೆಗೆ, ದೇಶದ್ರೋಹದ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳುವುದನ್ನು ತಡೆಹಿಡಿಯಬಹುದೇ ಎಂದು ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.

ವಸಾಹತು ಕಾಲದಲ್ಲಿ ರೂಪುಗೊಂಡ ಈ ಸೆಕ್ಷನ್‌ನ ಧೋರಣೆಯು ಇಂದಿನ ಸಂದರ್ಭಕ್ಕೆ ಸರಿಹೊಂದುವುದಿಲ್ಲ. ಸರ್ಕಾರದ ವಿರುದ್ಧ ದ್ವೇಷ ಮೂಡಿಸಲು ಯತ್ನಿಸುವುದು, ಸರ್ಕಾರದ ವಿರುದ್ಧ ಅತೃಪ್ತಿ ಮೂಡಿಸಲು ಯತ್ನಿಸುವುದು ದೇಶದ್ರೋಹಕ್ಕೆ ಸಮ ಎಂದು ಹೇಳುವುದಕ್ಕೆ ಅರ್ಥವಿಲ್ಲ. ಈ ರೀತಿ ಹೇಳುವುದೇ ನಾವು ಕಟ್ಟಿರುವ ಪ್ರಜಾತಂತ್ರ ವ್ಯವಸ್ಥೆಯನ್ನು ಅವಮಾನಿಸುವುದಕ್ಕೆ ಸಮ. ‘ಪ್ರಭುತ್ವ ಅಥವಾ ಪ್ರಭುತ್ವದ ಸಂಸ್ಥೆಗಳನ್ನು ಕಟುವಾಗಿ ಟೀಕಿಸುವುದು ದೇಶದ್ರೋಹ ಆಗಲು ಸಾಧ್ಯವಿಲ್ಲ. ಏಕೆಂದರೆ, ಯಾವುದೇ ಒಂದು ಸಂಸ್ಥೆ ಅಥವಾ ಒಂದು ಲಾಂಛನ ಮಾತ್ರವೇ ಇಡೀ ದೇಶದ ಮೂರ್ತ ರೂಪವಾಗಿ ಇರುವುದಿಲ್ಲ’ ಎಂಬ ಮಾತನ್ನು ಕೇಂದ್ರ ಕಾನೂನು ಆಯೋಗವು ಸೆಕ್ಷನ್ 124(ಎ) ಕುರಿತಾಗಿ 2018ರಲ್ಲಿ ಹೇಳಿದೆ. ದೇಶದ ರಾಜಕೀಯ ಮುಖಂಡರು, ಸಾಂಸ್ಕೃತಿಕ ನಾಯಕರು ಸರ್ಕಾರಗಳನ್ನು, ಮಂತ್ರಿಗಳನ್ನು, ಸರ್ಕಾರದ ವಿವಿಧ ಸಂಸ್ಥೆಗಳನ್ನು ಉಗ್ರವಾಗಿ ಟೀಕಿಸಿದ ನಿದರ್ಶನಗಳು ಬಹಳಷ್ಟು ಇವೆ. ಅವರ ಟೀಕೆಗಳನ್ನು ದೇಶದ್ರೋಹ ಎಂದು ಪರಿಗಣಿಸುವುದಕ್ಕಿಂತ, ಅವುಗಳನ್ನು ಸದುದ್ದೇಶದ ಆಗ್ರಹಗಳು ಎಂದು ಪರಿಗಣಿಸಬೇಕಾಗುತ್ತದೆ. ಪ್ರಭುತ್ವದ ರೀತಿಯಲ್ಲಿಯೇ ಎಲ್ಲರೂ ಆಲೋಚಿಸಬೇಕು ಎಂದು ಬಯಸುವುದು ದೇಶಪ್ರೇಮವಾಗುವುದಿಲ್ಲ. ಸಮಾಜವನ್ನು ಬೇರೊಂದು ರೀತಿಯಲ್ಲಿ ಗ್ರಹಿಸುವುದು, ಭಿನ್ನವಾಗಿ ಆಲೋಚಿಸುವುದು ದೇಶಪ್ರೇಮಕ್ಕೆ ವಿರುದ್ಧವೂ ಆಗುವುದಿಲ್ಲ. ಆದರೆ, ಸಿದ್ಧಾಂತಗಳ ಹಿನ್ನೆಲೆಯಲ್ಲಿಯೇ ದೇಶಪ್ರೇಮಕ್ಕೆ ವ್ಯಾಖ್ಯಾನ ನೀಡಲು ಬಯಸುವವರಿಗೆ ಈ ಸೂಕ್ಷ್ಮ ಅರ್ಥವಾಗುವುದಿಲ್ಲ.

1962ರಲ್ಲಿ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪೊಂದನ್ನು ನೀಡಿದೆ. ಕೇದಾರನಾಥ ಸಿಂಗ್ಪ್ರಕರಣದಲ್ಲಿ ನೀಡಿರುವ ಈ ತೀರ್ಪು, ‘ಯಾವುದೇ ಕ್ರಿಯೆಯು ದೇಶದ್ರೋಹಕ್ಕೆ ಸಮ ಎಂಬುದಾಗಿ ಪರಿಗಣಿತ ಆಗಬೇಕಾದರೆ, ಅದು ಹಿಂಸಾ ಮಾರ್ಗ ಅನುಸರಿಸಿ ಸರ್ಕಾರವನ್ನು ಬುಡಮೇಲು ಮಾಡುವ ಪರಿಣಾಮ ಹೊಂದಿರಬೇಕು. ಹಿಂಸೆ ಸೃಷ್ಟಿಸಿ, ಸಾರ್ವಜನಿಕ ಶಾಂತಿಗೆ ಧಕ್ಕೆ ತರುವಂಥದ್ದಾಗಿರಬೇಕು.

ಈ ಆಯಾಮಗಳನ್ನು ಹೊಂದಿಲ್ಲದ ಅನಿಸಿಕೆ, ಅಭಿಪ್ರಾಯಗಳು ದೇಶದ್ರೋಹದ ವ್ಯಾಪ್ತಿಗೆ ಬರುವುದಿಲ್ಲ’ ಎಂದು ಸ್ಪಷ್ಟವಾಗಿ ಹೇಳಿದೆ. ವಾಸ್ತವದಲ್ಲಿ ಈ ತೀರ್ಪು ಐಪಿಸಿಯ ಸೆಕ್ಷನ್‌ 124(ಎ) ಬಳಕೆಯ ಮೇಲೆ ಸ್ಪಷ್ಟ ಮಿತಿಗಳನ್ನು ಹೇರಿತು. ಹೀಗಿದ್ದರೂ, ಸೆಕ್ಷನ್ 124(ಎ) ದುರ್ಬಳಕೆ ಕೊನೆಗೊಳ್ಳಲಿಲ್ಲ. ಸರ್ಕಾರವನ್ನು ಬುಡಮೇಲು ಮಾಡುವ ಪರಿಣಾಮ ಹೊಂದಿಲ್ಲದ ಮಾತುಗಳನ್ನು ಆಡಿದವರ ವಿರುದ್ಧ, ಪ್ರಧಾನಿಗೆ ಪತ್ರ ಬರೆದವರ ವಿರುದ್ಧ ದೇಶದ್ರೋಹದ ಆರೋಪ ಹೊರಿಸಿದ್ದಿದೆ. ಈಚಿನ ವರ್ಷಗಳಲ್ಲಿ ಈ ಕಾನೂನನ್ನು ರಾಜಕೀಯ ಹಾಗೂ ಸೈದ್ಧಾಂತಿಕ ವಿರೋಧಿಗಳನ್ನು ಹಣಿಯಲಿಕ್ಕೇ ಹೆಚ್ಚಾಗಿ ಬಳಸಿಕೊಳ್ಳಲಾಗಿದೆ.

ಸ್ವಾತಂತ್ರ್ಯವನ್ನು ದಮನ ಮಾಡಲು ಬಳಕೆಯಾಗುತ್ತಿರುವ ಈ ಸೆಕ್ಷನ್‌ ಅನ್ನು ಕಾನೂನಿನ ಪುಸ್ತಕದಿಂದ ಅಳಿಸಿಹಾಕಲು ಇದು ಸರಿಯಾದ ಸಂದರ್ಭ. ಐಪಿಸಿಯನ್ನು ರೂಪಿಸಿದ ಬ್ರಿಟಿಷರು, ಇಂತಹ ಕರಾಳ ಕಾನೂನನ್ನು ಜಾರಿಯಲ್ಲಿ ಇಟ್ಟಿರುವ ದೇಶ ತಮ್ಮದು ಎಂದು ಹೇಳಿಸಿಕೊಳ್ಳಲು ತಾವು ಬಯಸುವುದಿಲ್ಲ ಎಂದು ತಮ್ಮ ನೆಲದಲ್ಲಿ ದೇಶದ್ರೋಹಕ್ಕೆ ಸಂಬಂಧಿಸಿದ ಕಾನೂನನ್ನು ಕೆಲವು ವರ್ಷಗಳ ಹಿಂದೆ ರದ್ದು ಮಾಡಿದ್ದಾರೆ. ಬ್ರಿಟಿಷರು ಭಾರತೀಯರ ದನಿಯನ್ನು ಅಡಗಿಸಲು ಈ ಸೆಕ್ಷನ್ ಜಾರಿಗೆ ತಂದಿದ್ದರು. ಅವರೇ ಈ ಕಾನೂನನ್ನು ರದ್ದು ಮಾಡಿರುವಾಗ, ನಾವು ಇನ್ನೂ ಇದನ್ನು ಉಳಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ. ರಾಜಕೀಯ ಲಾಭ, ನಷ್ಟಗಳ ಲೆಕ್ಕಾಚಾರಕ್ಕೆ ಮುಂದಾಗದೆ ಈ ಕಾನೂನನ್ನು ಶಾಶ್ವತವಾಗಿ ಅಳಿಸಿಹಾಕಬೇಕು. ಈ ಕೆಲಸ ಕಾಲಮಿತಿಯಲ್ಲಿ ಆಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT