ಭಾನುವಾರ, ಮಾರ್ಚ್ 29, 2020
19 °C
ತಂತ್ರಜ್ಞಾನದ ಸೂಕ್ಷ್ಮಗಳನ್ನು ಅರಿತ ನೀತಿ ನಿರೂಪಣೆ ಈ ಕಾಲದ ಅಗತ್ಯ

‘ಟಿಕ್‌ ಟಾಕ್‌’ ನಿಷೇಧ ಸಮಸ್ಯೆಗೆ ಪರಿಹಾರವಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೊಬೈಲ್ ಬಳಸಿ ಪುಟ್ಟ ವಿಡಿಯೊಗಳನ್ನು ತಯಾರಿಸಲು ಸಾಧ್ಯವಿರುವ ‘ಟಿಕ್ ಟಾಕ್’ ಎಂಬ ಕಿರು ತಂತ್ರಾಂಶವು ನಿಷೇಧಕ್ಕೆ ಒಳಗಾಗಿದೆ. ಆ್ಯಂಡ್ರಾಯ್ಡ್ ಮತ್ತು ಆ್ಯಪಲ್ ಫೋನುಗಳಿಗೆ ಕಿರುತಂತ್ರಾಂಶಗಳನ್ನು ಒದಗಿಸುವ ಗೂಗಲ್ ಪ್ಲೇ ಸ್ಟೋರ್ ಹಾಗೂ ಆ್ಯಪಲ್ ಆ್ಯಪ್‌ ಸ್ಟೋರ್‌ಗಳೆರಡೂ ಮದ್ರಾಸ್ ಹೈಕೋರ್ಟ್‌ನ ಆದೇಶಕ್ಕೆ ಅನುಗುಣವಾಗಿ ಈ ತಂತ್ರಾಂಶವನ್ನು ಕಿತ್ತುಹಾಕಿವೆ.

ಈ ಕಿರುತಂತ್ರಾಂಶ ಅಶ್ಲೀಲತೆಗೆ, ಅವಘಡಗಳಿಗೆ ಕಾರಣವಾಗಿದೆ ಎಂದು ಆರೋಪಿಸಿ ಮದುರೆಯ ಹಿರಿಯ ವಕೀಲ ಮುತ್ತುಕುಮಾರ್ ಅವರು ಮದ್ರಾಸ್ ಹೈಕೋರ್ಟ್‌ನಲ್ಲಿ ಕೇಸು ದಾಖಲಿಸಿದ್ದರು. ‘ಈ ಕಿರುತಂತ್ರಾಂಶವು ತಮಿಳುನಾಡಿನ ಸಂಸ್ಕೃತಿಯ ಶೈಥಿಲ್ಯಕ್ಕೆ ಕಾರಣವಾಗಿದೆ. ಇದನ್ನು ನಿಷೇಧಿಸಲು ಕೇಂದ್ರದ ನೆರವು ಕೋರುತ್ತೇವೆ’ ಎಂದು ತಮಿಳುನಾಡಿನ ಮಾಹಿತಿ ತಂತ್ರಜ್ಞಾನ ಸಚಿವರೇ ಹೇಳಿದ್ದರು.

ಟಿಕ್‌ ಟಾಕ್‌ ತಂತ್ರಾಂಶವನ್ನು ನಿರ್ವಹಿಸುವ ಸಂಸ್ಥೆ ‘ಬೈಟ್‌ಡ್ಯಾನ್ಸ್’, ಹೈಕೋರ್ಟ್ ಆದೇಶಕ್ಕೆ ತಡೆಯನ್ನು ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರೂ ಅದು ಫಲ ನೀಡಿಲ್ಲ. ಪರಿಣಾಮವಾಗಿ ನಿಷೇಧ ಜಾರಿಗೊಂಡಿದೆ. ಭಾರತದಲ್ಲಿ 24 ಕೋಟಿ ಸಲ ಈ ತಂತ್ರಾಂಶ ಡೌನ್‌ಲೋಡ್ ಆಗಿದೆ. ತಮಾಷೆಯ ಪುಟ್ಟ ವಿಡಿಯೊಗಳನ್ನು ರೂಪಿಸುವ ಕಿರು ಚಿತ್ರನಿರ್ಮಾಪಕರ ದೊಡ್ಡದೊಂದು ದಂಡೇ ಭಾರತದಲ್ಲಿದೆ. ಈ ವೇದಿಕೆಯಲ್ಲಿ ಅಶ್ಲೀಲ ಎನ್ನಬಹುದಾದ ವಿಡಿಯೊಗಳೂ ಇವೆ ಎಂಬುದು ನಿಜ. ಆದರೆ ಆ್ಯಪ್‌ ಅನ್ನು ನಿಷೇಧಿಸುವ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯ ಎಂದು ನ್ಯಾಯಾಲಯದಿಂದ ಆರಂಭಿಸಿ ಸರ್ಕಾರದ ತನಕದ ಎಲ್ಲರೂ ಭಾವಿಸಿರುವುದು ಮಾತ್ರ ನಮ್ಮ ಕಾಲದ ಅತಿದೊಡ್ಡ ಅಸಂಗತ.

ಮೊಬೈಲ್ ಫೋನುಗಳಲ್ಲಿ ಈಗಾಗಲೇ ಇನ್‌ಸ್ಟಾಲ್ ಆಗಿರುವ ಕಿರುತಂತ್ರಾಂಶಗಳು ಕೆಲಸ ಮಾಡುವುದನ್ನು ತಡೆಯಲು ನಿಷೇಧದಿಂದ ಸಾಧ್ಯವಿಲ್ಲ. ಅಷ್ಟೇ ಅಲ್ಲ, ಇದನ್ನು ಒಬ್ಬರಿಗೊಬ್ಬರು ಹಂಚಿಕೊಳ್ಳುವುದನ್ನು ತಡೆಯಲೂ ಆಗದು. ಗೂಗಲ್ ಪ್ಲೇ ಮತ್ತು ಆ್ಯಪಲ್ ಆ್ಯಪ್ ಸ್ಟೋರ್‌ಗಳನ್ನು ಹೊರತುಪಡಿಸಿದ ಮೂಲದಿಂದ ಇದನ್ನು ಡೌನ್‌ಲೋಡ್ ಮಾಡಿಕೊಳ್ಳುವ ಅವಕಾಶವಿನ್ನೂ ಲಭ್ಯವಿದೆ. ಇದನ್ನು ತಡೆಯುವುದು ತಾಂತ್ರಿಕವಾಗಿ ಸಾಧ್ಯವಿದೆಯಾದರೂ ಆ ತಡೆಯನ್ನು ನಿವಾರಿಸಿಕೊಳ್ಳುವುದಕ್ಕೂ ನೂರಾರು ಉಪಾಯಗಳು ಲಭ್ಯವಿವೆ. ಎಲ್ಲದಕ್ಕಿಂತ ಹೆಚ್ಚಾಗಿ ‘ಟಿಕ್‌ ಟಾಕ್’ ತಂತ್ರಾಂಶದ ಕೆಲಸವನ್ನೇ ಮಾಡುವ, ನಿಷೇಧಕ್ಕೆ ಒಳಪಡದೇ ಇರುವ ನೂರಾರು ಆ್ಯಪ್‌ಗಳಿವೆ.

ನಮ್ಮ ಕಾನೂನುಗಳು, ನ್ಯಾಯದಾನ ವ್ಯವಸ್ಥೆ ಮತ್ತು ನಿಯಂತ್ರಣಾ ನೀತಿಗಳ್ಯಾವುವೂ ಮಾಹಿತಿ ತಂತ್ರಜ್ಞಾನ ಯುಗದ ಸವಾಲುಗಳಿಗೆ ಸಿದ್ಧವಾಗಿಲ್ಲ ಎಂಬುದನ್ನು ಈ ಪ್ರಕರಣ ತೋರಿಸುತ್ತಿದೆ. ಈಗ ಮಾಧ್ಯಮ ಎಂಬುದು ನಿರ್ದಿಷ್ಟ ಸಾಂಸ್ಥಿಕ ಸ್ವರೂಪವನ್ನು ಹೊಂದಿಲ್ಲ. ಟಿಕ್‌ ಟಾಕ್ ತರಹದ ವೇದಿಕೆಗಳನ್ನು ಮಾಧ್ಯಮ ಸಂಸ್ಥೆಗಳು ಎನ್ನಲು ಸಾಧ್ಯವಿಲ್ಲ. ಇವನ್ನು ಬಳಸುವ ಪ್ರತಿಯೊಬ್ಬರೂ ಒಂದೊಂದು ಮಾಧ್ಯಮ ಸಂಸ್ಥೆಯೇ. ಈ ಬಳಕೆದಾರರ ಮೇಲೆ ವೇದಿಕೆಗಳಿಗೆ ನಿಯಂತ್ರಣವಿರುವುದಿಲ್ಲ. ನಿರ್ದಿಷ್ಟ ವೇದಿಕೆಯಲ್ಲಿ ಏನನ್ನು ಪ್ರಕಟಿಸಬಾರದು ಎಂಬ ನೀತಿಯೊಂದು ಇರುತ್ತದೆ. ಅದನ್ನು ಮೀರಿದವನ್ನು ತೆಗೆದುಹಾಕಲಾಗುತ್ತದೆ.

ಈ ನೀತಿಯ ಚೌಕಟ್ಟೇನು ಎಂಬುದನ್ನು ವಿವರಿಸುವುದಕ್ಕೆ ಅಗತ್ಯವಿರುವ ಕಾನೂನು ನಮ್ಮಲ್ಲಿಲ್ಲ. ಇದು ಕೇವಲ ಟಿಕ್‌ ಟಾಕ್‌ನ ಸಮಸ್ಯೆಯಷ್ಟೇ ಅಲ್ಲ. ಫೇಸ್‌ಬುಕ್, ಯೂಟ್ಯೂಬ್, ಟ್ವಿಟರ್, ಇನ್‌ಸ್ಟಾಗ್ರಾಂ ಅಥವಾ ಈ ಬಗೆಯ ಎಲ್ಲಾ ವೇದಿಕೆಗಳ ವಿಚಾರದಲ್ಲಿಯೂ ಇದು ನಿಜವೇ. ಇಲ್ಲಿರುವ ಮತ್ತೊಂದು ವಿರೋಧಾಭಾಸವೆಂದರೆ ಈ ವೇದಿಕೆಗಳು ರೂಪಿಸುವ ಅಭಿವ್ಯಕ್ತಿಯ ಚೌಕಟ್ಟುಗಳು ಸಾಂವಿಧಾನಿಕವಾಗಿ ವ್ಯಕ್ತಿಗೆ ದತ್ತವಾಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲಂಘಿಸಕೂಡದು.

ಅಶ್ಲೀಲ, ವಿಕೃತ ಎಂಬಿತ್ಯಾದಿ ಪರಿಕಲ್ಪನೆಗಳನ್ನು ನಿರ್ದಿಷ್ಟ ಸಂದರ್ಭಕ್ಕೆ ಅನ್ವಯಿಸಲು ಸಾಧ್ಯವೇ ಹೊರತು ಅವುಗಳ ನಿಖರ ವ್ಯಾಖ್ಯೆಗಳನ್ನು ರೂಪಿಸಲು ಸಾಧ್ಯವಿಲ್ಲ. ‘ಟಿಕ್‌ ಟಾಕ್’ ನಿಷೇಧ ಕ್ರಮ ಈ ಎಲ್ಲಾ ಸೂಕ್ಷ್ಮಗಳನ್ನು ಪರಿಗಣಿಸಿದಂತೆ ಕಾಣಿಸುತ್ತಿಲ್ಲ. ಆಧುನಿಕ ತಂತ್ರಜ್ಞಾನ ಒಡ್ಡುತ್ತಿರುವ ಸವಾಲು ಎಷ್ಟು ಸಂಕೀರ್ಣವೆಂದರೆ, ನಿಷೇಧದಂಥ ಪರಿಕಲ್ಪನೆಗಳೇ ಇಲ್ಲಿ ಅಪ್ರಸ್ತುತ. ಆದ್ದರಿಂದ ತಂತ್ರಜ್ಞಾನದ ಸೂಕ್ಷ್ಮಗಳನ್ನು ಅರಿತ ನೀತಿ ನಿರೂಪಣೆ ಈ ಕಾಲದ ಅಗತ್ಯ. ಇದಕ್ಕೆ ನ್ಯಾಯದಾನ ವ್ಯವಸ್ಥೆ ಮತ್ತು ಆಡಳಿತ ವ್ಯವಸ್ಥೆಗಳೆರಡೂ ತಂತ್ರಜ್ಞಾನವನ್ನು ಅರ್ಥ ಮಾಡಿಕೊಳ್ಳುವ ದಿಕ್ಕಿನಲ್ಲಿ ಮುಂದುವರಿಯಬೇಕಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು