ಸಂಪಾದಕೀಯ: ಟಿ20 ವಿಶ್ವಕಪ್ ಗೆಲುವು: ಮಹಿಳಾ ಕ್ರಿಕೆಟ್‌ನ ಹೊಸ ಶಕೆಗೆ ಮುನ್ನುಡಿ

ಹರಿಯಾಣ ಹುಡುಗಿ ಶಫಾಲಿ ವರ್ಮಾ ನಾಯಕತ್ವದ ಭಾರತ ತಂಡವು 19 ವರ್ಷದೊಳಗಿನ ಮಹಿಳಾ ಟಿ20 ಕ್ರಿಕೆಟ್ ವಿಶ್ವಕಪ್ ಜಯಿಸುವುದರೊಂದಿಗೆ ಐತಿಹಾಸಿಕ ಸಾಧನೆ ಮಾಡಿದೆ. ಇದರೊಂದಿಗೆ ಭಾರತದ ಮಹಿಳಾ ಕ್ರಿಕೆಟ್‌ನಲ್ಲಿ ಹೊಸ ಪರ್ವ ಆರಂಭವಾಗುವ ನಿರೀಕ್ಷೆ ಗರಿಗೆದರಿದೆ. ದಕ್ಷಿಣ ಆಫ್ರಿಕಾದಲ್ಲಿ ನಡೆದ ಚೊಚ್ಚಲ ಟೂರ್ನಿಯಲ್ಲಿ ಭಾರತದ ಯುವಪಡೆ ಚಾಂಪಿಯನ್ ಪಟ್ಟಕ್ಕೆ ಏರಿತು. ಸೀನಿಯರ್ ವಿಭಾಗದ ಯಾವುದೇ ಮಾದರಿಯಲ್ಲಿ ಭಾರತದ ವನಿತೆಯರು ಇದುವರೆಗೂ ವಿಶ್ವಕಪ್ ಗೆದ್ದಿಲ್ಲ. ಅದರಿಂದಾಗಿ ದೇಶದ ಮಹಿಳಾ ಕ್ರಿಕೆಟ್‌ಗೆ ಸಂದ ಮೊದಲ ಐಸಿಸಿ ಟ್ರೋಫಿ ಕೂಡ ಇದಾಗಿದೆ. ಪುರುಷರ ಕ್ರಿಕೆಟ್‌ಗೆ ಇರುವ ಜನಪ್ರಿಯತೆಯ ಮಟ್ಟಕ್ಕೆ ಏರಲು ಮಹಿಳಾ ಕ್ರಿಕೆಟ್ ವಲಯವು ನಡೆಸಿರುವ ಪ್ರಯತ್ನಗಳಿಗೆ ಈ ವಿಜಯವು ಆನೆ ಬಲ ತುಂಬಲಿದೆ. 16 ತಂಡಗಳು ಸ್ಪರ್ಧಿಸಿದ್ದ ಈ ಟೂರ್ನಿಯಲ್ಲಿ ಆಡಿದ ಭಾರತದ ಬಹಳಷ್ಟು ಆಟಗಾರ್ತಿಯರಿಗೆ ವಿದೇಶದಲ್ಲಿ ಆಡಿದ ಅನುಭವವೇ ಇರಲಿಲ್ಲ. ಆದರೂ ತಂಡದಲ್ಲಿದ್ದ ಅನುಭವಿ ಆಟಗಾರ್ತಿಯರ ಸಾಂಗತ್ಯದೊಂದಿಗೆ ಕಲಿತು ಮಿಂಚಿದರು. ನಾಯಕಿ ಶಫಾಲಿ ಹಾಗೂ ವಿಕೆಟ್‌ಕೀಪರ್ ರಿಚಾ ಘೋಷ್ ಅವರಿಬ್ಬರಿಗೆ ಸೀನಿಯರ್ ತಂಡದಲ್ಲಿ ಆಡಿದ ಅನುಭವ ಇದೆ. ಅದರಲ್ಲೂ ಶಫಾಲಿ ಅವರು ಮೂರೂವರೆ ವರ್ಷಗಳ ಹಿಂದೆಯೇ ಭಾರತದ ಸೀನಿಯರ್ ತಂಡಕ್ಕೆ ಪದಾರ್ಪಣೆ ಮಾಡಿದ್ದರು. 51 ಅಂತರರಾಷ್ಟ್ರೀಯ ಟಿ20 ಪಂದ್ಯಗಳನ್ನು ಅವರು ಆಡಿದ್ದಾರೆ. ಮಿಥಾಲಿ ರಾಜ್, ಜೂಲನ್ ಗೋಸ್ವಾಮಿ, ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂದಾನ ಅವರಂತಹ ಆಟಗಾರ್ತಿಯರೊಂದಿಗೆ ಆಡಿದ್ದ ಶಫಾಲಿ ಅವರ ಅನುಭವದ ಫಲ ಇಲ್ಲಿ ದಕ್ಕಿತು. ಇತ್ತೀಚೆಗಷ್ಟೇ ಮಹಿಳಾ ಕ್ರಿಕೆಟಿಗರಿಗೂ ಕೇಂದ್ರ ಗುತ್ತಿಗೆ ಮತ್ತು ಸಮಾನ ವೇತನದಂತಹ ಸೌಲಭ್ಯಗಳನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಘೋಷಿಸಿದೆ. ಈ ನಡೆ, ಕ್ರಿಕೆಟ್ ಬಗೆಗೆ ಹೆಣ್ಣುಮಕ್ಕಳಲ್ಲಿ ಹೆಚ್ಚಿನ ಆಸಕ್ತಿ ಮೂಡಲು ಕಾರಣವಾಗಿದೆ.
ಬರುವ ಮಾರ್ಚ್‌ನಲ್ಲಿ ಮಹಿಳಾ ಇಂಡಿಯನ್ ಪ್ರೀಮಿಯರ್ ಲೀಗ್ (ಡಬ್ಲ್ಯುಐಪಿಎಲ್) ಟಿ20 ಕ್ರಿಕೆಟ್ ಟೂರ್ನಿ ಆಯೋಜನೆಗೊಂಡಿದೆ. ಅದಕ್ಕಾಗಿ ಐದು ಫ್ರ್ಯಾಂಚೈಸಿಗಳ ಹರಾಜು ಪ್ರಕ್ರಿಯೆ ಈಚೆಗೆ ನಡೆಯಿತು. ಈ ತಂಡಗಳ ಬಿಡ್‌ನಿಂದ ಗಳಿಸಿರುವ ಬೃಹತ್ ಮೊತ್ತ ಮಂಡಳಿಯ ಬೊಕ್ಕಸ ಸೇರಿದೆ. ಮುಂದಿನ ತಿಂಗಳು ಈ ತಂಡಗಳಿಗೆ ಆಟಗಾರ್ತಿಯರ ಆಯ್ಕೆಗಾಗಿ ಹರಾಜು ಪ್ರಕ್ರಿಯೆ ನಡೆಯಲಿದೆ. ಇದೀಗ ವಿಶ್ವಕಪ್ ವಿಜೇತ ತಂಡದ ಆಟಗಾರ್ತಿಯರು ಫ್ರ್ಯಾಂಚೈಸಿಗಳ ಗಮನ ಸೆಳೆಯುವ ನಿರೀಕ್ಷೆ ಇದೆ. ಟೂರ್ನಿಯ ಏಳು ಪಂದ್ಯಗಳಲ್ಲಿ 297 ರನ್ ಗಳಿಸಿರುವ ಬ್ಯಾಟರ್ ಶ್ವೇತಾ ಶೆರಾವತ್, ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸುಲಭ ಜಯ ಸಾಧಿಸಲು ಕಾರಣರಾದ ಮಧ್ಯಮವೇಗಿ ಟೈಟಸ್ ಸಾಧು, ಲೆಗ್‌ಸ್ಪಿನ್ನರ್ ಪಾರ್ಶ್ವಿ ಚೋಪ್ರಾ, ಆಫ್‌ಸ್ಪಿನ್ನರ್ ಅರ್ಚನಾ ದೇವಿ ಮತ್ತು ವಿಕೆಟ್‌ಕೀಪರ್ ರಿಚಾ ಘೋಷ್ ಅವರು ಐಪಿಎಲ್ ತಂಡಗಳಿಂದ ಉತ್ತಮ ಮೌಲ್ಯ ಪಡೆಯುವ ನಿರೀಕ್ಷೆ ಇದೆ. ಅಷ್ಟೇ ಅಲ್ಲ, ಇತ್ತೀಚೆಗಷ್ಟೇ ನಿವೃತ್ತರಾಗಿರುವ ಮಿಥಾಲಿ ಹಾಗೂ ಜೂಲನ್ ಅವರ ಸ್ಥಾನಗಳನ್ನು ತುಂಬುವ ಭರವಸೆಯನ್ನೂ ಈ ಯುವತಿಯರು ಮೂಡಿಸಿದ್ದಾರೆ. ಇದೇ ಮೊದಲ ಬಾರಿಗೆ ಆಯೋಜನೆಗೊಂಡ ಈ ಟೂರ್ನಿಯಿಂದಾಗಿ ಜಾಗತಿಕ ಮಟ್ಟದಲ್ಲಿಯೂ ಮಹಿಳೆಯರ ಕ್ರಿಕೆಟ್‌ಗೆ ದೊಡ್ಡ ಮಟ್ಟದಲ್ಲಿ ಉತ್ತೇಜನ ದೊರೆಯಬಹುದು. ಕ್ರಿಕೆಟ್ ಆಯ್ಕೆ ಮಾಡಿಕೊಳ್ಳುವ ಹೆಣ್ಣುಮಕ್ಕಳು ತಮ್ಮ ವೃತ್ತಿಭವಿಷ್ಯವನ್ನು ರೂಪಿಸಿಕೊಳ್ಳಲೂ ಇದು ನೆರವಾಗಲಿದೆ. ಅಂಪೈರಿಂಗ್, ವೀಕ್ಷಕ ವಿವರಣೆ, ತರಬೇತಿಯಂತಹ ವಿಭಾಗಗಳಲ್ಲಿ ಅವಕಾಶಗಳು ಮಹಿಳೆಯರಿಗೆ ಹೆಚ್ಚಲಿವೆ. ಯಾವುದೇ ಸಮೂಹ ಕ್ರೀಡೆಯಲ್ಲಿ ವಿಶ್ವಕಪ್ ಗೆಲುವು ಆ ಮಾದರಿಯ ಆಟಕ್ಕೆ ದೊಡ್ಡ ಶಕ್ತಿ ತುಂಬಬಲ್ಲದು. ಪುರುಷರ ವಿಭಾಗದ ಕ್ರಿಕೆಟ್ ಬೃಹದಾಕಾರವಾಗಿ ಬೆಳೆಯಲು 1983ರಲ್ಲಿ ಕಪಿಲ್ ದೇವ್ ನೇತೃತ್ವದ ತಂಡದ ವಿಜಯವು ಹೊಸ ಚೈತನ್ಯ ತುಂಬಿತು. 2007ರಲ್ಲಿ ಮಹೇಂದ್ರ ಸಿಂಗ್ ಧೋನಿ ಬಳಗದ ಟಿ20 ವಿಶ್ವಕಪ್ ವಿಜಯವು ಚುಟುಕು ಮಾದರಿಗೆ ಹೊಸಶಕ್ತಿ ತುಂಬಿದ್ದು ಇತಿಹಾಸ. ಅದೇ ರೀತಿ ಇದೀಗ ಶಫಾಲಿ ಬಳಗದ ವಿಜಯವು ಭಾರತದ ಮಹಿಳಾ ಕ್ರಿಕೆಟ್ ಹೊಸ ಎತ್ತರಕ್ಕೆ ಏರಲು ಚಿಮ್ಮುಹಲಗೆ ಆಗುವ ಸಾಧ್ಯತೆ ಇದೆ. ಮತ್ತಷ್ಟು ಹೆಣ್ಣುಮಕ್ಕಳು ಕ್ರಿಕೆಟ್ ಆಯ್ಕೆ ಮಾಡಿಕೊಳ್ಳಲು ಪ್ರೇರಣೆಯಾಗಬಹುದು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.