ಸೋಮವಾರ, ಜೂಲೈ 6, 2020
22 °C

ಸಂಪಾದಕೀಯ | ಅಗ್ಗದ ಸಾಲ: ಸೊರಗಿರುವ ಆರ್ಥಿಕತೆಗೆ ದೊಡ್ಡ ಬೆಂಬಲ

ಸಂಪಾದಕೀಯ Updated:

ಅಕ್ಷರ ಗಾತ್ರ : | |

rbi

ಬ್ಯಾಂಕ್‌ ಸಾಲದ ಬಡ್ಡಿ ನಿರ್ಧರಿಸುವ ರೆಪೊ ದರಗಳನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌, 20 ವರ್ಷಗಳ ಹಿಂದಿನ ಕನಿಷ್ಠ ಮಟ್ಟಕ್ಕೆ ತಗ್ಗಿಸಿದೆ. ಕೋವಿಡ್‌–19 ಪಿಡುಗಿನ ಹೊಡೆತಕ್ಕೆ ತೀವ್ರವಾಗಿ ಸೊರಗಿರುವ ದೇಶಿ ಆರ್ಥಿಕತೆಯ ಚೇತರಿಕೆಗೆ ಬೆಂಬಲ ನೀಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ತೆವಳುತ್ತಿರುವ ಆರ್ಥಿಕ ಚಟುವಟಿಕೆಗಳಿಗೆ ಚೈತನ್ಯ ತುಂಬುವ ಸಲುವಾಗಿ ಎರಡು ತಿಂಗಳಲ್ಲಿ ಮೂರನೇ ಬಾರಿಗೆ ಹಣಕಾಸು ಉತ್ತೇಜನಾ ಕ್ರಮಗಳನ್ನು ಪ್ರಕಟಿಸಲಾಗಿದೆ.

ರಿಸರ್ವ್ ಬ್ಯಾಂಕಿನ ಈ ನಡೆಯಿಂದಾಗಿ ಫೆಬ್ರುವರಿಯಿಂದ ಈಚೆಗೆ ವ್ಯವಸ್ಥೆಯಲ್ಲಿ ₹ 9.42 ಲಕ್ಷ ಕೋಟಿ ಮೊತ್ತದ ನಗದು ಹೆಚ್ಚಳಗೊಂಡಿದೆ. ಇದು ಜಿಡಿಪಿಯ ಶೇ 4.6ರಷ್ಟು. ರೆಪೊ ದರ ಕಡಿತ, ಅವಧಿ ಸಾಲಗಳ ಮರುಪಾವತಿಯ ಅವಕಾಶವನ್ನು ಒಟ್ಟಾರೆ 6 ತಿಂಗಳವರೆಗೆ ವಿಸ್ತರಣೆ, ಕಂಪನಿಗಳ ದುಡಿಯುವ ಬಂಡವಾಳದ ಮೇಲಿನ ಬಡ್ಡಿ ಪಾವತಿ ಮುಂದೂಡಿಕೆ, ಬ್ಯಾಂಕ್‌ ಒಕ್ಕೂಟವು ದೊಡ್ಡ ಕಂಪನಿಗಳಿಗೆ ನೀಡುವ ಸಾಲದ ಪ್ರಮಾಣ ಶೇ 25ರಷ್ಟರಿಂದ ಶೇ 30ಕ್ಕೆ ಹೆಚ್ಚಳ, ಆಮದು ಮತ್ತು ರಫ್ತು ಬ್ಯಾಂಕ್‌ಗೆ ₹ 15 ಸಾವಿರ ಕೋಟಿ ನೆರವು ಮುಂತಾದ ಉಪಕ್ರಮಗಳು ಆರ್ಥಿಕ ಚೇತರಿಕೆಗೆ ಬಲ ತುಂಬುವ ನಿರೀಕ್ಷೆ ಇದೆ. 40 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಆರ್ಥಿಕ ವೃದ್ಧಿ ದರ (ಜಿಡಿಪಿ) ನಕಾರಾತ್ಮಕ ಬೆಳವಣಿಗೆ ಸಾಧಿಸುವ ಲಕ್ಷಣಗಳು ಗೋಚರಿಸಿರುವುದರಿಂದ ಅಸಾಧಾರಣವಾದ ಈ ನಿರ್ಧಾರಗಳನ್ನು ಕೇಂದ್ರೀಯ ಬ್ಯಾಂಕ್‌ ಕೈಗೊಂಡಿದೆ.

ಉದ್ಯೋಗ ನಷ್ಟ ಹೆಚ್ಚಳ, ಆರ್ಥಿಕ ಚಟುವಟಿಕೆ ಪ್ರಗತಿ ಬಗ್ಗೆ ನಿರಾಶಾದಾಯಕ ಸಂಕೇತಗಳು ಕಂಡುಬಂದಿರುವಾಗ ಸಾಲ ಮರುಪಾವತಿ ಮುಂದೂಡಿಕೆಯು ಸಂಕಷ್ಟದಲ್ಲಿ ಇರುವ ವಿವಿಧ ಬಗೆಯ ಸಾಲಗಾರರಿಗೆ ಸದ್ಯದ ಮಟ್ಟಿಗೆ ಉಪಶಮನ ಕಲ್ಪಿಸಿದೆ. ಆದರೆ, ದೀರ್ಘಾವಧಿಯಲ್ಲಿ ಇದು ಹೊರೆಯಾಗಿಯೂ ಪರಿಣಮಿಸಲಿದೆ. ಸಾಲ ಮರುಪಾವತಿ ವಿಷಯದಲ್ಲಿ ಹಣಕಾಸಿನ ಅಶಿಸ್ತಿಗೂ ಕಾರಣವಾಗಲಿದೆ. ಆರ್ಥಿಕತೆಯು ನಿರಾಶಾದಾಯಕ ಕಾಲಘಟ್ಟದಲ್ಲಿ ಇರುವಾಗ ವಸೂಲಾಗದ ಸಾಲದ ಪ್ರಮಾಣ (ಎನ್‌ಪಿಎ) ಇನ್ನಷ್ಟು ಹೆಚ್ಚಳಗೊಳ್ಳುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಈ ಎಲ್ಲ ಉಪಕ್ರಮಗಳಿಂದ ಬ್ಯಾಂಕ್‌ಗಳ ಹಣಕಾಸು ಪರಿಸ್ಥಿತಿ ಮೇಲೆ ಖಂಡಿತವಾಗಿಯೂ ಗಂಭೀರ ಸ್ವರೂಪದ ಪರಿಣಾಮಗಳು ಕಂಡುಬರಲಿವೆ. ರೆಪೊ ದರ ಕಡಿತದ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸಲು ಬ್ಯಾಂಕ್‌ಗಳು ತಕ್ಷಣ ಕಾರ್ಯಪ್ರವೃತ್ತವಾಗಬೇಕು.

ಇಲ್ಲದಿದ್ದರೆ, ಕಡಿಮೆ ಬಡ್ಡಿದರದ ಸಾಲದ ಮೂಲಕ ಆರ್ಥಿಕ ವ್ಯವಸ್ಥೆಗೆ ಉತ್ತೇಜನ ನೀಡುವ ಉದ್ದೇಶವೇ ಈಡೇರುವುದಿಲ್ಲ. ತಯಾರಿಕಾ ಚಟುವಟಿಕೆ ಚೇತರಿಸಿಕೊಳ್ಳಲು ಸುಲಭ ಮತ್ತು ಕಡಿಮೆ ಬಡ್ಡಿದರದ ಸಾಲದ ನೆರವು ಸಹಾಯವಾಗಲಿವೆ. ಇದರಿಂದಾಗಿ ಉದ್ಯೋಗಾವಕಾಶಗಳು ಸೃಷ್ಟಿಯಾಗಿ, ಜನರ ಖರೀದಿ ಸಾಮರ್ಥ್ಯ ಸುಧಾರಿಸಬಹುದು. ಉದ್ಯಮಗಳ ಮೇಲಿನ ಹಣಕಾಸು ಹೊರೆ ಕೂಡ ತಗ್ಗಲಿದೆ. ಪರಿಣಾಮವಾಗಿ ಆರ್ಥಿಕತೆಗೆ ಶಕ್ತಿವರ್ಧಕವಾಗಿ ಕೆಲಸ ಮಾಡಲಿರುವ ಸರಕು ಮತ್ತು ಸೇವೆಗಳ ಬೇಡಿಕೆ ಹೆಚ್ಚಲಿದೆ.

ಸಾಲ ಮರುಪಾವತಿ ಅವಧಿ ಮುಂದೂಡಿಕೆಯ ಅವಕಾಶವನ್ನು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೂ (ಎನ್‌ಬಿಎಫ್‌ಸಿ) ವಿಸ್ತರಿಸುವ, ಸಾಲಗಳನ್ನು ಒಂದು ಬಾರಿಗೆ ಪುನರ್‌ ಹೊಂದಾಣಿಕೆ ಮಾಡುವ ಬೇಡಿಕೆಯೂ ಉದ್ಯಮ ವಲಯದಿಂದ ವ್ಯಕ್ತವಾಗಿದೆ. ಆದರೆ, ಆರ್ಥಿಕ ಪ್ರಗತಿಯ ಭವಿಷ್ಯದ ಮುನ್ನೋಟವೇ ಅನಿಶ್ಚಿತವಾಗಿರುವಾಗ ಇಂತಹ ಬೇಡಿಕೆಗಳನ್ನು ಈಡೇರಿಸುವುದರಿಂದ ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಹೊಸ ಅಪಾಯಗಳನ್ನು ಆಹ್ವಾನಿಸಿದಂತಾಗಬಹುದು. ಕೋವಿಡ್‌–19 ಪಿಡುಗಿನ ದುಷ್ಪರಿಣಾಮಗಳು ನಿರೀಕ್ಷೆಗಿಂತ ಹೆಚ್ಚು ತೀಕ್ಷ್ಣವಾಗಿದ್ದು, ಮುಂಬರುವ ದಿನಗಳು ಹೆಚ್ಚು ಸವಾಲಿನಿಂದ ಕೂಡಿರಲಿವೆ. ಹೀಗಾಗಿ ಆರ್ಥಿಕತೆಗೆ ಸರ್ಕಾರದಿಂದ ಮತ್ತು ಆರ್‌ಬಿಐನಿಂದ ಇನ್ನೂ ಹೆಚ್ಚಿನ ರಚನಾತ್ಮಕ ಸ್ವರೂಪದ ಬೆಂಬಲದ ಅಗತ್ಯ ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು