ಶನಿವಾರ, 10 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಸಂದರ್ಶನ | ಮೂಲಸ್ವರೂಪ ಸಿದ್ಧಾಂತದಿಂದ ಸಂವಿಧಾನಕ್ಕೆ ಸ್ಥಿರತೆ

Last Updated 30 ಡಿಸೆಂಬರ್ 2022, 20:25 IST
ಅಕ್ಷರ ಗಾತ್ರ

ಬೆಂಗಳೂರಿನ ನ್ಯಾಷನಲ್‌ ಲಾ ಸ್ಕೂಲ್ ಆಫ್‌ ಇಂಡಿಯಾ ಯೂನಿವರ್ಸಿಟಿಯ ಕುಲಪತಿ ಸುಧೀರ್ ಕೃಷ್ಣಸ್ವಾಮಿ ಅವರಿಗೆ ಇನ್ಫೊಸಿಸ್‌ ಸೈನ್ಸ್‌ ಫೌಂಡೇಷನ್‌ ತನ್ನ ವಾರ್ಷಿಕ ಪ್ರಶಸ್ತಿಯನ್ನು ಘೋಷಿಸಿದೆ. ಪ್ರಶಸ್ತಿಯು ಜನವರಿಯಲ್ಲಿ ಪ್ರದಾನ ಆಗುವ ನಿರೀಕ್ಷೆ ಇದೆ. ಮಾನವಿಕ ವಿಭಾಗದಲ್ಲಿ ಸುಧೀರ್ ಕೃಷ್ಣಸ್ವಾಮಿ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅವರು ಸಂವಿಧಾನದ ಮೂಲ ಸ್ವರೂಪದ ಕುರಿತು ಮಾಡಿದ ಸಂಶೋಧನೆಗಳನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಆಗಿರುವುದು ವಿಶೇಷ. ಸಂವಿಧಾನದ ಮೂಲ ಸ್ವರೂಪ ಹಾಗೂ ಅದರ ಮಿತಿಗಳ ಕುರಿತು ಮತ್ತೆ ಚರ್ಚೆಗಳು ನಡೆಯುತ್ತಿವೆ. ನ್ಯಾಯಮೂರ್ತಿಗಳ ನೇಮಕಕ್ಕೆ ಕೊಲಿಜಿಯಂ ವ್ಯವಸ್ಥೆಯು ಸರಿಯಲ್ಲ, ಎನ್‌ಜೆಎಸಿ ವ್ಯವಸ್ಥೆಯನ್ನು ಅಸಿಂಧುಗೊಳಿಸಿದ್ದು ತಪ್ಪು ಎಂಬ ಅಭಿಪ್ರಾಯಗಳನ್ನು ಶಾಸಕಾಂಗ ಹಾಗೂ ಕಾರ್ಯಾಂಗದ ಪ್ರಮುಖರು ಈಚೆಗೆ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿಯೂ ಸಂವಿಧಾನದ ಮೂಲ ಸ್ವರೂಪದ ತಾತ್ವಿಕತೆ ಕುರಿತ ಚರ್ಚೆ ಮಹತ್ವ ಪಡೆದಿದೆ. ಸುಧೀರ್ ಕೃಷ್ಣಸ್ವಾಮಿ ಅವರು ‘ಪ್ರಜಾವಾಣಿ’ಗೆ ಇ–ಮೇಲ್‌ ಮೂಲಕ ನೀಡಿರುವ ಸಂದರ್ಶನದ ಆಯ್ದ ಭಾಗ ಇಲ್ಲಿದೆ

-----

l ಸಂವಿಧಾನದಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿರದೇ ಇದ್ದರೂ ಸುಪ್ರೀಂ ಕೋರ್ಟ್‌ ಕೇಶವಾನಂದ ಭಾರತಿ ಪ್ರಕರಣದಲ್ಲಿ ನೀಡಿದ ಐತಿಹಾಸಿಕ ತೀರ್ಪಿನ ಮೂಲಕ, ‘ಸಂವಿಧಾನದ ಮೂಲ ಸ್ವರೂಪ’ ಎಂಬ ತತ್ವಕ್ಕೆ ಜೀವ ಕೊಟ್ಟಿತು. ಶಾಸಕಾಂಗವು ತನ್ನ ವ್ಯಾಪ್ತಿಯನ್ನು ಮೀರಿ ಕೈಗೊಳ್ಳುವ ತೀರ್ಮಾನಗಳಿಂದ ಇದು ಹೇಗೆ ಸಂವಿಧಾನವನ್ನು ರಕ್ಷಿಸಿದೆ?

ಸಂವಿಧಾನದ ಮೂಲ ಸ್ವರೂಪಕ್ಕೆ ಸಂಬಂಧಿಸಿದ ಸಿದ್ಧಾಂತವು ಸಂವಿಧಾನವನ್ನು ಅಕ್ಷರಶಃ ಅರ್ಥೈಸುವುದನ್ನು ಆಧರಿಸಿಲ್ಲ. ಎಲ್ಲ ಅಂಗಗಳಿಗೂ ಇರುವ ಅಧಿಕಾರಕ್ಕೆ ಮಿತಿಗಳು ಇವೆ ಎನ್ನುವ ಸಾಂವಿಧಾನಿಕ ಪ್ರಜಾತಂತ್ರವನ್ನು ಸೃಷ್ಟಿಸಿದ ಸಂವಿಧಾನದ ಪಠ್ಯವನ್ನು ರಾಚನಿಕವಾಗಿ ಅರ್ಥೈಸುವ ಮೂಲಕ ಈ ತತ್ವ ಹುಟ್ಟಿಕೊಂಡಿದೆ.

ಸಂಸತ್ತಿನಲ್ಲಿ ಒಂದು ಪಕ್ಷಕ್ಕೆ ಬಹಳ ದೊಡ್ಡ ಬಹುಮತ ಇದ್ದಾಗಲೂ ಈ ತತ್ವವು ಸಾಂವಿಧಾನಿಕ ಸ್ಥಿರತೆಯನ್ನು ತಂದುಕೊಟ್ಟಿದೆ. ಇದು ರಾಜಕೀಯದ ಅತಿರೇಕಗಳಿಂದ ರಕ್ಷಣೆಯನ್ನು ನೀಡಿದೆ.

l ಆದರೆ ಈ ತತ್ವವು ಶಾಸಕಾಂಗಕ್ಕೆ ವಾಸ್ತವದಲ್ಲಿ ಇರುವ ಅಧಿಕಾರವನ್ನು ಮೊಟಕುಗೊಳಿಸಿಲ್ಲವೇ? ಏಕೆಂದರೆ, ಸಂವಿಧಾನದ ಮೂಲ ಸ್ವರೂಪ ಎಂಬ ತತ್ವವನ್ನು ಹುಟ್ಟುಹಾಕಿದ್ದು ನ್ಯಾಯಾಂಗ. ಮೂಲ ಸ್ವರೂಪವೆಂದರೆ ಏನು ಎಂಬುದನ್ನು ಈಗಲೂ ತೀರ್ಮಾನಿಸುತ್ತಿರುವುದು ನ್ಯಾಯಾಂಗ. ಮೂಲ ಸ್ವರೂಪದ ವ್ಯಾಖ್ಯಾನದಲ್ಲಿ ಶಾಸಕಾಂಗ ಅಥವಾ ಕಾರ್ಯಾಂಗಕ್ಕೆ ಯಾವುದೇ ಪಾತ್ರವಿರುವಂತೆ ಕಾಣುತ್ತಿಲ್ಲ.

ಸಂವಿಧಾನಕ್ಕೆ ಇರುವ ಮೂಲ ಲಕ್ಷಣಗಳನ್ನು ದೇಶದ ಸಾಮಾನ್ಯ ಜನ (ಅವರು ಪತ್ರಿಕೆಗಳಲ್ಲಿ ಲೇಖನ ಬರೆಯುವ ಮೂಲಕ ಜನಪ್ರಿಯ ನಿಯತಕಾಲಿಕಗಳಲ್ಲಿ ಪ್ರಬಂಧಗಳನ್ನು ಬರೆಯುವ ಮೂಲಕ), ಅಕಾಡೆಮಿಕ್ ವಲಯದ ವಿದ್ವಾಂಸರು, ಕಕ್ಷಿದಾರರು ಹಾಗೂ ಅವರ ಪರವಾಗಿ ಪ್ರಕರಣಗಳಲ್ಲಿ ವಾದ ಮಂಡಿಸುವ ವಕೀಲರು ಗುರುತಿಸುತ್ತ ಬಂದಿದ್ದಾರೆ. ಸಂವಿಧಾನದ ಮೂಲ ಲಕ್ಷಣಗಳು ಯಾವುವು ಎಂಬುದನ್ನು ಅಂತಿಮವಾಗಿ ತೀರ್ಮಾನಿಸುವುದು ನ್ಯಾಯಾಲಯವೇ ಆದರೂ, ಈ ತತ್ವವನ್ನು ವ್ಯಾಖ್ಯಾನಿಸುವ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಎಲ್ಲರೂ ಇದು ರೂಪುಗೊಳ್ಳಲು ಕಾರಣ ಎನ್ನಬೇಕಾಗುತ್ತದೆ.

ಶಾಸಕಾಂಗ ಹಾಗೂ ಕಾರ್ಯಾಂಗದ ಅಧಿಕಾರವನ್ನು ಅಸಿಂಧುಗೊಳಿಸಲು ಈ ತತ್ವವನ್ನು ಬಹಳ ಕಡಿಮೆ ಸಂದರ್ಭಗಳಲ್ಲಿ ಬಳಕೆ ಮಾಡಲಾಗಿದೆ. ಕಳೆದ ಐವತ್ತು ವರ್ಷಗಳ ಅವಧಿಯಲ್ಲಿ ಹತ್ತಕ್ಕೂ ಕಡಿಮೆ ಸಂದರ್ಭಗಳಲ್ಲಿ ಶಾಸನವೊಂದನ್ನು, ಕಾರ್ಯಾಂಗದ ತೀರ್ಮಾನವನ್ನು ಅಥವಾ ತಿದ್ದುಪಡಿಯನ್ನು ಅಸಿಂಧುಗೊಳಿಸಲು ಬಳಕೆ ಮಾಡಲಾಗಿದೆ.

l ಎನ್‌ಜೆಎಸಿ ಕಾಯ್ದೆಯನ್ನು ರೂಪಿಸುವ ಮೂಲಕ ಕೇಂದ್ರ ಸರ್ಕಾರವು ಕೊಲಿಜಿಯಂ ವ್ಯವಸ್ಥೆಯನ್ನು ರೂಪಿಸಿದ ತೀರ್ಪುಗಳನ್ನು ಅಸಿಂಧುಗೊಳಿಸಲು ಯತ್ನಿಸಿತು. ಆದರೆ, ಎನ್‌ಜೆಎಸಿ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ, ಹಾಗೂ ಆ ಮೂಲಕ ಸಂವಿಧಾನದ ಮೂಲ ಸ್ವರೂಪಕ್ಕೆ, ಧಕ್ಕೆ ತರುತ್ತದೆ ಎಂದು ಸುಪ್ರೀಂ ಕೋರ್ಟ್‌ ಈ ಕಾಯ್ದೆಯನ್ನು ಅಸಿಂಧುಗೊಳಿಸಿತು. ಮೂಲ ಸ್ವರೂಪವನ್ನು ರಕ್ಷಿಸುವ ನೆಪದಲ್ಲಿ ಜನರ ಇಚ್ಛೆಯನ್ನು ಒಪ್ಪಿಕೊಳ್ಳದೆ ನ್ಯಾಯಾಂಗವು ತನ್ನ ಮಿತಿಗಳನ್ನು ಮೀರಿತೇ?

ಎನ್‌ಜೆಎಸಿ ತಿದ್ದುಪಡಿ ಹಾಗೂ ಆ ವಿಚಾರವಾಗಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪು ಈಗ ವಿವಾದಕ್ಕೆ ಒಳಗಾಗಿದೆ. ಇಡೀ ವಿಚಾರವನ್ನು ನಾವು ಹೀಗೊಂದು ದೃಷ್ಟಿಕೋನದಿಂದ ಹೆಚ್ಚು ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದು. ಅಧಿಕಾರವನ್ನು ಪ್ರತ್ಯೇಕಗೊಳಿಸಿರುವುದು ಸಂವಿಧಾನದ ಮೂಲ ಲಕ್ಷಣಗಳಲ್ಲಿ ಒಂದು ಎಂಬುದರಲ್ಲಿ ಎರಡನೆಯ ಮಾತೇ ಇಲ್ಲ. ಅಧಿಕಾರವನ್ನು ಪ್ರತ್ಯೇಕಗೊಳಿಸಿರುವ ಅಂಶದ ಅಡಿಯಲ್ಲೇ ನ್ಯಾಯಾಂಗದ ಸ್ವಾತಂತ್ರ್ಯ ಕೂಡ ಒಂದು.

ನ್ಯಾಯಾಂಗದ ಸ್ವಾತಂತ್ರ್ಯವನ್ನು ಕಾಯ್ದುಕೊಳ್ಳಲು ಇರುವ ಒಂದೇ ಮಾರ್ಗವೆಂದರೆ ಇಂದಿನ ಕೊಲಿಜಿಯಂ ವ್ಯವಸ್ಥೆಯೇ? ಎನ್‌ಜೆಎಸಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪು, ನ್ಯಾಯಾಂಗದ ಸ್ವಾತಂತ್ರ್ಯವನ್ನು ಕಾಯ್ದುಕೊಳ್ಳಲು ಕೊಲಿಜಿಯಂ ವ್ಯವಸ್ಥೆ ಅಗತ್ಯ ಎಂಬ ಮಾತನ್ನು ಅನುಮೋದಿಸುತ್ತದೆ. ಆದರೆ, ಕಾರ್ಯಾಂಗ (ಸರ್ಕಾರ) ಹೇಳುವುದು ನ್ಯಾಯಮೂರ್ತಿಗಳನ್ನು ನೇಮಕ ಮಾಡಲು ತನಗೂ ಆಗಬೇಕು ಎಂದು. ಆದರೆ, ಇದರಿಂದ ನ್ಯಾಯಾಂಗದ ಸ್ವಾತಂತ್ರ್ಯದ ರಕ್ಷಣೆ ಸಾಧ್ಯವಿಲ್ಲ. ಹೀಗಾಗಿ, ನ್ಯಾಯಮೂರ್ತಿಗಳ ನೇಮಕ ಪ್ರಕ್ರಿಯೆಯಲ್ಲಿ ಅಂತಿಮ ಅಧಿಕಾರವು ಕಾರ್ಯಾಂಗಕ್ಕೂ, ನ್ಯಾಯಾಂಗಕ್ಕೂ ಇಲ್ಲದ ಮೂರನೆಯ ವ್ಯವಸ್ಥೆಯೊಂದನ್ನು ನಾವು ಕಂಡುಕೊಳ್ಳಬೇಕು. ಸಂವಿಧಾನದ ಮೂಲ ಸ್ವರೂಪದ ತಾತ್ವಿಕತೆಗೆ ಅನುಗುಣವಾಗಿಯೇ ಈ ಮೂರನೆಯ ವ್ಯವಸ್ಥೆಯನ್ನು ರೂಪಿಸಬಹುದು.

l ಇಡಬ್ಲ್ಯುಎಸ್‌ ವರ್ಗಕ್ಕೆ ಕಲ್ಪಿಸಿರುವ ಮೀಸಲಾತಿಯನ್ನು ಸುಪ್ರೀಂ ಕೋರ್ಟ್‌ ಬಹುಮತದ ತೀರ್ಪಿನ ಮೂಲಕ ಎತ್ತಿಹಿಡಿದಿದೆ. ಆದರೆ ಇಲ್ಲಿ ಮೂಲ ಸ್ವರೂಪದ ಉಲ್ಲಂಘನೆ ಆಗಿದೆಯೇ?

ಇಡಬ್ಲ್ಯುಎಸ್‌ ವರ್ಗಕ್ಕೆ ಮೀಸಲಾತಿಯನ್ನು ಕಲ್ಪಿಸಿದ ತಿದ್ದುಪಡಿಯಲ್ಲಿ ಮೂಲ ಸ್ವರೂಪದ ಉಲ್ಲಂಘನೆ ಆಗಿದೆಯೇ ಎಂಬ ವಿಚಾರವಾಗಿ ಬಹಳ ದೊಡ್ಡ ಭಿನ್ನಮತ ಇದೆ. ಇಡಬ್ಲ್ಯುಎಸ್‌ ತಿದ್ದುಪಡಿಯು ಲಂಬ ಮೀಸಲಾತಿ (vertical reservation) ವರ್ಗವೊಂದನ್ನು ಸೃಷ್ಟಿಸುವ ಬದಲು, ಸಮತಲದ ಮೀಸಲಾತಿಯನ್ನು (horizontal reservation) ಜಾರಿಗೆ ತರಬೇಕಿತ್ತು. ಆಗ ಎಲ್ಲ ವರ್ಗಗಳಲ್ಲಿ ಇರುವ ಆರ್ಥಿಕವಾಗಿ ಹಿಂದುಳಿದವರಿಗೆ ಪ್ರಯೋಜನ ಆಗುತ್ತಿತ್ತು. ಈಗಿನ ಇಡಬ್ಲ್ಯುಎಸ್‌ ಮೀಸಲಾತಿಗೆ ಅವಕಾಶ ಕಲ್ಪಿಸುವ ಮೂಲಕ ನ್ಯಾಯಾಲಯವೇ ಶೇ 50ರ ಮಿತಿಯನ್ನು ಮೀರಿದೆ. ಇದು ಮೀಸಲಾತಿಯ ಸುತ್ತ ಸ್ಪರ್ಧಾತ್ಮಕ ರಾಜಕಾರಣಕ್ಕೆ ದಾರಿ ಮಾಡಿಕೊಟ್ಟಿದೆ. ಇದನ್ನು ನಿಯಂತ್ರಿಸುವುದು ಕಷ್ಟ.

l ಶಾಸಕಾಂಗ ಹಾಗೂ ಕಾರ್ಯಾಂಗ ತಮ್ಮ ಮಿತಿಗಳನ್ನು ಮೀರಿದ್ದು ಕೂಡ ಕೊಲಿಜಿಯಂ ವ್ಯವಸ್ಥೆಯ ಉಗಮಕ್ಕೆ ಕಾರಣ ಎಂದು ನ್ಯಾಯಶಾಸ್ತ್ರ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ. ಈ ತಾತ್ವಿಕತೆಯು ಚುನಾಯಿತ ಸರ್ಕಾರಗಳು ತಮ್ಮ ಅಧಿಕಾರವನ್ನು ಮಿತಿ ಮೀರಿ ಬಳಸುವುದರಿಂದ ನ್ಯಾಯಾಂಗವನ್ನು ಹೇಗೆ ರಕ್ಷಿಸುತ್ತಿದೆ?

ಸಂವಿಧಾನ ಮೂಲ ಸ್ವರೂಪಕ್ಕೆ ಸಂಬಂಧಿಸಿದ ತಾತ್ವಿಕತೆಯು ಜನ್ಮತಾಳಿದ ಸಂದರ್ಭದಲ್ಲಿ ಕಾನೂನು ವಿದ್ವಾಂಸರು ಅದರ ಬಗ್ಗೆ ವಿಮರ್ಶಾತ್ಮಕವಾಗಿ ಮಾತನಾಡಿದ್ದರು. ಆದರೆ, ಕಾಲ ಕಳೆದಂತೆಲ್ಲ, ಅವರಲ್ಲಿ ಕೆಲವರು ಈ ತಾತ್ವಿಕತೆಯು ಭಾರತದ ಸಾಂವಿಧಾನಿಕ ಪ್ರಜಾತಂತ್ರದ ಪಾಲಿಗೆ ಅದೆಷ್ಟು ಮೌಲ್ಯಯುತವಾದುದು ಎಂಬುದನ್ನು ಗುರುತಿಸಿದ್ದಾರೆ. ಮೂಲ ಸ್ವರೂಪದ ತಾತ್ವಿಕತೆಯನ್ನು ಒಂದು ರೂಪದಲ್ಲಿ ದಕ್ಷಿಣ ಆಫ್ರಿಕದಲ್ಲಿ ಹಾಗೂ ಇತರ ಕೆಲವೆಡೆಗಳಲ್ಲಿ ಅಳವಡಿಸಿಕೊಳ್ಳಲಾಗಿದೆ.

ಈ ತಾತ್ವಿಕತೆಯ ಛಾಯೆಯು ಈಗ ಬ್ರಿಟನ್ನಿನ ಸುಪ್ರೀಂ ಕೋರ್ಟ್‌ನ ಈಚಿನ ಕೆಲವು ತೀರ್ಪುಗಳಲ್ಲಿ ಕಾಣಿಸುತ್ತಿದೆ. ಪ್ರಜಾತಂತ್ರ ವ್ಯವಸ್ಥೆಗಳನ್ನು ಸುಲಭವಾಗಿ ಹಾಳು ಮಾಡಿಬಿಡಬಹುದು, ಅವುಗಳಿಗೆ ಸಾಂಸ್ಥಿಕ ಬಲ ಬೇಕಾಗುತ್ತದೆ. ಸಾಂವಿಧಾನಿಕ ಪ್ರಜಾತಂತ್ರ ವ್ಯವಸ್ಥೆಗಳು ಮೂಲ ಸ್ವರೂಪ ಎಂಬ ತಾತ್ವಿಕತೆಯ ಪ್ರಯೋಜನ ಪಡೆದುಕೊಳ್ಳಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT