ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ನವರನ್ನು ಭಿಕ್ಷುಕರಂತೆ ನಡೆಸಿಕೊಂಡರು: ಎಚ್‌.ಡಿ.ಕುಮಾರಸ್ವಾಮಿ ಆರೋಪ

ಸಮ್ಮಿಶ್ರ ಸರ್ಕಾರದ ಟ್ರಬಲ್‌ ಶೂಟರ್‌ನಿಂದಲೇ ಆಪತ್ತಾಯಿತು ಎಂದ ಎಚ್‌ಡಿಕೆ
Last Updated 22 ಜುಲೈ 2020, 19:32 IST
ಅಕ್ಷರ ಗಾತ್ರ

ಬೆಂಗಳೂರು: ‘ಮೈತ್ರಿ ಸರ್ಕಾರದ ಅವಧಿಯಲ್ಲಿ ಪ್ರತಿ ಹೆಜ್ಜೆಗೂ ಅಡ್ಡಿಪಡಿಸಿದ ಕಾಂಗ್ರೆಸ್‌ ನಾಯಕರು ನಮ್ಮನ್ನು ಭಿಕ್ಷುಕರಂತೆ ನಡೆಸಿ
ಕೊಂಡರು. ನಾನು ಬೆಳೆಸಿಕೊಂಡು ಬಂದಿದ್ದ ವರ್ಚಸ್ಸು ಮೈತ್ರಿಯಿಂದಾಗಿ ಹಾಳಾಗಿ ಹೋಯಿತು. ಮೈತ್ರಿ ಸರ್ಕಾರದ ಟ್ರಬಲ್ ಶೂಟರ್‌ ಎನ್ನಿಸಿಕೊಂಡವರಿಂದಲೇ ಆ ಸರ್ಕಾರಕ್ಕೆ ಆಪತ್ತು ಎದುರಾಯಿತು. . .’

ಮೈತ್ರಿ ಸರ್ಕಾರ ಪತನಗೊಂಡು ಒಂದು ವರ್ಷ ಪೂರೈಸಿದ ಹೊತ್ತಿನಲ್ಲಿ ‘ಪ್ರಜಾವಾಣಿ’ ಜತೆ ಮಾತನಾಡಿದ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ, ಕಹಿ ನೆನಪುಗಳನ್ನು ಹರಡಿಕೊಂಡಿದ್ದು ಹೀಗೆ. ಸಂದರ್ಶನದ ಪೂರ್ಣಪಾಠ ಇಲ್ಲಿದೆ.

* ‘ದೋಸ್ತಿ’ ಸರ್ಕಾರ ರಚನೆಗೆ ಜೆಡಿಎಸ್ ಮುಂದಾಗಿತ್ತು ಎಂದು ಕಾಂಗ್ರೆಸ್‌ ನಾಯಕರು ಹೇಳುತ್ತಿದ್ದಾರಲ್ಲ?

ಎಚ್‌ಡಿಕೆ: ಸಿದ್ದರಾಮಯ್ಯ ಮತ್ತು ದಿನೇಶ್‌ ಗುಂಡೂರಾವ್‌ ಅವರು ಜೆಡಿಎಸ್ ಜತೆಗಿನ ಮೈತ್ರಿ ಬಗ್ಗೆ ಆಡಿರುವ ಮಾತುಗಳು ತುಂಬಾ ಗಾಸಿಗೊಳಿಸಿವೆ. ಮೈತ್ರಿಗಾಗಿ ಭಿಕ್ಷೆ ಬೇಡಿಕೊಂಡು ನಾವು ಕಾಂಗ್ರೆಸ್‌ ಬಾಗಿಲು ಬಳಿ ಹೋಗಿರಲಿಲ್ಲ. ಚುನಾವಣಾ ಫಲಿತಾಂಶ ಪೂರ್ಣ
ವಾಗಿ ಪ್ರಕಟವಾಗುವ ಮುನ್ನವೇ ದೇವೇಗೌಡರನ್ನು ಸಂಪರ್ಕಿಸಿದಕಾಂಗ್ರೆಸ್‌ನ ದೆಹಲಿ ನಾಯಕರು,ಮೈತ್ರಿ ಸರ್ಕಾರ ರಚನೆಯ ಪ್ರಸ್ತಾಪ ಮುಂದಿಟ್ಟರು. ಆಗ ಗೌಡರು ‘ಏಕೆ ಇಷ್ಟು ಆತುರ. ಪೂರ್ಣ ಫಲಿತಾಂಶವಾದರೂ ಹೊರಬರಲಿ’ ಎಂದಿದ್ದರು. ಕಾಂಗ್ರೆಸ್‌ನವರೇ ಮುಖ್ಯಮಂತ್ರಿಯಾಗಲಿ, ಜೆಡಿಎಸ್‌‌ ಬೆಂಬಲ ನೀಡುತ್ತದೆ ಎಂದೂ ಭರವಸೆ ನೀಡಿದ್ದರು.

‘ಜೆಡಿಎಸ್‌ನವರೇ ಮುಖ್ಯಮಂತ್ರಿಯಾಗಲಿ. ಬೇಷರತ್‌ ಬೆಂಬಲ ನೀಡುತ್ತೇವೆ’ ಎಂದು ದೆಹಲಿಯ ಕಾಂಗ್ರೆಸ್ ನಾಯಕರು ಒತ್ತಡ ಹೇರಿದ್ದರು. ಇದು ರಾಜ್ಯ ನಾಯಕರಿಗೆ ಗೊತ್ತಿರಲಿಲ್ಲ. ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಕೆಲವರು, ಜೆಡಿಎಸ್‌ನವರೇ ಮೈತ್ರಿಗಾಗಿ ದುಂಬಾಲು ಬಿದ್ದಿದ್ದರು ಎಂಬ ಅರ್ಥ ಬರುವಂತೆ ಮಾತನಾಡಿದ್ದಾರೆ. ಹೀಗೆ ಸುಳ್ಳು ಹೇಳಲು ನಾಚಿಕೆಯಾಗಬೇಕು. ‌

*ಮೈತ್ರಿ ಸರ್ಕಾರದಲ್ಲಿ ಪರಸ್ಪರ ನಂಬಿಕೆ ಇರಲಿಲ್ಲವೇ?

ಎಚ್‌ಡಿಕೆ:ನಂಬಿಕೆ ಎನ್ನುವುದಕ್ಕಿಂತ, ಮೈತ್ರಿ ಸರ್ಕಾರ ರಚಿಸುವ ಕಾಂಗ್ರೆಸ್‌ ಹೈಕಮಾಂಡ್‌ ನಿರ್ಧಾರಕ್ಕೆ ಆ ಪಕ್ಷದ ರಾಜ್ಯ ನಾಯಕರ ಸಹಮತ ಇರಲಿಲ್ಲ. ಹೀಗಾಗಿ, ಸರ್ಕಾರದ ಆರಂಭದ ದಿನದಿಂದಲೇ ಅಸಹಕಾರ ಚಳವಳಿ ಶುರುವಾಗಿತ್ತು. ವಿಧಾನಸೌಧದ ಮುಂದೆ ಪ್ರಮಾಣವಚನ ಸ್ವೀಕರಿಸುವ ಪ್ರಸ್ತಾಪ ಬಂದಾಗ ಕಾಂಗ್ರೆಸ್‌ ನಾಯಕರೊಬ್ಬರು ಅಸಮಾಧಾನ ಹೊರಹಾಕಿದ್ದರು. ‘ವಿಧಾನಸೌಧದ ಮುಂದೆ ಬೇಡ, ರಾಜಭವನದಲ್ಲೇ ಪ್ರಮಾಣವಚನ ಸ್ವೀಕರಿಸಲಿ’ ಎಂದು ತಕರಾರು ಎತ್ತಿದ್ದರು. ಹೀಗೆಹೆಜ್ಜೆ, ಹೆಜ್ಜೆಗೂ ಅಡ್ಡಿ ಮಾಡಿದರು.

ಬೇಷರತ್‌ ಬೆಂಬಲ ನೀಡುವುದಾಗಿ ಹೇಳಿದ್ದ ಕಾಂಗ್ರೆಸ್‌ನವರು ಸಚಿವ ಸಂಪುಟ ರಚನೆಯ ವೇಳೆ 38 ಶಾಸಕರಿರುವ ಜೆಡಿಎಸ್‌ಗೆ ಎಂಟು ಸಚಿವ ಸ್ಥಾನ ಸಾಕು ಎಂದು ಕ್ಯಾತೆ ತೆಗೆದರು. ನಮಗೆ ಬೇಡದ ಖಾತೆಗಳನ್ನು ಬಿಟ್ಟು ಕೊಟ್ಟರು. ರೈತರ ಸಾಲಮನ್ನಾ ಭರವಸೆ ಈಡೇರಿಸುವ ಉದ್ದೇಶದಿಂದ ಹಣಕಾಸು ಖಾತೆಯನ್ನು ನನ್ನ ಬಳಿಯೇ ಇಟ್ಟುಕೊಂಡಿದ್ದೆ. ಅದನ್ನು ಹೊರತುಪಡಿಸಿದರೆ ನಮಗೆ ಬೇರೆ ಆಯ್ಕೆಗಳೇ ಇರಲಿಲ್ಲ. ನಮ್ಮನ್ನು ಭಿಕ್ಷುಕರಂತೆ ನಡೆಸಿಕೊಳ್ಳಲಾಯಿತು. ಅಧಿಕಾರಿಯೊಬ್ಬರನ್ನು ವರ್ಗಾವಣೆ ಮಾಡುವಂತೆ ಕಾಂಗ್ರೆಸ್‌ ಶಾಸಕರೊಬ್ಬರು ತಮ್ಮ ಎಡಗೈಯಿಂದ ಅರ್ಜಿಯನ್ನು ನನ್ನ ಟೇಬಲ್‌ ಮೇಲೆ ಬಿಸಾಕಿದ್ದರು. ಇಷ್ಟೆಲ್ಲ ಅಪಮಾನವಾದರೂ ನಾನು ಸಹಿಸಿಕೊಂಡಿದ್ದೆ.

*ಹಾಗಿದ್ದರೆ ಕಾಂಗ್ರೆಸ್‌ ಜತೆ ಸರ್ಕಾರ ಮಾಡಿದ್ದೇಕೆ?

ಎಚ್‌ಡಿಕೆ:ನಮ್ಮ ನಾಯಕರಾದ ದೇವೇಗೌಡರು ಮೊದಲಿನಿಂದಲೂ ಜಾತ್ಯತೀತ ತತ್ವ, ಸಿದ್ಧಾಂತಗಳಿಗೆ ಬದ್ಧರಾದವರು. ಅದು ಅವರ ಶಕ್ತಿ ಹಾಗೂ ದೌರ್ಬಲ್ಯವೂ ಹೌದು. ಹಲವಾರು ಬಾರಿ ಕಾಂಗ್ರೆಸ್‌ನಿಂದಲೇ ಮೋಸ ಹೋಗಿದ್ದರೂ, ‘ಜಾತ್ಯತೀತ’ ಸರ್ಕಾರದ
ಕನವರಿಕೆಯಲ್ಲಿ ಅವರ ಜತೆ ಕೈಜೋಡಿಸಿದರು. ದೇಶದ ಅಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿಗೆ ಪರ್ಯಾಯವಾಗಿ ರಾಷ್ಟ್ರಮಟ್ಟದಲ್ಲಿ ಜಾತ್ಯತೀತ ಶಕ್ತಿಗಳು ಒಂದಾಗುವ ಜರೂರು ಇತ್ತು. ಅದು ದೇವೇಗೌಡರ ಮಹಾದಾಸೆಯೂ ಆಗಿತ್ತು. ರಾಷ್ಟ್ರ ರಾಜಕಾರಣದಲ್ಲಿ ಜಾತ್ಯತೀತ ಶಕ್ತಿಗಳ ಹೊಸ ಸಮೀಕರಣಕ್ಕೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ಸಾಕ್ಷಿಯಾಗಿತ್ತು. ಮುಖ್ಯಮಂತ್ರಿ
ಯೊಬ್ಬರ ಪ್ರಮಾಣ ವಚನ ಸಮಾರಂಭಕ್ಕೆ ಅಷ್ಟೊಂದು ರಾಜಕೀಯ ಮುಖಂಡರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಅದೇಮೊದಲು.

*ಕಾಂಗ್ರೆಸ್‌ ಒಳಜಗಳಸರ್ಕಾರಕ್ಕೆ ಮುಳುವಾಯಿತೆ?

ಎಚ್‌ಡಿಕೆ:ಕಾಂಗ್ರೆಸ್‌ನ ಒಂದು ಗುಂಪು ಮೊದಲ ದಿನದಿಂದಲೇ ಸರ್ಕಾರ ಬೀಳಿಸುವ ಷಡ್ಯಂತ್ರದಲ್ಲಿ ತೊಡಗಿತ್ತು. ಇದೇ ಉದ್ದೇಶ ಹೊಂದಿದ್ದ ಬಿಜೆಪಿ ಗುಂಪಿನೊಂದಿಗೆ ಈ ಗುಂಪು ಕೈಜೋಡಿಸಿತ್ತು. ಕಾಂಗ್ರೆಸ್‌ ನಾಯಕರ ಒಳಜಗಳ, ಅದರಲ್ಲೂ ಬೆಳಗಾವಿ ಕಾಂಗ್ರೆಸ್‌ ನಾಯಕರ ಕಿತ್ತಾಟ ಶಮನಗೊಳಿಸುವುದೇ ದೊಡ್ಡ ಸಮಸ್ಯೆಯಾಗಿತ್ತು.ಸಮ್ಮಿಶ್ರ ಸರ್ಕಾರದ ‘ಟ್ರಬಲ್‌ ಶೂಟರ್’ ಎಂದು ಬಿಂಬಿಸಿಕೊಂಡವರಿಂದಲೇ ನಮ್ಮ ಸರ್ಕಾರಕ್ಕೆ ಆಪತ್ತು ಎದುರಾಗಿತ್ತು.

*ಬಿಜೆಪಿ ಸರ್ಕಾರದ ಬಗ್ಗೆ ನಿಮ್ಮ ಅಭಿಪ್ರಾಯ?

ಎಚ್‌ಡಿಕೆ: ಬಹಳ ಪರಿಶ್ರಮ ಪಟ್ಟುಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ. ಈಗ ಸರ್ಕಾರದ ಕೆಲಸ ಜನರಿಗೆ ಸಮಾಧಾನ ತಂದಿಲ್ಲ. 75 ವರ್ಷ ವಯಸ್ಸು ದಾಟಿದವರಿಗೆ ಅಧಿಕಾರ ಇಲ್ಲ ಎಂಬ ನಿಯಮದ ಅನ್ವಯ ಅಡ್ವಾಣಿ ಅಂತಹ ಹಿರಿಯರನ್ನೇ ಬದಿಗಿಟ್ಟಿರುವ ಬಿಜೆಪಿ, ಯಡಿಯೂರಪ್ಪ ಅವರಿಗೆ ಅಧಿಕಾರ ನೀಡಿದೆ. ಜನರ ಸೇವೆ ಮಾಡಲು ದೊರೆತ ಅವಕಾಶವನ್ನು ಅವರು ಸದ್ಬಳಕೆ ಮಾಡಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT