ಶುಕ್ರವಾರ, ಸೆಪ್ಟೆಂಬರ್ 25, 2020
26 °C

ಸಂಪಾದಕೀಯ | ಆರ್‌ಬಿಐ ಹೊಸ ತೀರ್ಮಾನ ಹಣದ ಹರಿವಿಗೆ ಉತ್ತೇಜನ

ಸಂಪಾದಕೀಯ Updated:

ಅಕ್ಷರ ಗಾತ್ರ : | |

ಆರ್‌ಬಿಐ

ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡದಿರಲು ಭಾರತೀಯ ರಿಸರ್ವ್‌ ಬ್ಯಾಂಕಿನ (ಆರ್‌ಬಿಐ) ಹಣಕಾಸು ನೀತಿ ಸಮಿತಿಯ (ಎಂಪಿಸಿ) ಸದಸ್ಯರು ಒಕ್ಕೊರಲಿನಿಂದ ತೀರ್ಮಾನಿಸಿದ್ದಾರೆ. ಈ ವರ್ಷದ ಫೆಬ್ರುವರಿಯ ನಂತರ ಆರ್‌ಬಿಐ, ರೆಪೊ ದರವನ್ನು ಶೇಕಡ 1.15ರಷ್ಟು ತಗ್ಗಿಸಿದೆ. ಹೀಗಾಗಿ, ಕೆಲವು ಅರ್ಥಶಾಸ್ತ್ರಜ್ಞರು ಮತ್ತು ಕಾರ್ಪೊರೇಟ್ ವಲಯದ ಕೆಲವರು ದರ ಕಡಿತದ ಪರ ಮಾತನಾಡಿದ್ದರೂ ಆ ತೀರ್ಮಾನ ಕೈಗೊಳ್ಳಲು ಆರ್‌ಬಿಐ ಮುಂದಾಗಿಲ್ಲ. ಕೇಂದ್ರೀಯ ಬ್ಯಾಂಕ್‌ನ ಈ ತೀರ್ಮಾನವನ್ನು ಷೇರು ಮಾರುಕಟ್ಟೆ ತಕ್ಷಣಕ್ಕೆ ಸ್ವಾಗತಿಸಿರುವುದನ್ನು ಗಮನಿಸಿದರೆ, ರೆಪೊ ದರಗಳನ್ನು ಕಡಿತ ಮಾಡುವುದೊಂದೇ ಅರ್ಥವ್ಯವಸ್ಥೆಯ ಎಲ್ಲ ಸಮಸ್ಯೆಗಳಿಗೆ ಪರಿಹಾರವಲ್ಲ ಎಂಬ ಹೊಳಹು ಸಿಗಬಹುದು. ಆದರೆ, ಮುಂದೆ ಅಗತ್ಯ ಅನ್ನಿಸಿದರೆ ರೆಪೊ ದರ ಕಡಿತದ ಅವಕಾಶವನ್ನು ಆರ್‌ಬಿಐ ಮುಕ್ತವಾಗಿ ಇರಿಸಿಕೊಂಡಂತೆ ಕಾಣುತ್ತಿದೆ. ಆರ್‌ಬಿಐ ಈ ಬಾರಿ ಇನ್ನೂ ಎರಡು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದೆ. ಕೋವಿಡ್–19 ಸೃಷ್ಟಿಸಿದ ಬಿಕ್ಕಟ್ಟಿನ ಪರಿಣಾಮವಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಕಂಪನಿಗಳ ನೆರವಿಗೆ ಬಂದಿರುವ ಆರ್‌ಬಿಐ, ಬಾಕಿ ಸಾಲದ ಮರುಹೊಂದಾಣಿಕೆಗೆ ಅವಕಾಶ ಕಲ್ಪಿಸಿದೆ. ಹಾಗೆಯೇ, ಚಿನ್ನಾಭರಣ ಅಡ ಇರಿಸಿ ಪಡೆಯುವ ಸಾಲದ ನಿಯಮಗಳಲ್ಲಿ ಬದಲಾವಣೆ ತಂದು, ಚಿನ್ನಾಭರಣದ ಮೌಲ್ಯದ ಶೇಕಡ 90ರಷ್ಟರವರೆಗೆ ಸಾಲ ಪಡೆಯಬಹುದು ಎಂದು ಹೇಳಿದೆ. ರೆಪೊ ದರ ತಗ್ಗಿಸದೆ ಇರುವ ತೀರ್ಮಾನವನ್ನೂ ಕಂಪನಿಗಳಿಗೆ ಸಾಲ ಮರುಹೊಂದಾಣಿಕೆಗೆ ಅವಕಾಶ ಕಲ್ಪಿಸಿರುವುದನ್ನೂ ಚಿನ್ನದ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ಪಡೆಯಲು ಅನುವು ಮಾಡಿಕೊಟ್ಟಿರುವುದನ್ನೂ ಒಟ್ಟಾಗಿ ಗ್ರಹಿಸಬೇಕು. ಹಾಗೆ ಮಾಡಿದಾಗ, ವ್ಯವಸ್ಥೆಯಲ್ಲಿ ಹಣದ ಚಲಾವಣೆಯನ್ನು ಮತ್ತು ನಗದು ಲಭ್ಯತೆಯನ್ನು ಹೆಚ್ಚಿಸುವ ಸದುದ್ದೇಶ ಆರ್‌ಬಿಐಗೆ ಇದೆ ಎಂಬುದು ಗೊತ್ತಾಗುತ್ತದೆ.

ಭಾರತದ ಅರ್ಥವ್ಯವಸ್ಥೆಗೆ ಮಂಕು ಕವಿದಿದ್ದಕ್ಕೆ ಕಾರಣ ಕೋವಿಡ್–19 ಸಾಂಕ್ರಾಮಿಕ ಮಾತ್ರವೇ ಅಲ್ಲ. ಈ ಸಾಂಕ್ರಾಮಿಕವು ದೇಶದೆಲ್ಲೆಡೆ ವ್ಯಾಪಿಸುವ ಮೊದಲೂ ದೇಶದ ಅರ್ಥವ್ಯವಸ್ಥೆಯಲ್ಲಿ ಎಲ್ಲವೂ ಸರಿ ಇರಲಿಲ್ಲ. ಆಗ, ಉತ್ಪಾದನೆ ಪ್ರಕ್ರಿಯೆಯಲ್ಲಿ ಮತ್ತು ಸೇವೆಗಳನ್ನು ಒದಗಿಸುವಲ್ಲಿ ಹೆಚ್ಚಿನ ಸಮಸ್ಯೆ ಇದ್ದಿರಲಿಲ್ಲ. ಆದರೆ, ಉತ್ಪನ್ನಗಳನ್ನು ಬಳಸುವ ಹಾಗೂ ಸೇವೆಗಳನ್ನು ಪಡೆಯುವ ಗ್ರಾಹಕರ ವಿಶ್ವಾಸ ಕುಂದಿತ್ತು. ಆದರೆ, ಕೋವಿಡ್–19 ಹರಡುವುದನ್ನು ತಡೆಯುವ ಉದ್ದೇಶದಿಂದ ಜಾರಿಗೊಳಿಸಿದ ರಾಷ್ಟ್ರವ್ಯಾಪಿ ಲಾಕ್‌ಡೌನ್‌, ಉತ್ಪಾದನೆ ಹಾಗೂ ಸೇವಾ ವಲಯಕ್ಕೂ ಪೆಟ್ಟು ನೀಡಿತು. ಹಣದ ಚಲಾವಣೆಯ ಮೇಲೆ ಹಿಂದೆಂದೂ ಕಾಣದಂತಹ ಅಡೆತಡೆಗಳು ಎದುರಾದವು. ಲಾಕ್‌ಡೌನ್‌ ಶುರುವಾದ ನಂತರ ಜನ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ, ಉದ್ಯೋಗ ಉಳಿಸಿಕೊಂಡ ಹಲವರು ವೇತನ ಕಡಿತದ ಬಿಸಿ ಅನುಭವಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಮಾರುಕಟ್ಟೆಗೆ ಹೋಗಿ ಮೊದಲಿನಂತೆಯೇ ಅವರು ಹಣ ಖರ್ಚು ಮಾಡುತ್ತಾರೆ ಎಂದು ನಿರೀಕ್ಷಿಸಲಾಗದು. ಜನ ಎದುರಿಸುತ್ತಿರುವ ಕಹಿ ಸನ್ನಿವೇಶ ಕೂಡ ಹಣದ ಮುಕ್ತ ಹರಿವಿಗೆ ದೊಡ್ಡ ಅಡೆತಡೆಯಾಗಿದೆ. ಈಗ, ಚಿನ್ನಾಭರಣ ಅಡ ಇರಿಸಿ ಪಡೆಯುವ ಸಾಲದ ಪ್ರಮಾಣದಲ್ಲಿನ ಹೆಚ್ಚಳದಿಂದ ಜನರ ಬಳಿ ಹೆಚ್ಚಿನ ನಗದು ಲಭ್ಯವಾಗಬಹುದು. ಸಾಲ ಮರುಹೊಂದಾಣಿಕೆಯ ಸೌಲಭ್ಯ ಪಡೆದು, ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳು ಸಾಲ ತೀರಿಸಲು ಅವಧಿಯನ್ನು ವಿಸ್ತರಿಸಿಕೊಳ್ಳಬಹುದು. ಆಗ ಅವುಗಳ ಬಳಿ ದುಡಿಯುವ ಬಂಡವಾಳದ ರೂಪದಲ್ಲಿ ಹೆಚ್ಚಿನ ನಗದು ಲಭ್ಯವಾಗಬಹುದು. ಉತ್ಪಾದನೆಯೇ ಇಲ್ಲದೆ ಕಷ್ಟ ಅನುಭವಿಸುತ್ತಿರುವ ಉದ್ದಿಮೆಗಳಿಗೆ ಇದು ಖಂಡಿತ ನೆರವಿಗೆ ಬರಲಿದೆ. ಸಾಲ ಮರುಹೊಂದಾಣಿಕೆಯ ಸೌಲಭ್ಯವು ಬ್ಯಾಂಕುಗಳಿಗೂ ನೆರವಾಗುವ ನಿರೀಕ್ಷೆ ಇದೆ– ಕೊಟ್ಟ ಸಾಲ ಸುಸ್ತಿಯಾಗದೆ, ತುಸು ತಡವಾಗಿಯಾದರೂ ಮರಳಿ ಬರುತ್ತದೆ ಎಂಬ ವಿಶ್ವಾಸ ಬ್ಯಾಂಕುಗಳಲ್ಲಿ ಮೂಡಬಹುದು. ಗ್ರಾಹಕರಲ್ಲಿನ ವಿಶ್ವಾಸವು ದಾಖಲೆಯ ಮಟ್ಟಕ್ಕೆ ಕುಸಿದಿದೆ ಎಂಬ ವರದಿಯು ಆರ್‌ಬಿಐ ಕಡೆಯಿಂದಲೇ ಬಂದಿದೆ. ಮುಕ್ತ ಮಾರುಕಟ್ಟೆ ಸದಾ ಚಲನಶೀಲ ಆಗಿರಬೇಕು ಎಂದಾದಲ್ಲಿ, ಗ್ರಾಹಕರು ವಿಶ್ವಾಸದಿಂದ ಹಣ ಖರ್ಚು ಮಾಡುವಂತಹ ಸ್ಥಿತಿ ಇರಬೇಕು. ಅದು ಸಾಧ್ಯವಾಗಬೇಕು ಎಂದಾದರೆ ಜನರ ಪಾಲಿಗೆ ದುಡಿಮೆಯ ಮೂಲಗಳಾದ ಉದ್ಯೋಗ, ಉದ್ದಿಮೆಗಳ ವಿಚಾರದಲ್ಲಿ ಅನಿಶ್ಚಿತತೆ ಇರಬಾರದು. ಈಗಿನ ಕೆಟ್ಟ ಕಾಲಘಟ್ಟದಲ್ಲಿ, ಜನರ ಆರ್ಥಿಕ ಬದುಕಿನಲ್ಲಿ ಭದ್ರತೆಯ ಭಾವ ಹೆಚ್ಚಿಸುವಲ್ಲಿ ಆರ್‌ಬಿಐಗಿಂತಲೂ ಹೆಚ್ಚಿನ ಹೊಣೆ ಸರ್ಕಾರಗಳ ಮೇಲೆ ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು