ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಲಕ್ಷ್ಮೀ ವಿಲಾಸ್ ವಿದ್ಯಮಾನ; ಒಂದು ವಿಷಾದಕರ ಅಧ್ಯಾಯ

Last Updated 20 ನವೆಂಬರ್ 2020, 3:19 IST
ಅಕ್ಷರ ಗಾತ್ರ

ಒಂಬತ್ತು ದಶಕಗಳಿಗಿಂತ ಹೆಚ್ಚಿನ ಇತಿಹಾಸ ಹೊಂದಿರುವ ಲಕ್ಷ್ಮೀ ವಿಲಾಸ್ ಬ್ಯಾಂಕ್‌ (ಎಲ್‌ವಿಬಿ) ಪಾಲಿನ ಮಹತ್ವದ ಅಧ್ಯಾಯವೊಂದು ಕೊನೆಗೊಂಡಿದೆ. ಈ ಬ್ಯಾಂಕ್‌ನ ಸ್ವತಂತ್ರ ಅಸ್ತಿತ್ವ ಇನ್ನು ಕೆಲವು ದಿನಗಳಲ್ಲಿ ಅಂತ್ಯವಾಗಲಿದೆ. ತಮಿಳುನಾಡು ಮೂಲದ ಈ ಬ್ಯಾಂಕ್‌, ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಪ್ರಸ್ತಾಪಿಸಿರುವ ಸೂತ್ರದ ಅನ್ವಯ ಸಿಂಗಪುರ ಮೂಲದ ಡಿಬಿಎಸ್‌ ಬ್ಯಾಂಕ್‌ನಲ್ಲಿ ವಿಲೀನ ಆಗಲಿದೆ. ಭಾರಿ ಪ್ರಮಾಣದ ಅನುತ್ಪಾದಕ ಆಸ್ತಿಯನ್ನು (ಎನ್‌ಪಿಎ) ಹೊಂದಿರುವ ಎಲ್‌ವಿಬಿ ಪೂರ್ತಿಯಾಗಿ ಕುಸಿದುಬೀಳುವ ಸ್ಥಿತಿ ನಿರ್ಮಾಣ ಆಗುವುದನ್ನು ಆರ್‌ಬಿಐ ಈ ಮೂಲಕ ತಡೆದಂತೆ ಆಗಿದೆ.

ಎಲ್‌ವಿಬಿಯಲ್ಲಿ ಇರಿಸಿರುವ ಹಣ ಸುರಕ್ಷಿತ ವಾಗಿರುತ್ತದೆ, ಆ ಬಗ್ಗೆ ಯಾವ ಆತಂಕವೂ ಬೇಡ ಎಂಬ ಭರವಸೆಯನ್ನು ಬ್ಯಾಂಕಿನ ಆಡಳಿತ ಅಧಿಕಾರಿ ಹಾಗೂ ಹಣಕಾಸು ವಲಯದ ತಜ್ಞರು ಠೇವಣಿದಾರರಿಗೆ ನೀಡಿದ್ದಾರೆ. ಎಲ್‌ವಿಬಿಯಲ್ಲಿನ ಅಹಿತಕರ ಬೆಳವಣಿಗೆಗಳಿಂದಾಗಿ ಠೇವಣಿದಾರರು ತಾತ್ಕಾಲಿಕವಾಗಿ ತೊಂದರೆಗೆ ಒಳಗಾಗಿದ್ದರೂ ಅವರು ಇರಿಸಿರುವ ಹಣ‌ಕ್ಕೆ ವ್ಯವಸ್ಥೆಯು ಖಾತರಿ ನೀಡಿದೆ ಎಂಬುದು ಸಮಾಧಾನಕರ. ಈ ವರ್ಷದ ಆರಂಭದಲ್ಲಿ, ಖಾಸಗಿ ವಲಯದ ಯೆಸ್ ಬ್ಯಾಂಕ್‌ನ ವಹಿವಾಟಿನ ಮೇಲೆ ಕೂಡ ಆರ್‌ಬಿಐ ಕಠಿಣ ನಿರ್ಬಂಧಗಳನ್ನು ವಿಧಿಸಿತ್ತು. ನಿರ್ಬಂಧಗಳು ಚಾಲ್ತಿಯಲ್ಲಿ ಇರುವಷ್ಟು ಕಾಲ ಠೇವಣಿದಾರರು ಹಣ ಹಿಂಪಡೆಯಲು ಮಿತಿ ಹೇರಲಾಗಿತ್ತು. ಆಗ, ಯೆಸ್‌ ಬ್ಯಾಂಕ್‌ನ ನೆರವಿಗೆ ಧಾವಿಸಿದ್ದು ಸರ್ಕಾರಿ ಸ್ವಾಮ್ಯದ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ). ಅಂದರೆ, ಆಗ ಸಾರ್ವಜನಿಕರ ಹಣ ಬಳಸಿ ಖಾಸಗಿ ರಂಗದ ಯೆಸ್‌ ಬ್ಯಾಂಕ್ ‌ಅನ್ನು ರಕ್ಷಿಸಲಾಯಿತು. ‘ಬ್ಯಾಂಕ್‌ಗೆ ಲಾಭ ಆದಾಗ ಅದರ ಪಾಲು ಷೇರುದಾರರಿಗೆ ಸಲ್ಲುತ್ತದೆ. ಅದೇ ಬ್ಯಾಂಕ್‌ ನಷ್ಟ ಅನುಭವಿಸಿದಾಗ ಆ ನಷ್ಟವನ್ನು ಸಾರ್ವಜನಿಕರು ಹೊರಬೇಕು ಎಂಬುದು ಎಷ್ಟು ಸರಿ’ ಎನ್ನುವ ನೈತಿಕ ಪ್ರಶ್ನೆಗಳು ಆಗ ಎದುರಾಗಿದ್ದವು. ಎಲ್‌ವಿಬಿ ಪ್ರಕರಣದಲ್ಲಿ ಈವರೆಗೆ ಅಂತಹ ಸಂದರ್ಭ ಸೃಷ್ಟಿಯಾಗಿಲ್ಲ ಎಂಬುದು ಗಮನಾರ್ಹ.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

ಎಲ್‌ವಿಬಿಯನ್ನು ಆರ್‌ಬಿಐ ಕಠಿಣ ಸ್ವರೂಪದ ಆರ್ಥಿಕ ನಿರ್ಬಂಧಗಳ ಚೌಕಟ್ಟಿಗೆ ಒಂದು ವರ್ಷದ ಹಿಂದೆಯೇ ತಂದಿತ್ತು. ಎಲ್‌ವಿಬಿಯ ಹಣಕಾಸಿನ ಸ್ಥಿತಿ ಆರೋಗ್ಯಕರವಾಗಿಲ್ಲ ಎಂಬುದು ಕೆಲವು ಸಮಯದಿಂದ ಸಾರ್ವಜನಿಕವಾಗಿ ಚರ್ಚೆಯಾಗುತ್ತಲೇ ಇತ್ತು. ಹೀಗಿರುವಾಗ, ಆರ್‌ಬಿಐ ಈಗಿನ ಕಠಿಣ ಕ್ರಮಕ್ಕೆ ಮುಂದಾಗಲು ಇಷ್ಟು ಕಾಲ ಕಾಯಬೇಕಿತ್ತೇ, ಇದಕ್ಕೂ ಮೊದಲೇ ಬ್ಯಾಂಕ್‌ ವಿಲೀನಕ್ಕೆ ಮುಂದಡಿ ಇಡಬಾರದಿತ್ತೇ? ಕೋವಿಡ್–19 ಸಾಂಕ್ರಾಮಿಕದ ಈಗಿನ ಸಂದರ್ಭದಲ್ಲಿ ದೇಶದ ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆ ಕೂಡ ಅಪಾರ ಒತ್ತಡ ಸೃಷ್ಟಿಯಾಗಿದೆ. ಖಾಸಗಿ ವಲಯದ ಯಾವುದೇ ಬ್ಯಾಂಕಿನಲ್ಲಿ ನಗದು ಸಮಸ್ಯೆ ಸೃಷ್ಟಿಯಾದರೂ, ಎನ್‌ಪಿಎ ಹೆಚ್ಚಳವಾದರೂ ಅದು ಖಾಸಗಿ ಬ್ಯಾಂಕ್‌ಗಳ ಬಗ್ಗೆ ಸಾರ್ವಜನಿಕರು ಇರಿಸಿರುವ ವಿಶ್ವಾಸಕ್ಕೆ ಚ್ಯುತಿ ತರುತ್ತದೆ. ಯೆಸ್‌ ಬ್ಯಾಂಕ್‌ ಪ್ರಕರಣದಲ್ಲೂ ಇದೇ ಅಭಿಪ್ರಾಯಗಳು ವ್ಯಕ್ತವಾಗಿದ್ದವು ಎಂಬುದನ್ನು ಮರೆಯುವಂತಿಲ್ಲ. ಹಾಗಾಗಿ, ಇಂತಹ ಸನ್ನಿವೇಶಗಳು ಮತ್ತೆ ಸೃಷ್ಟಿಯಾಗದಂತೆ ನೋಡಿಕೊಳ್ಳುವ ಹೊಣೆ ಆರ್‌ಬಿಐ ಮತ್ತು ಕೇಂದ್ರ ಸರ್ಕಾರದ ಮೇಲೆ ಇದೆ. ಎಲ್‌ವಿಬಿಯ ಆಡಳಿತ ಮಂಡಳಿಯನ್ನು ನಂಬಿ ಅದರ ಷೇರು ಖರೀದಿಸಿದವರು ಈಗ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಈಗಿನ ವಿಲೀನ ಸೂತ್ರದ ಅನ್ವಯ, ಷೇರುದಾರರು ತಮ್ಮ ಹೂಡಿಕೆಯ ಮೊತ್ತವನ್ನು ಮರೆತುಬಿಡಬೇಕು ಎಂಬ ಸ್ಥಿತಿ ಇದೆ. ಷೇರುದಾರರು ಅಂದರೆ, ಬ್ಯಾಂಕಿನ ಮಾಲೀಕರು. ಬ್ಯಾಂಕಿನ ವಹಿವಾಟು ಸುಲಲಿತವಾಗಿ ನಡೆಯುವಲ್ಲಿ ಅವರ ಹೂಡಿಕೆಯ ಹಣದ ಪಾತ್ರವೂ ಇರುತ್ತದೆ. ಆದರೆ, ಎಲ್‌ವಿಬಿ ಪ್ರಕರಣದಲ್ಲಿ ಅವರಿಗೆ ‘ಏನೂ ಸಿಗುವುದಿಲ್ಲ’ ಎಂಬ ಸ್ಥಿತಿ ನಿರ್ಮಾಣವಾಗಿರುವುದು ದುರದೃಷ್ಟಕರ. ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಬ್ಯಾಂಕಿಂಗ್ ಸೇವೆಗಳನ್ನು ನೀಡುವ ಮೂಲಕ ಹೆಸರು ಸಂಪಾದಿಸಿರುವ ಡಿಬಿಎಸ್‌ ಬ್ಯಾಂಕ್‌ಗೆ ಎಲ್‌ವಿಬಿ ವಿಲೀನದಿಂದ ಭಾರತದಲ್ಲಿ ತನ್ನ ವಹಿವಾಟು ವಿಸ್ತರಿಸಲು ಒಳ್ಳೆಯ ಅವಕಾಶವೊಂದು ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT