ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಸಮಿತಿಗಳಿಗೆ ಧನಕರ್‌ ಆಪ್ತ ಸಿಬ್ಬಂದಿನೇಮಕ: ಅಧಿಕಪ್ರಸಂಗದ ನಿರ್ಧಾರ

Last Updated 12 ಮಾರ್ಚ್ 2023, 22:50 IST
ಅಕ್ಷರ ಗಾತ್ರ

ಉಪರಾಷ್ಟ್ರಪತಿ ಜಗದೀಪ್‌ ಧನಕರ್ ಅವರು ತಮ್ಮ ಆಪ್ತ ಸಿಬ್ಬಂದಿಯ ಪೈಕಿ ಎಂಟು ಮಂದಿಯನ್ನು ಸಂಸತ್ತಿನ ವಿವಿಧ ಸಮಿತಿಗಳಿಗೆ ಮತ್ತು ರಾಜ್ಯಸಭೆಯ ಅಧೀನದಲ್ಲಿ ಬರುವ ಇಲಾಖಾ ಸಂಬಂಧಿ ಸಮಿತಿಗಳಿಗೆ ನೇಮಕ ಮಾಡಿದ್ದಕ್ಕೆ ಮೌಲಿಕವಾದ ಯಾವ ಕಾರಣವೂ ಇಲ್ಲ. ರಾಜ್ಯಸಭೆಯ ಸದಸ್ಯರೇ ಇರುವ 20 ಸಮಿತಿಗಳಿವೆ. ಅದರಲ್ಲಿ 12 ಸ್ಥಾಯಿ ಸಮಿತಿಗಳು ಹಾಗೂ ಇಲಾಖೆಗಳಿಗೆ ಸಂಬಂಧಿಸಿದ ಎಂಟು ಸಮಿತಿಗಳು ಇವೆ. ರಾಜ್ಯಸಭಾ ಸಚಿವಾಲಯವು ಅಧಿಕಾರಿಗಳನ್ನು ಈ ಸಮಿತಿಗಳಿಗೆ ನಿಯೋಜಿಸಿ ಕಳೆದ ವಾರ ಆದೇಶ ಹೊರಡಿಸಿದೆ. ಇದು ತಕ್ಷಣದಿಂದಲೇ ಜಾರಿಗೆ ಬಂದಿದೆ‌ ಮತ್ತು ಮುಂದಿನ ಆದೇಶದವರೆಗೆ ಜಾರಿಯಲ್ಲಿ ಇರಲಿದೆ ಎಂದೂ ಹೇಳಿದೆ.

ಸಮಿತಿಗಳ ಕೆಲಸದಲ್ಲಿ ನೆರವಾಗುವುದು ಈ ಅಧಿಕಾರಿಗಳ ಹೊಣೆ. ಸಮಿತಿಗಳ ಕೆಲಸದಲ್ಲಿ ಗೋಪ್ಯ ಸ್ವರೂಪದ ಸಭೆಗಳೂ ಸೇರಿವೆ. ಈಗಾಗಲೇ ಇರುವ ಅಧಿಕಾರಿಗಳ ಜೊತೆಗೆ ಹೆಚ್ಚುವರಿಯಾಗಿ ನಿಯೋಜಿಸಲಾಗಿರುವ ಅಧಿಕಾರಿಗಳು ಸೇರಿಕೊಳ್ಳುತ್ತಾರೆ. ಆಯಾ ಸಮಿತಿಗಳಿಗೆ ಇವರು ನೆರವು ನೀಡಲಿದ್ದಾರೆ ಎಂದೂ ಹೇಳಲಾಗಿದೆ. ಸಮಿತಿಗಳಿಗೆ ಸಂಶೋಧನಾ ಮಾಹಿತಿಯನ್ನು ಒದಗಿಸಲು ಈ ಅಧಿಕಾರಿಗಳು ನೆರವಾಗಲಿದ್ದಾರೆ. ರಾಜ್ಯಸಭೆಯ ವಿವಿಧ ವಿಭಾಗಗಳಲ್ಲಿ ಈ ಅಧಿಕಾರಿಗಳು ಕೆಲಸ ಮಾಡಿದ್ದಾರೆ. ಹಾಗಾಗಿ ಅವರ ಅನುಭವದ ಲಾಭವೂ ಸಮಿತಿಗಳಿಗೆ ದೊರೆಯಲಿದೆ ಎಂದು ಹೇಳಲಾಗಿದೆ. ಆದರೆ, ಈ ನಿರ್ಧಾರಕ್ಕೆ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.

ಮಸೂದೆಗಳು ಸಂಸತ್ತಿನಲ್ಲಿ ಅಂಗೀಕಾರವಾಗುವ ಮುನ್ನ ಅವುಗಳನ್ನು ಪರಿಶೀಲನೆಗೆ ಒಳಪಡಿಸುವಂತಹ ಮಹತ್ವದ ಪಾತ್ರವನ್ನು ಸಮಿತಿಗಳು ವಹಿಸುತ್ತವೆ. ಈಗ ಇರುವ ವ್ಯಾಖ್ಯೆ ಮತ್ತು ಪದ್ಧತಿ ಪ್ರಕಾರ, ರಾಜ್ಯಸಭೆಯ ಸದಸ್ಯರು ಮಾತ್ರ ಈ ಸಮಿತಿಗಳ ಸದಸ್ಯರಾಗಬಹುದು. ರಾಜ್ಯಸಭೆಯ ಸಿಬ್ಬಂದಿಯು ಸದಸ್ಯರಿಗೆ ನೆರವಾಗಬಹುದು. ಲೋಕಸಭೆಯ ಸ್ಪೀಕರ್‌ ಮತ್ತು ರಾಜ್ಯಸಭೆಯ ಸಭಾಪತಿಯ ಆಪ್ತ ಸಿಬ್ಬಂದಿಯನ್ನು ಸಂಸತ್ ಸಚಿವಾಲಯದ ಸಿಬ್ಬಂದಿ ಎಂದು ಪರಿಗಣಿಸಲಾಗುವುದಿಲ್ಲ. ಹಾಗಾಗಿ ಈ ಸಮಿತಿಗಳಲ್ಲಿ ಅವರಿಗೆ ಯಾವ ಪಾತ್ರವೂ ಇರುವುದಿಲ್ಲ. ಹಾಗೆಯೇ ಇಂತಹ ನೇಮಕಗಳನ್ನು ಮಾಡುವ ಅಧಿಕಾರವನ್ನು ಸ್ಪೀಕರ್ ಅಥವಾ ಸಭಾಪತಿಗೆ ನೀಡುವ ಯಾವ ನಿಯಮವೂ ಇಲ್ಲ. ಅದಲ್ಲದೆ, ಹೆಚ್ಚಿನ ಸಿಬ್ಬಂದಿ ಬೇಕು ಎಂದು ಯಾವುದೇ ಸಮಿತಿಯು ಬೇಡಿಕೆಯನ್ನೂ ಮುಂದಿಟ್ಟಿಲ್ಲ. ಈವರೆಗೆ ರಾಜ್ಯಸಭೆಯ ಸಭಾಪತಿ ಆಗಿದ್ದ ಯಾರೂ ತಮ್ಮ ಆಪ್ತ ಸಿಬ್ಬಂದಿಯನ್ನು ಸಮಿತಿಗಳಿಗೆ ನಿಯೋಜಿಸಿರಲಿಲ್ಲ. ಇಂತಹ ಸಮಿತಿಗಳು ಕೆಲವೊಮ್ಮೆ ಅತ್ಯಂತ ಸೂಕ್ಷ್ಮ ವಿಚಾರಗಳ ಕುರಿತು ಸಮಾಲೋಚನೆ ನಡೆಸುತ್ತವೆ. ಸಭಾಪತಿಯ ಆಪ್ತ ಸಿಬ್ಬಂದಿಯು ಇಂತಹ ಸಮಿತಿಗಳಲ್ಲಿ ಇದ್ದರೆ, ಅದು ಗೋಪ್ಯತೆಯಲ್ಲಿ ರಾಜಿ ಮಾಡಿಕೊಂಡಂತೆ ಆಗುತ್ತದೆ. ಸಮಾಲೋಚನೆಯ ಆಧಾರದಲ್ಲಿ ಈ ನೇಮಕದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

‘ಸಂಸದರಿಗೆ ನೆರವಾಗುವುದಕ್ಕಾಗಿ ಜ್ಞಾನವನ್ನು ಹೊಂದಿರುವ ವ್ಯಕ್ತಿಗಳನ್ನು ನೇಮಿಸಲಾಗಿದೆ’ ಎಂದು ಧನಕರ್ ಅವರು ವಿವರಣೆ ಕೊಟ್ಟಿದ್ದಾರೆ. ಅವರಲ್ಲಿ ಕೆಲವರು ಐಎಎಸ್‌ ಮತ್ತು ಐಎಫ್‌ಎಸ್‌ ಅಧಿಕಾರಿಗಳೂ ಇದ್ದಾರೆ. ಸಮಿತಿಗಳಿಗೆ ಹೆಚ್ಚು ಕೆಲಸ ಮಾಡಲು ನೆರವಾಗುವ ಉದ್ದೇಶದಿಂದ ಈ ನೇಮಕ ಮಾಡಲಾಗಿದೆ ಎಂದು ಧನಕರ್ ಹೇಳಿದ್ದಾರೆ. ಸಮಾಲೋಚನೆ ನಡೆಸಿ ನೇಮಕ ಮಾಡಲಾಗಿದೆ ಎಂಬುದನ್ನು ವಿರೋಧ ಪಕ್ಷಗಳು ಅಲ್ಲಗಳೆದಿವೆ. ಸ್ಥಾಯಿ ಸಮಿತಿಗಳ ಸಂರಚನೆಯನ್ನೇ ಬದಲಾಯಿಸುವುದು ಧನಕರ್‌ ಅವರ ನಿರ್ಧಾರದ ಉದ್ದೇಶ ಇದ್ದಂತಿದೆ; ಇದು ಸಂಸತ್ತಿನ ಸ್ಥಾಪಿತ ಪ್ರಕ್ರಿಯೆಗಳ ಉಲ್ಲಂಘನೆ ಎಂದು ವಿರೋಧ ಪಕ್ಷಗಳು ಹೇಳಿವೆ.

ದೇಶದಲ್ಲಿ ಸಂಸದೀಯ ಸಮಿತಿಗಳ ವ್ಯವಸ್ಥೆಯನ್ನು ಸ್ಥಾಪಿಸಿದ್ದು ಮಹತ್ವದ್ದಾಗಿದೆ. ಸದನದಲ್ಲಿ ಮಂಡನೆಯಾದ ಹಲವು ಮಸೂದೆಗಳನ್ನು ಇಂತಹ ಸಮಿತಿಗಳ ಪರಿಶೀಲನೆಗೆ ಒಪ್ಪಿಸಲಾಗಿದೆ. ಮಸೂದೆಯೊಂದರ ಎಲ್ಲ ಆಯಾಮಗಳನ್ನು ಚರ್ಚಿಸಲು ಸದನಕ್ಕೆ ವಿವಿಧ ಕಾರಣಗಳಿಂದಾಗಿ ಸಮಯ ದೊರೆಯುವುದಿಲ್ಲ. ಹಾಗಾಗಿ, ಸಂಸತ್‌ ಸ್ಥಾಯಿ ಸಮಿತಿಗಳಿಗೆ ಮಸೂದೆಗಳನ್ನು ಒಪ್ಪಿಸುವುದು ಬಹಳ ಮುಖ್ಯ. ಸ್ಥಾಪಿತವಾದ ವ್ಯವಸ್ಥೆಯನ್ನು ಬದಲಾಯಿಸುವ ನಿರ್ಧಾರ ಕೈಗೊಳ್ಳುವಾಗ ಸಮಾಲೋಚನೆ ಮತ್ತು ಸಹಮತ ಅತ್ಯಗತ್ಯ. ಇಲ್ಲದೇ ಹೋದರೆ ಅದು ತಿರುಗುಬಾಣ ಆಗುವುದರಲ್ಲಿ ಅನುಮಾನ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT