ಮಂಗಳವಾರ, ಜನವರಿ 19, 2021
17 °C

ಸಂಪಾದಕೀಯ: ರಾಜಕೀಯ ಮೇಲಾಟ ಬಿಡಿ ಅಭಿವೃದ್ಧಿ ಕಡೆ ಗಮನ ಕೊಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜಕೀಯ ಮೇಲಾಟ ಬಿಡಿ ಅಭಿವೃದ್ಧಿ ಕಡೆ ಗಮನ ಕೊಡಿ

ಚುನಾವಣೆಯಲ್ಲಿ ಗೆಲುವು ಸಾಧಿಸುವುದು, ಸಂಪುಟ ವಿಸ್ತರಣೆ–ಪುನರ್‌ರಚನೆಯ ಗುಂಗಿನಲ್ಲೇ ಮುಳುಗಿ ತೇಲುವುದು, ರಾಜಕೀಯ ಕಚ್ಚಾಟದಲ್ಲಿ ಕಳೆದುಹೋಗುವುದು ಆಡಳಿತ ಪಕ್ಷದ ಚಾಳಿಯಾದರೆ ಅಭಿವೃದ್ಧಿ ಎಂಬುದು ಜನರ ಪಾಲಿಗೆ ಮರೀಚಿಕೆಯಾಗುತ್ತಲೇ ಹೋಗುತ್ತದೆ. 2018ರಲ್ಲಿ ವಿಧಾನಸಭೆಗೆ ಚುನಾವಣೆ ನಡೆದ ಬಳಿಕ ಕರ್ನಾಟಕ ಕಂಡಿದ್ದು ಬಹುತೇಕ ಇಂತಹುದೇ ಮೇಲಾಟ. ಅಭಿವೃದ್ಧಿ ಎಂಬುದು ಕಣ್ಣೆದುರಿನ ವಾಸ್ತವ ಹೋಗಲಿ; ಬಾಯಿಮಾತಿನ ಸಪ್ಪಳವೂ ಆಗಲಿಲ್ಲ. ಜೆಡಿಎಸ್– ಕಾಂಗ್ರೆಸ್‌ ನೇತೃತ್ವದ ಮೈತ್ರಿ ಸರ್ಕಾರದ ಗುದ್ದಾಟದ ಅವಧಿ ಮುಗಿದು ಅಧಿಕಾರದ ಚುಕ್ಕಾಣಿ ಬಿಜೆಪಿ ಕೈಗೆ ಬಂದ ಮೇಲೆ ಅಭಿವೃದ್ಧಿಗೆ ವೇಗ ಸಿಗಲಿದೆ ಎಂದು ಆ ಪಕ್ಷದ ನಾಯಕರು ಬಿಂಬಿಸಿದ್ದರು. ಆದರೆ, ಅದು ಸಾಕಾರಗೊಂಡಿದೆ ಎಂಬ ಭಾವನೆ ಜನರಲ್ಲಿ ಇದ್ದಂತಿಲ್ಲ. ಸರ್ಕಾರಕ್ಕೆ ಸರಳ ಬಹುಮತ ದಕ್ಕಿಸಿಕೊಳ್ಳಲು ಉಪಚುನಾವಣೆಯ ಗೆಲುವು ಅನಿವಾರ್ಯವಾಗಿತ್ತು. ಹಾಗಾಗಿ, ಆಡಳಿತಾರೂಢರ ಗಮನವು ಸಹಜವಾಗಿಯೇ ಆ ಕಡೆ ಕೇಂದ್ರೀಕೃತವಾಗಿತ್ತು. ಪರಿಣಾಮವಾಗಿ ಅಭಿವೃದ್ಧಿ ಕೆಲಸಗಳು ಕಡೆಗಣನೆಗೆ ಒಳಗಾದವು ಎಂಬ ಆರೋಪದಲ್ಲಿ ಹುರುಳಿಲ್ಲದೇ ಇಲ್ಲ. ಇದಕ್ಕೂ ಮೊದಲೇ ಕೊರೊನಾ ತಂದಿತ್ತ ಅಡೆತಡೆಗಳು ಅಭಿವೃದ್ಧಿಗೆ ತೊಡರುಗಾಲಾಗಿ ಪರಿಣಮಿಸಿದವು. ಈ ಮಧ್ಯೆ ಪದೇ ಪದೇ ಮುನ್ನೆಲೆಗೆ ಬಂದು ನೇಪಥ್ಯಕ್ಕೆ ಸರಿಯುತ್ತಲೇ ಇರುವ ನಾಯಕತ್ವ ಬದಲಾವಣೆ ವಿಷಯ, ಸಂಪುಟ ವಿಸ್ತರಣೆಯ ಗೊಂದಲಗಳು ಆಡಳಿತ ಯಂತ್ರವನ್ನು ಸ್ತಬ್ಧತೆಯತ್ತ ದೂಡಿದವು. ಉಪಚುನಾವಣೆಗಳಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳೇ ಅಧಿಕ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದಾರೆ ಎಂದು ಮುಖ್ಯಮಂತ್ರಿಯವರೇ ಹೇಳಿಕೊಂಡಿದ್ದಾರೆ. ಇನ್ನೂ ಎರಡೂವರೆ ವರ್ಷ ತಾವೇ ಮುಖ್ಯಮಂತ್ರಿ ಎಂದೂ ಯಡಿಯೂರಪ್ಪ ಪ್ರತಿಪಾದಿಸಿದ್ದಾರೆ. ರಾಜ್ಯ ಸರ್ಕಾರದ ನಾಯಕತ್ವ ಬದಲಾವಣೆ ಪ್ರಶ್ನೆ ವರಿಷ್ಠರ ಮುಂದಿಲ್ಲ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಕೂಡ ಪ್ರಕಟಿಸಿದ್ದಾರೆ. ಕೊರೊನಾ ಕೂಡ ಈಗ ನಿಯಂತ್ರಣಕ್ಕೆ ಬಂದಂತೆ ಕಾಣುತ್ತಿದೆ. ಆರ್ಥಿಕ ಸ್ಥಿತಿ ಸುಧಾರಿಸುತ್ತಿರುವ ಲಕ್ಷಣಗಳು ಗೋಚರಿಸಿವೆ. ಅಭಿವೃದ್ಧಿ ಕೆಲಸಗಳಿಗೆ ವೇಗ ತುಂಬುವ ದಿಸೆಯಲ್ಲಿ ಗಂಭೀರವಾಗಿ ಯೋಚಿಸಬೇಕಾದ, ಕಾರ್ಯಪ್ರವೃತ್ತವಾಗಬೇಕಾದ ಸಂದರ್ಭವಿದು.

ಚುನಾವಣೆ ಹಾಗೂ ನಾಯಕತ್ವ ಬದಲಾವಣೆಗೆ ಸಂಬಂಧಿಸಿದ ಸವಾಲುಗಳನ್ನು ಬೆನ್ನಮೇಲೆ ಹೇರಿಕೊಂಡೇ ಇಲ್ಲಿಯವರೆಗೆ ಸರ್ಕಾರವನ್ನು ದೂಡಿಕೊಂಡು ಬಂದವರು ಇನ್ನಾದರೂ ಮೈಸೆಟೆದು ನಿಲ್ಲಲು ಇದು ಸಕಾಲ. ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವುದು ಚುನಾಯಿತ ಸರ್ಕಾರವೊಂದರ ಆದ್ಯ ಕರ್ತವ್ಯ. ಬದುಕಿನ ಎಲ್ಲ ಮಗ್ಗುಲುಗಳಿಗೆ ಕೊರೊನಾ ಕೊಟ್ಟ ಹೊಡೆತದಿಂದ ಚೇತರಿಸಿಕೊಳ್ಳಲು ಜನರ ನೆರವಿಗೆ ಸರ್ಕಾರ ನಿಲ್ಲಬೇಕಾಗಿದೆ. ಗ್ರಾಮೀಣ ಭಾಗದ ಹಿಂದುಳಿದ ಪ್ರದೇಶಗಳು ಕೊರೊನಾ ಬಂದ ಮೇಲಂತೂ ಸಂಪೂರ್ಣ ಕಡೆಗಣನೆಗೆ ಒಳಗಾಗಿವೆ ಎಂದು ಹೇಳಲಾಗುತ್ತಿದೆ. ಸಚಿವರು, ಶಾಸಕರು, ನೌಕರರ ಸಂಬಳ–ಸಾರಿಗೆ ಬಿಟ್ಟು ಮತ್ತೆ ಯಾವುದಕ್ಕೂ ಖರ್ಚು ಮಾಡಲಾಗದ ಸ್ಥಿತಿಗೆ ಸರ್ಕಾರ ತಲುಪಿದ್ದರಿಂದಾಗಿ ಹಳ್ಳಿಗಾಡಿನಲ್ಲಿ ಅಭಿವೃದ್ಧಿಗೆ ಗರ ಬಡಿದುಬಿಟ್ಟಿದೆ. ಯಾವ ಕೆಲಸವೂ ಆಗುತ್ತಿಲ್ಲ; ಆಡಳಿತ ಹಳಿ ತಪ್ಪಿದೆ ಎಂದು ವಿರೋಧ ಪಕ್ಷಗಳು ಹಾಗೂ ಸಾರ್ವಜನಿಕರು ದೂರುತ್ತಿದ್ದರು. ಆಕ್ರೋಶ ವ್ಯಕ್ತಪಡಿಸುತ್ತಿರುವವರ ಸಾಲಿಗೆ ಈಗ ಆಡಳಿತಾರೂಢ ಬಿಜೆಪಿ ಶಾಸಕರೂ ಸೇರಿದ್ದಾರೆ. ಸರ್ಕಾರದ ಕಾರ್ಯವೈಖರಿ ಹಾಗೂ ಸಚಿವರ ನಿರ್ಲಕ್ಷ್ಯ ಧೋರಣೆ ಬಗ್ಗೆ ಆಡಳಿತ ಪಕ್ಷದ ಕೆಲವು ಶಾಸಕರು ಮುಖ್ಯಮಂತ್ರಿ ಸಮ್ಮುಖದಲ್ಲೇ ಅಸಹನೆ ಹೊರಹಾಕಿದ್ದಾರೆ. ಜನಸಾಮಾನ್ಯರ ಭಾವನೆ ಈಗ ಜನಪ್ರತಿನಿಧಿಗಳ ಮೂಲಕ ಹೊರಬಿದ್ದಿದೆ. ಆಡಳಿತ ಪಕ್ಷವು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂಬುದಕ್ಕೆ ಇದು ಸೂಚನೆಯಾಗಿದೆ. ಇನ್ನಾದರೂ ರಾಜಕೀಯ ಮೇಲಾಟ, ಸಂಪುಟ ವಿಸ್ತರಣೆಯ ಸೆಣಸಾಟ ಬಿಟ್ಟು ಅಭಿವೃದ್ಧಿಯತ್ತ ಗಮನ ಕೊಡಬೇಕಾದ ಗುರುತರ ಜವಾಬ್ದಾರಿ ಸರ್ಕಾರದ ಚುಕ್ಕಾಣಿ ಹಿಡಿದವರ ಮೇಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು