ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನು–ಪ್ರಿಯಾ ಸಂಬಂಧ ಕಾಡುತ್ತದೆ: 'ಸಪ್ತ ಸಾಗರದಾಚೆ ಎಲ್ಲೋ' ನಟಿ ರುಕ್ಮಿಣಿ ಸಂದರ್ಶನ

Published 31 ಆಗಸ್ಟ್ 2023, 19:30 IST
Last Updated 31 ಆಗಸ್ಟ್ 2023, 19:30 IST
ಅಕ್ಷರ ಗಾತ್ರ

ನಟ ರಕ್ಷಿತ್‌ ಶೆಟ್ಟಿ, ರುಕ್ಮಿಣಿ ವಸಂತ್ ಅಭಿನಯದ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರ ಇಂದು (ಸೆ.1) ತೆರೆ ಕಾಣುತ್ತಿದೆ. ಇಂಗ್ಲಿಷ್‌ ರಂಗಭೂಮಿಯಿಂದ ನಟನೆ ಆರಂಭಿಸಿದ ರುಕ್ಮಿಣಿ, ತಮ್ಮ ಪಾತ್ರದ ಕುರಿತು, ಸಿನಿ ಪಯಣದ ಕುರಿತು ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ...

ಪ್ರ

ನಿಮ್ಮ ನಟನೆಯ ನಂಟಿನ ಕುರಿತು ಹೇಳಿ.

ನಮ್ಮದು ಕಲಾವಿದರ ಕುಟುಂಬ. ಅಜ್ಜಿ, ಅಮ್ಮ ಭರತನಾಟ್ಯ ಕಲಾವಿದೆಯರು. ಹೀಗಾಗಿ ನನಗೂ ಬಾಲ್ಯದಿಂದಲೇ ಭರತನಾಟ್ಯದ ನಂಟು. ಬ್ಯಾಲೆ ಡ್ಯಾನ್ಸರ್‌ ಆಗಿದ್ದೆ. ಶಾಲಾ ದಿನಗಳಲ್ಲಿ ರಂಗಭೂಮಿ ನಟನೆ ಪ್ರಾರಂಭಿಸಿದೆ. ಓದಿಗಿಂತ ನಟನೆಯಲ್ಲೇ ಆಸಕ್ತಿ, ಖುಷಿ ಹೆಚ್ಚಿತ್ತು. ಆದರೆ ಅಮ್ಮ ಪಿಯುಸಿ ಮುಗಿಯುವ ತನಕ ನಟನೆ ಬೇಡ ಎಂದಿದ್ದರು. ಪಿಯುಸಿ ಮುಗಿಸಿ ರಂಗ ತರಬೇತಿಗೆ ಲಂಡನ್‌ನ ‘ರಾಯಲ್‌ ಅಕಾಡೆಮಿ ಆಫ್‌ ಆರ್ಟ್ಸ್’ ಸೇರಿಕೊಂಡೆ. ನಟನೆಯಲ್ಲಿ ಪದವಿ ಮುಗಿಸಿ ಬೆಂಗಳೂರಿಗೆ ಮರಳಿದೆ.

ಪ್ರ

ನೀವು ಮೂಲತಃ ಬೆಂಗಳೂರಿನವರಾ?


ಹೌದು. ಹುಟ್ಟಿದ್ದು ಬೆಂಗಳೂರಿನಲ್ಲಿ. ಆದರೆ ಅಪ್ಪ ಸೈನ್ಯದಲ್ಲಿದ್ದರು. ಹೀಗಾಗಿ ಗುಜರಾತ್‌, ಚೆನ್ನೈನಿಂದ ಹಿಡಿದು ದೇಶದ ಬೇರೆ ಬೇರೆ ಊರುಗಳಲ್ಲಿದ್ದೆ. ನಟನೆ ತರಬೇತಿ ಮುಗಿಸಿ ಬಂದಾಗ ಅಪ್ಪ ಕಾಶ್ಮೀರದಲ್ಲಿದ್ದರು. ನೆಲೆಗೊಂಡಿದ್ದು ಬೆಂಗಳೂರಿನಲ್ಲಿ.

ಪ್ರ

ನಿಮ್ಮ ಸಿನಿಮಾ ಪಯಣ ಹೇಗೆ ಪ್ರಾರಂಭವಾಯಿತು?

ಲಂಡನ್‌ನಿಂದ ಬಂದ ಬಳಿಕ ‘ಆಡಿಷನ್‌’ ನೀಡಲು ಆರಂಭಿಸಿದೆ. ‘ಬೀರಬಲ್‌’ ಸಿನಿಮಾಕ್ಕೆ ಆಯ್ಕೆಯಾದೆ. 2019ರಲ್ಲಿ ಸಿನಿಮಾ ತೆರೆಗೆ ಬಂತು. ಅಷ್ಟು ಹೊತ್ತಿಗೆ ‘ಸಪ್ತ ಸಾಗರ’ ಆಡಿಷನ್‌ ಕರೆದಿದ್ದರು. ನಿರ್ದೇಶಕ ಹೇಮಂತ್‌ ಅವರ ಸಿನಿಮಾಗಳ ಅಭಿಮಾನಿ. ಹೀಗಾಗಿ ಪ್ರಯತ್ನಿಸಿದೆ.

ಪ್ರ

‘ಸಪ್ತ ಸಾಗರಕ್ಕೆ’ ನಾಯಕಿಯಾಗಿ ಆಯ್ಕೆಯಾದ ಕ್ಷಣ ಹೇಗಿತ್ತು?

ಆಡಿಷನ್‌ ಮರುದಿನ ಹೇಮಂತ್‌ ಕರೆ ಮಾಡಿ ಬಹಳ ಸಹಜವಾಗಿ ಮಾತು ಪ್ರಾರಂಭಿಸಿದರು. ಗೆಟಪ್‌ ಬಗ್ಗೆ ಹೇಳಿದರು. ಆಫೀಸಿಗೆ ಬರಲು ತಿಳಿಸಿದರು. ಆದರೆ ಆಯ್ಕೆ ಆಗಿರುವೆನೋ, ಇಲ್ಲವೋ ಎನ್ನುವುದನ್ನು ಹೇಳಲಿಲ್ಲ. ಕುತೂಹಲ ತಡೆದುಕೊಳ್ಳಲಾದೆ ನಾನೇ ಆಯ್ಕೆಯಾಗಿದ್ದೀನಾ ಅಂತ ಕೇಳಿದೆ. ನಿಜಕ್ಕೂ ಅದೊಂದು ಅವಿಸ್ಮರಣೀಯ ಕ್ಷಣ.

ಪ್ರ

ಚಿತ್ರದಲ್ಲಿ ನಿಮ್ಮ ಪಾತ್ರವೇನು?

‘ಪ್ರಿಯಾ’ ಎಂಬ ಪಾತ್ರ ಮಾಡಿರುವೆ. ಕಾಲೇಜು ಓದುವ ಮಧ್ಯಮ ವರ್ಗದ ಹುಡುಗಿ. ಹಾಡುಗಾರ್ತಿ. ಅದರಲ್ಲಿಯೇ ಸಾಧನೆ ಮಾಡಬೇಕೆಂಬ ಕನಸು ಕಾಣುತ್ತಿರುತ್ತೇನೆ. ಮನುವಿನ ಪರಿಚಯವಾಗುತ್ತೆ. ನಮ್ಮಿಬ್ಬರ ಪ್ರೀತಿಯ ಪಯಣದ ಕಥೆಯೇ ಈ ಸಿನಿಮಾ.

ಪ್ರ

ಹೇಮಂತ್‌ ರಾವ್‌ ಅವರಂತಹ ನಿರ್ದೇಶಕರ ಜೊತೆ ಕೆಲಸ ಮಾಡುವುದು ಎಷ್ಟು ಸವಾಲಾಗಿತ್ತು?

ಬಹಳ ಸುಲಭವಾಗಿತ್ತು. ಕಲಾವಿದರಿಗೆ ಒತ್ತಡ ಹಾಕದೆ, ಅವರಲ್ಲಿನ ಒತ್ತಡವನ್ನು ತೆಗೆಯುವುದು ನಿರ್ದೇಶಕನ ಕೆಲಸ ಎಂಬ ನಂಬಿಕೆಯಲ್ಲಿ ಕೆಲಸ ಮಾಡುವವರು ಹೇಮಂತ್‌. ಹೀಗಾಗಿ ಸೆಟ್‌ನಲ್ಲಿ ಯಾವತ್ತೂ ಒತ್ತಡ ಹಾಕುತ್ತಿರಲಿಲ್ಲ. ಅಂದುಕೊಂಡ ನಟನೆ, ಭಾವನೆ ಬಂದಿಲ್ಲ ಎನ್ನಿಸಿದರೆ ತಯಾರಿಗೆ ಸಾಕಷ್ಟು ಸಮಯ ಕೊಡುತ್ತಿದ್ದರು. ಇಡೀ ಸೆಟ್‌ ಕಲಾವಿದರು ಸಿದ್ಧರಾಗುವವರೆಗೆ ಚೂರೂ ಬೇಸರಿಕೊಳ್ಳದೇ ಕಾಯುತ್ತಿದ್ದರು. ತುಂಬ ಕಡೆ ಮಾತಿಗಿಂತ ಭಾವನೆಗೆ ಹೆಚ್ಚು ಒತ್ತು ನೀಡಿದ್ದಾರೆ. ಕಣ್ಣಿನಲ್ಲೇ ನಟನೆ ತೆಗೆಸಿದ್ದಾರೆ.

ಪ್ರ

ರಕ್ಷಿತ್‌ ಜೊತೆಗಿನ ಅಭಿನಯದ ಅನುಭವ ಹೇಗಿತ್ತು? 

ರಕ್ಷಿತ್‌ ಕೂಡ ತುಂಬ ಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಲುಕ್‌, ಹಾವಭಾವ ಎಲ್ಲವೂ ಈವರೆಗಿನ ಸಿನಿಮಾಗಳಿಂದ ಹೊರತಾಗಿದೆ. ನಿಧಾನವಾದ ಮಾತು. ಪ್ರಿಯಾ ಮತ್ತು ಮನುವಿನ ಸಂಬಂಧ ಚಿತ್ರಮಂದಿರದಿಂದ ಹೊರಬಂದ ಮೇಲೆಯೂ ಪ್ರೇಕ್ಷಕರನ್ನು ಕಾಡುತ್ತದೆ ಎಂಬ ವಿಶ್ವಾಸವಿದೆ.

ಪ್ರ

ನಿಮ್ಮ ಮುಂದಿನ ಯೋಜನೆಗಳ ಕುರಿತು ಹೇಳಿ?

ಗಣೇಶ್‌ ಅವರ ಜೊತೆಗಿನ ‘ಬಾನ ದಾರಿಯಲ್ಲಿ’ ಬಿಡುಗಡೆಗೆ ಸಿದ್ಧವಿದೆ. ಶಿವರಾಜ್‌ ಕುಮಾರ್‌ ಜೊತೆಗೆ ‘ಭೈರತಿ ರಣಗಲ್‌’ ಸಿನಿಮಾದಲ್ಲಿ ನಟಿಸುತ್ತಿರುವೆ. ವಿಜಯ್‌ ಸೇತುಪತಿ ಜೊತೆ ತಮಿಳು ಚಿತ್ರವೊಂದನ್ನು ಒಪ್ಪಿಕೊಂಡಿರುವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT