ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.ಎಸ್‌. ನಾಗಭೂಷಣ ಸಂದರ್ಶನ: ‘ಗಾಂಧಿ, ಕೊಲ್ಲಲಾಗದಷ್ಟು ಸಹಜಸತ್ವದ ಮನುಷ್ಯ’

Last Updated 19 ಮೇ 2022, 2:14 IST
ಅಕ್ಷರ ಗಾತ್ರ

ಹಿರಿಯ ಸಮಾಜವಾದಿ ಲೇಖಕ-ವಿಮರ್ಶಕ ಡಿ.ಎಸ್‌. ನಾಗಭೂಷಣ ಅವರ ‘ಗಾಂಧಿ ಕಥನ’ಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟವಾದ ಹಿನ್ನೆಲೆಯಲ್ಲಿ ಅವರೊಂದಿಗೆ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ. ಪ್ರಕಟಗೊಂಡ ದಿನಾಂಕ– 02 ಜನವರಿ 2022

**

* ‘ಗಾಂಧಿ ಕಥನ’ಕ್ಕೆ ಪ್ರಶಸ್ತಿ- ನಿಮ್ಮ ಪ್ರಥಮ ಪ್ರತಿಕ್ರಿಯೆ?

ದೊಡ್ಡ ಪ್ರಶಸ್ತಿಯೊಂದು, ಅದೂ ಅನಿರೀಕ್ಷಿತವಾಗಿ ಬಂದಾಗ ಆಗುವ ಸಹಜ ಸಂತೋಷ ಆಯಿತು. ಜೊತೆಗೇ, ಇಂತಹ ಪ್ರಶಸ್ತಿ ನನ್ನಂಥವರಿಗೂ ಬರುವ ವಾತಾವರಣ ಇನ್ನೂ ಅಲ್ಪಸ್ವಲ್ಪವಾದರೂ ಉಳಿದಿದೆಯಲ್ಲ ಎಂಬ ಆಶ್ಚರ್ಯ, ಸಂತೋಷ ಎರಡೂ ಆಯಿತು.

*ಹಲವು + ದಾಖಲೆ ಮುದ್ರಣ ಕಂಡ ಈ ‘ಜನಪ್ರಿಯ’ ಪುಸ್ತಕಕ್ಕೆ ಪ್ರಶಸ್ತಿ ನಿರೀಕ್ಷಿಸಿದ್ದೀರಾ?
ಮೊದಲಾಗಿ ಈ ಪುಸ್ತಕ ಇಷ್ಟೊಂದು-22 ಮುದ್ರಣಗಳು-ಜನಮನ್ನಣೆ ಪಡೆಯವುದೆಂದು ನಾನು ಅಥವಾ ಇನ್ನ್ಯಾರೇ ಆಗಲಿ ನಿರೀಕ್ಷಿಸಿರಲಿಲ್ಲ. ಕೊರೊನಾ ಅಡ್ಡ ಬರದಿದ್ದರೆ ಇನ್ನಷ್ಟು ಮುದ್ರಣಗಳನ್ನು ಕಾಣುತ್ತಿತ್ತು ಎಂದೆನ್ನಿಸುವ ವೇಗದಲ್ಲಿ ಈ ಪುಸ್ತಕ ಓದುಗರನ್ನು ಮುಟ್ಟಿತು. ಇದಕ್ಕೆ ಮುಖ್ಯ ಕಾರಣ, ಈ ಪುಸ್ತಕವನ್ನು ನನ್ನಿಂದ ಬರೆಸಿ, ಲಾಭೋದ್ದೇಶವಿಲ್ಲದೆ ಪ್ರಕಟಿಸಿದ ಎಂ.ಸಿ. ನರೇಂದ್ರ ಅವರು ಮತ್ತು ಅವರಿಗೆ ಬೆನ್ನೆಲುಬಾಗಿ ನಿಂತ ಗಾಂಧಿ ಕಾರ್ಯಕರ್ತ ಜಿ.ಬಿ. ಶಿವರಾಜು ಅವರು. ನರೇಂದ್ರ ಈ ಹಿಂದೆ ರಾಜ್ಯದಲ್ಲಿ ಸಚಿವರಾಗಿದ್ದ ಸಜ್ಜನ ಮತ್ತು ಗಾಂಧಿವಾದಿ ಎನಿಸಿದ್ದ ಎಂ. ಚಂದ್ರಶೇಖರರ ಪುತ್ರರು. ವೈಯಕ್ತಿಕ ಶ್ರದ್ಧೆಯಿಂದ ಪುಸ್ತಕದ ಸಾವಿರಾರು ಪ್ರತಿಗಳನ್ನು ಜನರಿಗೆ ಮುಟ್ಟಿಸಲು ಮುಂದಾದ ಹುಲಕೋಟಿಯ ಗಾಂಧಿವಾದಿ ಡಿ.ಆರ್. ಪಾಟೀಲರನ್ನೂ ಇಲ್ಲಿ ನೆನೆಯಬೇಕು.

ಪುಸ್ತಕ ‘ಜನಪ್ರಿಯ’ವಾದೊಡನೆ ಅದು ಪ್ರಶಸ್ತಿಗೆ ಭಾಜನವಾಗಲಾರದು ಎಂಬುದು ಜನರ ಅಭಿರುಚಿಯನ್ನು ಕೆಳ ಅಂದಾಜು ಮಾಡುವ ಕೆಲ ‘ಪ್ರತಿಷ್ಠಿತ’ ಸಾಹಿತ್ಯ ವಲಯಗಳ ಪ್ರವೃತ್ತಿಯ ಪರಿಣಾಮ ಎಂದು ನನ್ನ ಭಾವನೆ.

* ಗಾಂಧಿಯನ್ನು ಅಪ್ರಸ್ತುತಗೊಳಿಸಿರುವ ಸದ್ಯದ ಭಾರತದಲ್ಲಿ ‘ಗಾಂಧಿ ಕಥನ’ಕ್ಕೆ ಪ್ರಶಸ್ತಿ ದೊರೆತಿರುವುದು ವಿರೋಧಾಭಾಸ ಅನ್ನಿಸುವುದಿಲ್ಲವೇ?
ಗಾಂಧಿ ಅಪ್ರಸ್ತುತಗೊಂಡಿದ್ದಾರೆ ಎನ್ನುವುದಾಗಲಿ, ಅವರನ್ನು ಅಪ್ರಸ್ತುತಗೊಳಿಸಲು ನಡೆಯುತ್ತಿರುವ ಪ್ರಯತ್ನಗಳು ಯಶಸ್ವಿಯಾಗುತ್ತಿವೆ ಎಂಬ ಭಾವನೆಯಾಗಲಿ ಸುಳ್ಳು ಎಂಬುದು ಈ ಕೃತಿಯ ಯಶಸ್ಸೇ ಹೇಳುತ್ತದೆ. ಯಾರೋ ಅದ್ಭುತವಾಗಿ ಹೇಳಿದ ಹಾಗೆ Gandhi is a man who cannot be killed. ನಮ್ಮ ಬದುಕು ಹೆಚ್ಚು ಆಧುನಿಕವಾಗುತ್ತಾ ಹೋದಂತೆ ಬದುಕಿನ ಸತ್ಯಾನ್ವೇಷನಣೆಯ ಪ್ರವೃತ್ತಿ ಕಡಿಮೆಯಾಗುತ್ತಾ ಹೋಗುತ್ತಿರುವುದರಿಂದ ಗಾಂಧಿಯವರ ಸತ್ಯಾನ್ವೇಷಣೆಯ ಬದುಕು ಮತ್ತು ಅದರಲ್ಲಿ ಅವರು ಕಂಡುಕೊಂಡ ಸತ್ಯಗಳು ಅಪ್ರಸ್ತುತವೆನಿಸುವುದು ಸಹಜ. ಆದರೆ ಅದು ಅನಿಸುವುದು ಅಷ್ಟೆ, ಸತ್ಯವಲ್ಲ ಎಂಬುದಕ್ಕೆ ಈ ಪುಸ್ತಕ ಕುರಿತ ಜನರ ಪ್ರೀತಿ ವಿಶ್ವಾಸ ಮತ್ತು ಇದಕ್ಕೆ ಈ ಪ್ರಶಸ್ತಿಯೇ ಸಾಕ್ಷಿ.

* ‘ಗಾಂಧಿ ಹತ್ಯೆ’ ಒಂದು ಸಾಮಾಜಿಕ -ರಾಜಕೀಯ-ಸಾಂಸ್ಕೃತಿಕ ‘ಪ್ರತಿಕ್ರಿಯೆ’ ಆಗಿತ್ತು. ಅದೊಂದು ‘ರೂಪಕ’ ಕೂಡ. ಅದನ್ನು ಬಹಿರಂಗವಾಗಿಯೇ ಸಮರ್ಥಿಸುವ-ಬೆಂಬಲಿಸುವ ‘ವ್ಯವಸ್ಥೆ’ಯ ಭಾಗವಾಗಿರುವ ಅಕಾಡೆಮಿಯ ಈ ನಡೆಯನ್ನು ಹೇಗೆ ವ್ಯಾಖ್ಯಾನಿಸಬಹುದು?

‘ವ್ಯವಸ್ಥೆ’ ಎಂದರೆ ಸರ್ಕಾರ ಎಂಬ ಒಂದು ಮುಖರಹಿತ ವಿದ್ಯಮಾನ ಎಂದು ಅರ್ಥೈಸಿಕೊಂಡರೆ ಇಂತಹ ಪ್ರಶ್ನೆ ಮೂಡುತ್ತದೆ. ಇದಕ್ಕೆ ಕಾರಣ ನಮ್ಮ ಗ್ರಹಿಕೆಯನ್ನು ಬೇರೆ ಯಾವ ಸಂವೇದನೆಗಳಿಗೂ ಅವಕಾಶವಿಲ್ಲದ ರೀತಿಯಲ್ಲಿ ರಾಜಕೀಯಿಕರಣಗೊಳಿಸಿಕೊಂಡಿರುವುದು. ಆದರೆ ಈ ವ್ಯವಸ್ಥೆಯಲ್ಲಿ ಮುಖಸಹಿತರಾದ ಜನರೂ ಇರುತ್ತಾರೆ ಎಂಬುದನ್ನು ಗುರುತಿಸಬಲ್ಲರಾದರೆ ಅರ್ಧ ಸತ್ಯಗಳು ಮಾತ್ರ ಆಗಿರುವ ತುಂಬಾ ಸಾರಾಸಗಟಾದ ತೀರ್ಮಾನಗಳು ರೂಪುಗೊಳ್ಳುತ್ತವೆ. ವ್ಯವಸ್ಥೆ ಎಂದರೆ Work on Progress ಎಂಬ ಚಲನಶೀಲ ಅರ್ಥದಲ್ಲಿ ಗ್ರಹಿಸಬಲ್ಲಿರಾದರೆ ಈ work ಹಲವು ರೀತಿಯಲ್ಲಿ ನಡೆಯುತ್ತಿರುತ್ತದೆ ಎಂಬುದು ಅರಿವಾಗುವುದು ಮತ್ತು ನೀವು ಹೇಳುವ ಅಕಾಡೆಮಿಯ ನಡೆ ಇಂತಹ ಒಂದು work ಆಗಿರಬಹುದು ಎಂದು ಗೊತ್ತಾಗಬಹುದು. ನೀವು ನನ್ನ ಪುಸ್ತಕದ ‘ಹೇ ರಾಮ್!’ ಎಂಬ ಕೊನೆಯ ಹಿಂದಿನ ಅಧ್ಯಾಯವನ್ನು ಓದಿದರೆ ಈ ವಿಷಯದಲ್ಲಿ ನನ್ನ ನಿಲುವು ಇನ್ನಷ್ಟು ಸ್ಪಷ್ಟವಾಗಬಹುದು.

*ವಾಸ್ತವವಾಗಿ ನೀವು ಗಾಂಧಿ ಪ್ರಿಯರೇನಲ್ಲ. ಲೋಹಿಯಾ-ಸಮಾಜವಾದಿಯಾಗಿರುವ ನೀವು ಗಾಂಧಿಯ ಬೆನ್ನುಹತ್ತಿ ‘ಕಥನ’ ರೂಪಿಸುವಂತೆ ಆದದ್ದು ಹೇಗೆ? ಏಕೆ?
ಹೌದು, ನಾನು ಸಮಾಜವಾದಿ ನಂಬಿಕೆಯನ್ನು, ನಿರ್ದಿಷ್ಟವಾಗಿ ಲೋಹಿಯಾ ವಿಚಾರಧಾರೆಗೆ ಒಲಿದು ನನ್ನ ರಾಜಕೀಯ ಅರಿವನ್ನು ಬೆಳೆಸಿಕೊಂಡವನು. ಹಾಗೆ ನೋಡಿದರೆ ಗಾಂಧಿಯವರೇ ತಮ್ಮನ್ನು ‘ಹುಟ್ಟು ಸಮಾಜವಾದಿ’ ಎಂದು ಕರೆದುಕೊಂಡು ಇತರರನ್ನು ‘ಕಲಿತ ಸಮಾಜವಾದಿ’ಗಳೆಂದು ಛೇಡಿಸುತ್ತಿದ್ದುದುಂಟು!

ಹಾಗಾಗಿ ಸಮಾಜವಾದಿಯಾಗಿ ಗಾಂಧಿಯ ಬಗ್ಗೆ ಆಸಕ್ತಿ ವಹಿಸುವುದು ಅಸಹಜವೆಂದೇನೂ ಎನಿಸಲಾರದು. ಗಾಂಧಿ ಹೇಳಿದ ‘ಕಲಿತ ಸಮಾಜವಾದ’ದಲ್ಲಿ ಕಾಲಾನುಕಾಲದಲ್ಲಿ ಕಲಿತ ಪಾಠಗಳ ಪರಿಣಾಮವಾಗಿ ಕೆಲ ಭಾಗಳನ್ನು ಬಿಡಬೇಕಾಗಿ ಬಂದಾಗ ನಾನು ಗಾಂಧಿಗೆ ಹೆಚ್ಚು ಹತ್ತಿರವಾದೆ ಎನಿಸುತ್ತದೆ.

ಸಮಾಜವಾದ, ನಿರ್ದಿಷ್ಟವಾಗಿ ಲೋಹಿಯಾ ಸಮಾಜವಾದ ಎಷ್ಟೆಲ್ಲ ನೆಲೆಗಳಲ್ಲಿ ಸಮಾನತೆಯನ್ನು ಅರ್ಥೈಸುವ, ಅದನ್ನು ಸಾಧಿಸುವ ಎಷ್ಟೆಲ್ಲ ಸಂವೇದನಾಶೀಲ ರಾಜಕೀಯ ರಚನೆಯನ್ನು ರೂಪಿಸಿದ್ದರೂ ಆ ಚಳವಳಿ ದಾರಿ ತಪ್ಪಿ ವಿಘಟಿತವಾಗುವ ಹಂತ ತಲುಪಿತು. ಈ ಕುರಿತು ಯೋಚಿಸಿದಾಗ ನಮ್ಮ ಕಾಲದ ಸಮಾಜವಾದದ ಅಡಿಪಾಯವೆನ್ನಿಸುವ ‘ಅನ್ಯಾಯವನ್ನು ಕಂಡಾಗ ನಮ್ಮ ಒಂದು ಕಣ್ಣಿನಲ್ಲಿ ಅನ್ಯಾಯಕ್ಕೊಳಗಾದವರ ಬಗ್ಗೆ ಕರುಣೆಯ ಕಣ್ಣೀರೂ ಇನ್ನೊಂದು ಕಣ್ಣಿನಲ್ಲಿ ಅನ್ಯಾಯಗೈದವರ ವಿರುದ್ಧ ಕ್ರೋಧದ ಕಿಡಿಯೂ ಉತ್ಪತ್ತಿಯಾಗಬೇಕು’ ಎಂಬ ಅರ್ಥದ ಲೋಹಿಯಾ ಅವರ ಮಾತು ಕೇಳಲು ಕಾವ್ಯಮಯ, ಸ್ಫೂರ್ತಿದಾಯಕ ಎನಿಸಿದರೂ ಅದು ಆಂತರಿಕವಾಗಿ ದೋಷಪೂರ್ಣ ಹಾಗೂ ದಾರಿ ತಪ್ಪಿಸುತ್ತದೆ ಎನಿಸತೊಡಗಿತು.

ಒಬ್ಬ ಮನುಷ್ಯನಲ್ಲಿ ಎರಡು ಪರಸ್ಪರ ವಿರುದ್ಧ ಭಾವಗಳು ಒಟ್ಟಿಗೇ ಕ್ರಿಯಾಶೀಲವಾಗಿರಲಾರವು; ಹಾಗಿದ್ದಲ್ಲಿ ಆ ಸ್ಥಿತಿ ಅನ್ಯಾಯವೆಂದು ಹೇಳಲಾಗುವ ಕ್ರಿಯೆಯನ್ನು ಸ್ಪಷ್ಟ ಕಣ್ಣುಗಳಲ್ಲಿ ನೋಡಿರಲಾರದು ಎನಿಸತೊಡಗಿತು. ಹಾಗಾಗಿ ಸಮಾಜವಾದಿ ಚಳವಳಿಯಲ್ಲಿ ಮನುಷ್ಯನಿಗೆ ಸುಲಭ ಭಾವವೆನಿಸುವ ಕ್ರೋಧದ ಅಂಶವೇ ಹೆಚ್ಚಾಯಿತೇನೋ ಎಂದು ನನಗನ್ನಿಸಿದೆ. ಅದು ಸಮಾಜವಾದದ ಕೇಂದ್ರವೆನಿಸಿದ ಸಾಮಾಜಿಕ ನ್ಯಾಯ ಎನ್ನುವುದನ್ನು ಕೇವಲ ಜಾತಿಗಳ ತಲೆ ಎಣಿಕೆ ಮಟ್ಟಕ್ಕೆ ಇಳಿಸಿ, ಸಮಾಜವಾದವೆಂದರೆ ಸಾಮಾನ್ಯ ಜನರ ಕಣ್ಣಿನಲ್ಲಿ ಇಂತಹ ಸಾಮಾಜಿಕ ನ್ಯಾಯ ಕಾರ್ಯಕ್ರಮವೆಂಬಂತಾಗಿರುವ ದುರಂತವನ್ನು ನಾವು ನೋಡುತ್ತಿರುವುದು.

ಇದು ಹೀಗಾಗಲು ಮುಖ್ಯ ಕಾರಣವೆಂದರೆ ಸಮಾಜವಾದವೂ ಸೇರಿದಂತೆ ಇಡೀ ಎಡಪಂಥ ಇಡೀ ಮಾನವ ಇತಿಹಾಸವನ್ನು ಯುದ್ಧಗಳ ಅಥವಾ ಘರ್ಷಣೆಗಳ ಚರಿತ್ರೆಯನ್ನಾಗಿ ನೋಡಿ ತಮ್ಮ ರಾಜಕೀಯ ಮೀಮಾಂಸೆಗಳನ್ನು ರೂಪಿಸಿಕೊಂಡಿರುವುದು. ಮುಖ್ಯವಾಗಿ ಕೈಗಾರಿಕಾ ಕ್ರಾಂತಿ ಯೂರೋಪ್‌ನ ಸಾಮಾಜಿಕ ವ್ಯವಸ್ಥೆಯಲ್ಲಿ ಉಂಟು ಮಾಡಿದ ಪಲ್ಲಟಗಳು ಮತ್ತು ತಲ್ಲಣಗಳ ಅನುಭವಗಳ ಹಿನ್ನೆಲೆಯಲ್ಲಿ ರೂಪಿಸಿಕೊಂಡ ವರ್ಗ ವ್ಯವಸ್ಥೆ, ಶೋಷಣೆ, ಅಸಮಾನತೆ, ವರ್ಗ ಹೋರಾಟ ಮುಂತಾದ ಪರಿಕಲ್ಪನೆಗಳು ನಮ್ಮ ರಾಜಕೀಯ ಸಂಕಥನಗಳನ್ನು ಈಗಲೂ ಆಳುತ್ತಿರುವುದರಿಂದ ಇವು ಹಕ್ಕುಗಳ ಸಂಕಥನಗಳಾಗಿ ಕರ್ತವ್ಯಗಳ ಸುಳಿವೇ ಇಲ್ಲದೆ ಸಾಮಾಜಿಕ ಚಲನೆಯನ್ನುಂಟು ಮಾಡುವ ಹೋರಾಟಗಳು ಕೇವಲ ಹಕ್ಕು ಪ್ರತಿಪಾದನೆಯ ಏಕಮುಖಿ ಕ್ರಿಯೆಗಳಾಗಿವೆ.

ಆದರೆ ಗಾಂಧಿ ಮಾನವ ಇತಿಹಾಸವನ್ನು ಅಲ್ಪಕಾಲಿಕ ಘರ್ಷಣೆಗಳು ಕಾಣುವ ದೀರ್ಘ ಕಾಲಾವಧಿಗಳ ಶಾಂತಿ-ಸೌಹಾರ್ದದ ಬಾಳುವೆಗಳ ಚರಿತ್ರೆಯನ್ನಾಗಿ ಕಾಣುತ್ತಾರೆ. ಹಾಗಾಗಿಯೇ ಅಲ್ಲಿ ಹಕ್ಕು ಮತ್ತು ಕರ್ತವ್ಯಗಳು ಎಂಬ ಪಾರಿಭಾಷಿಕಗಳನ್ನು ಬೇಡದ ಧರ್ಮ ಕ್ರಿಯಾಶೀಲವಾಗಿದೆ. ಅಷ್ಟೇ ಅಲ್ಲ, ಧರ್ಮವನ್ನು ಅದರ ವಿಂಗಡಿಸುವ ಗುಣದಿಂದ ಪಾರು ಮಾಡಲು ಆವರೆಗೆ ಪ್ರಚಲಿತವಿದ್ದ ಧರ್ಮವೇ ಸತ್ಯ ಎಂಬುದನ್ನು ಸತ್ಯವೇ ಧರ್ಮವೆಂದು ಮಾರ್ಪಡಿಸಿ ಮಾನವ ಇತಿಹಾಸದ ಚಲನೆಗೆ ಹೊಸದೊಂದು ದಿಕ್ಕು ತೋರಿಸಿದರು. ಅಲ್ಲಿ, ಆಧುನಿಕ ಕಾಲವೆಂದು ಕೈಗಾರಿಕಾ ಕ್ರಾಂತಿಯ ಚರಿತ್ರೆ ಘರ್ಷಣೆಯನ್ನೇ ತನ್ನ ಚೈತನ್ಯವನ್ನಾಗಿ ಮಾಡಿಕೊಂಡಿದೆ ಎಂದು ಗ್ರಹಿಸಿದ ಗಾಂಧಿ ಈ ಕ್ರಾಂತಿ ಹುಟ್ಟುಹಾಕಿದ ನಾಗರೀಕತೆಯನ್ನು ಹಿಂಸೆಯ ನಾಗರೀಕತೆಯನ್ನಾಗಿ ಮುನ್ನೋಡಿದರು. ಅದರ ವಿವಿಧ ಅವತಾರಗಳನ್ನು ನಾವಿಂದು ‘ಜಾಗತೀಕರಣ’ ಎಂಬ ಹೆಸರಿನಡಿ ನೋಡುತ್ತಿದ್ದೇವೆ. ಹಾಗಾಗಿಯೇ ಇವುಗಳಿಗೆ ಗಾಂಧಿ ಪ್ರತಿಪಾದಿಸಿದ ಅಹಿಂಸೆ, ಸತ್ಯಾಗ್ರಹ ಹಾಗೂ ಮಿತಿ ಇರುವ ಸಮತ್ವದ ಜೀವನವೇ ನಿಜವಾದ ಪರಿಹಾರಗಳೆಂದು ನನಗನ್ನಿಸಿದ್ದರಿಂದ ನಾನು ಈಗ ಹೆಚ್ಚು ಗಾಂಧಿ ಸಮೀಪಕ್ಕೆ ಬಂದೆ ಎನಿಸುತ್ತದೆ. ಆದರೆ ಗಾಂಧಿಯನ್ನು ಹೀಗೆ ಆಧುನಿಕ ನಾಗರೀಕತೆಯ ವಿಮರ್ಶಕನನ್ನಾಗಿ ನೋಡುವ ಕಣ್ಣುಗಳನ್ನು ಸ್ವತಃ ಲೋಹಿಯಾ ಅವರೇ ನೀಡಿದ್ದರಿಂದ ನಾನೇನೂ ಲೋಹಿಯಾರಿಂದ ದೂರವಾಗಿದ್ದೇನೆ ಎಂದೂ ಹೇಳಲಾಗದು.

*ಗಾಂಧಿ ಬಹುತ್ವದ ಭಾರತ + ಸಹಿಷ್ಣುತೆ- ಸಮನ್ವಯ-ಸಹಬಾಳ್ವೆಯ ‘ಪ್ರತೀಕ’. ಅದು ಕೇವಲ ಸಾಂಕೇತಿಕವಾಗಿ ಮಾತ್ರ ‘ಜೀವಂತ’ವಾಗಿದೆ ಎಂದು ಅನ್ನಿಸುವುದಿಲ್ಲವೇ?

ಅವನತಿಯೂ ಒಂದು ಪ್ರಕ್ರಿಯೆ. ಅದರೊಳಗೇ ಉನ್ನತಿಯ ಬೀಜಗಳು ಅಡಗಿರುತ್ತವೆ ಎಂದು ನಂಬಿದವನು ನಾನು.

–ಕಲೆ: ಎಂ.ಎಸ್. ಮೂರ್ತಿ
–ಕಲೆ: ಎಂ.ಎಸ್. ಮೂರ್ತಿ

*ಗಾಂಧಿ ಮಾದರಿಯ ಹೋರಾಟ ಪ್ರಭುತ್ವವನ್ನು ಮಣಿಸಿದ ಇತ್ತೀಚಿನ ದಿನಗಳ ಅಪರೂಪದ ಅಪೂರ್ವ ಬೆಳವಣಿಗೆಯನ್ನು ಹೇಗೆ ಅರ್ಥೈಸಿಕೊಳ್ಳಬೇಕು?

ನೀವು ಇತ್ತೀಚಿನ ಕೃಷಿ ಕಾಯ್ದೆ ವಿರುದ್ಧದ ರೈತ ಹೋರಾಟದ ಬಗ್ಗೆ ಹೇಳುತ್ತಿರುವಿರಾದರೆ, ಇಂದಿನ ಕಾಲದ ಗಾಂಧಿ ಹೋರಾಟದ ಮಾರ್ಗಕ್ಕೆ ಅತ್ಯುತ್ತಮ ಮಾದರಿ ಎನ್ನಬಹುದು. ಇದರ ಪರಿಣಾಮಗಳು ಇನ್ನಿತರ ಹಲವು ವಲಯಗಳಲ್ಲಿ ಇದು ಪ್ರತಿಧ್ವನಿಸಬಹುದು.

*ಗಾಂಧಿಯ ಮಿತಿ-ಶಕ್ತಿಗಳೆರಡನ್ನೂ ಕಂಡರಿಸುವಾಗ ‘ಭಂಜಿತ’ ಗಾಂಧಿ ಇದ್ದದ್ದು ನಿಮಗೆ ‘ಸುಲಭ’ವಾಯಿತೇ? ಅದೇ ನಿಮ್ಮ ಬರವಣಿಗೆಯ ಸ್ವರೂಪ ನಿರ್ಧರಿಸಿತೇ?

ಮೊದಲೇ ಹೇಳಿದ ಹಾಗೆ ವಿಗ್ರಹ ಭಂಜನೆಯ ಲೋಹಿಯಾ ನೋಟವೇ ನಾನು ಗಾಂಧಿಯನ್ನು ನೋಡುವ ಕ್ರಮವನ್ನು ಕಲಿಸಿದ್ದರಿಂದಾಗಿ ಅದೇ ಇಡಿಯಾಗಿ ಅಲ್ಲ ಎನ್ನಬಹುದು. ಏಕೆಂದರೆ ಲೋಹಿಯಾ ಅವರ ಗಾಂಧಿ ವಿಮರ್ಶೆ ಸಮಾಜವಾದಿ ಪರಂಪರೆ ಇತಿಹಾಸವನ್ನು ಮತ್ತು ಆಧುನಿಕತೆಯನ್ನು ನೋಡುವ ಕ್ರಮದ ದೋಷಗಳಿಂದಾಗಿ ಕೆಲವು ಮಿತಿಗಳಿಗೆ ಒಳಗಾಗಿದೆ. ಉದಾ: ಅಹಿಂಸೆ, ರಾಷ್ಟ್ರ, ಪ್ರಜಾಪ್ರಭುತ್ವ ಅಥವಾ ತಂತ್ರಜ್ಞಾನ ಕುರಿತಂತೆ ಲೋಹಿಯಾರ ಭಿನ್ನಾಭಿಪ್ರಾಯಗಳ ಹರಹು.

*ಅಂಬೇಡ್ಕರ್‌ ಕಣ್ಣಲ್ಲಿ ಗಾಂಧಿಯನ್ನು ಎದುರಾಗುವ ‘ಮಾರ್ಗ’ವೊಂದಿದೆ. ಆ ಕುರಿತ ನಿಮ್ಮ ಮೌನ/ಕಡೆಗಣನೆಯನ್ನು ಹೇಗೆ ನೋಡಬೇಕು?

ನಾನು ಈ ಪುಸ್ತಕವನ್ನು ಬರೆಯಲು ತೊಡಗಿದ ಕ್ರಮವನ್ನು ನೀವು ಗ್ರಹಿಸಿದರೆ ಇಂತಹ ಪ್ರಶ್ನೆಗಳು ಅಸಂಗತವಾದಾವು. ಹಾಗೆ ನೋಡಿದರೆ ನಾನು ಈ ಪುಸ್ತಕವನ್ನು ಯಾವ ಅಕ್ಕಪಕ್ಕವನ್ನೂ ನೋಡದೆ ಗಾಂಧಿಯನ್ನು ನೆಟ್ಟಗೆ ದಿಟ್ಟಿಸಿ ನೋಡಿ ಬರೆಯುತ್ತಾ ಹೋಗಿದ್ದೇನೆಯೇ ಹೊರತು ಪ್ರಚಲಿತ ವಿವಾದಗಳ ನೆಲೆಯಲ್ಲಿ ಅವರ ಬದುಕನ್ನು ವಿಮರ್ಶಿಸುವ ಪ್ರಯತ್ನ ಮಾಡಿಲ್ಲ. ಆದರೆ ಗಾಂಧಿ-ಅಂಬೇಡ್ಕರ್ ಸಮೀಕರಣದ ಸುತ್ತಮುತ್ತ ಕನ್ನಡದಲ್ಲಿ ಈವರೆಗೆ ಕಾಣಿಸಿಕೊಂಡಿಲ್ಲದಷ್ಟು ವಿಸ್ತಾರದ ವಿವರಗಳನ್ನು ಈ ಪುಸ್ತಕದಲ್ಲಿ ನೋಡಬಹುದು. ಅವುಗಳನ್ನು ಗಮನಿಸಿ ಈ ಸಮೀಕರಣದ ಸ್ವರೂಪವನ್ನು ಕುರಿತು ನಿಮ್ಮ ತೀರ್ಮಾನಕ್ಕೆ ಬರಲು ಅವಕಾಶವಿದೆ.

*ಹಿಂಸೆ-ಅಹಿಂಸೆಯ ಮುಖಾಮುಖಿಯಲ್ಲಿ ಹಿಂಸೆಯ ಸಮರ್ಥನೆ-ಸಹಜವಾಗುತ್ತಿರುವ ಸಾಮಾಜಿಕ ಸ್ಥಿತಿ ಮುಂದುವರೆಯಬಹುದೇ? ನಾಳೆ ಗಾಂಧಿ ಉಳಿಯಬಹುದೇ?

ಗಾಂಧಿ ನಂಬಿದಂತೆ ಸಮುದ್ರ ಪರ್ವತಗಳನ್ನು ಜೊತೆಗಿಟ್ಟಿರುವ ಶಕ್ತಿಯೇ ಅಹಿಂಸೆ. ಅಹಿಂಸೆ ಪ್ರಕೃತಿಯಲ್ಲಿ, ಅದರ ವಿಕಾಸದಲ್ಲಿ ಅಂತಸ್ಥವಾಗಿದೆ. ಹಿಂಸೆ ಎಂಬುದು ಎಂದೂ ಸಹಜವಾಗದು. ಆರಂಭದಲ್ಲೇ ಹೇಳಿದಂತೆ ಕೊಲ್ಲಲಾಗದಷ್ಟು ಸಹಜಸತ್ವದ ಮನುಷ್ಯ ಗಾಂಧಿ. ಕೊಲ್ಲುವ ಪ್ರಯತ್ನ ಮಾಡುವವರು ಮಾಡಬಹುದು.

ಗಾಂಧಿ ಅಂದರೆ ‘ಸತ್ಯ-ಪ್ರಾಮಾಣಿಕತೆ-ಅಹಿಂಸೆ’. ಕಾರ್ಪೋರಿಟೀಕರಣ- ಖಾಸಗೀಕರಣಗೊಳ್ಳುತ್ತಿರುವ ಭಾರತದಲ್ಲಿ ಅವುಗಳ ಸ್ಥಿತಿ-ಪರಿಸ್ಥಿತಿಯ ಬಗೆಗಿನ ಆತಂಕ ಬರೀ ಲಿಬರಲ್‌ಗಳ ಆತಂಕವೇ? ಭಾರತ ಎದುರಿಸುತ್ತಿರುವ/ ಬೇಕಾಗಿರುವ ಸವಾಲೇ?

ಸತ್ಯ-ಪ್ರಾಮಾಣಿಕತೆ-ಅಹಿಂಸೆಗಳೆಂಬ ಮೌಲ್ಯಗಳಿಗೆ ಧಕ್ಕೆಯೇನೂ ಈ ಖಾಸಗೀಕರಣ-ಕಾರ್ಪೋರೇಟೀಕರಣಗಳು ಆರಂಭವಾದ ನಂತರ ಶುರುವಾದುದಲ್ಲ. ಧಕ್ಕೆಯ ರೂಪವೈವಿಧ್ಯಗಳು ಹೆಚ್ಚಿವೆಯಷ್ಟೆ. ಆದ್ದರಿಂದ ಲಿಬರಲ್-ಪಬರಲ್‌ಗಳೆಂಬ ಇಂದಿನ ಪಾರಿಭಾಷಿಕ ಸವಾಲುಗಳ ಮೂಲಗಳಿಗಿಂತ ಈ ಎರಡರ ಮೂಲ ಎಲ್ಲಿದೆ ಎಂಬುದನ್ನು ಗುರುತಿಸಿ ಪರಿಹಾರದ ಪ್ರಯತ್ನಗಳನ್ನು ಮಾಡುವುದು ಒಳ್ಳೆಯದು.

* ಗಾಂಧಿವಾದ-ವಾದಿಗಳು ಗಾಂಧಿಯನ್ನು ಅಪ್ರಸ್ತುತಗೊಳಿಸುವ ಪ್ರಕ್ರಿಯೆಯನ್ನು ತೀವ್ರಗೊಳಿಸಿದವೇ? ಅಥವಾ ಅದು ಗಾಂಧಿ+ಗಾಂಧಿವಾದದ ಮಿತಿಯೇ ಆಗಿತ್ತಾ?
ನನ್ನ ಬದುಕೇ ನನ್ನ ಸಂದೇಶ ಎಂದ ವ್ಯಕ್ತಿಯನ್ನು ಯಾರೂ ಅಪ್ರಸ್ತುತಗೊಳಿಸಲಾರರು. ಅಂತಹ ವಿದ್ಯಮಾನಗಳು ತಾತ್ಕಾಲಿಕ ಪರಿಣಾಮದವು. ಭೂಮಿಯಂತಹ ಗಾಂಧಿಯ ಮಿತಿಗಳ ಬಗ್ಗೆ ಮಾತಾಡುವುದು ಭೂಮಿಯ ಮಿತಿಗಳ ಬಗ್ಗೆ ಮಾತಾಡಿದಂತೆ. ಅಂದರೆ ಅವರು ಮಾಡಿದ್ದೆಲ್ಲ ಸರಿ ಎಂದಲ್ಲ. ನಂನಮ್ಮ ದೃಷ್ಟಿಕೋನಗಳನ್ನು ಅನುಸರಿಸಿದಂತೆ ಅವರು ಹಲವು ತಪ್ಪುಗಳನ್ನು ಮಾಡಿರಬಹುದು/ ಮಾಡಿದ್ದಾರೆನಿಸುತ್ತದೆ. ಆದರೆ ಅವು ಅವರ ಮಿತಿಗಳೆಂದು ಹೇಳಲಾಗದು. ಯಾಕೆಂದರೆ ಅವರು ಮನುಷ್ಯ ದೇವರಾಗುವ ತನಕ ಆತನಿಗೆ ಶಾಂತಿಯಿಲ್ಲ ಎಂದು ಸಂಪೂರ್ಣ ಶಾಂತಿಯೆಡೆಗೆ ಹೆಜ್ಜೆ ಹಾಕಿದವರು. ಆ ಆತ್ಯಂತಿಕ ಪರಮ ಶಾಂತಿಯ ಮುಂಚಿನ ಅಶಾಂತಿಯಿಂದಾದ ತಪ್ಪುಗಳು ಅವು ಎನ್ನಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT