ಭಾನುವಾರ, ಆಗಸ್ಟ್ 1, 2021
27 °C

ವಿಶ್ಲೇಷಣೆ | ಸೆಮಿಸ್ಟರ್ ಪದ್ಧತಿಯ ಪಾಡು

ಬರಗೂರು ರಾಮಚಂದ್ರಪ್ಪ Updated:

ಅಕ್ಷರ ಗಾತ್ರ : | |

ಯೂನಿವರ್ಸಿಟಿ ಗ್ರ್ಯಾಂಟ್ಸ್ ಕಮಿಷನ್‌ (ಯು.ಜಿ.ಸಿ) ನಿರ್ದೇಶನದ ಅನ್ವಯ, 2009ರಿಂದ ಪದವಿ ಹಾಗೂ ಸ್ನಾತಕೋತ್ತರ ಪದವಿ ತರಗತಿಗಳಿಗೆ ಸೆಮಿಸ್ಟರ್ ಪದ್ಧತಿನ್ನು ಜಾರಿಗೊಳಿಸಲಾಗಿದೆ. ಒಂದು ದಶಕ ಮೀರಿರುವ ಈ ಸಂದರ್ಭದಲ್ಲಿ ಸೆಮಿಸ್ಟರ್ ಪದ್ಧತಿಯ ಸಾಧಕ, ಬಾಧಕಗಳ ಮರು ಮೌಲ್ಯಮಾಪನದ ಅಗತ್ಯಇದೆ. ಸ್ವತಃ ಯು.ಜಿ.ಸಿ.ಯೇ ವಿವಿಧ ಹಂತಗಳಲ್ಲಿ ತನ್ನ ಸ್ವರೂಪವನ್ನು ಬದಲಾಯಿಸಿಕೊಂಡು ಬಂದಿರುವ ಚರಿತ್ರೆ ಇರುವುದನ್ನು ಗಮನಿಸಿ, ತನ್ನ ನಿರ್ಧಾರಗಳ ಫಲಿತಗಳನ್ನು ಪರಿಶೀಲಿಸುವ ಮುಕ್ತ ಮನಸ್ಸು ತೋರಬೇಕಾಗಿದೆ.

‘ಅಂತರ ವಿಶ್ವವಿದ್ಯಾಲಯ ಮಂಡಳಿ’ ಎಂಬ ಹೆಸರಿನಲ್ಲಿ 1925ರಲ್ಲಿ ಸ್ಥಾಪಿತವಾದ ಸಂಸ್ಥೆಯು 1944ರ ಸಾರ್ಜೆಂಟ್ ವರದಿಯ ಪ್ರಕಾರ, 1945ರಲ್ಲಿ ‘ವಿಶ್ವವಿದ್ಯಾಲಯ ಅನುದಾನ ಸಮಿತಿ’ಯಾಗಿ ರೂಪಾಂತರ ಹೊಂದಿತು. ಸ್ವಾತಂತ್ರ್ಯಾನಂತರ ಡಾ. ಎಸ್.ರಾಧಾಕೃಷ್ಣನ್ ಅವರ ಅಧ್ಯಕ್ಷತೆಯಲ್ಲಿ 1948ರಲ್ಲಿ ರಚನೆಯಾದ ವಿಶ್ವವಿದ್ಯಾಲಯ ಶಿಕ್ಷಣ ಆಯೋಗವು ಬ್ರಿಟನ್ ಮಾದರಿಯ ‘ವಿಶ್ವವಿದ್ಯಾಲಯ ಅನುದಾನ ಆಯೋಗ’ ರಚಿಸಲು ಸಲಹೆ ನೀಡಿದ್ದರ ಫಲವಾಗಿ, 1953ರ ಡಿಸೆಂಬರ್ 28ರಂದು ಅಧಿಕೃತವಾಗಿ ಈ ಆಯೋಗ (ಯು.ಜಿ.ಸಿ) ಆರಂಭವಾಯಿತು. ಅಂದಿನ ಶಿಕ್ಷಣ ಸಚಿವ ಮೌಲಾನ ಅಬುಲ್ ಕಲಾಂ ಆಜಾದ್ ಅವರು ಅಂದು ಉದ್ಘಾಟಿಸಿದ ಸಭೆಯಲ್ಲಿ ಪ್ರಧಾನಿ ಜವಾಹರಲಾಲ್‌ ನೆಹರೂ ಕೂಡ ಉಪಸ್ಥಿತರಿದ್ದರು. ಆನಂತರ 1956ರಲ್ಲಿ ಪಾರ್ಲಿಮೆಂಟು ಒಂದು ಅಧಿನಿಯಮವನ್ನು ಅನುಮೋದಿಸಿ ಯು.ಜಿ.ಸಿ.ಗೆ ಶಾಸನಬದ್ಧ ಅಧಿಕಾರವನ್ನು ನೀಡಿತು. ಅಲ್ಲಿಂದ ಈ ಸಂಸ್ಥೆಯ ಕಾರ್ಯವ್ಯಾಪ್ತಿ ವಿಸ್ತರಣೆಗೊಂಡು, ಅನುದಾನ ನೀಡುವುದರ ಜೊತೆಗೆ ಉನ್ನತ ಶಿಕ್ಷಣದ ಉಸ್ತುವಾರಿಯನ್ನು ಕೊಡಲಾಯಿತು.

ಉನ್ನತ ಶಿಕ್ಷಣದ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಲಹೆ ನೀಡುವ ಅವಕಾಶವೂ ಈ ಸಂಸ್ಥೆಗಿದೆ. ವಿಶೇಷವೆಂದರೆ, ಎಲ್ಲವೂ ಕೇಂದ್ರೀಕರಣಗೊಳ್ಳುತ್ತಿರುವ ಇಂದಿನ ಅಧಿಕಾರ ವಿಸ್ತರಣೆಗೆ ವಿರುದ್ಧವೆಂಬಂತೆ ಆಗ ಯು.ಜಿ.ಸಿ.ಯ ಆಡಳಿತವನ್ನು ‘ವಿಕೇಂದ್ರೀಕರಿಸಿ’ ದೆಹಲಿಯಲ್ಲೇ ಕೇಂದ್ರ ಕಚೇರಿಯ ಜೊತೆಗೆ ಮತ್ತೆರಡು ಪ್ರತ್ಯೇಕ ಕಚೇರಿಗಳನ್ನು ಸ್ಥಾಪಿಸಿದ್ದಲ್ಲದೆ, ಪುಣೆ, ಹೈದರಾಬಾದ್, ಕೋಲ್ಕತ್ತ, ಭೋಪಾಲ್, ಗುವಾಹಟಿ ಮತ್ತು ಬೆಂಗಳೂರಿನಲ್ಲಿ ಶಾಖೆಗಳನ್ನು ತೆರೆಯಲಾಯಿತು.

ಈಗ ಉನ್ನತ ಶಿಕ್ಷಣದ ಕೇಂದ್ರೀಕೃತ ಶಕ್ತಿಯಾಗಿರುವ ಯು.ಜಿ.ಸಿ.ಯು ಶಿಕ್ಷಣ ಪದ್ಧತಿ, ಪರೀಕ್ಷಾ ಪದ್ಧತಿ, ಪಠ್ಯಕ್ರಮವೇ ಮುಂತಾದ ಎಲ್ಲಾ ವಿಷಯಗಳಲ್ಲೂ ನಿರ್ದೇಶನ ನೀಡುತ್ತಿದೆ. ಈ ನಿರ್ದೇಶನಗಳ ಒಂದು ಅಂಗವಾಗಿ ಬಂದದ್ದೇ ಪದವಿ ಮತ್ತು ಸ್ನಾತಕೋತ್ತರ ಹಂತದ ಸೆಮಿಸ್ಟರ್ ಪದ್ಧತಿ. ಈ ಪದ್ಧತಿಯನ್ನು 2009ರಲ್ಲಿ ಜಾರಿ ಮಾಡುವುದಕ್ಕೆ ಮುಂಚೆಯೇ ಮೂರು ದಶಕಗಳ ಹಿಂದೆ ಸ್ನಾತಕೋತ್ತರ ತರಗತಿಗೆ ಅಳವಡಿಸಿ ಎರಡು– ಮೂರು ವರ್ಷಗಳಲ್ಲೇ ರದ್ದು ಮಾಡಲಾಗಿತ್ತು. ದೀರ್ಘಕಾಲದ ನಂತರ ‘ಜ್ಞಾನೋದಯ’ವಾಗಿ ಸೆಮಿಸ್ಟರ್ ಪದ್ಧತಿಯಿಂದಲೇ ಜ್ಞಾನದ ಉದಯ– ವಿಕಾಸ ಸಾಧ್ಯವೆಂದು ಸಂಕಲ್ಪಿಸಿ ಮತ್ತೆ ಜಾರಿಗೆ ತರಲಾಗಿದೆ.

ಸೆಮಿಸ್ಟರ್ ಪದ್ಧತಿಯಲ್ಲಿ ಆರು ತಿಂಗಳಿಗೊಂದರಂತೆ ಒಂದು ವರ್ಷದಲ್ಲಿ ಎರಡು ಭಾಗಗಳಿರುತ್ತವೆ; ಎರಡು ಪಠ್ಯಕ್ರಮ ಮತ್ತು ಪರೀಕ್ಷೆಗಳಿರುತ್ತವೆ. ಸೆಮಿಸ್ಟರ್ ಪದ್ಧತಿಯು ನಿಜಕ್ಕೂ ಉದ್ದೇಶಿತ ಫಲ ನೀಡಿದೆಯೇ ಎಂದು ಪರಿಶೀಲಿಸಲು ಇದು ಸಕಾಲವಾಗಿದೆ. ಈ ಪದ್ಧತಿಯ ವಿಷಯದಲ್ಲಿ ಇರುವ ಪರ ಮತ್ತು ವಿರೋಧದ ಅಭಿಪ್ರಾಯಗಳನ್ನು ಜಾರಿಯಾದ ಒಂದು ದಶಕದ ಅನುಭವದ ಒರೆಗಲ್ಲಿಗೆ ಒಡ್ಡಬೇಕಾಗಿದೆ.

ಸೆಮಿಸ್ಟರ್ ಪದ್ಧತಿಯೇ ಸೂಕ್ತ ಎನ್ನುವವರ ಪ್ರತಿಪಾದನೆಯಲ್ಲಿರುವ ಕ್ರೋಡೀಕೃತ ಅಂಶಗಳು ಹೀಗಿವೆ:

1. ವಿದ್ಯಾರ್ಥಿಗಳಿಗೆ ಇದರಿಂದ ಹೆಚ್ಚು ಅನುಕೂಲ, ಯಾಕೆಂದರೆ ಪಠ್ಯವಸ್ತು ಕಡಿಮೆಯಿದ್ದು ನೆನಪಿಟ್ಟುಕೊಳ್ಳಲು ಅನುಕೂಲ.
2. ನಿರಂತರವಾಗಿ ಪಠ್ಯಪುಸ್ತಕಗಳ ಜೊತೆ ಸಂಬಂಧ ಇರುತ್ತದೆ.
3. ಅಧ್ಯಾಪಕರ ಜೊತೆ ವಿಚಾರವಿನಿಮಯ ತ್ವರಿತವಾಗಿ ನಡೆಯುತ್ತದೆ.
4. ವಿದ್ಯಾರ್ಥಿಗಳ ಗಮನ ಬೇರೆಡೆಗೆ ಹೋಗುವುದಿಲ್ಲ.
5. ಸೆಮಿಸ್ಟರ್‌ನಲ್ಲಿ ಹೆಚ್ಚು ಅಂಕ ಗಳಿಸಲು ಸಾಧ್ಯ.

ಇವೇ ಮುಂತಾದ ಅಂಶಗಳ ಆಧಾರದಲ್ಲಿ ಸೆಮಿಸ್ಟರ್ ಪದ್ಧತಿಯೇ ಸೂಕ್ತ ಎನ್ನುವವರಿಗೆ ಉತ್ತರವೆಂಬಂತೆ ವಾರ್ಷಿಕ ಪದ್ಧತಿಯ ಪರವಾದ ಪ್ರತಿಪಾದನೆಗಳೂ ಇವೆ:

1. ವಾರ್ಷಿಕ ಪದ್ಧತಿಯಲ್ಲಿ ಒಂದೇ ಪರೀಕ್ಷೆಯಿದ್ದು, ಸಿದ್ಧತೆ, ನಿರ್ವಹಣೆ ಮತ್ತು ಮೌಲ್ಯಮಾಪನಕ್ಕೆ ಕಾಲಾವಕಾಶ ಇರುತ್ತದೆ.
2. ಆರ್ಥಿಕವಾಗಿಯೂ ವಿಶ್ವವಿದ್ಯಾಲಯಕ್ಕೆ ಹೆಚ್ಚು ಹೊರೆಯಾಗುವುದಿಲ್ಲ.
3. ವಿದ್ಯಾರ್ಥಿಗಳು ಗ್ರಂಥಾಲಯಗಳಿಗೆ ಹೋಗಲು, ಪಠ್ಯಪೂರಕ ಗ್ರಂಥಗಳನ್ನು ಅಭ್ಯಾಸ ಮಾಡಲು ಸಮಯಾವಕಾಶ ಇರುತ್ತದೆ.
4. ವಿದ್ಯಾರ್ಥಿಗಳು ಸಾಂಸ್ಕೃತಿಕ ಚಟುವಟಿಕೆ
ಗಳಲ್ಲಿ ಭಾಗವಹಿಸುವ ಅವಕಾಶ ಹೆಚ್ಚು.
5. ಅಧ್ಯಾಪಕರು ಪಠ್ಯಕ್ಕಷ್ಟೇ ಸೀಮಿತವಾಗದೆ ವಿಶೇಷ ಅಧ್ಯಯನ ಮಾಡುವುದಕ್ಕೆ ಸಮಯ ಲಭ್ಯ; ಸಂಶೋಧನೆ ಮಾಡುವವರಿಗೆ ಅನುಕೂಲ.
6. ಇಲ್ಲಿಯೂ ವಿವಿಧ ವಿಧಾನಗಳ ಮೂಲಕ ವಿದ್ಯಾರ್ಥಿಗಳ ಅಭ್ಯಾಸವನ್ನು ಅಳೆಯುವ ಮಾನದಂಡವನ್ನು ರೂಪಿಸಬಹುದು.
7. ಸೆಮಿಸ್ಟರ್‌ನಲ್ಲಿ ಭಾಷಾ ಪಠ್ಯಗಳು ಸಕಾಲಕ್ಕೆ ಬಾರದೆ ಇರುವ ಅನುಭವವೇ ಜಾಸ್ತಿ.
8. ಸೆಮಿಸ್ಟರ್‌ನಲ್ಲಿ ಯಾವುದೇ ವಿಷಯವನ್ನು ವಿವರವಾಗಿ ಚರ್ಚಿಸಲು ಸಾಧ್ಯವಾಗುವುದಿಲ್ಲ.

ಪರ ಮತ್ತು ವಿರೋಧಾಭಿಪ್ರಾಯಗಳ ಹಿನ್ನೆಲೆಯಲ್ಲಿ ವಾಸ್ತವವನ್ನು ಪರಿಶೀಲಿಸಿದಾಗ ಸೆಮಿಸ್ಟರ್ ಪದ್ಧತಿಯ ಪಡಿಪಾಟಲು ವ್ಯಕ್ತವಾಗುತ್ತದೆ. ಯು.ಜಿ.ಸಿ.ಯು ಸೆಮಿಸ್ಟರ್‌ನಲ್ಲಿ ರಜೆ ದಿನಗಳನ್ನು ಹೊರತುಪಡಿಸಿ ಕಡೇಪಕ್ಷ 90 ದಿನಗಳಾದರೂ ಬೋಧನೆ ಮಾಡಬೇಕೆಂದು ನಿರ್ದೇಶಿಸಿದೆ. ವಾಸ್ತವದಲ್ಲಿ 60ರಿಂದ 65 ದಿನಗಳು ಲಭ್ಯವಾದರೆ ಹೆಚ್ಚು ಎಂದು ಅನೇಕ ಅಧ್ಯಾಪಕರು ಹೇಳುತ್ತಾರೆ. ಯಾಕೆಂದರೆ ಹಿಂದಿನ ಸೆಮಿಸ್ಟರ್‌ನ ಮೌಲ್ಯಮಾಪನ ಆರಂಭವಾದಾಗ ಮುಂದಿನ ಸೆಮಿಸ್ಟರ್ ಕೂಡ ಆರಂಭವಾಗುತ್ತಿದ್ದು, ಅಧ್ಯಾಪಕರು 15 ದಿನದಿಂದ ತಿಂಗಳವರೆಗೆ ತರಗತಿ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಜೊತೆಗೆ ಕಾಲೇಜು ಶಿಕ್ಷಣ ಇಲಾಖೆಯು ಇಂತಿಷ್ಟು ಅವಧಿಯಲ್ಲಿ ಪ್ರಾಂಶುಪಾಲರ ಕಚೇರಿ ಕೆಲಸಕ್ಕೆ ಒದಗಬೇಕೆಂದು ನಿಯಮ ರೂಪಿಸಿದೆ.


ಬರಗೂರು ರಾಮಚಂದ್ರಪ್ಪ

ವಿದ್ಯಾರ್ಥಿಗಳು ಎನ್.ಎಸ್.ಎಸ್., ಎನ್.ಸಿ.ಸಿ. ಮುಂತಾದ ಚಟುವಟಿಕೆಗಳಲ್ಲಿ ಭಾಗವಹಿಸಲೇಬೇಕು. ಅಧ್ಯಾಪಕರಿಗೆ ವಿವಿಧ ಮೀಟಿಂಗ್‍ಗಳ ಕೆಲಸ; ಒಂದು ತಿಂಗಳ ಅವಧಿಯ ಪರೀಕ್ಷೆ; ಒಂದು ತಿಂಗಳು ಮೌಲ್ಯಮಾಪನ, ಜೊತೆಗೆ ಸ್ವಯಂ ಲಭ್ಯ ರಜೆ; ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಯಾಂತ್ರಿಕವಾಗುವುದೇ ಹೆಚ್ಚು. ಅಧ್ಯಾಪಕರಿಗೆ ಅಂಕಗಳನ್ನು ಹಡೆಯುವುದೇ ಉಸ್ತುವಾರಿ ಮತ್ತು ಜವಾಬ್ದಾರಿ.

ಹೀಗಾಗಿ ಸೆಮಿಸ್ಟರ್ ಪದ್ಧತಿಯು ಜ್ಞಾನ ವಿಸ್ತರಣೆಗಿಂತ ಹೆಚ್ಚಾಗಿ ‘ಅಂಕ ವಿಸ್ತರಣೆ’ಗೆ ಅನುಕೂಲ ಮಾಡಿಕೊಟ್ಟಂತೆ ಕಾಣುತ್ತದೆ. ಜೊತೆಗೆ ಎಲ್ಲವೂ ಧಾವಂತದಿಂದಲೇ ನಡೆಯುವಂತೆ ಮಾಡುತ್ತದೆ. ಯಾವುದೇ ಪದ್ಧತಿಇದ್ದರೂ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಅಧ್ಯಯನಾಸಕ್ತಿಯೇ ಮೂಲ ಮಾನದಂಡ. ಇಂಥವರ ಸಂಖ್ಯೆ ಎಷ್ಟೇ ಇರಲಿ ಉನ್ನತ ಶಿಕ್ಷಣ ಕ್ಷೇತ್ರವು ಕೇವಲ ಅಂಕಾಧಾರಿತವಾಗದೆ ಅಧ್ಯಯನಾಧಾರಿತ ಆಗಬೇಕು. ಈ ಹಿನ್ನೆಲೆಯಲ್ಲಿ ಸೆಮಿಸ್ಟರ್ ಪದ್ಧತಿಯ ಬಗ್ಗೆ ಸೂಕ್ತ ಮೌಲ್ಯಮಾಪನ ಮತ್ತು ಮರುಚಿಂತನೆ ನಡೆಯಬೇಕು.

ಈಗ ಅಂತಿಮ ತೀರ್ಮಾನವು ಕೇಂದ್ರೀಕೃತ ಯು.ಜಿ.ಸಿ.ಯ ಆಡಳಿತ ವ್ಯಾಪ್ತಿಯಲ್ಲಿರುವುದರಿಂದ, ಅದರ ಮೇಲೆ ಅಧ್ಯಾಪಕರ ಸಂಘಗಳು, ವಿದ್ಯಾರ್ಥಿ ಸಂಘಟನೆಗಳು, ಶಿಕ್ಷಣ ತಜ್ಞರು ಸ್ವಯಂ ಆಸಕ್ತಿಯಿಂದ ‘ಅನುಭವಾಧಾರಿತ’ ಒತ್ತಾಯವನ್ನು ತರಬೇಕು. ರಾಜ್ಯ ಸರ್ಕಾರವೂ ಈ ಕುರಿತು ಗಂಭೀರವಾಗಿ ಯೋಚಿಸಿ, ತನ್ನ ಮಿತಿಯಲ್ಲಿ ಯು.ಜಿ.ಸಿ.ಗೆ ತಿಳಿಸಬೇಕು. ಒಟ್ಟಿನಲ್ಲಿ ಸೆಮಿಸ್ಟರ್ ಪದ್ಧತಿಯು ಕಾಟಾಚಾರದ ಕ್ರಮವಾಗಿ ‘ಉನ್ನತ’ ಜ್ಞಾನದ ಮಾನ ಕಳೆಯಬಾರದು; ಆದ್ದರಿಂದ ಮೌಲ್ಯಮಾಪನಕ್ಕೆ ಒಳಪಡಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು