ಸೋಮವಾರ, ಅಕ್ಟೋಬರ್ 25, 2021
24 °C

ಸಂಪಾದಕೀಯ| ಅಕ್ರಮ ಧಾರ್ಮಿಕ ಕಟ್ಟಡಗಳ ರಕ್ಷಣೆಯ ಹಿಂದೆ ಸಾರ್ವಜನಿಕ ಹಿತ ಅಡಗಿಲ್ಲ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಅನಧಿಕೃತವಾಗಿ ನಿರ್ಮಿಸಲಾದ ದೇವಾಲಯ, ಮಸೀದಿ, ಚರ್ಚ್‌, ಗುರುದ್ವಾರ ಮತ್ತು ಇತರ ಧಾರ್ಮಿಕ ಕಟ್ಟಡಗಳನ್ನು ರಕ್ಷಿಸಲು ಕರ್ನಾಟಕ ಧಾರ್ಮಿಕ ಕಟ್ಟಡಗಳ (ಸಂರಕ್ಷಣೆ) ಮಸೂದೆಯ ಮೂಲಕ ಕರ್ನಾಟಕ ಸರ್ಕಾರ ಮುಂದಾಗಿದೆ. ರಸ್ತೆ, ಉದ್ಯಾನ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ನಿರ್ಮಾಣ ಆಗಿರುವ ಧಾರ್ಮಿಕ ಕಟ್ಟಡಗಳಿಗೆ ಕಾಯ್ದೆಯಿಂದಾಗಿ ರಕ್ಷಣೆ ದೊರೆಯಲಿದೆ. ಕೋಮು ಸಾಮರಸ್ಯವನ್ನು ಕಾಯ್ದುಕೊಳ್ಳುವುದು ಮತ್ತು ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗುವುದನ್ನು ತಡೆಯುವುದು ಈ ಮಸೂದೆಯ ಉದ್ದೇಶವಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಆದರೆ, ದೇಶದಾದ್ಯಂತ ಅನಧಿಕೃತವಾಗಿ ಮತ್ತು ಅಕ್ರಮವಾಗಿ ನಿರ್ಮಾಣವಾದ ಧಾರ್ಮಿಕ ಕಟ್ಟಡಗಳ ವಿಚಾರವಾಗಿ ಸುಪ್ರೀಂ ಕೋರ್ಟ್‌ ಸ್ಪಷ್ಟ ನಿರ್ದೇಶನ ನೀಡಿದೆ. ಈ ನಿರ್ದೇಶನವು ರಾಜ್ಯದ ಧಾರ್ಮಿಕ ಕಟ್ಟಡಗಳಿಗೆ ಅನ್ವಯ ಆಗುವುದನ್ನು ತಪ್ಪಿಸುವುದು ಕಾಯ್ದೆಯ ನಿಜವಾದ ಗುರಿ. ರಾಜ್ಯದಲ್ಲಿ ಇಂತಹ ಅಕ್ರಮ ಕಟ್ಟಡಗಳು 6,300 ಇವೆ ಎಂದು ಗುರುತಿಸಲಾಗಿದೆ. ಸುಪ್ರೀಂ ಕೋರ್ಟ್‌ 2009ರಲ್ಲಿಯೇ ನಿರ್ದೇಶನ ನೀಡಿದ್ದರೂ ಕಟ್ಟಡಗಳ ತೆರವು ಕಾರ್ಯಾಚರಣೆಯು ಆಮೆಗತಿಯಲ್ಲಿ ಸಾಗಿತ್ತು. ಕರ್ನಾಟಕ ಹೈಕೋರ್ಟ್‌ ಈ ವಿಚಾರದಲ್ಲಿ ರಾಜ್ಯ ಸರ್ಕಾರದ ತಲೆಗೆ ಇತ್ತೀಚೆಗೆ ಮೊಟಕಿದ ಬಳಿಕ ಸರ್ಕಾರದ ಮುಖ್ಯ ಕಾರ್ಯದರ್ಶಿಯು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ತೆರವು ಕಾರ್ಯಾಚರಣೆ ಚುರುಕುಗೊಳಿಸಲು ಸೂಚಿಸಿದ್ದರು. ಅದರಿಂದಾಗಿ, ರಾಜ್ಯದ ವಿವಿಧ ಭಾಗಗಳಲ್ಲಿ ಅಕ್ರಮ ಧಾರ್ಮಿಕ ಕಟ್ಟಡಗಳ ತೆರವು ಕಾರ್ಯ ನಡೆದಿದೆ. ಆದರೆ, ನಂಜನಗೂಡು ತಾಲ್ಲೂಕಿನ ಉಚ್ಚಗಣಿಯ ಮಹದೇವಮ್ಮ ದೇವಾಲಯ ತೆರವು ಕಾರ್ಯಾಚರಣೆಯು ವಿವಾದಕ್ಕೆ ಕಾರಣವಾಯಿತು. ಬಿಜೆಪಿ ಸಂಸದ ಪ್ರತಾಪ್‌ ಸಿಂಹ ಅವರು ದೇವಾಲಯ ತೆರವಿಗೆ ಆಕ್ಷೇಪ ವ್ಯಕ್ತಪಡಿಸಿದರು. ‘ದೇವಾಲಯ ರಕ್ಷಣೆ’ ಅಭಿಯಾನವನ್ನೇ ನಡೆಸುವುದಾಗಿ ಬೆದರಿಸಿದರು. ‘ಹಿಂದೂ ವಿರೋಧಿ ಆಗಿದ್ದರು ಎಂಬ ಕಾರಣಕ್ಕೆ ಮಹಾತ್ಮ ಗಾಂಧಿ ಅವರನ್ನೇ ಹತ್ಯೆ ಮಾಡಲಾಗಿದೆ. ಹಾಗಿರುವಾಗ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ನೋಡಿಕೊಳ್ಳುವುದು ಕಷ್ಟವೇನಲ್ಲ’ ಎಂಬಂತಹ ಹೇಳಿಕೆಯನ್ನೂ ಹಿಂದೂ ಮಹಾಸಭಾದ ಪದಾಧಿಕಾರಿ ಗಳಲ್ಲಿ ಒಬ್ಬರು ಹೇಳಿದ್ದರು. 

ಇಂತಹ ಸಂಘಟನೆಗಳು ಮತ್ತು ವ್ಯಕ್ತಿಗಳ ಒತ್ತಡ ದಿಂದಾಗಿಯೇ ಸರ್ಕಾರವು ಮಸೂದೆ ರೂಪಿಸಿತೇ ಎಂಬ ಅನುಮಾನ ಮೂಡದಿರದು. ಜತೆಗೆ, ಉಚ್ಚ ಗಣಿಯ ದೇವಾಲಯದ ತೆರವನ್ನು ವಿರೋಧ ಪಕ್ಷಗಳು ರಾಜಕೀಯವಾಗಿ ಬಳಸಿಕೊಂಡವು. ಹಿಂದುತ್ವವನ್ನು ಬಲವಾಗಿ ಪ್ರತಿಪಾದಿಸುವ ಬಿಜೆಪಿ ನೇತೃತ್ವದ ಸರ್ಕಾರ ಇರುವಾಗಲೇ ದೇವಾಲಯ ತೆರವು ಮಾಡಿದ್ದು ಮತ್ತು ಅದೊಂದು ವಿವಾದವಾಗಿ ಬೆಳೆದದ್ದು ಆಡಳಿತ ಪಕ್ಷವನ್ನು ಹಣಿಯಲು ವಿರೋಧ ಪಕ್ಷಗಳಿಗೆ ಅಸ್ತ್ರವಾಗಿ ಒದಗಿಬಂತು. ಮಸೂದೆ ರಚನೆಯ ಹಿಂದೆ, ಈ ಅಸ್ತ್ರದಿಂದ ತಪ್ಪಿಸಿಕೊಳ್ಳುವ ಪ್ರಯತ್ನವೂ ಇದೆ. ಮಸೂದೆಗೆ ಅಂಗೀಕಾರ ದೊರೆತಿದ್ದರೂ ಅಕ್ರಮ ಧಾರ್ಮಿಕ ಕಟ್ಟಡಗಳ ತೆರವು ವಿಚಾರದಲ್ಲಿ ಸರ್ಕಾರಕ್ಕೆ ಗೊಂದಲ ಇದ್ದಂತಿದೆ. ‘ಅಕ್ರಮವಾದ ಯಾವುದೇ ಧಾರ್ಮಿಕ ಕಟ್ಟಡವನ್ನು ಈ ಮಸೂದೆಯನ್ನು ಬಳಸಿಕೊಂಡು ಸಕ್ರಮಗೊಳಿಸುವುದಿಲ್ಲ. ಅಕ್ರಮ ಕಟ್ಟಡಗಳಿಗೆ ತಾತ್ಕಾಲಿಕ ರಕ್ಷಣೆಯನ್ನಷ್ಟೇ ಮಸೂದೆ ನೀಡಲಿದೆ’ ಎಂದು ಕಾನೂನು ಸಚಿವ ಜೆ.ಸಿ. ಮಾಧು ಸ್ವಾಮಿ ಅವರು ಮಸೂದೆ ಮಂಡನೆ ವೇಳೆ ಹೇಳಿದ್ದಾರೆ. ಸಕ್ರಮಗೊಳಿಸದೆಯೇ ರಕ್ಷಣೆ ನೀಡುವುದು ಹೇಗೆ? ತಾತ್ಕಾಲಿಕ ರಕ್ಷಣೆ ಅಂದರೆ ಅದರ ಅರ್ಥ ಏನು? ವ್ಯಾಪ್ತಿ ಏನು? ಇಂತಹ ಪ್ರಶ್ನೆಗಳಿಗೆ ಸರ್ಕಾರದ ಬಳಿ ಉತ್ತರ ಇದ್ದಂತಿಲ್ಲ. 

ಈ ಮಸೂದೆಯು ಹಲವು ವಿಚಾರಗಳಲ್ಲಿ ಪ್ರತಿಗಾಮಿಯಾಗಿದೆ ಎಂದು ಹೇಳದೇ ವಿಧಿ ಇಲ್ಲ. ಅಕ್ರಮ ಧಾರ್ಮಿಕ ಕಟ್ಟಡಗಳ ತೆರವಿಗೆ ತಡೆ ಒಡ್ಡುವ ಮೂಲಕ ಸರ್ಕಾರಿ ಸ್ವಾಮ್ಯದ ಮತ್ತು ಸಾರ್ವಜನಿಕ ಬಳಕೆಯ ಸ್ಥಳಗಳ ಒತ್ತುವರಿ ತೆರವಿಗೆ ಸರ್ಕಾರಕ್ಕೆ ಆಸಕ್ತಿ ಇಲ್ಲ ಎಂಬ ಭಾವನೆ ಮೂಡುವಂತೆ ಮಾಡುತ್ತದೆ. ಅರಣ್ಯ, ಕೆರೆ, ರಸ್ತೆ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿನ ಒತ್ತುವರಿ ತೆರವಿನ ವಿಚಾರದಲ್ಲಿ ಸರ್ಕಾರದ ಕೈ ಕಟ್ಟಿ ಹಾಕಿದಂತಾಗುತ್ತದೆ. ರಾಜ್ಯದ ವಿವಿಧ ಭಾಗಗಳಲ್ಲಿ ರಸ್ತೆಯ ಮಧ್ಯದಲ್ಲಿ ಧಾರ್ಮಿಕ ಕಟ್ಟಡಗಳು ಇವೆ. ಇವು ಸುಗಮ ಸಂಚಾರಕ್ಕೆ ಅಡ್ಡಿ ಮಾತ್ರವಲ್ಲ, ಅಪಘಾತಕ್ಕೂ ಕಾರಣ ಆಗಬಹುದು. ಹಾಗಾಗಿ ಮಸೂದೆಯ ಹಿಂದೆ ಸಾರ್ವಜನಿಕ ಹಿತ ಇದೆ ಎಂಬುದನ್ನು ಒಪ್ಪಲಾಗದು. ಇನ್ನು ಮುಂದೆ ನಿರ್ಮಾಣ ಆಗುವ ಅಕ್ರಮ ಧಾರ್ಮಿಕ ಕಟ್ಟಡಗಳಿಗೆ ಮಸೂದೆ ರಕ್ಷಣೆ ನೀಡುವುದಿಲ್ಲ ಎಂದು ಮಸೂದೆಯಲ್ಲಿ ಹೇಳಲಾಗಿದೆ. ಆದರೆ, ಮಸೂದೆಯು ನೀಡುವ ಸಂದೇಶವು ಅದಕ್ಕೆ ವ್ಯತಿರಿಕ್ತವಾಗಿದೆ. ಸಾರ್ವಜನಿಕ ಸ್ಥಳದಲ್ಲಿ ನಿರ್ಮಾಣ ಆಗುವ ಧಾರ್ಮಿಕ ಕಟ್ಟಡವನ್ನು ಸುಲಭದಲ್ಲಿ ತೆರವು ಮಾಡಲು ಸಾಧ್ಯವಿಲ್ಲ ಎಂಬ ಸಂದೇಶ ರವಾನಿಸುತ್ತದೆ. ಅಕ್ರಮವಾಗಿ ಧಾರ್ಮಿಕ ಕಟ್ಟಡ ನಿರ್ಮಿಸಿದರೆ ಮುಂದೆಯೂ ಅದಕ್ಕೆ ಯಾವುದಾದರೂ ರೀತಿಯ ರಕ್ಷಣೆ ದೊರೆಯಬಹುದು ಎಂಬ ವಿಶ್ವಾಸವನ್ನೂ ಮೂಡಿಸುತ್ತದೆ. ಸರ್ಕಾರದ ಈ ನಡೆಯನ್ನು ನ್ಯಾಯಾಂಗ ನಿಂದನೆ ಎಂದು ಸುಪ್ರೀಂ ಕೋರ್ಟ್‌ ಪರಿಗಣಿಸುವ ಸಾಧ್ಯತೆಯೂ ಇಲ್ಲದೇ ಇಲ್ಲ. 2009ರಲ್ಲಿಯೇ ಸುಪ್ರೀಂ ಕೋರ್ಟ್‌ ನೀಡಿದ್ದ ನಿರ್ದೇಶನವು ಅನ್ವಯ ಆಗದಂತೆ ನೋಡಿಕೊಳ್ಳುವುದೇ ಈ ಮಸೂದೆಯ ಉದ್ದೇಶ. ಜನಹಿತವನ್ನು ಗಮನದಲ್ಲಿ ಇರಿಸಿಕೊಂಡು ಸುಪ್ರೀಂ ಕೋರ್ಟ್‌ ನೀಡಿದ ತೀರ್ಪೊಂದು ಜಾರಿಗೆ ಬರದಂತೆ ಮಾಡುವ ಕಾಯ್ದೆ ತರುವುದು ತೀರಾ ಕೆಟ್ಟ ನಡೆ. ನಾವು ರೂಪಿಸಿಕೊಂಡಿರುವ ಆಡಳಿತ ವ್ಯವಸ್ಥೆಯನ್ನು ಅಗೌರವದಿಂದ ಕಾಣುವಂತಹ ಕ್ರಮವೂ ಹೌದು ಇದು. ಅಕ್ರಮ ಕಟ್ಟಡಗಳನ್ನು ಸಾಧ್ಯ ವಿದ್ದಲ್ಲಿ ಕ್ರಮಬದ್ಧಗೊಳಿಸುವ ಇಲ್ಲವೇ ಸ್ಥಳಾಂತರ ಮಾಡುವ ಹಲವು ಅವಕಾಶಗಳನ್ನು ಸುಪ್ರೀಂ ಕೋರ್ಟ್‌ ನೀಡಿತ್ತು. 2009ರಲ್ಲಿಯೇ ನಿರ್ದೇಶನ ಬಂದಿದ್ದರೂ ಯಾವುದನ್ನೂ ಮಾಡದೆ ಸರ್ಕಾರವು ಸುಮ್ಮನಿದ್ದದ್ದು ಸಾರ್ವಜನಿಕ ಹಿತಾಸಕ್ತಿಯ ಬಗ್ಗೆ ಆಡಳಿತಗಾರರಿಗೆ ಇರುವ ಅಸಡ್ಡೆಯನ್ನು ಮಾತ್ರ ತೋರುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು