ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ: ಕಾಶ್ಮೀರದಲ್ಲಿ ಸರಣಿ ಹತ್ಯೆಗಳು ಭದ್ರತೆ ಕಲ್ಪಿಸುವಲ್ಲಿ ವೈಫಲ್ಯ

Published : 8 ಜೂನ್ 2022, 19:31 IST
ಫಾಲೋ ಮಾಡಿ
Comments

ಕಾಶ್ಮೀರದಲ್ಲಿ ನಿರ್ದಿಷ್ಟ ಸಮುದಾಯದವರನ್ನು ಗುರಿಯಾಗಿಸಿಕೊಂಡು ಹತ್ಯೆಗಳು ನಡೆಯುತ್ತಿವೆ. ಕೇಂದ್ರಾಡಳಿತ ಪ್ರದೇಶವಾದ ಕಾಶ್ಮೀರದಲ್ಲಿ ಪರಿಸ್ಥಿತಿಯು ಸಹಜವಾಗುತ್ತಿದೆ ಎಂದು ಕೇಂದ್ರ ಸರ್ಕಾರ ಪ್ರತಿ‍ಪಾದಿಸುತ್ತಿರುವುದು ಸುಳ್ಳು ಎನ್ನುವಂತೆ ಇವೆ ಈ ಹತ್ಯೆಗಳು. ಅಲ್ಲದೆ, ಈ ಪ್ರದೇಶದ ಪರಿಸ್ಥಿತಿಯು 90ರ ದಶಕದ ಆರಂಭದಲ್ಲಿ ಇದ್ದಂತೆ ಮತ್ತೆ ಆಗಿಬಿಡಬಹುದು ಎಂಬ ಭೀತಿಯೂ ಎದುರಾಗಿದೆ. ಕಳೆದ ಮೂರು ವಾರಗಳಲ್ಲಿ ಕನಿಷ್ಠ ಒಂಬತ್ತು ಮಂದಿಯನ್ನು ಉಗ್ರರು ಹತ್ಯೆ ಮಾಡಿದ್ದಾರೆ. ಈಚಿನ ವಾರಗಳಲ್ಲಿ ಹತ್ಯೆಗಳು ಜಾಸ್ತಿ ಆಗಿವೆಯಾದರೂ, ಇವು ಶುರುವಾಗಿದ್ದು ಕಣಿವೆ ರಾಜ್ಯಕ್ಕೆ ಸಂವಿಧಾನದ 370ನೇ ವಿಧಿಯ ಅಡಿಯಲ್ಲಿ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿ, ರಾಜ್ಯವನ್ನು ಜಮ್ಮು ಹಾಗೂ ಕಾಶ್ಮೀರವಾಗಿ ವಿಂಗಡಣೆ ಮಾಡಿದ ನಂತರದಲ್ಲಿ. ಜಮ್ಮುವಿನಲ್ಲಿ ಕಾಶ್ಮೀರಿ ಪಂಡಿತ ಸಮುದಾಯಕ್ಕೆ ಸೇರಿದ ಒಬ್ಬರನ್ನು, ಹಿಂದೂ ಶಿಕ್ಷಕಿಯೊಬ್ಬರನ್ನು, ರಾಜಸ್ಥಾನ ಮೂಲದ ಬ್ಯಾಂಕ್ ವ್ಯವಸ್ಥಾಪಕರೊಬ್ಬರನ್ನು ಹಾಗೂ ಬಿಹಾರ ಮೂಲದ ಕಾರ್ಮಿಕರೊಬ್ಬರನ್ನು ಹತ್ಯೆ ಮಾಡಲಾಯಿತು. ಈ ಮೂಲಕ ಸಂದೇಶವೊಂದನ್ನು ರವಾನಿಸುವ ಇರಾದೆ ಉಗ್ರರಿಗೆ ಇತ್ತು. ಉಗ್ರರ ಗುರಿಯಾಗಿರುವ ಸಮುದಾಯಗಳಲ್ಲಿ ಭೀತಿ ಮನೆ ಮಾಡಿದೆ. ಅವರು ಕಾಶ್ಮೀರದಿಂದ ಹೊರ ನಡೆಯುತ್ತಿದ್ದಾರೆ.

2019ರ ಆಗಸ್ಟ್‌ ನಂತರದಲ್ಲಿ ಕಾಶ್ಮೀರದಲ್ಲಿ ನಡೆದಿರುವ ವಿದ್ಯಮಾನಗಳಿಗೆ ಸರ್ಕಾರವೂ ಹೊಣೆಯಾಗುತ್ತದೆ. ಅದರಿಂದ ತಪ್ಪಿಸಿಕೊಳ್ಳಲು ಆಗದು. ಹಿಂದೆ ರಾಜ್ಯದ ಸ್ಥಾನಮಾನ ಹೊಂದಿದ್ದ ಈ ಪ್ರದೇಶಕ್ಕೆ ಇದ್ದ ಸಾಂವಿಧಾನಿಕ ಕೊಂಡಿಯನ್ನು ಕತ್ತರಿಸಿದ ಕೇಂದ್ರವು, ನಂತರದಲ್ಲಿ ಅದರ ಜೊತೆ ರಾಜಕೀಯ ಬಂಧವೊಂದನ್ನು ಬೆಸೆಯಲಿಲ್ಲ. ಬದಲಾವಣೆಗಳ ವಿಚಾರದಲ್ಲಿ ಅಲ್ಲಿನ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಜನರ ಹಿತಾಸಕ್ತಿಗಳ ರಕ್ಷಣೆಗಾಗಿ ಈ ಬದಲಾವಣೆಗಳು ಎಂಬುದನ್ನು ಮನವರಿಕೆ ಮಾಡಿಕೊಡಲಿಲ್ಲ.

ಸರ್ಕಾರ ಕೈಗೊಂಡ ಕೆಲವು ಕ್ರಮಗಳು ಅಲ್ಲಿನ ಜನರನ್ನು ಇನ್ನಷ್ಟು ದೂರ ಮಾಡಿದವು. ಇವೆಲ್ಲವೂ ಅಲ್ಲಿ ಉಗ್ರರ ಚಟುವಟಿಕೆಗಳು ಮತ್ತೆ ನೆಲೆ ಕಂಡುಕೊಳ್ಳಲು ಅವಕಾಶ ಸೃಷ್ಟಿಸಿಕೊಟ್ಟವು. ಜಮೀನಿನ ಮಾಲೀಕತ್ವ, ನೌಕರಿ ನೀಡುವಿಕೆ ವಿಚಾರದಲ್ಲಿ ಜಾರಿಗೆ ಬಂದ ಹೊಸ ನೀತಿಗಳು ಕಾಶ್ಮೀರಿಗರ ಮೇಲೆ ಹೊರಗಿನಿಂದ ಏನನ್ನೋ ಹೇರಲಾಗುತ್ತಿದೆ ಎಂಬ ಭಾವನೆ ಬೆಳೆಸಿದವು. ಕಣಿವೆ ನಾಡಿನಲ್ಲಿ ಒತ್ತಾಯದಿಂದ ಯಾವುದೋ ಬದಲಾವಣೆ ತರಲು ಯತ್ನಿಸಲಾಗುತ್ತಿದೆ ಎಂಬ ಸಂದೇಶ ರವಾನೆಯಾಯಿತು. ಹಿಂದೆ ಇದ್ದ ರಾಜಕೀಯ ವೇದಿಕೆಗಳು ಇಲ್ಲವಾದವು. ಜನರಿಗೆ ಸರ್ಕಾರದ ಜೊತೆ ತಮ್ಮನ್ನು ಗುರುತಿಸಿಕೊಳ್ಳಲು ಇದ್ದ ವೇದಿಕೆಗಳೇ ಮರೆಯಾದವು. ಅಲ್ಲಿನ ಕ್ಷೇತ್ರಗಳ ಮರುವಿಂಗಡಣೆ ಕೂಡ ರಾಜಕೀಯ ಸಮತೋಲನವನ್ನು ಕಾಶ್ಮೀರಿಗರ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಬದಲಾಯಿಸಲು ಇರಿಸಿದ ಹೆಜ್ಜೆಯಂತೆ ಕೆಲವರಿಗೆ ಕಂಡುಬಂತು.

ಅಟಲ್ ಬಿಹಾರಿ ವಾಜ‍ಪೇಯಿ ನೇತೃತ್ವದ ಸರ್ಕಾರ ಹಾಗೂ ಡಾ. ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರವು ಕಾಶ್ಮೀರದ ವಿಚಾರವಾಗಿ ಬಹಳ ಸೂಕ್ಷ್ಮವಾಗಿ ಮತ್ತು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಮುಂದಡಿ ಇರಿಸುತ್ತಿದ್ದವು. ಅದರಿಂದಾಗಿ ಅಲ್ಲಿ ಉಗ್ರರ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿತ್ತು. ಪರಿಸ್ಥಿತಿಯು ಗಣನೀಯವಾಗಿ ಸುಧಾರಣೆ ಕಂಡಿತ್ತು. ಆದರೆ, 90ರ ದಶಕದ ಆರಂಭದಿಂದ ಅಲ್ಲಿ ಆಗಿದ್ದ ಸುಧಾರಣೆಗಳನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರದ ನೀತಿಗಳು ವ್ಯರ್ಥಗೊಳಿಸಿದವು. ಈಗ ಪರಿಸ್ಥಿತಿಯು ಅಲ್ಲಿ ಹಿಂದಿನ ಕಾಲಘಟ್ಟವೊಂದಕ್ಕೆ ಹೋಲುವ ಸ್ಥಿತಿ ತಲುಪಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಕಾಶ್ಮೀರಿ ಪಂಡಿತರ ಸ್ಥಿತಿಯನ್ನು ಬಿಜೆಪಿಯು ರಾಜಕೀಯವಾಗಿ ಬಳಸಿಕೊಂಡಿದೆ. ಅಲ್ಲದೆ, ಪಂಡಿತ ಸಮುದಾಯ ಅನುಭವಿಸಿದ ಸಂಕಟದ ವಿವರಗಳನ್ನು, ಕೋಮು ಭಾವನೆ ಕೆರಳಿಸಲು ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದಲ್ಲಿ ಉತ್ಪ್ರೇಕ್ಷಿತವಾಗಿ ತೋರಿಸಲಾಯಿತು. ಈಗ ಬಿಜೆಪಿ ನೇತೃತ್ವದ ಸರ್ಕಾರದ ನೀತಿಗಳು ಹಿಂದೆ ಇದ್ದಂತಹ ಸ್ಥಿತಿಯನ್ನು ಮತ್ತೆ ಸೃಷ್ಟಿಸಿವೆ. ಆದರೆ ಸರ್ಕಾರವು ವಾಸ್ತವವನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಿದೆ.

ತಮ್ಮನ್ನು ರಕ್ಷಿಸಿಕೊಳ್ಳಲು ಕಾಶ್ಮೀರವನ್ನು ತೊರೆಯಲು ಮುಂದಾಗಿರುವವರನ್ನು ತಡೆಯುತ್ತಿದೆ. ಮುಳ್ಳಿನ ತಂತಿಗಳ ಹಿಂದೆ ಅವರನ್ನು ನಿಲ್ಲಿಸುವುದರಿಂದ ಭದ್ರತೆ ಕೊಟ್ಟಂತೆ ಆಗುವುದಿಲ್ಲ. ರಕ್ಷಣೆ ಕೊಡಲು ಆಗದಿದ್ದಾಗ ಸುರಕ್ಷಿತ ಪ್ರದೇಶಕ್ಕೆ ತೆರಳಲು ಅವರಿಗೆ ಅವಕಾಶ ಕೊಡಬೇಕು, ಅದಕ್ಕೆ ನೆರವಾಗಬೇಕು. ಹೀಗೆ ಮಾಡುವುದು ತನ್ನ ನೀತಿಯ ಸೋಲು ಎಂದು ಭಾವಿಸಬೇಕಿಲ್ಲ. ಇದೇ ಸಂದರ್ಭದಲ್ಲಿ, ಉಗ್ರರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಇದರ ಜೊತೆಯಲ್ಲೇ, ಜನರಲ್ಲಿ ಮತ್ತೆ ವಿಶ್ವಾಸ ಮೂಡಿಸುವ ಕೆಲಸಗಳು ನಡೆಯಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT