ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಹೂಡಿಕೆದಾರರ ಸಮಾವೇಶದ ಯಶಸ್ಸು ಮೂಲಸೌಕರ್ಯ ಹೆಚ್ಚಿಸಲು ಕ್ರಮ ಬೇಕು

Last Updated 6 ನವೆಂಬರ್ 2022, 19:31 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ₹ 9.8 ಲಕ್ಷ ಕೋಟಿ ಮೊತ್ತದ ಹೂಡಿಕೆಗಳಿಗೆ ಒಪ್ಪಂದಗಳು ಅಂತಿಮವಾಗಿವೆ. ಸಮಾವೇಶದ ಆರಂಭಕ್ಕೂ ಮೊದಲು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಅವರು, ಒಟ್ಟು ₹ 5 ಲಕ್ಷ ಕೋಟಿ ಮೊತ್ತದ ಹೂಡಿಕೆಗಳಿಗೆ ಒಪ್ಪಂದ ಅಂತಿಮವಾಗುವ ನಿರೀಕ್ಷೆ ಇದೆ ಎಂದು ಹೇಳಿದ್ದರು. ಆದರೆ ಈಗ ಆಗಿರುವ ಮೊತ್ತವು ಆರಂಭದ ನಿರೀಕ್ಷೆಗಿಂತ ಎರಡು ಪಟ್ಟು ಹೆಚ್ಚು. ನಿರೀಕ್ಷಿಸಿದ್ದ ಹೂಡಿಕೆ ಹಾಗೂ ಒಪ್ಪಂದ ಅಂತಿಮವಾಗಿರುವ ಹೂಡಿಕೆ ಮೊತ್ತವನ್ನು ಪರಿಗಣಿಸಿದರೆ ಸಮಾವೇಶವು ಭಾರಿ ಯಶಸ್ಸು ಕಂಡಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಹೂಡಿಕೆಯು ಹೆಚ್ಚು ಬರಲಿರುವ ವಲಯಗಳ ಪಟ್ಟಿಯಲ್ಲಿ ನವೀಕರಿ ಸಬಹುದಾದ ಇಂಧನ ಮೂಲ, ಹಸಿರು ಜಲಜನಕ ವಲಯಗಳು ಮುಂಚೂಣಿಯಲ್ಲಿ ಇವೆ.

ಜಗತ್ತು ಪಳೆಯುಳಿಕೆ ಇಂಧನವನ್ನು ತ್ಯಜಿಸಿ, ಹಸಿರು ಇಂಧನವನ್ನು ವ್ಯಾಪಕವಾಗಿ ಬಳಸಿಕೊಳ್ಳಲು ಹೆಜ್ಜೆ ಇರಿಸುತ್ತಿರುವ ಈ ಹೊತ್ತಿನಲ್ಲಿ ಈ ಎರಡು ವಲಯಗಳಲ್ಲಿ ರಾಜ್ಯದಲ್ಲಿ ಹೂಡಿಕೆ ದೊಡ್ಡ ಪ್ರಮಾಣದಲ್ಲಿ ಆಗಲಿದೆ ಎಂಬುದು ಸ್ವಾಗತಾರ್ಹ. ಆದರೆ ತಯಾರಿಕಾ ವಲಯಕ್ಕೆ ದೊಡ್ಡ ಪ್ರಮಾಣದ ಹೂಡಿಕೆ ಪ್ರಸ್ತಾವಗಳು ಬಂದಿಲ್ಲ ಎಂಬುದು ಗಮನಾರ್ಹ ಅಂಶ. ದೇಶದಲ್ಲಿ ಈಗ ನವೀಕರಿಸಬಹುದಾದ ಇಂಧನ ಮೂಲಗಳಿಂದ ಆಗುತ್ತಿರುವ ಇಂಧನ ಉತ್ಪಾದನೆಯಲ್ಲಿ ರಾಜ್ಯದ ಪಾಲು ಶೇ 45ರಷ್ಟು ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಅಪಾರ ಸಾಮರ್ಥ್ಯ ಇರುವ ಈ ವಲಯದಲ್ಲಿ ಹೊಸ ಹೂಡಿಕೆಗಳನ್ನು ರಾಜ್ಯ ಆಕರ್ಷಿಸಿರುವುದು ದೀರ್ಘಾವಧಿಯಲ್ಲಿ ಉತ್ತಮ ಪರಿಣಾಮವನ್ನು ತಂದುಕೊಡಲಿದೆ. ತಯಾರಿಕಾ ವಲಯದಲ್ಲಿ ರಾಜ್ಯವು ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಆಕರ್ಷಿಸದೇ ಇರುವುದಕ್ಕೆ ಕಾರಣ ಏನು ಎಂಬುದನ್ನು ಸರ್ಕಾರ ಈ ಸಂದರ್ಭದಲ್ಲಿ ಕೂಲಂಕಷವಾಗಿ ಪರಿಶೀಲಿಸಬೇಕು. ಲೋಪಗಳು ಕಂಡುಬಂದರೆ ಅವುಗಳನ್ನು ಸರಿಪಡಿಸಿಕೊಳ್ಳಬೇಕು.

ಈ ಬಾರಿಯ ಸಮಾವೇಶಕ್ಕೆ ಸಂಬಂಧಿಸಿದ ಹಲವು ಅಂಕಿ–ಅಂಶಗಳು ಬಹಳ ಸುಂದರವಾದ ಚಿತ್ರಣವನ್ನು ಕಟ್ಟಿಕೊಡುವಂತಿವೆ. ಆದರೆ, ಹೂಡಿಕೆದಾರರ ಸಮಾವೇಶಗಳ ಈ ಹಿಂದಿನ ಅನುಭವವು ತುಸು ಬೇರೆಯದೇ ಆದ ಚಿತ್ರಣವನ್ನು ನೀಡುತ್ತದೆ. ಹಿಂದಿನ ಸಮಾವೇಶಗಳ ಸಂದರ್ಭದಲ್ಲಿ ಆಗಿದ್ದ ಹಲವು ಒಪ್ಪಂದಗಳು ಕಾರ್ಯರೂಪಕ್ಕೆ ಬಂದೇ ಇಲ್ಲ. ಆದರೆ ಈ ಬಾರಿ ಆ ರೀತಿ ಆಗುವುದಿಲ್ಲ ಎಂಬ ಭರವಸೆಯನ್ನು ಮುಖ್ಯಮಂತ್ರಿ ನೀಡಿದ್ದಾರೆ. ಒಪ್ಪಂದಗಳು ಕಾರ್ಯ ರೂಪಕ್ಕೆ ಬರಬೇಕು, ಇಲ್ಲದೇ ಇದ್ದರೆ ಅವುಗಳಿಗೆ ಹೆಚ್ಚಿನ ಅರ್ಥ ಇರುವುದಿಲ್ಲ ಎಂಬರ್ಥದ ಮಾತನ್ನು ಮುಖ್ಯಮಂತ್ರಿ ಅವರು ಸಮಾವೇಶದ ಸಮಾ ರೋಪದಲ್ಲಿ ಆಡಿದ್ದಾರೆ. ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ವರ್ಚುವಲ್ ಆಗಿ ಭಾಷಣ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಹೂಡಿಕೆಗಳ ವಿಚಾರದಲ್ಲಿ ವಿಳಂಬ ಧೋರಣೆ ಅನುಸರಿಸದೆ, ಹೂಡಿಕೆದಾರರಿಗೆ ಕೆಂಪುಹಾಸಿನ ಸ್ವಾಗತ ನೀಡಬೇಕು ಎಂದು ಕಿವಿಮಾತು ಹೇಳಿದ್ದಾರೆ. ಪ್ರಧಾನಿ ಹಾಗೂ ಮುಖ್ಯಮಂತ್ರಿ ಆಡಿರುವ ಮಾತುಗಳು ಸಂಬಂಧಪಟ್ಟ ಎಲ್ಲರಿಗೂ ಸ್ಪಷ್ಟ ಸೂಚನೆಯ ರೀತಿಯಲ್ಲಿ ತಾಕಬೇಕು. ಒಪ್ಪಂದಗಳು ಅನುಷ್ಠಾನಕ್ಕೆ ಬರಬೇಕು. ಇಲ್ಲಿ ಅಧಿಕಾರಶಾಹಿ ವ್ಯವಸ್ಥೆಯು ವಿಳಂಬ ಧೋರಣೆ ಅನುಸರಿಸಬಾರದು. ಅನುಷ್ಠಾನದ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ನಿಯಮಗಳು ಸೇರಿದಂತೆ ಯಾವುದೇ ಕಾನೂನು ಉಲ್ಲಂಘನೆ ಆಗದಂತೆಯೂ ಸರ್ಕಾರ ಕಾಳಜಿ ವಹಿಸಬೇಕು.

ಹೂಡಿಕೆದಾರರ ಪೈಕಿ ಹೆಚ್ಚಿನವರಿಗೆ ಬೆಂಗಳೂರು ಬೇಕು. ಆದರೆ, ಬೆಂಗಳೂರಿನಲ್ಲಿ ಇರುವ ಸಂಪನ್ಮೂಲಗಳ ಲಭ್ಯತೆ ಸೀಮಿತ. ಹೀಗಾಗಿ, ರಾಜ್ಯದ ಎರಡನೆಯ ಹಂತದ ನಗರಗಳಲ್ಲಿ ಅಗತ್ಯ ಮೂಲ ಸೌಕರ್ಯ ಕಲ್ಪಿಸಿ, ಅಲ್ಲಿಗೆ ಹೆಚ್ಚಿನ ಹೂಡಿಕೆಗಳು ಬರುವಂತೆ ಮಾಡಲಾಗುವುದು ಎಂಬ ಮಾತನ್ನು ಆಡಳಿತಾರೂಢರು ಹಲವು ವರ್ಷಗಳಿಂದ ಹೇಳಿಕೊಂಡು ಬಂದಿದ್ದಾರೆ. ಈ ಬಾರಿಯ ಸಮಾವೇಶದಲ್ಲಿ ಆಗಿರುವ ಒಪ್ಪಂದಗಳ ಪ್ರಕಾರ, ಒಟ್ಟು ಹೂಡಿಕೆಯಲ್ಲಿ ಶೇ 70ರಷ್ಟು ಹೂಡಿಕೆಗಳು ರಾಜ್ಯದ ಇತರ ನಗರ ಗಳಲ್ಲಿ ಆಗಲಿವೆ ಎಂಬ ಮಾತನ್ನು ಸಚಿವ ನಿರಾಣಿ ಹೇಳಿದ್ದಾರೆ. ಇದು ಕಾರ್ಯರೂಪಕ್ಕೆ ಬರಬೇಕು. ಸಮಾವೇಶದಲ್ಲಿ ಆಗಿರುವ ಒಪ್ಪಂದವನ್ನು ಕಡ್ಡಾಯವಾಗಿ ಅನುಷ್ಠಾನಕ್ಕೆ ತರುವ ನಿಬಂಧನೆ ಹೂಡಿಕೆ ದಾರರ ಮೇಲೆ ಇರುವುದಿಲ್ಲ. ಔದ್ಯಮಿಕ ವಾತಾವರಣದಲ್ಲಿ ಅನಿರೀಕ್ಷಿತ ಬದಲಾವಣೆಗಳು ಆದಲ್ಲಿ, ಹೂಡಿಕೆದಾರರು ಹಿಂದೆ ಸರಿಯುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಮೂಲಸೌಕರ್ಯ ಕಲ್ಪಿಸುವ ವಿಚಾರದಲ್ಲಿ ಬೆಂಗಳೂರು ಕೂಡ ಈಗ ಲಯ ತಪ್ಪಿದೆ. ಇಲ್ಲಿ ಮಳೆ ಜೋರಾಗಿ ಬಂದಾಗ ಕೆಲವು ಪ್ರದೇಶ ಗಳಲ್ಲಿ ಪ್ರವಾಹದ ಪರಿಸ್ಥಿತಿ ಸೃಷ್ಟಿಯಾಗುತ್ತದೆ, ರಸ್ತೆಗಳು ಹದಗೆಟ್ಟಿವೆ. ಬೆಂಗಳೂರಿನ ಆಚೆಗೆ ಹೂಡಿಕೆ ಆಕರ್ಷಿಸಿರುವುದಾಗಿ ಹೇಳುವ ಸರ್ಕಾರ, ಅಲ್ಲಿನ ಮೂಲಸೌಕರ್ಯದ ಕಡೆಗೆ ತಕ್ಷಣ ಗಮನಹರಿಸಬೇಕು. ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದು, ಅನುಮೋದನೆಗಳು ತ್ವರಿತವಾಗಿ ಸಿಗುವಂತೆ ಮಾಡುವುದು ಹಾಗೂ ಭ್ರಷ್ಟಾಚಾರ ನಿಗ್ರಹಿಸುವ ಕೆಲಸ ಆಗದ ವಿನಾ ಇಂತಹ ಸಮಾವೇಶಗಳು ಪೂರ್ಣ ಪ್ರಮಾಣದ ಯಶಸ್ಸು ಪಡೆಯುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT