ಗುರುವಾರ , ಮೇ 6, 2021
25 °C

ಕಾಂಗ್ರೆಸ್‌–ಬಿಜೆಪಿ ಒಳ ಒಪ್ಪಂದ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್

ಅರ್ಜುನ್‌ ರಘುನಾಥ್‌ Updated:

ಅಕ್ಷರ ಗಾತ್ರ : | |

Prajavani

ತಮ್ಮ ಸರ್ಕಾರದ ವಿರುದ್ಧ ಇರುವ ಭ್ರಷ್ಟಾಚಾರ ಆರೋಪಗಳಾಗಲಿ ಶಬರಿಮಲೆ ವಿವಾದವಾಗಲಿ ಸತತ ಎರಡನೇ ಅವಧಿಗೆ ಅಧಿಕಾರಕ್ಕೆ ಬರುವ ಎಲ್‌ಡಿಎಫ್‌ನ ಸಾಧ್ಯತೆಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಒಳ ಒಪ್ಪಂದ ಏರ್ಪಟ್ಟಿದೆ ಎಂದು ವಿಜಯನ್‌ ಆರೋಪಿಸಿದ್ದಾರೆ. ‘ಪ್ರಜಾವಾಣಿ’ಯ ಅರ್ಜುನ್‌ ರಘುನಾಥ್‌ ನಡೆಸಿರುವ ಸಂದರ್ಶನದ ಆಯ್ದ ಭಾಗ ಇಲ್ಲಿದೆ..

* ಬಿಜೆಪಿಯ ಪ್ರಚಾರ ಭಾರಿ ಬಿರುಸುಗೊಂಡಿದೆ. 140 ಸದಸ್ಯ ಬಲದ ವಿಧಾನಸಭೆಯ 35 ಕ್ಷೇತ್ರಗಳಲ್ಲಿ ಗೆದ್ದರೂ ಸರ್ಕಾರ ರಚಿಸುವ ವಿಶ್ವಾಸವನ್ನು ಬಿಜೆಪಿ ಮುಖಂಡರು ವ್ಯಕ್ತಪಡಿಸಿದ್ದಾರಲ್ಲ...

ಈಗಿರುವ ಒಂದು ಸ್ಥಾನಕ್ಕಿಂತ ಹೆಚ್ಚಿನದನ್ನು ಬಿಜೆಪಿ ಪಡೆಯುವ ಪ್ರಶ್ನೆಯೇ ಇಲ್ಲ. ಹಾಗೆ ನೋಡಿದರೆ, ಅವರ ಬೆಳವಣಿಗೆಯನ್ನು ನಾವು ತಡೆದಿದ್ದೇವೆ. 2016ರ ಚುನಾವಣೆಯಲ್ಲಿ ಆ ಪಕ್ಷದ ಮತ ಪ್ರಮಾಣ ಶೇ 14.96ರಷ್ಟಿತ್ತು. 2019ರಲ್ಲಿ ಅದು ಶೇ 14.88ಕ್ಕೆ ಇಳಿಯಿತು. 2020ರಲ್ಲಿ ಅದು ಶೇ 14.52ಕ್ಕೆ ಕುಸಿದಿದೆ. ಇರುವ ಒಂದು ಸ್ಥಾನವನ್ನಾದರೂ ಅವರು ಉಳಿಸಿಕೊಳ್ಳಬಹುದೇ ಎಂಬುದನ್ನು ಕಾಯ್ದು ನೋಡೋಣ. 

* ಕಾಂಗ್ರೆಸ್‌ ಅನ್ನು ಮುಗಿಸಿಬಿಡಬೇಕು ಎಂಬುದು ಬಿಜೆಪಿಯ ಗುರಿ. ಇದು ಕೇರಳದಲ್ಲಿ ಸಿಪಿಎಂ ನೇತೃತ್ವದ ಎಲ್‌ಡಿಎಫ್‌ಗೆ ಈ ಚುನಾವಣೆಯಲ್ಲಿ ನೆರವಾಗಲಿದೆಯೇ?

ನಿಜವಾದ ಪ್ರಶ್ನೆ ಏನೆಂದರೆ, ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಒಳ ಒಪ್ಪಂದ ಇದೆಯೇ ಎಂಬುದಾಗಿದೆ. ಗೆದ್ದರೆ ಬಿಜೆಪಿ ಜತೆಗೆ ಹೋಗುವುದಾಗಿ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರೇ ಹೇಳುತ್ತಿದ್ದಾರೆ. ಸೋತರೆ ಬಿಜೆಪಿ ಜತೆ ಹೋಗುವುದಾಗಿ ಕಾಂಗ್ರೆಸ್‌ನ ರಾಜ್ಯದ ನಾಯಕರು ಹೇಳುತ್ತಿದ್ದಾರೆ. ನಮ್ಮನ್ನು ಸೋಲಿಸುವುದಕ್ಕಾಗಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಒಳ ಒಪ್ಪಂದ ಆಗಿದೆ ಎಂಬುದರ ಎಲ್ಲ ಸೂಚನೆಗಳೂ ಇವೆ. 

* ಆದರೆ, ಇತ್ತೀಚಿನ ನಿಮ್ಮ ಪ್ರಚಾರ ಭಾಷಣಗಳಲ್ಲಿ ಬಿಜೆಪಿಯ ಟೀಕೆಯು ಮೃದುವಾಗಿದೆ. ಬಿಜೆಪಿ ಜತೆಗೆ ನೀವು ಒಪ್ಪಂದ ಮಾಡಿಕೊಂಡ ಕಾರಣಕ್ಕೆ ಹೀಗಾಗಿದೆ ಎಂದು ಕಾಂಗ್ರೆಸ್‌ ಮುಖಂಡರು ಆರೋಪಿಸುತ್ತಿದ್ದಾರೆ...

ಕೋಮುವಾದವೇ ಮೈವೆತ್ತಂತಹ ವ್ಯಕ್ತಿ ಅಮಿತ್‌ ಶಾ ಎಂದು ಇತ್ತೀಚೆಗಷ್ಟೇ ಹೇಳಿದ್ದೇನೆ. ಬಿಜೆಪಿ ಆಳ್ವಿಕೆಯ ಅವಧಿಯಲ್ಲಿ ಕಳ್ಳ ಸಾಗಾಟವು ಹೇಗೆ ಹೆಚ್ಚಳವಾಗಿದೆ ಎಂಬುದನ್ನೂ ತೋರಿಸಿಕೊಟ್ಟಿದ್ದೇನೆ. ಐದು ವರ್ಷಗಳ ಅವಧಿಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ಸಂಘ ಪರಿವಾರದ ವಿರುದ್ಧ ಎಷ್ಟೊಂದು ಮಾತನಾಡಿದ್ದೇನೆ ಎಂದರೆ ನನಗೆ ಜೀವ ಬೆದರಿಕೆಗಳೂ ಬಂದಿವೆ. ಹೀಗಿರುವಾಗ ನಾನು ಮೃದುವಾಗಿದ್ದೇನೆ ಎಂಬ ಪ್ರಶ್ನೆ ಎಲ್ಲಿ ಉದ್ಬವಿಸುತ್ತದೆ?

* ನಿಮ್ಮ ಕಚೇರಿಯ ಜತೆ ತಳಕು ಹಾಕಿಕೊಂಡಿರುವ ಚಿನ್ನ ಕಳ್ಳಸಾಗಾಟದ ಆರೋಪಗಳು ಸರ್ಕಾರದ ವರ್ಚಸ್ಸನ್ನು ಬಾಧಿಸಲಿದೆಯೇ?

ಪ್ರಕರಣದ ಜತೆಗೆ ನನ್ನ ಕಚೇರಿಯನ್ನು ಸೇರಿಸಿಬಿಡುವ ಯತ್ನ ನಡೆದಿದೆ. ಆದರೆ, ಮೊದಲಿಗೆ ಈ ಆರೋಪ ಮಾಡಿದ ವ್ಯಕ್ತಿಯೇ ಈಗ ಹಿಂದೆ ಸರಿದಿದ್ದಾರೆ. ಅವರು ಬಿಜೆಪಿಯ ನಾಯಕ ಎಂಬುದನ್ನೂ ನಾವು ಮರೆಯಬಾರದು. ಹಾಗಾಗಿ, ಈ ವಿಚಾರವು ನಮ್ಮ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ನಾನು ಭಾವಿಸಿಲ್ಲ. 

* ಶಬರಿಮಲೆಗೆ ಎಲ್ಲ ವಯಸ್ಸಿನ ಮಹಿಳೆಯರ ಪ್ರವೇಶದಂತಹ ವಿಚಾರಗಳಲ್ಲಿ ನೀವು ಕಠಿಣ ನಿಲುವು ತಳೆದಿದ್ದೀರಿ ಎಂಬ ಆರೋಪ ಇದೆ. ಇದು ನಿಮಗೆ ಪ್ರತಿಕೂಲ ಆಗದೇ?

ಸಂವಿಧಾನವನ್ನು ಎತ್ತಿ ಹಿಡಿಯುತ್ತೇವೆ ಎಂದು ಪ್ರಮಾಣ ಸ್ವೀಕರಿಸಿ ಅಧಿಕಾರಕ್ಕೆ ಬಂದವರು ನಾವು. ದೇಶದಲ್ಲಿರುವ ಕಾನೂನುಗಳು ಸಂವಿಧಾನಕ್ಕೆ ಅನುಗುಣವಾಗಿ ಇದೆಯೇ ಎಂಬುದನ್ನು ಸುಪ್ರೀಂ ಕೋರ್ಟ್‌ ವ್ಯಾಖ್ಯಾನಿಸುತ್ತದೆ. ಅಸಾಂವಿಧಾನಿಕ ಎಂದು ಒಂದು ನಿಯಮವನ್ನು ಸುಪ್ರೀಂ ಕೋರ್ಟ್‌ ರದ್ದುಪಡಿಸಿದರೆ ಅದನ್ನು ಪಾಲಿಸುವುದು ರಾಜ್ಯ ಸರ್ಕಾರದ ಸಾಂವಿಧಾನಿಕ ಕರ್ತವ್ಯ. 

* ಕೋವಿಡ್‌–19 ಎರಡನೇ ಅಲೆ ತೀವ್ರಗೊಂಡಾಗ ಅದನ್ನು ನಿಮ್ಮ ಸರ್ಕಾರ ನಿಭಾಯಿಸಿದ ರೀತಿಯ ಬಗ್ಗೆ ಟೀಕೆಗಳಿವೆಯಲ್ಲ...

ಸಂಖ್ಯೆಗಳನ್ನು ಗಮನಿಸಿದರೆ, ಹೊಸ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಕಡಿಮೆ ಆಗಿರುವುದನ್ನು ಗುರುತಿಸಬಹುದು. ಐದು ತಿಂಗಳ ಹಿಂದೆ ಇದ್ದುದಕ್ಕಿಂತ ಉತ್ತಮ ಸ್ಥಿತಿಯಲ್ಲಿ ಇಂದು ನಾವು ಇದ್ದೇವೆ. ಕಳೆದ ಒಂದೇ ವಾರದಲ್ಲಿ ಪ್ರಕರಣಗಳ ಪ್ರಮಾಣ ಶೇ 15ರಷ್ಟು ಕಡಿಮೆ ಆಗಿದೆ. 

* ಹಾಗಿದ್ದರೆ ಕೇರಳದ ಗಡಿ ಭಾಗಗಳಲ್ಲಿ ಕರ್ನಾಟಕವು ಪ್ರಯಾಣ ನಿರ್ಬಂಧ ಹೇರಿದ್ದು ಏಕೆ? ಕಾಸರಗೋಡಿನ ಜನರು ವಿವಿಧ ಸೌಲಭ್ಯಗಳಿಗಾಗಿ ಮಂಗಳೂರಿಗೆ ಏಕೆ ಹೋಗಬೇಕು?

ದುರಂತಗಳ ಸಂದರ್ಭದಲ್ಲಿ ಮೊದಲಿಗೆ ರಾಜ್ಯದ ಜನರ ಯೋಗಕ್ಷೇಮ ನೋಡಿಕೊಳ್ಳುವುದು ಯಾವುದೇ ಸರ್ಕಾರದ ಸಹಜ ನಡೆ. ಇಡೀ ಜಗತ್ತನ್ನು ಕಾಡಿದ ಕೋವಿಡ್‌ನಂತಹ ಸಾಂಕ್ರಾಮಿಕದ ಸಂದರ್ಭದಲ್ಲಿ ಎಲ್ಲರೂ ಜತೆಯಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಇದಕ್ಕಿಂತ ಹೆಚ್ಚೇನನ್ನೂ ಈಗ ಹೇಳುವುದಿಲ್ಲ. 

ಕಾಸರಗೋಡು ವಿಚಾರಕ್ಕೆ ಬಂದರೆ, ಚಾರಿತ್ರಿಕವಾಗಿಯೇ ಇದು ದಕ್ಷಿಣ ಕನ್ನಡ ಪ್ರದೇಶದ ಭಾಗ. ಮೂಲ ಸೌಲಭ್ಯಗಳೂ ಸೇರಿ ವಿವಿಧ ಕಾರಣಗಳಿಗಾಗಿ ಕಾಸರಗೋಡಿನ ಜನರು ಮಂಗಳೂರಿಗೆ ಹೋಗುವುದು ಸಹಜ. ಇದನ್ನು ನಾವು ನೆನಪಿನಲ್ಲಿ ಇರಿಸಿಕೊಳ್ಳಬೇಕು. ಕಳೆದ ಕೆಲವು ವರ್ಷಗಳಲ್ಲಿ ಕಾಸರಗೋಡಿನ ಅಭಿವೃದ್ಧಿಯಲ್ಲಿ ದಾಪುಗಾಲು ಇರಿಸಲಾಗಿದೆ. ಹೆದ್ದಾರಿಗಳು, ಆಸ್ಪತ್ರೆಗಳು, ಶಾಲೆಗಳು ಇತ್ಯಾದಿ ನಿರ್ಮಾಣ ಆಗಿವೆ. ಮುಂದಿನ ಐದು ವರ್ಷಗಳಲ್ಲಿ ಕಾಸರಗೋಡನ್ನು ಅಭಿವೃದ್ಧಿ ಹೊಂದಿದ ಪ್ರದೇಶವಾಗಿಸುವ ಬಗ್ಗೆ ಯೋಚಿಸುತ್ತಿದ್ದೇವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು