ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಬಾಲ್ಯವಿವಾಹ ಕೊನೆಗಾಣಿಸಲು ಬೇಕಾಗಿದೆ ದೃಢಸಂಕಲ್ಪ

Last Updated 9 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ಜಗತ್ತಿನಲ್ಲಿ ಆಗುತ್ತಿರುವ ಬಾಲ್ಯವಿವಾಹಗಳ ಪೈಕಿ ಶೇಕಡ 50ರಷ್ಟು ಭಾರತ ಸೇರಿದಂತೆ ಐದು ದೇಶಗಳಲ್ಲಿ ನಡೆಯುತ್ತಿವೆ ಎಂದು ಯುನಿಸೆಫ್ ವರದಿಯೊಂದು ಹೇಳಿದೆ. ಈ ವರದಿಯನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ. ಭಾರತ, ಬ್ರೆಜಿಲ್, ಇಥಿಯೋಪಿಯಾ, ಬಾಂಗ್ಲಾದೇಶ ಮತ್ತು ನೈಜೀರಿಯಾದಲ್ಲಿ ಬಾಲ್ಯವಿವಾಹಗಳು ಅತ್ಯಧಿಕ ಪ್ರಮಾಣದಲ್ಲಿ ಆಗುತ್ತಿವೆ ಎಂದು ಈ ವರದಿ ಬೆಟ್ಟು ಮಾಡಿ ತೋರಿಸಿದೆ.

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ‘ಕೋವಿಡ್ 19: ಬಾಲ್ಯವಿವಾಹ ವಿರುದ್ಧದ ಹೋರಾಟದ ಪ್ರಗತಿಗೆ ಅಪಾಯ’ ಎಂಬ ವಿಶ್ಲೇಷಣಾತ್ಮಕ ವರದಿಯನ್ನು ಪ್ರಕಟಿಸಿರುವ ಯುನಿಸೆಫ್, ‘ಕೋವಿಡ್ ಸಂಕಷ್ಟ ಕಾಲದಲ್ಲಿ ಬಾಲ್ಯವಿವಾಹಗಳ ಸಂಖ್ಯೆ ಇನ್ನಷ್ಟು ಏರಿದಂತಿದೆ’ ಎಂದೂ ಕಳವಳ ವ್ಯಕ್ತ ಪಡಿಸಿದೆ. ಜಗತ್ತಿನಾದ್ಯಂತ ಈಗ 65 ಕೋಟಿ ಬಾಲ್ಯವಿವಾಹಿತರು ಬದುಕು ಸಾಗಿಸುತ್ತಿದ್ದಾರೆ. ಈ ವರ್ಷದ ಕೊನೆಗೆ ಇನ್ನೂ ಒಂದು ಕೋಟಿ ಬಾಲ್ಯವಿವಾಹಿತರು ಈ ಪಟ್ಟಿಗೆ ಸೇರುವ ಸಾಧ್ಯತೆ ಇದೆ. ಇದನ್ನು ತಡೆಯಲು ಆಯಾ ದೇಶದ ಸರ್ಕಾರಗಳು ಸಮರೋಪಾದಿಯಲ್ಲಿ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದೂ ವರದಿ ಸೂಚಿಸಿರುವುದು ನಮ್ಮ ಕಣ್ಣು ತೆರೆಸಬೇಕಿದೆ.

ಜಗತ್ತಿನ ಪ್ರಬಲ ರಾಷ್ಟ್ರಗಳಲ್ಲಿ ಒಂದಾಗಬೇಕು ಎನ್ನುವ ಹೆಬ್ಬಯಕೆ ಹೊಂದಿರುವ ಭಾರತದ ಮಟ್ಟಿಗೆ ಈ ವರದಿಯು ಮುಜುಗರಕ್ಕೆ ಈಡುಮಾಡುವಂತಹುದು. ಅಭಿವೃದ್ಧಿಯ ನಾಗಾಲೋಟದಲ್ಲಿ ನಾವು ಅಮೆರಿಕ ಮತ್ತು ಯುರೋಪಿನ ಮುಂದುವರಿದ ದೇಶಗಳ ಜೊತೆಗೆ ಪೈಪೋಟಿ ನಡೆಸುವುದರ ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ ಬಾಲ್ಯವಿವಾಹದಂತಹ ಅನಿಷ್ಟ ಪದ್ಧತಿಗಳ ಪಟ್ಟಿಯಲ್ಲಿ ನಮ್ಮ ದೇಶದ ಹೆಸರು ಇಥಿಯೋಪಿಯಾ, ನೈಜೀರಿಯಾದಂತಹ ತೀರಾ ಹಿಂದುಳಿದ ದೇಶಗಳ ಜೊತೆಗೆ ಸೇರಿ ಕೊಂಡಿದೆ. ಭಾರತದಲ್ಲಿ ಪ್ರತಿವರ್ಷ ಸುಮಾರು 10 ಲಕ್ಷ ಬಾಲ್ಯ ವಿವಾಹಗಳು ನಡೆಯುತ್ತಿವೆ ಎಂದು ದೇಶಿ ಸಮೀಕ್ಷೆಯೊಂದು ತಿಳಿಸಿದೆ.

ಶೇ 27ರಷ್ಟು ಹೆಣ್ಣುಮಕ್ಕಳು 18 ವರ್ಷ ವಯಸ್ಸು ತುಂಬುವ ಮುನ್ನವೇ ಮದುವೆ ಆಗುತ್ತಿದ್ದಾರೆ. ಅದರಲ್ಲೂ ಶೇ 7ರಷ್ಟು ಹೆಣ್ಣುಮಕ್ಕಳು 15 ವರ್ಷ ತುಂಬುವ ಮುನ್ನವೇ ಮದುವೆಗೆ ಕೊರಳೊಡ್ಡುತ್ತಿದ್ದಾರೆ ಎಂಬ ವರದಿಗಳಿವೆ. ರಾಜ್ಯಗಳ ಪೈಕಿ ಶೇಕಡಾವಾರು ಲೆಕ್ಕ ಹಾಕಿದರೆ, ಜಾರ್ಖಂಡ್‌ನಲ್ಲಿ ಅತ್ಯಧಿಕ ಬಾಲ್ಯವಿವಾಹಗಳು ನಡೆಯುತ್ತಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಅತಿಕಡಿಮೆ ಸಂಖ್ಯೆಯಲ್ಲಿ ನಡೆಯುತ್ತಿವೆ. ಸಂಖ್ಯೆಯ ದೃಷ್ಟಿಯಲ್ಲಿ ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ ಮತ್ತು ಬಿಹಾರದಲ್ಲಿ ಬಾಲ್ಯವಿವಾಹ ದೊಡ್ಡ ಪಿಡುಗಿನಂತೆ ವ್ಯಾಪಿಸಿದೆ.

ಉತ್ತರಪ್ರದೇಶದಲ್ಲಂತೂ ಪ್ರತೀ ಐವರು ಹೆಣ್ಣುಮಕ್ಕಳಲ್ಲಿ ಒಬ್ಬಳು ಬಾಲ್ಯ ವಿವಾಹಕ್ಕೆ ಒಳಗಾಗುತ್ತಿದ್ದಾಳೆ ಎಂದು 2019ರಲ್ಲಿ ನಡೆದ ಭಾರತದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ತಿಳಿಸಿದೆ. ಈ ಪಿಡುಗನ್ನು ತಡೆಯಲು ರಾಜ್ಯ ಸರ್ಕಾರಗಳು ಕೈಗೊಂಡಿರುವ ಕ್ರಮಗಳು ಪರಿಣಾಮಕಾರಿಯಾಗಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಬಾಲ್ಯವಿವಾಹ ಎನ್ನುವುದು ನಮ್ಮ ಸಮಾಜವನ್ನು ಕಾಡುತ್ತಿರುವ ದೊಡ್ಡ ಪಿಡುಗು ಎನ್ನುವುದರ ಬಗ್ಗೆ ಅನುಮಾನವಿಲ್ಲ. ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುವ, ಮುಖ್ಯವಾಗಿ ಹೆಣ್ಣುಮಕ್ಕಳಲ್ಲಿ
ಅಪೌಷ್ಟಿಕತೆಯನ್ನು ಹೆಚ್ಚಿಸಿ ರೋಗ ರುಜಿನಗಳಿಗೆ ಸುಲಭ ತುತ್ತಾಗಿಸುವ ಇದನ್ನು ತಡೆಯಲು ಕೇಂದ್ರ ಸರ್ಕಾರವು ಗಂಭೀರ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇರುವ ಅನಕ್ಷರತೆ, ಬಡತನ, ರೂಢಿಗತ ಪದ್ಧತಿಗಳು ಮತ್ತು ಧಾರ್ಮಿಕ ಅಂಧಶ್ರದ್ಧೆಗಳು ಬಾಲ್ಯವಿವಾಹವನ್ನು ತಡೆಯುವಲ್ಲಿ ಅಡ್ಡಿಯಾಗಿವೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆಂದು ಪ್ರತ್ಯೇಕ ಇಲಾಖೆ ಇದೆಯಾದರೂ ಅದರ ಕಾರ್ಯಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನ ವಾಗುತ್ತಿಲ್ಲ. ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಕೆಲವು ಸ್ವಯಂಸೇವಾ ಸಂಸ್ಥೆಗಳಿಗೆ ಗಟ್ಟಿ ಬೆಂಬಲ ನೀಡುವಲ್ಲಿಯೂ ಸರ್ಕಾರಗಳು ವಿಫಲವಾಗಿವೆ. ಈ ಮಧ್ಯೆ, ಕೊರೊನಾ ಸಾಂಕ್ರಾಮಿಕದಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳ ಶಿಕ್ಷಣ ಮೊಟಕುಗೊಂಡಿದೆ. ಶಾಲೆಯನ್ನು ಅರ್ಧಕ್ಕೆ ಬಿಡುವ ಹೆಣ್ಣುಮಕ್ಕಳ ಸಂಖ್ಯೆಯೂ ಏರಿದೆ.

ಶಾಲೆ ಬಿಟ್ಟು ಮನೆಯಲ್ಲಿರುವ ಮಕ್ಕಳಿಗೆ ಆದಷ್ಟು ಬೇಗ ಮದುವೆ ಮಾಡಿ ಆ ಹೊಣೆಗಾರಿಕೆ ಮುಗಿಸಿಬಿಡುವ ಧಾವಂತದಲ್ಲಿ ಹೆತ್ತವರು ಮಕ್ಕಳ ವಯಸ್ಸು ನೋಡದೆ ಮದುವೆ ಮಾಡಿಬಿಡುತ್ತಾರೆ. ಬಾಲ್ಯವಿವಾಹವನ್ನು ತಡೆಯುವ ದಿಸೆಯಲ್ಲಿ ಗ್ರಾಮೀಣ ಜನರಲ್ಲಿ ತಿಳಿವಳಿಕೆ ಮೂಡಿಸಲು ಕೇಂದ್ರ ಸರ್ಕಾರವು ಸಮಗ್ರ ಕ್ರಿಯಾ ಯೋಜನೆಯೊಂದನ್ನು ರೂಪಿಸಬೇಕು. ರಾಜ್ಯಗಳ ಮೇಲೆ ಕಣ್ಗಾವಲು ಇರಿಸಿ ಅದರ ಪರಿಣಾಮಕಾರಿ ಜಾರಿಗೆ ಒತ್ತಡ ಹೇರಬೇಕು. ಮಕ್ಕಳ ಭವಿಷ್ಯ ಮಸುಕಾಗದಂತೆ ನೋಡಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT