ಗುರುವಾರ , ಮಾರ್ಚ್ 4, 2021
20 °C

ಕ್ರೀಡಾ ಪ್ರೋತ್ಸಾಹ ಧನ ಖುಷಿಯಿಂದ ಕೊಡಬೇಕು; ಬೇಡಿದರೆ ಗೌರವವಿಲ್ಲ: ಎಂ.ಆರ್.ಪೂವಮ್ಮ

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

ಇಂಡೊನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳು ಅಥ್ಲೆಟಿಕ್ಸ್‌ನಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಟ್ರ್ಯಾಕ್‌ ಮತ್ತು ಫೀಲ್ಡ್‌ ಸ್ಪರ್ಧೆಗಳಲ್ಲಿ ಹಿಂದೆಂದಿಗಿಂತಲೂ ಈ ಬಾರಿ ಹೆಚ್ಚು ಪದಕಗಳು ಒಲಿದಿವೆ. ಅದರಲ್ಲಿ ಕರ್ನಾಟಕದ ಎಂ.ಆರ್. ಪೂವಮ್ಮ ಅವರು ಎರಡು ಪದಕಗಳ ಕಾಣಿಕೆ ನೀಡಿದ್ದಾರೆ. ಮಹಿಳೆಯರ 4X400 ಮೀಟರ್ಸ್‌ ರಿಲೆಯಲ್ಲಿ ಚಿನ್ನ ಮತ್ತು ಮಿಶ್ರ ರಿಲೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. 2014ರಲ್ಲಿಯೂ ಅವರು ಚಿನ್ನದ ಸಾಧನೆ ಮಾಡಿದ್ದರು. ಕೊಡಗಿನ ಗೋಣಿಕೊಪ್ಪಲಿನಲ್ಲಿ ಜನಿಸಿದ ಪೂವಮ್ಮ ಅವರು ಬೆಳೆದಿದ್ದು, ವಿದ್ಯಾಭ್ಯಾಸ ಮತ್ತು ಕ್ರೀಡಾ ತರಬೇತಿ ಪಡೆದಿದ್ದು ಮಂಗಳೂರಿನಲ್ಲಿ. ಅವರ ತಂದೆ ರಾಜು ಅವರು ಬಜ್ಪೆ ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಯಿ ಜಾಜಿ ಅವರು ಪೂವಮ್ಮ ಅವರ ಸಾಧನೆಗೆ ಬೆನ್ನೆಲುಬಾಗಿದ್ದಾರೆ. ತಮ್ಮ ಈ ಬಾರಿಯ ಸಾಧನೆಯ ಕುರಿತು ಅವರು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ.

ಸತತ ಎರಡು ಏಷ್ಯನ್ ಗೇಮ್ಸ್‌ಗಳಲ್ಲಿ ಚಿನ್ನದ ಸಾಧನೆ ಮಾಡಲು ಸಾಧ್ಯವಾಗಿದ್ದು ಹೇಗೆ?

ಗಾಯದ ಸಮಸ್ಯೆಯಿಂದಾಗಿ 2012ರಲ್ಲಿ ಲಂಡನ್ ಒಲಿಂಪಿಕ್ಸ್‌ಗೆ ಅರ್ಹತೆ ಸಿಗಲಿಲ್ಲ. ಆಗ ಬೇಸರವಾಗಿತ್ತು. ಆದರೆ ನನ್ನ ತಾಯಿ, ತಂದೆ ಮತ್ತು ತಮ್ಮ ಸದಾ ಪ್ರೋತ್ಸಾಹ ನೀಡಿದರು. ನನ್ನಲ್ಲಿ ಹೊಸ ಹುಮ್ಮಸ್ಸು ತುಂಬಿದರು. ಅದರಿಂದಾಗಿ 2013ರಲ್ಲಿ ಟ್ರ್ಯಾಕ್‌ಗೆ ಮರಳಿದೆ. ಏಷ್ಯಾ ಚಾಂಪಿಯನ್‌ಷಿಪ್, ರಾಷ್ಟ್ರೀಯ ಕೂಟಗಳಲ್ಲಿ ಪದಕ ಸಾಧನೆ ಮಾಡಿದೆ. 2014ರಲ್ಲಿ ಇಂಚೇನ್‌ ಏಷ್ಯನ್ ಗೇಮ್ಸ್‌ನಲ್ಲಿ ರಿಲೆಯಲ್ಲಿ ಚಿನ್ನ ಒಲಿಯಿತು. ವೈಯಕ್ತಿಕ ವಿಭಾಗದ 400 ಮೀಟರ್ಸ್‌ ಓಟದಲ್ಲಿಯೂ ಬೆಳ್ಳಿ ಗೆದ್ದೆ. ಅಲ್ಲಿಂದಲೂ ಸತತ ಫಿಟ್‌ನೆಸ್‌ ಕಾಪಾಡಿಕೊಳ್ಳಲು ಮತ್ತು ಮಾನಸಿಕವಾಗಿ ದೃಢವಾಗಿರಲು ನನ್ನ ಕುಟುಂಬದ ಪ್ರೋತ್ಸಾಹವೇ ಕಾರಣ. ಈ ಬಾರಿ ನಮ್ಮ ತಂಡವೂ ಅತ್ಯಂತ ಬಲಿಷ್ಠವಾಗಿತ್ತು.

ಒಂದು ದಶಕದಲ್ಲಿ ಬಹಳಷ್ಟು ಮಹತ್ವದ ಕೂಟಗಳಲ್ಲಿ ಭಾಗವಹಿಸಿರುವ ನಿಮಗೆ, ಭಾರತ ಮತ್ತು ಬೇರೆ ದೇಶಗಳ ಕ್ರೀಡಾಪಟುಗಳ ನಡುವೆ ವ್ಯತ್ಯಾಸ ಕಾಣಿಸಿದೆಯೇ? 

2005ರಿಂದ ನಾನು ಅಥ್ಲೆಟಿಕ್‌ ಕೂಟಗಳಲ್ಲಿ ಭಾಗವಹಿಸುತ್ತಿದ್ದೇನೆ. ಆ ಸಂದರ್ಭದಲ್ಲಿ ಈಗಿರುವಷ್ಟು ಸೌಲಭ್ಯಗಳು ನಮ್ಮಲ್ಲಿ ಇರಲಿಲ್ಲ. ಅಪ್ಪ–ಅಮ್ಮನೇ ತಮ್ಮ ಹಣದಿಂದ ತರಬೇತಿ ಕೊಡಿಸಿದ್ದರು. ಪ್ರತಿಯೊಂದು ಕೂಟಕ್ಕೆ ಹೋಗಲು ದುಡ್ಡು ಹೊಂದಿಸಲು ಕಷ್ಟಪಡಬೇಕಾಗುತ್ತಿತ್ತು. ಸ್ಪರ್ಧೆಗಳಲ್ಲಿ ಗೆದ್ದ ನಗದು ಬಹುಮಾನ ಮತ್ತು ಅಪ್ಪನ ಸಂಬಳದ ಹಣವನ್ನು ಹೊಂದಿಸಿಕೊಂಡು ಹೋಗಿದ್ದೇ ಹೆಚ್ಚು. ಆದರೆ ಇತ್ತೀಚಿನ ದಿನಗಳಲ್ಲಿ ಸ್ಥಿತಿ ಸುಧಾರಿಸಿದೆ. ತರಬೇತಿ, ಸೌಲಭ್ಯ ಸಿಗುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನದ ನೆರವು ಕೂಡ ಸಿಗುತ್ತಿದೆ. ಅಥ್ಲೆಟಿಕ್ಸ್‌ ಫೆಡರೇಷನ್ ಕೂಡ ಉತ್ತಮ ಬೆಂಬಲ ನೀಡುತ್ತಿದೆ.

ನಮ್ಮ ದೇಶದಲ್ಲಿ ಸಾಧನೆಗೆ ಸಿಗುತ್ತಿರುವ ಪುರಸ್ಕಾರ ಮತ್ತು ಪ್ರೋತ್ಸಾಹಗಳು ತೃಪ್ತಿದಾಯಕವೇ? 

ಕೇಂದ್ರ ಸರ್ಕಾರದ ನೀತಿಯಲ್ಲಿ ಕೆಲವು ಬದಲಾವಣೆಗಳು ಆಗಿವೆ. ಆದರೆ ನಮ್ಮ ರಾಜ್ಯದಲ್ಲಿ ಇನ್ನೂ ಸಾಕಷ್ಟು ಸುಧಾರಣೆಗಳು ಆಗಬೇಕಿದೆ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಪದಕವಿಜೇತ ಅಥ್ಲೀಟ್‌ಗಳಿಗೆ ನಮ್ಮ ರಾಜ್ಯ ಸರ್ಕಾರದಿಂದ ಸಿಗುತ್ತಿರುವ ಪ್ರೋತ್ಸಾಹ ಏನೇನೂ ಅಲ್ಲ. ನಾವು ಭಿಕ್ಷೆ ಬೇಡಿ ಪಡೆದರೆ ಗೌರವ ಇರುವುದಿಲ್ಲ. ಅವರೇ ನಮ್ಮ ಸಾಧನೆ ಗುರುತಿಸಿ, ಖುಷಿಯಿಂದ ಕೊಡಬೇಕು. ಈಗ ಆ ರೀತಿ ಆಗುತ್ತಿಲ್ಲ. ನನ್ನ ಜೊತೆಗೆ ಓಡಿದ ಸರಿತಾಬೆನ್ ಗಾಯಕವಾಡ್ ಅವರಿಗೆ ಗುಜರಾತ್‌ ರಾಜ್ಯವು ₹ 2 ಕೋಟಿ ಘೋಷಣೆ ಮಾಡಿದೆ. ದ್ಯುತಿ ಚಾಂದ್ ಅವರಿಗೆ ಒಡಿಶಾ ರಾಜ್ಯ ಒಂದೂವರೆ ಕೋಟಿ ಘೋಷಣೆ ಮಾಡಿದೆ. ಹರಿಯಾಣದಂತಹ ರಾಜ್ಯದಲ್ಲಿ ಪದಕ ಗೆಲ್ಲುವ ಕ್ರೀಡಾಪಟುಗಳ ಸಂಖ್ಯೆ ಹೆಚ್ಚು. ಆದರೂ ಅಲ್ಲಿ ಪ್ರತಿಯೊಬ್ಬರಿಗೂ ದೊಡ್ಡ ಬಹುಮಾನ ಕೊಡಲಾಗುತ್ತದೆ. ನಮ್ಮಲ್ಲಿ ಬಹಳಷ್ಟು ಜನ ಅಥ್ಲೀಟ್‌ಗಳಿದ್ದಾರೆ. ಆದರೆ ಅಂತರರಾಷ್ಟ್ರೀಯ ಮಟ್ಟದ ಕೂಟಗಳಲ್ಲಿ ಚಿನ್ನದ ಪದಕ ಗೆಲ್ಲುವವರು ಹೆಚ್ಚೆಂದರೆ 4–5 ಜನ ಮಾತ್ರ. ತಲಾ ₹ 50 ಲಕ್ಷ ಕೊಡಲು ಏನು ಅಡ್ಡಿ ಇದೆ? ನಾನಿಲ್ಲಿ ಯಾರನ್ನೂ ಟೀಕಿಸುತ್ತಿಲ್ಲ. ಆದರೆ ವಸ್ತುಸ್ಥಿತಿಯನ್ನು ಹೇಳುತ್ತಿದ್ದೇನೆ ಅಷ್ಟೇ.

ನಿಮ್ಮಷ್ಟು ಅನುಭವ ಇಲ್ಲದ ಓಟಗಾರ್ತಿಯರು ಸಹ ಈ ಬಾರಿಯ ತಂಡದಲ್ಲಿದ್ದರು. ಅವರೊಂದಿಗೆ ನೀವು ಹೊಂದಾಣಿಕೆ ಸಾಧಿಸಿದ ಬಗೆ ಹೇಗೆ?

ಏಷ್ಯನ್ ಗೇಮ್ಸ್‌ಗೂ ಮುನ್ನ ನಾವು ಪೊಲೆಂಡ್ ಮತ್ತಿತರ ಕಡೆ ನಡೆದಿದ್ದ ತರಬೇತಿ ಶಿಬಿರದಲ್ಲಿ ಜೊತೆಯಾಗಿಯೇ ಇದ್ದೆವು. ಅದರಿಂದಾಗಿ ತಂಡವಾಗಿ ಒಂದುಗೂಡಲು ಸಾಧ್ಯವಾಯಿತು. ಹಿಮಾ ದಾಸ್, ಸರಿತಾ ಮತ್ತು ವಿಸ್ಮಯ ಅವರಿಗೆ ಇದು ಮೊದಲ ಕೂಟ. ಆದರೂ ಅವರು ಪ್ರಬುದ್ಧರು. ನಾವೆಲ್ಲರೂ ಒಳ್ಳೆಯ ಸ್ನೇಹಿತರಾಗಿದ್ದೇವೆ. ಇಲ್ಲಿ ಅನುಭವ, ವಯಸ್ಸಿಗಿಂತ ದೇಶಕ್ಕೆ ಒಂದಾಗಿ ಆಡುವುದು ಮುಖ್ಯ. ನನ್ನ ಅನುಭವ ಅವರ ಉತ್ಸಾಹಗಳು ಮೇಳೈಸಿದ್ದರಿಂದ ಚಿನ್ನ ಗೆಲ್ಲಲು ಸಾಧ್ಯವಾಯಿತು. ಮೊದಲ ಲೆಗ್‌ನಲ್ಲಿ ಹಿಮಾ ದಾಸ್ ವೇಗವಾಗಿ ಓಡಿ ಮಹತ್ವದ ಲೀಡ್ ಗಳಿಸಿಕೊಟ್ಟರು. ನಂತರದ ಲೆಗ್‌ನಲ್ಲಿ ನಾನು ಕೂಡ  ಆ ಅಂತರವನ್ನು ಹೆಚ್ಚಿಸಿಕೊಂಡೆ, ನಂತರದ ಎರಡೂ ಲೆಗ್‌ಗಳಲ್ಲಿ ಉಳಿದಿಬ್ಬರು ತಮ್ಮ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಇದರಿಂದಾಗಿ ಬಹರೇನ್‌ನ ಬಲಿಷ್ಠ ತಂಡವನ್ನು ಹಿಂದಿಕ್ಕಲು ಸಾಧ್ಯವಾಯಿತು.

ಆರು ವರ್ಷಗಳ ಹಿಂದೆ ಗಾಯದಿಂದಾಗಿ ನಿಮ್ಮ ವೃತ್ತಿಜೀವನ ಅಂತ್ಯವಾಗುವ ಆತಂಕವಿತ್ತು. ಅದರಿಂದ ನೀವು ಚೇತರಿಸಿಕೊಂಡು ಬರಲು ಹೇಗೆ ಸಾಧ್ಯವಾಯಿತು?

ಚೆನ್ನೈನಲ್ಲಿರುವ ಫಿಸಿಯೊ ಹರಿಶಂಕರ್ ವರ್ಮಾ ಅವರು ನೀಡಿದ್ದ ಚಿಕಿತ್ಸೆಯಿಂದಾಗಿ ಚೇತರಿಸಿಕೊಂಡಿದ್ದೆ. ಪಟಿಯಾಲದ ವೈದ್ಯರೂ ಕೂಡ ಉತ್ತಮ ಚಿಕಿತ್ಸೆ ನೀಡಿದ್ದರು. ಕೋಚ್‌ಗಳಾದ ಅಮಿತ್ ಮತ್ತು ಈಗ ಅಮೆರಿಕ ಮೂಲದ ಕೋಚ್ ಗೆಲೆನಾ ಅವರು ನೀಡುತ್ತಿರುವ ಮಾರ್ಗದರ್ಶನದಿಂದ ಉತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ.  ಕೆಲವು ವರ್ಷಗಳ ಹಿಂದೆ ಬೆಂಗಳೂರಿನ ಪೀಕ್‌ ಪರ್ಫಾರ್ಮೆನ್ಸ್‌ ಕ್ಲಿನಿಕ್‌ನ  ಯಶ್ ಪಾಂಡೆ ಅವರು ನನ್ನ ಬೆನ್ನುನೋವನ್ನು ವಾಸಿ ಮಾಡಿದ್ದರು. ಅದರಿಂದಾಗಿ ಓಟದಲ್ಲಿ ಹೆಚ್ಚು ವೇಗ ಪಡೆಯಲು ಸಾಧ್ಯವಾಗಿದೆ. ಅವರೆಲ್ಲರ ಜೊತೆಗೆ ನನ್ನ ತಮ್ಮ ನೀಡಿದ ಬೆಂಬಲ ದೊಡ್ಡದು.

2020ರ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತೀರಾ? ಅಲ್ಲಿ ಪದಕ ಗೆಲ್ಲುವ ಅವಕಾಶ ಎಷ್ಟಿದೆ? ಭಾರತದ ಅಥ್ಲೀಟ್‌ಗಳಿಗೆ ಒಲಿಂಪಿಕ್ಸ್‌ ಪದಕ ಸಾಧನೆ ಸಾಧ್ಯವೆ?

ಒಲಿಂಪಿಕ್ಸ್‌ ಅರ್ಹತಾ ಸುತ್ತಿನ ಸ್ಪರ್ಧೆಗಳು ಇನ್ನಷ್ಟೇ ನಡೆಯಬೇಕಿದೆ. ಅದಕ್ಕೂ ಮುನ್ನ ಏಷ್ಯಾ ಚಾಂಪಿಯನ್‌ಷಿಪ್‌ ಇದೆ. ಅದಕ್ಕಾಗಿ ಸಿದ್ಧತೆ ನಡೆಸಬೇಕಿದೆ. ಒಲಿಂಪಿಕ್ಸ್‌ ಸ್ಪರ್ಧೆಯಲ್ಲಿ ಗೆಲ್ಲುವುದು ಸುಲಭವಲ್ಲ. ಆದರೆ ಕಠಿಣ ಪರಿಶ್ರಮದಿಂದ ಯಾವುದೂ ಅಸಾಧ್ಯವಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು