ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಾಮಿಕಾ ಸಂದರ್ಶನ | ‘ನನಗೆ, ಸೀತೆ ಸಿಂಗಲ್‌ ಪೇರೆಂಟ್‌ ಆಗಿ ಕಾಣ್ತಾಳೆ’

Last Updated 4 ಫೆಬ್ರುವರಿ 2023, 19:31 IST
ಅಕ್ಷರ ಗಾತ್ರ

ಅನಾಮಿಕಾ ಹಿಂದಿ ಕಾದಂಬರಿಕಾರ್ತಿ, ಕವಯಿತ್ರಿ. ದೆಹಲಿ ವಿಶ್ವವಿದ್ಯಾಲಯದ ವ್ಯಾಪ್ತಿಯ ಕಾಲೇಜಿನಲ್ಲಿ ಅವರು ಇಂಗ್ಲಿಷ್ ಪಾಠ ಹೇಳುವ ಪ್ರೊಫೆಸರ್. ದೇಶದ ಹಲವು ಬಗೆಯ ಸಾಹಿತ್ಯದ ಕುತೂಹಲಿ. ಕನ್ನಡದಲ್ಲಿ ಗಿರೀಶ ಕಾರ್ನಾಡರು ಬರೆದಿದ್ದ ‘ನಾಗಮಂಡಲ’ ನಾಟಕವನ್ನು ಹಿಂದಿಗೆ ಜರ್ನಲ್ ಒಂದಕ್ಕಾಗಿ ಅನುವಾದಿಸಿರುವ ಅನಾಮಿಕಾ, ವೈದೇಹಿ ಅವರ ಸಣ್ಣಕಥೆಗಳನ್ನೂ ಆ ಭಾಷೆಗೆ ಅನುವಾದಿಸಿದ್ದಾರೆ. ರಂಗಕರ್ಮಿ, ಚಳವಳಿಕಾರ ಪ್ರಸನ್ನ ಅವರ ಕೆಲವು ಬರಹಗಳನ್ನೂ ಹಿಂದಿಗೆ ತಂದ ಖುಷಿ ಅವರದ್ದು. ‘ತೃನ್ ಧರಿ ಓಟ್’ ಎಂಬ ತಮ್ಮ ಕೃತಿಯಲ್ಲಿ ಅವರು ಸೀತೆಯ ಪಾತ್ರವನ್ನು ಸ್ತ್ರೀ ನೆಲೆಗಟ್ಟಿನಲ್ಲಿ ಕಟ್ಟಿಕೊಟ್ಟಿದ್ದಾರೆ. ಜೈಪುರ ಸಾಹಿತ್ಯೋತ್ಸವದಲ್ಲಿ ಅದರ ಒಂದಿಷ್ಟು ಹೂರಣವನ್ನು ಕೂಡ ಅವರು ಹಂಚಿಕೊಂಡರು. ಅನುವಾದ, ಕಾವ್ಯ ಹಾಗೂ ಹೊಸ ಕಾದಂಬರಿಯ ಕುರಿತು ಅವರು ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಂಡರು.

ಇಂಗ್ಲಿಷ್ ಭಾಷೆ ಹಾಗೂ ಭಾರತೀಯ ಭಾಷೆಗಳ ಕೃತಿಗಳ ಸಮಕಾಲೀನ ಸ್ಥಿತಿಯನ್ನು ಅನುವಾದಕಿಯಾಗಿ ಹೇಗೆ ವಿಶ್ಲೇಷಿಸುವಿರಿ?
ಭಾರತೀಯರಲ್ಲಿ ನಾವು ಬಹುತೇಕರು ಶಾಲಾ ಶಿಕ್ಷಣವನ್ನು ತಮ್ಮ ಶಕ್ತ್ಯಾನುಸಾರ ಹತ್ತಿರದ ಶಾಲೆಗಳಲ್ಲಿ ಪಡೆಯುತ್ತೇವೆ. ಇಂಗ್ಲಿಷ್‌ ಮುಖ್ಯವಾಗಿರುವ ಕಡೆ ಇರುವ ಪಬ್ಲಿಕ್ ಶಿಕ್ಷಣ ವ್ಯವಸ್ಥೆಯ ಏಕರೂಪತೆ ನಮ್ಮಲ್ಲಿ ಇರಲು ಸಾಧ್ಯವಿಲ್ಲ. ನಾವೆಲ್ಲ ಇಂಗ್ಲಿಷ್ ಅನ್ನು ಸ್ವಲ್ಪ ದೂರದಲ್ಲೇ ನಿಂತು ಕಲಿಯುತ್ತೇವೆ. ಅದನ್ನು ಸಂವಹನ ಭಾಷೆಯಾಗಿ ಸ್ವೀಕರಿಸುತ್ತೇವೆ. ನಮ್ಮ ಮಾತೃಭಾಷೆಯಂತೂ ಸಿದ್ಧಿಸುತ್ತದೆ. ಅನುವಾದ ಮಾಡುವಾಗ ನಮಗೆ ಇಂಗ್ಲಿಷ್‍ ಅಥವಾ ಇನ್ನೊಂದು ಪ್ರಾದೇಶಿಕ ಭಾಷೆಗೆ ಧ್ವನ್ಯಾರ್ಥವನ್ನೆಲ್ಲ ಹಿಡಿದು, ಸೋಸಿ, ಹೊಸತೇ ಆಗಿ ನೀಡಬೇಕಾದ ಸವಾಲು ಎದುರಾಗುತ್ತದೆ. ನಮ್ಮ ಕಲಿಕೆ ಇಂಗ್ಲಿಷ್ ಹಾಗೂ ಪ್ರಾದೇಶಿಕ ಭಾಷೆ ಎರಡರಲ್ಲಿಯೂ ಆಗಿರುವುದರಿಂದ ಅನುವಾದದ ಕೆಲಸಕ್ಕೆ ಪೂರಕವೇ ಹೌದಾಗಿದೆ ಎನ್ನುವುದು ನನ್ನ ಅನುಭವ.

ಇಂಗ್ಲಿಷ್‍ ಕೃತಿಗಳ ಜತೆಗಿನ ಒಡನಾಟದಿಂದ ನಾವು ವಿಶ್ವಮಟ್ಟದ ಹಲವು ಸಾಂಸ್ಕೃತಿಕ, ರಾಜಕೀಯ ಸ್ಥಿತ್ಯಂತರಗಳನ್ನೆಲ್ಲ ಗ್ರಹಿಸಲು ಸಾಧ್ಯವಿದೆ. ವಿಶ್ವ ಸಾಹಿತ್ಯ ಜಗತ್ತನ್ನು ಹೇಗೆ ನೋಡುತ್ತಿದೆ ಎನ್ನುವುದೂ ಅರಿವಿಗೆ ಬರುತ್ತದೆ.

ನೀವು ಸೀತೆಯನ್ನು ಯಾಕೆ ಕಥಾನಾಯಕಿ ಮಾಡಿಕೊಂಡಿರಿ?
ಇದು ರಿಮೋಟ್ ಕಂಟ್ರೋಲ್ ವೈವಾಹಿಕ ಜೀವನದ ಕಾಲ. ಗಂಡ ಎಲ್ಲೋ ಕೆಲಸದಲ್ಲಿರುತ್ತಾನೆ. ಹೆಂಡತಿ ಮತ್ತೆಲ್ಲೊ. ಇಬ್ಬರ ನಡುವಿನ ಸಂಬಂಧ ರಿಮೋಟ್ ಕಂಟ್ರೋಲ್‍ನಂತೆ. ರಾಮ ಹಾಗೂ ಸೀತೆ ಆ ಕಾಲದಲ್ಲೇ ಇಂತಹ ಬದುಕನ್ನು ಜೀವಿಸಿದ್ದರು. ಅಂದಮೇಲೆ ಸೀತೆ ನನಗೆ ಸಮಕಾಲೀನ ಪಾತ್ರವೂ ಹೌದು. ಅವಳು ನನಗೆ ಸಿಂಗಲ್ ಪೇರೆಂಟ್ ಆಗಿ ಕಾಣುತ್ತಾಳೆ. ಹಾಗಿದ್ದೂ ಹಲುಬುವುದಿಲ್ಲ. ಅವಳು ಕಷ್ಟಗಳ ನಡುವೆಯೂ ಆಶಾವಾದಿ. ಉತ್ಕಟ ಪ್ರೇಮಿ.

ಕಾದಂಬರಿಯ ಸೀತೆ ಪಾತ್ರದ ರೂಹು ಹೇಗಿದೆ?
ಅವಳು ಚಿತ್ತವಿಸ್ತಾರದ ಕೇಂದ್ರಪಾತ್ರ. ಅಲೆಮಾರಿಗಳ ನಡುವೆ ಬದುಕುತ್ತಾಳೆ. ಅವರ ಬದುಕನ್ನು ಹತ್ತಿರದಿಂದ ಕಾಣುತ್ತಲೇ ಅಲ್ಲಿನ ಹೆಣ್ಣುಮಕ್ಕಳಿಗೂ ಮಾತೃಸ್ವರೂಪಿಯಾಗುತ್ತಾಳೆ. ಅವಳು ಅಲ್ಲಿಂದಲೇ ರಾಮನಿಗೆ ಪತ್ರ ಬರೆಯುವ ಪ್ರಸಂಗವೊಂದನ್ನು ನಾನು ಸೃಷ್ಟಿಸಿರುವೆ. ಅದರಲ್ಲಿ ಅವಳು ರಾಮನ ಕುರಿತ ಪ್ರೀತಿ, ತನ್ನೊಳಗಿನ ಪ್ರಶ್ನೆಗಳು, ಹೊಸ ಬದುಕಿನ ಅರಿವು ಇವೆಲ್ಲವನ್ನೂ ಬರೆಯುತ್ತಾಳೆ. ಈ ಸೀತೆ ಹಸಿರು ಕ್ರಾಂತಿಗೂ ಸಾಕ್ಷಿಯಾಗುತ್ತಾಳೆ‌. ಅಲೆಮಾರಿಗಳ ಬದುಕಿನ ತುಮುಲಗಳನ್ನು ತಲಸ್ಪರ್ಶಿಯಾಗಿ ನೋಡುತ್ತಾಳೆ. ನನ್ನ ಸೀತೆ ವಿಪರೀತ ತರ್ಕ ಮಾಡುವವಳು. ಹಾಗೆ ವಿಚಾರ ಮಂಥನ ಮಾಡುವ ಸ್ವಭಾವದಿಂದಲೇ ನನಗೆ ಹಲವು ಸೂಕ್ಷ್ಮ ಹೆಣ್ಣುದನಿಗಳನ್ನು ಅವಳಲ್ಲಿ ತರುವುದು ಸಾಧ್ಯವಾಯಿತು.

ಜೈಪುರ ಸಾಹಿತ್ಯೋತ್ಸವದ ಗೋಷ್ಠಿಯೊಂದರಲ್ಲಿ ತಮಗೆ ಒಬ್ಬರು ಪ್ರಶ್ನೆ ಕೇಳುವಾಗ, ಈ ಸೀತೆ ಯಾಕೆ ತನ್ನ ಕೋಪವನ್ನು ಒಂದೇ ಸಲ ಜೋರುದನಿಯಲ್ಲಿ ಹೊರಹಾಕಲಿಲ್ಲ ಎಂದಿದ್ದರು. ಅದಕ್ಕೆ ತುಸು ವಿವರವಾದ ಉತ್ತರ ನೀಡಿ...

ನಾವು ಸಾಮಾಜಿಕ ವ್ಯವಸ್ಥೆಯಲ್ಲಿ ಬದುಕುತ್ತೇವೆ. ಭಾರತೀಯ ನೆಲೆಗಟ್ಟಿನಲ್ಲಿಯೇ ನಾನು ಸೀತೆಯ ಪಾತ್ರ ರೂಪಿಸಬೇಕು. ಮೌಲ್ಯ ವ್ಯವಸ್ಥೆಯನ್ನು ನಾವು ದೂರಬೇಕೇ ವಿನಾ ವ್ಯಕ್ತಿಗಳನ್ನಲ್ಲ. ಕೋಪವನ್ನು ಸ್ಫೋಟಗೊಳ್ಳುವ ಮೂಲಕ ಹೊರಹಾಕುವುದು ಸಮಸ್ಯೆಗೆ ಪರಿಹಾರ ಕೊಡಬಲ್ಲದು ಎಂದು ನನಗೆ ಅನಿಸುವುದಿಲ್ಲ. ಅದಕ್ಕೇ ನನ್ನ ಸೀತೆ ಪ್ರಶ್ನಿಸುವುದಾಗಲೀ, ವಾದ ಮಾಡುವುದಾಗಲೀ, ಹಟ ಮಾಡುವುದಾಗಲೀ, ಒಲವ ಸುರಿಸುವುದಾಗಲೀ ಎಲ್ಲವೂ ತಣ್ಣಗೆ. ಒಬ್ಬರ ನೋವನ್ನು ಇನ್ನೊಬ್ಬರ ಮೇಲೆ ಆರೋಪಿಸಿ ಪ್ರತಿಕ್ರಿಯಿಸುವುದು ಪ್ರತಿಭಟನೆ ಆಗಲಾರದು ಎನ್ನುವುದು ನನ್ನ ಭಾವನೆ.

‘ಠೋಕ್ರಿ ಮೈ ದಿಗಂತ್’ ಕೃತಿಗೆ ಹಿಂದಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಮೊದಲ ಮಹಿಳೆ ಎಂಬ ಗೌರವ 65 ವರ್ಷಗಳ ಇತಿಹಾಸದಲ್ಲಿ ನಿಮ್ಮದಾಯಿತು. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?
ಸೃಜನಶೀಲ ರಚನೆಗಳು ಆಗುತ್ತಿರುತ್ತವೆ. ನನ್ನ ಕೃತಿಗೆ ಗೌರವ ಸಂದಿತಷ್ಟೆ. ಅದನ್ನು ಗುರುತಿಸುವ ಸಂವೇದನೆ ಈ ಸಂದರ್ಭದಲ್ಲಿ ಪ್ರಕಟವಾಗಿರಬಹುದಷ್ಟೆ.‌ ಹಿಂದಿ ಭಾಷೆ ಹಾಗೂ ಪ್ರಾದೇಶಿಕ ಭಾಷೆಗಳಲ್ಲಿ ಉತ್ತಮ ಸಾಹಿತ್ಯವನ್ನು ಬಹುಕಾಲದಿಂದಲೂ ಹೆಣ್ಣುಮಕ್ಕಳು ರಚಿಸುತ್ತಾ ಬಂದಿದ್ದಾರೆ. ಪ್ರಶಸ್ತಿ ಸಿಕ್ಕಾಗ ಖುಷಿ, ಜವಾಬ್ದಾರಿ ಎರಡೂ ಹೆಚ್ಚಾದಂತೆ.

‘ಮೈ ಟೈಪ್‌ರೈಟರ್ ಈಸ್ ಮೈ ಪಿಯಾನೊ’ ಎಂಬ ನಿಮ್ಮ ಕಾವ್ಯದ ದನಿ ಹುಟ್ಟಿದ್ದು ಹೇಗೆ?
ಅದು ನನ್ನ ಅನುಭವವೇ ಆಗಬೇಕಂದೇನೂ ಇಲ್ಲ. ಪ್ರತೀ ಹೆಣ್ಣುಮಗಳೂ ನಮ್ಮ ಭಾರತೀಯ ಮೌಲ್ಯ ವ್ಯವಸ್ಥೆಯಲ್ಲಿ ಇಂತಹ ರೂಪಕಗಳನ್ನು ಕಟ್ಟಿ ಕೊಡುತ್ತಾ ಇರುತ್ತಾಳೆ. ಕವಯಿತ್ರಿಯಾಗಿ ಅದನ್ನು ನಾನು ಹಿಡಿದೆ. ಭವದ ನಡುವೆಯೂ ಸೃಜಿಸುವ ಆಶಾವಾದದ ಭಾವವಿದು.

ಹೊಸಕಾಲದ ಯುವಕ-ಯುವತಿಯರ ಅಭಿವ್ಯಕ್ತಿ ಹೇಗಿದೆ?
ನಾನು ಯಾವತ್ತೂ ಆಶಾವಾದಿ. ಓದುವವರು, ಬರೆಯುವವರು, ಧೈರ್ಯ ತುಳುಕಿಸುತ್ತಲೇ ಟೀಕಿಸುವವರು ನಮ್ಮ ನಡುವೆ ಇದ್ದಾರೆ. ಈಗಿನವರಿಗೆ ಓದಿನಲ್ಲಿ, ಬರಹದಲ್ಲಿ ಆಸಕ್ತಿ ಇಲ್ಲ ಎನ್ನುವುದೆಲ್ಲ ಸುಳ್ಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT