ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಶ್ರೀಲಂಕಾ: ಅಧಿಕಾರ ಕೇಂದ್ರೀಕರಣವು ಸರ್ವಾಧಿಕಾರಕ್ಕೆ ದಾರಿ ಆಗದಿರಲಿ

Last Updated 9 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಶ್ರೀಲಂಕಾದ ಅಧ್ಯಕ್ಷ ಗೊಟಬಯ ರಾಜಪಕ್ಸ, ಅವರ ಅಣ್ಣ ಮಹಿಂದ ರಾಜಪಕ್ಸ ಅವರ ಶ್ರೀಲಂಕಾ ಪೊದುಜನ ಪೆರಮುನ (ಎಸ್‌ಎಲ್‌ಪಿಪಿ) ನೇತೃತ್ವದ ಮೈತ್ರಿಕೂಟವು ಸಂಸದೀಯ ಚುನಾವಣೆಯಲ್ಲಿ ಮೂರನೇ ಎರಡು ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಕಳೆದ ನವೆಂಬರ್‌ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೊಟಬಯ ಭಾರಿ ಬಹುಮತದಿಂದ ಗೆದ್ದಿದ್ದರು. ಹಾಗಾಗಿ, ಸಂಸದೀಯ ಚುನಾವಣೆಯಲ್ಲಿಯೂ ಎಸ್‌ಎಲ್‌ಪಿಪಿ ಗೆಲುವು ನಿರೀಕ್ಷಿತವೇ ಆಗಿತ್ತು.

ಸಂವಿಧಾನ ತಿದ್ದುಪಡಿಗೆ ಅವಕಾಶ ಕೊಡುವ ಮೂರನೇ ಎರಡರಷ್ಟು ಬಹುಮತ ಬರಬಹುದೇ ಎಂಬ ಪ್ರಶ್ನೆ ಮಾತ್ರ ಇತ್ತು. 225 ಸದಸ್ಯ ಬಲದ ಸಂಸತ್ತಿನಲ್ಲಿ ಮೈತ್ರಿಕೂಟವು 150 ಸ್ಥಾನಗಳನ್ನು ಹೊಂದಿದೆ. ಈ ಬಾರಿಯ ಫಲಿತಾಂಶವು ಶ್ರೀಲಂಕಾದ ರಾಜಕೀಯ ಚಿತ್ರಣವನ್ನೇ ಬದಲಿಸಿದೆ. ಮಾಜಿ ಪ್ರಧಾನಿ ರನಿಲ್‌ ವಿಕ್ರಮಸಿಂಘೆ ನೇತೃತ್ವದ ಯುಎನ್‌ಪಿ ಒಂದು ಕ್ಷೇತ್ರವನ್ನಷ್ಟೇ ಗೆದ್ದು, ಹೀನಾಯವಾಗಿ ಸೋತಿದೆ.

ಭ್ರಷ್ಟಾಚಾರರಹಿತವಾದ ಉತ್ತಮ ಆಡಳಿತದ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿದ್ದ ವಿಕ್ರಮಸಿಂಘೆ ನೇತೃತ್ವದ ಸರ್ಕಾರವು ಕೊಟ್ಟ ಭರವಸೆ ಈಡೇರಿಸಲಿಲ್ಲ; ಈಸ್ಟರ್‌ ಸಂದರ್ಭದಲ್ಲಿ ಚರ್ಚಿನ ಮೇಲೆ ದಾಳಿ ನಡೆಯಬಹುದು ಎಂದು ಭಾರತದ ಗುಪ್ತಚರ ಸಂಸ್ಥೆಗಳು ಮಾಹಿತಿ ಕೊಟ್ಟರೂ ಸರ್ಕಾರ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಿಲ್ಲ. ನಂತರವೂ ಆಡಳಿತದಲ್ಲಿ ದಕ್ಷತೆ ಕಾಣಲಿಲ್ಲ. ಪಕ್ಷದೊಳಗಿನ ಒಳಜಗಳವು ಆಳ್ವಿಕೆ ಬಹುತೇಕ ನಿಷ್ಕ್ರಿಯಗೊಳ್ಳುವಂತೆ ಮಾಡಿತು. ಸಜಿತ್‌ ಪ‍್ರೇಮದಾಸ ಅವರು ಚುನಾವಣೆಗೆ ಕೆಲ ಸಮಯ ಮೊದಲು ಯುಎನ್‌ಪಿಯಿಂದ ಹೊರನಡೆದು ಎಸ್‌ಜೆಪಿ ಎಂಬ ಪಕ್ಷ ಕಟ್ಟಿದರು. ಈಗ 54 ಕ್ಷೇತ್ರಗಳನ್ನು ಗೆದ್ದಿರುವ ಎಸ್‌ಜೆಪಿ ಪ್ರಮುಖ ಪ್ರತಿಪಕ್ಷವಾಗಿ ಹೊರಹೊಮ್ಮಿದೆ.

ವಿಕ್ರಮಸಿಂಘೆ ನೇತೃತ್ವದ ಸರ್ಕಾರವು 2015ರಲ್ಲಿ ಸಂವಿಧಾನಕ್ಕೆ 19ನೇ ತಿದ್ದುಪಡಿಯ ಮೂಲಕ ಆಡಳಿತ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳನ್ನು ಮಾಡಿತ್ತು. ಒಬ್ಬ ವ್ಯಕ್ತಿಗೆ ಎರಡು ಅವಧಿಗೆ ಮಾತ್ರ ಅಧ್ಯಕ್ಷರಾಗಲು ಅವಕಾಶ, ಅಧ್ಯಕ್ಷ, ಪ್ರಧಾನಿ ಮತ್ತು ಕಾರ್ಯಾಂಗದ ನಡುವೆ ಅಧಿಕಾರದ ಹಂಚಿಕೆ ಹಾಗೂ ಅಧಿಕಾರ ಕೇಂದ್ರೀಕರಣದ ತಡೆಯ ಕ್ರಮಗಳು ಇದರಲ್ಲಿ ಸೇರಿದ್ದವು. ಅಧಿಕಾರ ಕೇಂದ್ರೀಕರಣ ಸಾಧ್ಯವಾಗುವಂತಹ ಬದಲಾವಣೆಗಳನ್ನು ಹೊಸ ಸರ್ಕಾರ ಜಾರಿಗೆ ತರುವ ಸಾಧ್ಯತೆ ಇದೆ. ಏಕೆಂದರೆ, ವಿಕ್ರಮಸಿಂಘೆ ಅವರ ದುರ್ಬಲ ಆಳ್ವಿಕೆಯ ವಿರುದ್ಧ ಪ್ರಬಲ ನಾಯಕ ಮತ್ತು ಶಕ್ತ ಸರ್ಕಾರ ಎಂಬ ಸಂಕಥನವನ್ನು ರಾಜಪಕ್ಸ ಸಹೋದರರು ಜನರ ಮುಂದೆ ಇರಿಸಿದ್ದರು.

ವಿಕ್ರಮಸಿಂಘೆ ಅವರ ಸಡಿಲ ಆಳ್ವಿಕೆಯಿಂದ ಬೇಸತ್ತಿದ್ದ ಜನರು, ರಾಜ‍ಪಕ್ಸ ಸಹೋದರರ ಪ್ರತಿಪಾದನೆಯನ್ನು ಮುಕ್ತವಾಗಿ ಅನುಮೋದಿಸಿದ್ದಾರೆ. ಸಿಂಹಳ ಬೌದ್ಧ ರಾಷ್ಟ್ರೀಯತೆ ಮತ್ತು ಬಹುಸಂಖ್ಯಾತವಾದವನ್ನು ಎಸ್‌ಎಲ್‌ಪಿಪಿಯು ಚುನಾವಣಾ ಪ್ರಚಾರದಲ್ಲಿ ಮುಂದಿಟ್ಟಿತ್ತು; ಜನಾಂಗ ದ್ವೇಷದ ಪ್ರಚೋದನಕಾರಿ ಭಾಷಣಗಳು ಈ ಪಕ್ಷದ ಪ್ರಚಾರದಲ್ಲಿ ಪ್ರಮುಖ ಸ್ಥಾನ ಪಡೆದಿದ್ದವು ಎಂದು ವರದಿಯಾಗಿದೆ. ಬಹುಸಂಸ್ಕೃತಿ ಮತ್ತು ಬಹುಜನಾಂಗಗಳ ದ್ವೀಪ ರಾಷ್ಟ್ರವು ಧರ್ಮ ಮತ್ತು ಜನಾಂಗದ ಹೆಸರಿನಲ್ಲಿ ವಿಭಜನೆ ಆಗುವುದು ಆ ದೇಶಕ್ಕೆ ಒಳಿತನ್ನು ಮಾಡದು ಎಂಬ ವಿವೇಕವನ್ನು ಅಧ್ಯಕ್ಷ ಗೊಟಬಯ ಮತ್ತು ಮಹಿಂದ ಅವರು ತೋರಬೇಕು. ಅಲ್ಪಸಂಖ್ಯಾತರಾದ ಮುಸ್ಲಿಮರು ಮತ್ತು ತಮಿಳರ ಬಲವು ಸಂಸತ್ತಿನಲ್ಲಿ ಕುಗ್ಗಿದೆ. ಇಂತಹ ಸಂದರ್ಭದಲ್ಲಿ ಈ ವರ್ಗಗಳನ್ನು ಹಣಿಯುವ ಪ್ರಯತ್ನಗಳು ನಡೆಯದಂತೆ ನೋಡಿಕೊಳ್ಳಬೇಕು.

ಜನಾಂಗ ದ್ವೇಷದ ದಳ್ಳುರಿಯಲ್ಲಿ ಬೆಂದಿರುವ ಶ್ರೀಲಂಕಾ ಮತ್ತೊಮ್ಮೆ ಆ ಹಾದಿ ಹಿಡಿಯುವುದು ದುರಂತಕ್ಕೆ ಕಾರಣವಾದೀತು ಎಂಬ ಎಚ್ಚರವೂ ಸರ್ಕಾರಕ್ಕೆ ಇರಬೇಕು. ಪ್ರವಾಸೋದ್ಯಮದ ಮೇಲೆ ಬಹುದೊಡ್ಡ ಅವಲಂಬನೆ ಇರುವ ದೇಶಕ್ಕೆ ಈಸ್ಟರ್‌ ಸಂದರ್ಭದ ಬಾಂಬ್‌ ಸ್ಫೋಟದ ಬಳಿಕ ಪ್ರವಾಸಿಗರು ಬರುವುದು ಕಡಿಮೆಯಾಗಿತ್ತು. ಪ್ರವಾಸೋದ್ಯಮ ಇನ್ನೇನು ಹಳಿಗೆ ಬರಲು ಆರಂಭಿಸಿತು ಎಂದಾಗ ಕೋವಿಡ್‌–19 ಪಿಡುಗು ಆ ಕ್ಷೇತ್ರದ ಬಾಗಿಲನ್ನೇ ಮುಚ್ಚಿದೆ. ಅಭಿವೃದ್ಧಿ ಯೋಜನೆಗಳಿಗಾಗಿ ವಿದೇಶಗಳಿಂದ ಪಡೆದ ಸಾಲವು ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ 67ರಷ್ಟಿದೆ.

ಈ ವರ್ಷದ ಕೊನೆಯ ಹೊತ್ತಿಗೆ ಆ ದೇಶವು ಮರುಪಾವತಿ ಮಾಡಬೇಕಿರುವ ಸಾಲದ ಮೊತ್ತವೇ 300 ಕೋಟಿ ಡಾಲರ್‌ನಷ್ಟಿದೆ (ಸುಮಾರು ₹22,500 ಕೋಟಿ). ಕೊಲ್ಲಿ ದೇಶಗಳು ಸೇರಿ ವಿವಿಧ ದೇಶಗಳಲ್ಲಿ ಕೆಲಸದಲ್ಲಿದ್ದ ಲಂಕನ್ನರು ಕೋವಿಡ್‌ ಕಾರಣಕ್ಕೆ ಊರಿಗೆ ಮರಳಿದ್ದಾರೆ. ಹಾಗಾಗಿ, ಬರುತ್ತಿದ್ದ ವರಮಾನ ಖೋತಾ ಆಗಿದೆ. ನಿರುದ್ಯೋಗ ಹೆಚ್ಚಿದೆ. ಇವನ್ನೆಲ್ಲ ನಿಭಾಯಿಸುವುದು ಚುನಾವಣೆ ಗೆದ್ದಷ್ಟು ಸುಲಭದ ವಿಚಾರ ಅಲ್ಲ. ಎಲ್ಲರನ್ನೂ ಒಳಗೊಳ್ಳುವ ಎಲ್ಲರ ಏಳಿಗೆಯ ನೀತಿಯು ದೇಶದಲ್ಲಿ ಶಾಂತಿ ಸ್ಥಾಪಿಸಬಹುದು. ಆರ್ಥಿಕ ಬಿಕ್ಕಟ್ಟು ನಿವಾರಿಸಲು ಎಲ್ಲರ ಸಮೃದ್ಧಿ ಅನಿವಾರ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT