ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವನೆ ಕೆರಳಿಸಿ ರಾಜಕೀಯ ಲಾಭ ಮಾಡಿಕೊಳ್ಳುವ ಸಂಚು ಸಾಕುಮಾಡಿ

Last Updated 28 ಜನವರಿ 2021, 19:30 IST
ಅಕ್ಷರ ಗಾತ್ರ

ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ಪ್ರದೇಶಗಳಲ್ಲಿ ಕನ್ನಡ ಹಾಗೂ ಮರಾಠಿ ಭಾಷಿಕರು ಸೌಹಾರ್ದದಿಂದ ಬೆರೆತು ಬಾಳುತ್ತಿದ್ದಾರೆ. ಗಡಿ ವಿವಾದವು ಮುಗಿದ ಅಧ್ಯಾಯ ಎಂಬುದು ಹೆಚ್ಚಿನವರಿಗೆ ಮನವರಿಕೆಯಾಗಿದೆ, ನೆಲ–ಭಾಷೆಯ ಹೆಸರಿನಲ್ಲಿ ನೆಮ್ಮದಿ ಕದಡುವಂತಹ ಸಂಘರ್ಷ ಬೇಡವಾಗಿದೆ. ಆದರೆ, ಕೆಲವು ರಾಜಕೀಯ ಮುಖಂಡರು ಈ ವಿವಾದವನ್ನು ಜೀವಂತವಾಗಿ ಇರಿಸುವುದರಲ್ಲೇ ಸ್ವಹಿತ ಕಾಣತೊಡಗಿದ್ದಾರೆ. ಯಾವುದೋ ಒಂದು ನೆಪದಡಿ ಈ ವಿಷಯವನ್ನು ಕೆದಕಿ, ಅದಕ್ಕೆ ಪುನಃ ಗುಟುಕು ಜೀವ ತುಂಬಲು ಶಕ್ತಿಮೀರಿ ಪ್ರಯತ್ನಿಸುತ್ತಲೇ ಬಂದಿದ್ದಾರೆ. ಈಗ ಆ ಕೆಲಸವನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ವಹಿಸಿಕೊಂಡಂತಿದೆ. ಮುಂಬೈ ಮಹಾನಗರದಲ್ಲಿ ಕೊರೊನಾ ನಿಯಂತ್ರಣ, ಕೊರೊನಾ ಸಾಂಕ್ರಾಮಿಕದ ಪರಿಣಾಮದಿಂದ ಹಳಿ ತಪ್ಪಿರುವ ಅರ್ಥವ್ಯವಸ್ಥೆ ಮತ್ತು ಜನರ ಬದುಕನ್ನು ಹಳಿಗೆ ತರುವುದಕ್ಕಿಂತ ಗಡಿ ವಿಚಾರವೇ ತಮಗೆ ಮುಖ್ಯ ಎಂಬಂತೆ ಪದೇ ಪದೇ ಈ ವಿಷಯ ಪ್ರಸ್ತಾಪಿಸುತ್ತಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ತಕ್ಕುದಲ್ಲದ ರೀತಿಯಲ್ಲಿ ಅಸಂಬದ್ಧವಾಗಿ ಹೇಳಿಕೆ ನೀಡುತ್ತಿದ್ದಾರೆ. ಮರಾಠಿ ಭಾಷಿಕರಿರುವ ಕೆಲವು ಪ್ರದೇಶಗಳನ್ನು ಕರ್ನಾಟಕ ಆಕ್ರಮಿಸಿಕೊಂಡಿದೆ. ಅವುಗಳನ್ನು ಪುನಃ ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳುತ್ತೇವೆ ಎಂಬರ್ಥದಲ್ಲಿ ಕೆಲವು ದಿನಗಳ ಹಿಂದೆ ಹೇಳಿಕೆ ನೀಡಿದ್ದರು. ಅಪ್ರಬುದ್ಧವಾದ ಆ ಹೇಳಿಕೆಯು ನೆನಪಿನಿಂದ ಮಾಸುವ ಮೊದಲೇ ಈಗ ಮತ್ತೊಂದು ಬಾಲಿಶ ಹೇಳಿಕೆ ನೀಡಿದ್ದಾರೆ. ಕರ್ನಾಟಕದಲ್ಲಿ ಮರಾಠಿ ಭಾಷಿಕರು ಗಣನೀಯ ಸಂಖ್ಯೆಯಲ್ಲಿ ನೆಲೆಸಿರುವ ಮತ್ತು ವಿವಾದಿತ ಎಂದು ಮಹಾರಾಷ್ಟ್ರ ಪರಿಗಣಿಸಿರುವ ಕೆಲವು ಪ್ರದೇಶಗಳನ್ನು, ಗಡಿ ವಿವಾದ ಕುರಿತಂತೆ ಸುಪ್ರೀಂ ಕೋರ್ಟ್‌ ತೀರ್ಪು ಹೊರಬೀಳುವವರೆಗೂ ಕೇಂದ್ರಾಡಳಿತ ಪ್ರದೇಶಗಳೆಂದು ಘೋಷಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. ಅಷ್ಟಕ್ಕೇ ನಿಲ್ಲದೆ, ಕರ್ನಾಟಕದಲ್ಲಿ ಮರಾಠಿ ಭಾಷಿಕರ ಮೇಲೆ ಇಲ್ಲಿನ ಸರ್ಕಾರವೇ ದೌರ್ಜನ್ಯ ಎಸಗುತ್ತಿದೆ ಎಂದು ಹಸಿ ಸುಳ್ಳಿನ ಆರೋಪ ಮಾಡಿ ಮುಖ್ಯಮಂತ್ರಿ ಸ್ಥಾನದ ಘನತೆಗೆ ಕುಂದು ತಂದಿದ್ದಾರೆ.

ಮಹಾರಾಷ್ಟ್ರದ ಕೆಲವು ರಾಜಕೀಯ ಮುಖಂಡರಿಗೆ ಗಡಿ ವಿಷಯ ಎಂಬುದು ಗೀಳು ಇದ್ದಂತೆ. ನಿದ್ದೆಯಲ್ಲೂ ಕನವರಿಸುವಷ್ಟರ ಮಟ್ಟಿಗೆ ಅದು ನರ–ನಾಡಿಗಳಲ್ಲಿ ಸೇರಿಹೋಗಿದೆ. ರಾಜಕೀಯವಾಗಿ ಫಸಲು ತೆಗೆಯುವ ಒಂದು ಅಸ್ತ್ರವಾಗಿ, ಸಂದರ್ಭಾನುಸಾರ ಇದನ್ನು ಬಳಸುತ್ತಾರೆ. ತಮ್ಮ ರಾಜಕೀಯ ಅಸ್ತಿತ್ವಕ್ಕೆ ಅಪಾಯ ಎದುರಾದಾಗ, ಚುನಾವಣೆ ಸಮೀಪಿಸಿದಾಗ ಭಾಷೆಯ ಹೆಸರಿನಲ್ಲಿ ಭಾವನೆಗಳನ್ನು ಕೆರಳಿಸುವ ಆಟ ಆರಂಭಿಸುತ್ತಾರೆ. ಆಡಳಿತ ವೈಫಲ್ಯ ಮುಚ್ಚಿಕೊಳ್ಳುವ ಕವಚವಾಗಿಯೂ ಬಳಕೆ ಆಗುವುದುಂಟು. ಮೂರು ಪಕ್ಷಗಳ ಕೂಡಾವಳಿಯ ಮೈತ್ರಿ ಸರ್ಕಾರವನ್ನು ಏದುಸಿರು ಬಿಡುತ್ತಲೇ ಮುಂದಕ್ಕೆ ಎಳೆಯುತ್ತಿರುವ ಉದ್ಧವ್‌ ಅವರಿಗೆ ಆಡಳಿತಾತ್ಮಕವಾಗಿ ಹಲವು ಸವಾಲುಗಳಿವೆ. ಈ ಸವಾಲುಗಳನ್ನು ದಕ್ಷವಾಗಿ ನಿಭಾಯಿಸುವ ಬದಲಿಗೆ, ಅವರು ಭಾವನಾತ್ಮಕ ವಿಷಯಗಳನ್ನು ಕೆದಕಲು ಆರಂಭಿಸಿದ್ದಾರೆ. ರಾಜಕೀಯವಾಗಿ ಲಾಭ ಮಾಡಿಕೊಳ್ಳುವ ಉದ್ದೇಶದ ಇಂತಹ ಹೇಳಿಕೆಗಳನ್ನು ಉಪೇಕ್ಷಿಸುವುದೇ ಉತ್ತಮ. ಆದರೆ, ಅವರು ಕುಳಿತಿರುವ ಸ್ಥಾನದ ಮಹಿಮೆಯಿಂದಲೇ ಅವರ ಮಾತುಗಳು ಪ್ರಚಾರ ಪಡೆಯುತ್ತವೆ. ಇದೇ ಕಾರಣಕ್ಕಾಗಿ ಪ್ರತಿಕ್ರಿಯೆಯು ಅನಿವಾರ್ಯ ಆಗುತ್ತದೆ. ಭಾಷೆಯ ಆಧಾರದಲ್ಲಿ ರಾಜ್ಯಗಳು ರಚನೆಯಾಗಿ ಆರು ದಶಕಗಳೇ ಉರುಳಿವೆ. ಇನ್ನೂ ಈ ವಿಷಯವನ್ನು ಕೆದಕಿ ಸೌಹಾರ್ದ ಕದಡುವುದು, ಅಭಿವೃದ್ಧಿಗೆ ಅಡ್ಡಿ ಉಂಟುಮಾಡುವುದು ಜೀವವಿರೋಧಿ ನಿಲುವು. ಜನರ ಬದುಕು ಹಸನಾಗಬೇಕು ಎಂದು ಬಯಸುವ ರಾಜಕಾರಣಿಗಳ್ಯಾರೂ ಇಂತಹ ಕೆಲಸಕ್ಕೆ ಕೈಹಾಕುವುದಿಲ್ಲ. ಚುನಾವಣೆಯಲ್ಲಿ ಹೇಗಾದರೂ ಗೆಲುವು ಸಾಧಿಸಬೇಕು ಎಂಬ ಲೆಕ್ಕಾಚಾರವನ್ನಷ್ಟೇ ಮುಖ್ಯವಾಗಿಸಿಕೊಳ್ಳುವ ರಾಜಕೀಯ ಲಾಭಕೋರರಿಗಷ್ಟೇ ಇಂತಹ ವಿಷಯಗಳು ನಿತ್ಯದ ಜಪವಾಗಬಲ್ಲವು. ಬೆಳಗಾವಿ ಮಹಾನಗರಪಾಲಿಕೆಗೆ ಸದ್ಯದಲ್ಲೇ ಚುನಾವಣೆ ನಡೆಯುವ ಸಾಧ್ಯತೆ ಇದೆ. ಸೊರಗಿರುವ ಶಿವಸೇನಾಕ್ಕೆ ಒಂದಷ್ಟು ಬಲ ತುಂಬುವ ತಂತ್ರಗಾರಿಕೆಯ ಭಾಗವಾಗಿಯೂ ಉದ್ಧವ್‌ ಇಂತಹ ಮಾತುಗಳನ್ನು ಆಡಿರಬಹುದು. ಮಹಾಜನ್‌ ಆಯೋಗದ ವರದಿಯೇ ಅಂತಿಮ ಎಂಬ ಕರ್ನಾಟಕದ ನಿಲುವು ನಿಚ್ಚಳವಾಗಿದೆ. ಆದರೂ ಗಡಿ ವಿಚಾರದಲ್ಲಿ ಕರ್ನಾಟಕ ಸರ್ಕಾರ ಸದಾ ಜಾಗೃತ ಸ್ಥಿತಿಯಲ್ಲಿ ಇರಬೇಕು. ಇದನ್ನು ಕಾನೂನಿನ ನೆಲೆಯಲ್ಲಿ ಹಾಗೂ ರಾಜಕೀಯವಾಗಿ ಎದುರಿಸಲು ಸನ್ನದ್ಧವಾಗಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT