ಸಾಮಾಜಿಕ ಅನಿಷ್ಟದ ರೂಪದಲ್ಲಿರುವ ಹಲವು ಬಗೆಯ ಬಹಿಷ್ಕಾರಗಳನ್ನು ತಡೆಯಬಯಸುವ ಸರ್ಕಾರದ ಉದ್ದೇಶ ಒಳ್ಳೆಯದು. ಆದರೆ, ಇದು ಪ್ರತೀಕಾರದ ಹತಾರವಾಗಿ ಬಳಕೆ ಆಗಬಾರದು.

ರಾಜ್ಯ ಸರ್ಕಾರವು ‘ಕರ್ನಾಟಕ ಸಾಮಾಜಿಕ ಬಹಿಷ್ಕಾರ (ತಡೆ, ನಿಷೇಧ ಮತ್ತು ಪರಿಹಾರ) ಮಸೂದೆ– 2025’ಕ್ಕೆ ಅಕ್ಷರರೂಪ ನೀಡಿ, ಅದನ್ನು ವಿಧಾನಸಭೆಯಲ್ಲಿ ಮಂಡಿಸಿರುವುದು ಸಾಮಾಜಿಕ ನ್ಯಾಯವನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಇರಿಸಿರುವ ಇನ್ನೊಂದು ಹೆಜ್ಜೆ. ಸಮುದಾಯದ ‘ಮರ್ಯಾದೆ’ ಹಾಗೂ ಸಮಾಜದಲ್ಲಿ ವಿವಿಧ ವರ್ಗಗಳು ಹೊಂದಿರುವ ಅಘೋಷಿತ ಅಧಿಕಾರವು ಸಾಂವಿಧಾನಿಕ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸವನ್ನು ಮತ್ತೆ ಮತ್ತೆ ಮಾಡುತ್ತಲೇ ಇದೆ. ಇಂತಹ ಹೊತ್ತಿನಲ್ಲಿ ಈ ಮಸೂದೆಯು ಕಹಿಸತ್ಯವೊಂದನ್ನು ಒಪ್ಪಿಕೊಳ್ಳುವ ಕೆಲಸ ಮಾಡಿದೆ. ಸಾಮಾಜಿಕ ಬಹಿಷ್ಕಾರವೆಂಬುದು ಜಾತಿ ವ್ಯವಸ್ಥೆಯ ಭಾಗವಾಗಿ, ಹಳೆಯ ಕಾಲದಲ್ಲಿ ಚಾಲ್ತಿಯಲ್ಲಿದ್ದ ಆಚರಣೆಯಷ್ಟೇ ಅಲ್ಲ; ಅದು ರಾಜ್ಯದ ಹಳ್ಳಿಗಳಲ್ಲಿ, ನಗರಗಳಲ್ಲಿ ಇಂದಿಗೂ ತಣ್ಣನೆಯ ಕ್ರೌರ್ಯವನ್ನು ಜೀವಂತ ಆಗಿರಿಸಿರುವ ಅನಿಷ್ಟ ಎಂಬುದನ್ನು ಮಸೂದೆಯು ಗುರುತಿಸಿದೆ.

ಸಾಮಾಜಿಕ ಬಹಿಷ್ಕಾರದ ಕೃತ್ಯಗಳನ್ನು ‘ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ – 1989’ ಅಪರಾಧವೆಂದು ಈಗಾಗಲೇ ಗುರುತಿಸಿರುವಾಗ, ಅದರಲ್ಲೂ ಮುಖ್ಯವಾಗಿ 2015ರ ತಿದ್ದುಪಡಿಯು ಅಪರಾಧ ಕೃತ್ಯಗಳನ್ನು ಬಹಳ ಸ್ಪಷ್ಟವಾಗಿ ವ್ಯಾಖ್ಯಾನಿಸಿರುವಾಗ, ಹೊಸ ಮಸೂದೆಯೊಂದರ ಅಗತ್ಯವೇನಿದೆ ಎಂದು ಕೆಲವರು ಪ್ರಶ್ನಿಸಬಹುದು. ಈ ವಾದಕ್ಕೆ ಉತ್ತರ ಸ್ಪಷ್ಟವಾಗಿದೆ. ಕೇಂದ್ರ ಸರ್ಕಾರ ರೂಪಿಸಿದ ಶಾಸನವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದವರನ್ನು ಮಾತ್ರ ರಕ್ಷಿಸುತ್ತದೆ. ಆದರೆ, ವಾಸ್ತವದಲ್ಲಿ ಬಹಿಷ್ಕಾರವು ಈ ಎರಡು ವರ್ಗಗಳಿಗೆ ಮಾತ್ರ ಸೀಮಿತವಾದುದಲ್ಲ. ಅಂತರ್ಜಾತಿ ಮದುವೆಗಳು, ವೈಯಕ್ತಿಕ ವ್ಯಾಜ್ಯಗಳು, ಗ್ರಾಮ ಮಟ್ಟದ ಶ್ರೇಣೀಕರಣ ವ್ಯವಸ್ಥೆಯನ್ನು ಪ್ರಶ್ನಿಸುವುದು, ವೈಯಕ್ತಿಕ ಸ್ವಾತಂತ್ರ್ಯವನ್ನು ಗಟ್ಟಿಯಾಗಿ ಹೇಳಿಕೊಳ್ಳುವುದು ಕೂಡ ಬಹಿಷ್ಕಾರಕ್ಕೆ ಕಾರಣಆಗಬಲ್ಲದು. ಹೀಗಾಗಿ, ಎಲ್ಲ ಸಮುದಾಯಗಳಿಗೂ ರಕ್ಷಣೆ ಒದಗಿಸುವ ಶಾಸನವೊಂದರ ಅಗತ್ಯ ಖಂಡಿತ ಇತ್ತು.

ಇಂತಹ ಕಾನೂನಿನ ಅಗತ್ಯವನ್ನು ಮಹಾರಾಷ್ಟ್ರವು ದಶಕದ ಹಿಂದೆಯೇ ಗುರುತಿಸಿತು. 2016ರಲ್ಲಿಯೇ ಅದು ಸಾಮಾಜಿಕ ಬಹಿಷ್ಕಾರಕ್ಕೆ ತಡೆಯೊಡ್ಡುವ ಉದ್ದೇಶದ ಕಾನೂನು ರೂಪಿಸಿತು. ಕರ್ನಾಟಕವು ತಡವಾಗಿಯಾದರೂ ಈಗ ಸರಿಯಾದ ಕೆಲಸ ಮಾಡಿದೆ. ಜಾತಿ ಪಂಚಾಯಿತಿಗಳು, ಸ್ಥಳೀಯ ಗುಂಪುಗಳು ಸಂವಿಧಾನ ನೀಡಿರುವ ಹಕ್ಕುಗಳನ್ನು ಮತ್ತು ಪ್ರಭುತ್ವದ ಅಧಿಕಾರವನ್ನು ಬುಡಮೇಲು ಮಾಡಿ ತಮ್ಮ ಆದೇಶವನ್ನು ಹೇಗೆ ಜಾರಿಗೆ ತರುತ್ತಿವೆ ಎಂಬುದನ್ನು ಈಚಿನ ಕೆಲವು ಘಟನೆಗಳು ಹೇಳುತ್ತಿವೆ. ಶಿವಮೊಗ್ಗದಲ್ಲಿ ಅಂತರ್ಜಾತಿ ವಿವಾಹದ ನಂತರದಲ್ಲಿ ಜೋಗಿ ಸಮುದಾಯದ ಕುಟುಂಬವೊಂದಕ್ಕೆ ಬಹಿಷ್ಕಾರ ಹಾಕಲಾಗಿತ್ತು. ಚಿತ್ರದುರ್ಗದಲ್ಲಿ ಅಂಗವಿಕಲ ದಂಪತಿಯನ್ನು ಏಕಾಂಗಿಯಾಗಿಸಿ, ಆ ದಂಪತಿಗೆ ಆಶ್ರಯ ನೀಡಿದ್ದಕ್ಕಾಗಿ ಪತ್ನಿಯ ತಂದೆ–ತಾಯಿಗೆ ದಂಡ ವಿಧಿಸಲಾಗಿದೆ ಎಂದು ವರದಿಯಾಗಿತ್ತು. ಯಾದಗಿರಿಯಲ್ಲಿ ಪೋಕ್ಸೊ ಕಾಯ್ದೆಯ ಅಡಿ ದಾಖಲಿಸಿದ ಪ್ರಕರಣ ಹಿಂಪಡೆಯಲು ನಿರಾಕರಿಸಿದರು ಎಂಬ ಕಾರಣಕ್ಕೆ ಸುಮಾರು 250 ದಲಿತರಿಗೆ ಅಂಗಡಿ, ದೇವಸ್ಥಾನ, ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ನಿರಾಕರಿಸಲಾಗಿತ್ತು. ಇವೆಲ್ಲವೂ ಪ್ರಜೆಗಳ ಘನತೆಯನ್ನು, ಅವರ ಜೀವನೋಪಾಯವನ್ನು ಕಿತ್ತುಕೊಳ್ಳುವ ಉದ್ದೇಶದ ವ್ಯವಸ್ಥಿತ ಪ್ರಯತ್ನಗಳು.

ಈ ಹಿನ್ನೆಲೆಯಲ್ಲಿ ನೋಡಿದಾಗ ಈ ಮಸೂದೆಯು ಸಾಮಾಜಿಕ ಬಹಿಷ್ಕಾರವನ್ನು ವ್ಯಾಖ್ಯಾನಿಸಿರುವುದರ ಮಹತ್ವ ಅರ್ಥವಾಗುತ್ತದೆ. ಮಸೂದೆಯು ಸರಿಸುಮಾರು 20 ಬಗೆಯ ಬಹಿಷ್ಕಾರಗಳನ್ನು ಪಟ್ಟಿಮಾಡಿದೆ. ಸಾರ್ವಜನಿಕ ಹಾಗೂ ಧಾರ್ಮಿಕ ಸ್ಥಳಗಳಿಗೆ ಪ್ರವೇಶ ನಿರಾಕರಣೆ, ಸಮುದಾಯ ಜೀವನದಿಂದ ಹೊರಹಾಕುವುದು, ವ್ಯಾಪಾರ ಅಥವಾ ನೌಕರಿಗೆ ಅಡ್ಡಿ ಉಂಟುಮಾಡುವುದು, ಉಡುಗೆ ಅಥವಾ ಭಾಷೆ ಹೀಗೇ ಇರಬೇಕೆಂದು ತಾಕೀತು ಮಾಡುವುದು, ಶವಸಂಸ್ಕಾರಕ್ಕೆ ನಿರ್ಬಂಧ ಹೇರುವುದು ಅಥವಾ ಪೂಜೆಗೆ ಅಡ್ಡಿ ಉಂಟುಮಾಡುವುದು ಬಹಿಷ್ಕಾರದ ರೂಪಗಳಾಗಿ ಪರಿಗಣಿತವಾಗುತ್ತವೆ. ಇವೆಲ್ಲವೂ ಒಂದಲ್ಲ ಒಂದು ಕಡೆಯಲ್ಲಿ ವರದಿಯಾಗಿರುವ ಬಹಿಷ್ಕಾರದ ಬಗೆಗಳು. ಇಂತಹ ಬಹಿಷ್ಕಾರಗಳನ್ನು ವಿಧಿಸುವ ಸ್ಥಳೀಯ ಗುಂಪುಗಳನ್ನು, ಸಭೆಗಳನ್ನು ಕೂಡ ಮಸೂದೆಯು ಶಿಕ್ಷೆಗೆ ಗುರಿಪಡಿಸುವ ಉದ್ದೇಶ ಹೊಂದಿದೆ. ಕಾನೂನು ರೂಪಿಸಿದ ಮಾತ್ರಕ್ಕೆ ಅದರ ಉದ್ದೇಶ ಈಡೇರುವುದಿಲ್ಲ, ಕಾನೂನಿನ ಅನುಷ್ಠಾನವು ಅದರ ಯಶಸ್ಸನ್ನು ತೀರ್ಮಾನಿಸುತ್ತದೆ ಎಂಬುದನ್ನು ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯ ಸುತ್ತಲಿನ ಅನುಭವವು ಹೇಳುತ್ತದೆ.

ಈ ಕಾಯ್ದೆಯ ಅಡಿಯಲ್ಲಿ ಆರೋಪಿಗಳು ಶಿಕ್ಷೆಗೆ ಗುರಿಯಾದ ಪ್ರಮಾಣವು ತೀರಾ ಕಡಿಮೆ ಇದೆ ಎಂಬುದು ಗಮನಾರ್ಹ. ಕಾನೂನಿನ ವಿಚಾರವಾಗಿ ಒಂದಿಷ್ಟು ಎಚ್ಚರಿಕೆಗಳೂ ಅಗತ್ಯ. ಕಾನೂನಿನ ಪ್ರಬಲ ಅಸ್ತ್ರವನ್ನು ಹಗೆ ತೀರಿಸಿಕೊಳ್ಳುವ ಅಥವಾ ಆಯ್ದ ಕೆಲವರನ್ನಷ್ಟೇ ಗುರಿಮಾಡಲು ಇರುವ ಹತಾರವನ್ನಾಗಿ ಪರಿವರ್ತಿಸಲು ಅವಕಾಶ ನೀಡಬಾರದು. ಕಾನೂನಿಗೆ ಅತೀತವಾಗಿ ವರ್ತಿಸುವ ಶಕ್ತಿಕೇಂದ್ರಗಳನ್ನು ಕೊನೆಗೊಳಿಸಲು ಕರ್ನಾಟಕವು ನಿರ್ಣಾಯಕ ಹೆಜ್ಜೆಯೊಂದನ್ನು ಈ ಮಸೂದೆಯ ಮೂಲಕ ಇರಿಸಿದೆ. ಇದು ಕಾನೂನಾಗಿ ಜಾರಿಗೆ ಬಂದ ನಂತರ, ನ್ಯಾಯಸಮ್ಮತ ಮನಸ್ಸಿನಿಂದ ಅನುಷ್ಠಾನಕ್ಕೆ ತಂದರೆ ಸಾಂವಿಧಾನಿಕ ಸಮಾನತೆಯ ಆಶಯ ಸಾಕಾರಗೊಳಿಸಲು ನೆರವಾಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.