ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಧ್ಯಮ ನಿಯಂತ್ರಣ ತಂತ್ರ ವಿವೇಕದ ನಡೆ ಅಲ್ಲ

Last Updated 30 ಏಪ್ರಿಲ್ 2019, 13:29 IST
ಅಕ್ಷರ ಗಾತ್ರ

ಲೋಕಸಭಾ ಚುನಾವಣೆಯ ಮಹತ್ವದ ಘಟ್ಟವಾದ ಮತದಾನಕ್ಕೆ ಇನ್ನು ಕೆಲವೇ ದಿನಗಳು ಉಳಿದಿವೆ. ತಮ್ಮ ಕ್ಷೇತ್ರದ ಚುನಾವಣಾ ಕಣದಲ್ಲಿ ಇರುವ ಅಭ್ಯರ್ಥಿಗಳ ಬಗ್ಗೆ– ಅವರ ಶಕ್ತಿ ಮತ್ತು ದೌರ್ಬಲ್ಯಗಳ ಕುರಿತು– ಮತದಾರರು ತಿಳಿದುಕೊಳ್ಳಬೇಕಿರುವುದು ಈ ಹಂತದಲ್ಲಿ ಬಹಳ ಮಹತ್ವದ್ದು. ಅಭ್ಯರ್ಥಿಗಳ ಬಗ್ಗೆ ತಿಳಿದುಕೊಂಡಾಗ, ಮತದಾರರಿಗೆ ಪ್ರಜ್ಞಾಪೂರ್ವಕ ತೀರ್ಮಾನಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ. ಅಭ್ಯರ್ಥಿಗಳ ಬಗ್ಗೆ ಪೂರ್ಣ ಮಾಹಿತಿ ಮತದಾರರಿಗೆ ಸಿಗದಂತೆ ಮಾಡುವುದು ಸರಿಯಲ್ಲ. ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರ ಬಗ್ಗೆ ‘ಮಾನಹಾನಿಕರ’ವಾದ ಏನನ್ನೂ ಪ್ರಸಾರ, ಪ್ರಕಟ ಮಾಡದಂತೆ ಬೆಂಗಳೂರಿನ ಹೆಚ್ಚುವರಿ ಸಿವಿಲ್‌ ನ್ಯಾಯಾಲಯವೊಂದು ಒಟ್ಟು 49 ಮಾಧ್ಯಮ ಸಂಸ್ಥೆಗಳಿಗೆ ನೀಡಿರುವ ಮಧ್ಯಂತರ ಆದೇಶವು ಈ ಹಿನ್ನೆಲೆಯಲ್ಲಿ ಮಹತ್ವ ಪಡೆಯುತ್ತದೆ. ಎ.ಕೆ. ಸುಬ್ಬಯ್ಯ ಮತ್ತು ಬಿ.ಎನ್. ಗರುಡಾಚಾರ್ ನಡುವಿನ ಪ್ರಕರಣದಲ್ಲಿ 1986ರಲ್ಲಿ ಕರ್ನಾಟಕ ಹೈಕೋರ್ಟ್‌ ಹೇಳಿದ ಒಂದು ಮಾತನ್ನು ಸಿವಿಲ್‌ ನ್ಯಾಯಾಲಯವು ಈಗಿನ ಆದೇಶ ನೀಡುವಾಗ ಆಧಾರವಾಗಿ ಇರಿಸಿಕೊಂಡಿರುವಂತಿದೆ. ಆದರೆ, ಆ ಪ್ರಕರಣದಲ್ಲಿ ಹೈಕೋರ್ಟ್‌ ನೀಡಿದ ಆದೇಶವು ‘ಮಾನಹಾನಿಕರ’ ಎನ್ನಬಹುದಾದ ಮಾತನ್ನು ಸಾರ್ವಜನಿಕವಾಗಿ ಆಡಿದ ಒಬ್ಬ ವ್ಯಕ್ತಿಗೆ ಸಂಬಂಧಿಸಿದ್ದಾಗಿತ್ತೇ ವಿನಾ, ಆದೇಶವು ಒಂದಿಡೀ ವರ್ಗಕ್ಕೆ ಅನ್ವಯ ಆಗುವಂಥದ್ದಾಗಿರಲಿಲ್ಲ ಎಂಬುದನ್ನು ಗಮನಿಸಬೇಕು. ಆದರೆ ತೇಜಸ್ವಿ ಸೂರ್ಯ ಪ್ರಕರಣದಲ್ಲಿ ಹಲವು ಸಂಸ್ಥೆಗಳಿಗೆ ಅವು ‘ಮಾನಹಾನಿಕರ’ ಎನ್ನಬಹುದಾದ ಏನನ್ನೂ ಹೇಳದಿದ್ದರೂ, ಏಕಪಕ್ಷೀಯವಾಗಿ ತಡೆಯಾಜ್ಞೆ ನೀಡಲಾಗಿದೆ. ಇಲ್ಲಿ ಕೂಡ ಒಂದು ಮುಖ್ಯವಾದ ವಿಚಾರ ಇದೆ. ತಡೆಯಾಜ್ಞೆಯನ್ನು ಯೂಟ್ಯೂಬ್‌, ಫೇಸ್‌ಬುಕ್‌, ಟ್ವಿಟರ್‌ನಂತಹ ಸಾಮಾಜಿಕ ಜಾಲತಾಣಗಳಿಗೂ ಅನ್ವಯಿಸಲಾಗಿದೆ ಎಂದು ವರದಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅನಾಮಧೇಯರಾಗಿಯೇ ಉಳಿದುಕೊಂಡು ತಮಗನಿಸಿದ್ದನ್ನು ಜಗತ್ತಿನ ಯಾವುದೇ ಮೂಲೆಯಿಂದಲಾದರೂ ಹೇಳಿಬಿಡುವ ಅವಕಾಶ ಇರುವಾಗ, ಈ ತಡೆಯಾಜ್ಞೆ ನವ ಮಾಧ್ಯಮಗಳ ವಿಚಾರದಲ್ಲಿ ಹೇಗೆ, ಎಷ್ಟರಮಟ್ಟಿಗೆ ಅನ್ವಯವಾಗುತ್ತದೆ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ.

ಈ ಏಕಪಕ್ಷೀಯ ತಡೆಯಾಜ್ಞೆಯು ಕಾನೂನಿಗೆ ಹಾಗೂ ಸುಪ್ರೀಂ ಕೋರ್ಟ್‌ನ ಕೆಲವು ತೀರ್ಪುಗಳಿಗೆ ವಿರುದ್ಧ. ಯಾವುದೇ ವಿಚಾರ ಎಲೆಕ್ಟ್ರಾನಿಕ್‌ ಮಾಧ್ಯಮಗಳ ಮೂಲಕ ಪ್ರಸಾರ ಆಗುವ ಮುನ್ನ ಅಥವಾ ಮುದ್ರಣ ಮಾಧ್ಯಮಗಳಲ್ಲಿ ಪ್ರಕಟವಾಗುವ ಮುನ್ನ ಆ ವಿಚಾರ ಹೀಗೇ ಇರಬೇಕು ಎಂಬ ನಿಯಂತ್ರಣ ಹೇರುವುದು ನ್ಯಾಯಾಲಯದ ವ್ಯಾಪ್ತಿಯಲ್ಲಿಲ್ಲ ಎಂದು 2017ರಲ್ಲಿ ಸುಪ್ರೀಂ ಕೋರ್ಟ್ ಹೇಳಿತ್ತು. ನಿರ್ದಿಷ್ಟ ವಿಚಾರ ಪ್ರಸಾರ ಅಥವಾ ಪ್ರಕಟ ಆಗುವ ಮುನ್ನವೇ ಅದರ ಮೇಲೆ ನಿಯಂತ್ರಣ ಹೇರುವ ಯಾವುದೇ ಕಾನೂನು ಇಲ್ಲ ಎಂದು 1994ರಲ್ಲಿ ಆರ್. ರಾಜಗೋಪಾಲ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಹೇಳಿದೆ. ತೇಜಸ್ವಿ ಅವರು ತಮ್ಮ ವಿರುದ್ಧ ಸಾಮಾಜಿಕ ಜಾಲತಾಣವೊಂದರಲ್ಲಿ ಕೆಲವು ಆರೋಪಗಳು ಪ್ರಕಟವಾದ ನಂತರ ಕೋರ್ಟ್‌ ಮೆಟ್ಟಿಲೇರಿದರು. ಅಂದರೆ, ಆ ನಿರ್ದಿಷ್ಟ ಆರೋಪ ಇತರ ಮಾಧ್ಯಮಗಳಲ್ಲಿ ಪ್ರಕಟವಾಗುವುದು, ಪ್ರಸಾರವಾಗುವುದು ಅವರಿಗೆ ಇಷ್ಟವಿಲ್ಲವಾಗಿತ್ತು ಎಂದು ಭಾವಿಸಬಹುದು. ಸಾರ್ವಜನಿಕವಾಗಿ ಮಾಡಿದ ಇಂತಹ ಆರೋಪಗಳಿಗೆ ತೇಜಸ್ವಿ ಅವರು ಸಾರ್ವಜನಿಕವಾಗಿಯೇ ತಕ್ಕ ಉತ್ತರ ನೀಡಬಹುದಿತ್ತು. ಆದರೆ, ಅವರು ಒಂದಿಡೀ ಸಮೂಹದ ಬಾಯಿ ಮುಚ್ಚಿಸಲು ಮುಂದಾಗಿದ್ದು ಸಮರ್ಥನೀಯವಲ್ಲ. ಸಾರ್ವಜನಿಕ ಜೀವನದಲ್ಲಿ ಮಹತ್ವದ ಹುದ್ದೆ ಬಯಸಿರುವ ತೇಜಸ್ವಿ ಅವರು ಸಾರ್ವಜನಿಕರ ಎದುರು ತಮ್ಮನ್ನು ತಾವು ಪರಿಶೀಲನೆಗೆ ಒಡ್ಡಿಕೊಳ್ಳಲೇಬೇಕಾಗುತ್ತದೆ ಎಂಬುದನ್ನು ನೆನಪಿನಲ್ಲಿ ಇರಿಸಿಕೊಳ್ಳಬೇಕು. ಹಾಗೆಯೇ, ರಾಜ್ಯದ ಸಿವಿಲ್‌ ನ್ಯಾಯಾಲಯಗಳು ಮಾಧ್ಯಮಗಳ ವಿರುದ್ಧ ಹೊರಡಿಸುತ್ತಿರುವ ಇಂತಹ ತಡೆಯಾಜ್ಞೆಗಳು ಎಷ್ಟರಮಟ್ಟಿಗೆ ಕಾನೂನುಬದ್ಧ ಎಂಬುದನ್ನು ಸಾಂವಿಧಾನಿಕ ನ್ಯಾಯಾಲಯಗಳು ನಿಕಷಕ್ಕೆ ಒಡ್ಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT