ಮಂಗಳವಾರ, ಮಾರ್ಚ್ 9, 2021
32 °C

ಆರ್ಥಿಕತೆ ಚೇತರಿಕೆಗೆ ಇನ್ನಷ್ಟು ತುರ್ತು ಕ್ರಮ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಾರತೀಯ ರಿಸರ್ವ್‌ ಬ್ಯಾಂಕ್‌, ತನ್ನ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ಅಲ್ಪಾವಧಿ ಬಡ್ಡಿ (ರೆಪೊ) ದರವನ್ನು ಮತ್ತೊಮ್ಮೆ ತಗ್ಗಿಸಿ ಅಚ್ಚರಿ ಮೂಡಿಸಿದೆ. ಒಂಬತ್ತು ವರ್ಷಗಳಲ್ಲಿನಕನಿಷ್ಠ ಮಟ್ಟ (ಶೇ 5.40) ಇದಾಗಿರುವುದರಿಂದ, ಆರ್ಥಿಕತೆಯ ಪಾಲಿಗೆ ಹಿತಾನುಭವದ ಸ್ಪರ್ಶ ಸಿಗಲಿದೆ ಎಂಬ ಭರವಸೆ ಇದೆ. ಗೃಹ, ವಾಹನ ಖರೀದಿ, ವೈಯಕ್ತಿಕ ಮತ್ತು ಕಾರ್ಪೊರೇಟ್‌ ಸಾಲಗಳು ಅಗ್ಗವಾಗಲಿರುವುದು ಜನಸಾಮಾನ್ಯರು ಮತ್ತು ಉದ್ಯಮಿಗಳ ಪಾಲಿಗೆ ಶುಭ ಸುದ್ದಿ.ಶೇ 0.35ರಷ್ಟು ಬಡ್ಡಿ ದರ ಕಡಿತ ಮಾಡಿರುವುದು ಅನಿರೀಕ್ಷಿತ ನಡೆ. ಸಾಮಾನ್ಯವಾಗಿ ಶೇ 0.25ಅಥವಾ ಶೇ 0.50ರಷ್ಟು ಕಡಿತ ಮಾಡುವುದು ರೂಢಿ.  ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಬ್ಯಾಂಕ್‌ಗಳು ನೀಡುವ ಸಾಲದ ಪ್ರಮಾಣವನ್ನು ಶೇ 15ರಿಂದ ಶೇ 20ಕ್ಕೆ ಆರ್‌ಬಿಐ ಹೆಚ್ಚಿಸಿದೆ.ಇದರಿಂದ ಮೂಲಸೌಕರ್ಯ ವಲಯಕ್ಕೆ ನಗದು ಹರಿವು ಹೆಚ್ಚಲಿದೆ. ಆದರೆ, ಪ್ರಸಕ್ತ ಹಣಕಾಸು ವರ್ಷದ ಆರ್ಥಿಕ ವೃದ್ಧಿ ದರವನ್ನು (ಜಿಡಿಪಿ) ಶೇ 7ರಿಂದ ಶೇ 6.90ಕ್ಕೆ ಪರಿಷ್ಕರಿಸಿರುವುದು ಮಾತ್ರ ಮಂದಗತಿಯು ಇನ್ನೂ ಕೆಲ ಕಾಲ ಮುಂದುವರಿಯಲಿದೆ ಎಂಬುದರ ಸೂಚನೆ. ಈ ವರ್ಷದ ಫೆಬ್ರುವರಿಯಿಂದ ಈಚೆಗೆ ಶೇ 1.10ರಷ್ಟು ಬಡ್ಡಿ ದರ ಕಡಿತ ಮಾಡಲಾಗಿದೆ. ಆದರೆ, ಈ ಅವಧಿಯಲ್ಲಿ ವಾಣಿಜ್ಯ ಬ್ಯಾಂಕ್‌ಗಳು ಕೇವಲ
ಶೇ 0.29ರಷ್ಟು ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸಿವೆ. ಇದು ಆರ್‌ಬಿಐ ಕೊಡುಗೆಯ ಮೂರನೆಯ ಒಂದರಷ್ಟು ಸಹ ಆಗಿಲ್ಲದಿರುವುದು,ಗ್ರಾಹಕರಿಗೆ ನಿಜವಾಗಿ ಸಿಕ್ಕಿರುವುದು ಎಷ್ಟು ಎಂಬುದನ್ನು ತೋರುತ್ತದೆ. ಬಡ್ಡಿ ದರ ಕಡಿತದ ಪ್ರಯೋಜನವು ಗ್ರಾಹಕರಿಗೆ ಹೆಚ್ಚಿನ ಪ್ರಮಾಣದಲ್ಲಿ ವರ್ಗಾವಣೆ ಆಗಬೇಕಿದೆ. ಅದು ಸಾಧ್ಯವಾದರೆ ಹೂಡಿಕೆ ಚಟುವಟಿಕೆಗಳು ಗರಿಗೆದರಬಹುದು. ನಗದು ಹರಿವಿನ ಹೆಚ್ಚಳದ ಕಾರಣಕ್ಕೆ ಸರಕು ಮತ್ತು ಸೇವೆಗಳಿಗೆ ಬೇಡಿಕೆ ಹೆಚ್ಚಲಿದೆ. ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿನ ಬೇಡಿಕೆ ಕುಸಿತ, ಜಾಗತಿಕವಾಗಿ ಆರ್ಥಿಕತೆ ಕುಂಠಿತಗೊಂಡಿರುವುದು, ಅಮೆರಿಕ ಮತ್ತು ಚೀನಾ ನಡುವಣ ವಾಣಿಜ್ಯ ಸಮರ, ವಿಶ್ವದಾದ್ಯಂತ ಅಗ್ಗವಾಗುತ್ತಿರುವ ಬಡ್ಡಿ ದರದ ಹಿನ್ನೆಲೆಯಲ್ಲಿ ಸಾಲವನ್ನು ಅಗ್ಗವಾಗಿಸುವ ಆರ್‌ಬಿಐ ನಿರ್ಧಾರವು ದೇಶಿ ಆರ್ಥಿಕತೆಗೆ ಉತ್ತೇಜನ ನೀಡಲು ಬಹುಬಗೆಯಲ್ಲಿ ನೆರವಾಗಲಿದೆ. 

ಆರ್ಥಿಕ ಪ್ರಗತಿಯ ಕುಂಠಿತಕ್ಕೆ ಕಡಿವಾಣ ಹಾಕಲು ಈ ಹಣಕಾಸಿನ ಕ್ರಮಗಳಷ್ಟೇ ಸಾಲುವುದಿಲ್ಲ. ಕೇಂದ್ರೀಯ ಬ್ಯಾಂಕ್‌ನ ಇಂತಹ ಉದಾರ ಹಣಕಾಸು ನೀತಿಯಿಂದಷ್ಟೇ ಆರ್ಥಿಕತೆಯಲ್ಲಿ ಚೇತರಿಕೆ ಕಂಡುಬರಲಿದೆ ಎಂದು ನಿರೀಕ್ಷಿಸುವುದು ತಪ್ಪಾಗುತ್ತದೆ. ಸರ್ಕಾರದ ಕ್ರಮಗಳಿಗೆ ಪೂರಕವಾಗಿ ಆರ್‌ಬಿಐ ಸ್ಪಂದಿಸುತ್ತಿಲ್ಲ ಎನ್ನುವ ಆರೋಪ ಇತ್ತು. ಅದರಿಂದ ಕೇಂದ್ರೀಯ ಬ್ಯಾಂಕ್‌ ಈಗ ಹೊರಬಂದಿದೆ. ಆರ್‌ಬಿಐ ಕ್ರಮಗಳಿಗೆ ಪೂರಕವಾಗಿ ಸರ್ಕಾರವೂ ತನ್ನ ಪಾಲಿನ ಪಾತ್ರವನ್ನು ಹೆಚ್ಚು ಸಮರ್ಥವಾಗಿ ನಿಭಾಯಿಸಬೇಕಾಗಿದೆ. ಬ್ಯಾಂಕೇತರ ಹಣಕಾಸು ವಲಯದಲ್ಲಿನ ನಗದು ಬಿಕ್ಕಟ್ಟಿನ ಕಾರಣಕ್ಕೆ ಆರ್ಥಿಕ ಚೇತರಿಕೆಗೆ ಸರ್ಕಾರದ ಬೆಂಬಲದ ಅನಿವಾರ್ಯ ಹೆಚ್ಚಿದೆ. ಆರ್ಥಿಕ ಪ್ರಗತಿಯ ಪ್ರಮುಖ ಎಂಜಿನ್‌ ಆಗಿರುವ ಖಾಸಗಿ ಹೂಡಿಕೆಗೆ ಇನ್ನೂ ಹೆಚ್ಚಿನ ಉತ್ತೇಜನ ದೊರೆಯಬೇಕಾಗಿದೆ. ಮಂದಗತಿಯಲ್ಲಿ ಸಾಗಿರುವ ಆರ್ಥಿಕ ಚಟುವಟಿಕೆಗಳನ್ನು ಮೇಲೆತ್ತಲು ಸರ್ಕಾರವೂ ತನ್ನ ಪಾಲಿನ ಕೊಡುಗೆಗಳನ್ನು ಗರಿಷ್ಠ ಪ್ರಮಾಣದಲ್ಲಿ ನೀಡಬೇಕು. ವಿತ್ತೀಯ ಕೊರತೆಯ ಲೆಕ್ಕಾಚಾರ ಏರುಪೇರಾಗದಂತೆ ಉತ್ತೇಜನಾ ಕ್ರಮಗಳನ್ನು ಪ್ರಕಟಿಸಬೇಕು. ಉದ್ದಿಮೆ ವಲಯದಲ್ಲಿ ಆತ್ಮವಿಶ್ವಾಸ ಮೂಡಿಸುವುದು ಈಗಿನ ತುರ್ತು ಅಗತ್ಯ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು