ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ಯ ಅನುಭವಿಸಲು ಬಾಲ್ಯವಿವಾಹ ಅಡ್ಡಿ: ಸಿ.ಆರ್‌.ಕಾವ್ಯಶ್ರೀ

Last Updated 15 ನವೆಂಬರ್ 2019, 20:46 IST
ಅಕ್ಷರ ಗಾತ್ರ

* ಮಕ್ಕಳ ಸಹಾಯವಾಣಿಗೆ (1089) ಕರೆ ಮಾಡುವ ಧೈರ್ಯ ಹೇಗೆ ಬಂತು?
ಹೆಣ್ಣುಮಕ್ಕಳು ಎಂದರೆ ಪೋಷಕರು ‘ಸೆರಗಿನಲ್ಲಿ ಗಂಟು ಹಾಕಿಕೊಂಡ ಬೆಂಕಿಯ ಕೆಂಡ’ ಎಂದೇ ಭಾವಿಸಿದ್ದಾರೆ. ಸಣ್ಣ ವಯಸ್ಸಿಗೇ ಮದುವೆಯಾಗಿ ಆರೋಗ್ಯ ಸಮಸ್ಯೆಗಳಿಂದ ನರಳುವವರನ್ನು ಕಣ್ಣಾರೆ ಕಂಡಿದ್ದೇನೆ. ನನ್ನಕ್ಕನೂ ಚಿಕ್ಕ ವಯಸ್ಸಿಗೇ ಮದುವೆಯಾದಳು. ಈಗ ನಾನು ಮದುವೆಯಾದರೆ ನನ್ನಿಬ್ಬರು ತಂಗಿಯರೂ ಅದೇ ಪಾಡು ಅನುಭವಿಸಬೇಕಾಗುತ್ತದೆ, ಇದಕ್ಕೆಲ್ಲಾ ಶಿಕ್ಷಣವೇ ಪರಿಹಾರ ಎನಿಸಿತು. ಹೀಗಾಗಿ ಸಹಾಯವಾಣಿಗೆ ಕರೆ ಮಾಡುವ ಧೈರ್ಯ ಮಾಡಿದೆ.

* ಮದುವೆ ರದ್ದುಗೊಂಡಾಗ ತಂದೆ–ತಾಯಿ ಪ್ರತಿಕ್ರಿಯೆ ಹೇಗಿತ್ತು?
ಅಮ್ಮನ ಕಣ್ಣೀರು ನೋಡಲಾಗಲಿಲ್ಲ. ತಪ್ಪು ಮಾಡಿಬಿಟ್ಟೆನೇನೋ ಎನಿಸಿತು. ನನ್ನ ಶಿಕ್ಷಕರು ನೆರವಿಗೆ ಬಂದರು. ಮನೆಯವರಿಗೆ ತಿಳಿಹೇಳುವುದು ಕಷ್ಟವಾಗಲಿಲ್ಲ. ಆದರೆ, ಊರಿನ ಕೆಲವರ ಕೊಂಕು ಮಾತುಗಳಿಂದ ನೋವಾಯಿತು. ಯಾರನ್ನೋ ಪ್ರೀತಿ ಮಾಡಿ ಮದುವೆ ಬೇಡ ಎನ್ನುತ್ತಿದ್ದೇನೆ ಎಂದೆಲ್ಲಾ ಮಾತನಾಡಿದರು.

* ಬಾಲ್ಯವಿವಾಹಕ್ಕೆ ಕಾರಣ ಏನು?
ಬಡತನ, ಅಜ್ಞಾನವೇ ಕಾರಣ. ಮಕ್ಕಳು ಓದಬೇಕು ಎಂಬ ಆಸೆ ಎಲ್ಲಾ ತಂದೆ ತಾಯಿಗೂ ಇರುತ್ತದೆ. ಆದರೆ ಹೊರಗಿನವರು, ಮದುವೆ ಮಾಡಿ ಕೈತೊಳೆದುಕೊಳ್ಳುವಂತೆ ತಪ್ಪು ದಾರಿಗೆ ಎಳೆಯುತ್ತಾರೆ. ಹೆಣ್ಣುಮಕ್ಕಳು ತಮ್ಮ ಬಾಲ್ಯ ಅನುಭವಿಸಲು ಬಾಲ್ಯವಿವಾಹ ಅಡ್ಡಿಯಾಗಿದೆ.

* ಬಾಲ್ಯವಿವಾಹ ನಿವಾರಣೆಗೆ ಏನು ಮಾಡಬೇಕು?
ಹೆಣ್ಣುಮಕ್ಕಳೆಂದರೆ ಭಾರವಲ್ಲ ಎಂಬ ಬಗ್ಗೆ ಪೋಷಕರಲ್ಲಿ ಅರಿವು ಮೂಡಿಸಬೇಕು. ಪ್ರೌಢಶಾಲೆಯಲ್ಲಿ ಓದುತ್ತಿರುವ ಹೆಣ್ಣುಮಕ್ಕಳಿಗೆ ಭವಿಷ್ಯದ ಬಗ್ಗೆ ಅರಿವು ಮೂಡಿಸಬೇಕು. ಈ ಬಗ್ಗೆ ನಾನು ಚರ್ಚಾ ಸ್ಪರ್ಧೆಗಳಲ್ಲಿ ಮಾತನಾಡುತ್ತಿದ್ದೇನೆ.

* ನಿಮ್ಮ ನಡೆಗೆ ಮುಖ್ಯಮಂತ್ರಿಯೇ ಪ್ರತಿಕ್ರಿಯಿಸಿದ್ದಾರೆ, ಹೇಗನ್ನಿಸುತ್ತಿದೆ?
ಹೀಗಾಗುತ್ತದೆ ಎಂಬುದೆಲ್ಲಾ ಗೊತ್ತಿರಲಿಲ್ಲ. ನಾನು ಕಾಲೇಜಿಗೆ ತೆರಳಬೇಕು, ಹೆಚ್ಚು ಓದಬೇಕು ಎಂಬುದಷ್ಟೇ ನನ್ನ ಉದ್ದೇಶವಾಗಿತ್ತು. ಮುಖ್ಯಮಂತ್ರಿಯವರ ಪ್ರತಿಕ್ರಿಯೆಯಿಂದ ಬಹಳ ಸಂತೋಷವಾಗಿದೆ.

* ಮುಂದಿನ ಗುರಿಯ ಬಗ್ಗೆ ಹೇಳಿ.
ಕೆ.ಆರ್‌.ಪೇಟೆ ತಾಲ್ಲೂಕು ಚಟ್ಟೇನಹಳ್ಳಿ ನನ್ನೂರು. ವಾಣಿಜ್ಯ ವಿಭಾಗದಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದೇನೆ. ಅಕೌಂಟೆನ್ಸಿ ನನ್ನಿಷ್ಟದ ವಿಷಯ. ಲೆಕ್ಕ ಪರಿಶೋಧಕಿ ಆಗುವುದೇ ಗುರಿ. ತಂಗಿಯರೂ ಚೆನ್ನಾಗಿ ಓದುತ್ತಿದ್ದು ಅವರಿಗೆ ನೆರವಾಗಬೇಕು. ನಮಗಾಗಿ ಬೆಂಗಳೂರಿನಲ್ಲಿ ಕೂಲಿ ಮಾಡುತ್ತಿರುವ ಅಪ್ಪನನ್ನು ನೋಡಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT