ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉನ್ನತ ಶಿಕ್ಷಣ: ಆದ್ಯತೆಯ ಪಲ್ಲಟ

ಉನ್ನತ ಶಿಕ್ಷಣದ ಪ್ರಜಾಸತ್ತಾತ್ಮಕತೆಯು ಅದರ ಬಹುರೂಪದಲ್ಲಿದೆ
ಅಕ್ಷರ ಗಾತ್ರ
ADVERTISEMENT
""

ಉನ್ನತ ಶಿಕ್ಷಣ ವಲಯ ಈಗ ಮತ್ತೆ ಸುದ್ದಿಯಲ್ಲಿದೆ. ಮೇ 5ರಂದು ಹೊರಡಿಸಿದ ಸೂಚನಾ ಪತ್ರದಲ್ಲಿ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಿಗೂ ಏಕರೂಪ ಪಠ್ಯಕ್ರಮವನ್ನು ಜಾರಿಗೆ ತರಲು ನಿರ್ಧರಿಸಿದ್ದು, ವಿವಿಧ ವಿಶ್ವವಿದ್ಯಾಲಯಗಳಿಗೆ ವಿಷಯಾನುಸಾರ ಕೆಲಸವನ್ನು ಹಂಚಲಾಗಿದೆ. ಪಠ್ಯಕ್ರಮವನ್ನು ರೂಪಿಸುವಾಗ ಕುಲಪತಿಗಳು, ಡೀನ್‍ಗಳು, ಅಧ್ಯಯನ ಮಂಡಳಿ, ರಾಷ್ಟ್ರೀಯ ಸಂಸ್ಥೆಗಳ ತಜ್ಞರು, ಉದ್ಯಮಿಗಳು, ಅಗತ್ಯವಿದ್ದರೆ ವಿದೇಶಿ ತಜ್ಞರ ಜೊತೆ ಸಮಾಲೋಚಿಸಲು ಕೋರಲಾಗಿದೆ. ಈ ಸಮಾಲೋಚನೆಯ ಪ್ರಕ್ರಿಯೆಯು ಏಕರೂಪ ಪಠ್ಯಕ್ರಮವನ್ನು ಜಾರಿಗೊಳಿಸುವ ನಿರ್ಧಾರಕ್ಕೆ ಮುಂಚೆ ನಡೆದಿದ್ದರೆ ಅದು ಹೆಚ್ಚು ಪ್ರಜಾಸತ್ತಾತ್ಮಕವಾಗಿರುತ್ತಿತ್ತು. ಉನ್ನತ ಶಿಕ್ಷಣದ ಪ್ರಜಾಸತ್ತಾತ್ಮಕತೆಯು ಅದರ ಬಹುರೂಪತೆಯಲ್ಲಿ ಇದೆ. ಪ್ರಾಥಮಿಕ ಶಿಕ್ಷಣದಲ್ಲಿ ಏಕರೂಪತೆ, ಉನ್ನತ ಶಿಕ್ಷಣದಲ್ಲಿ ಬಹುರೂಪತೆಯು ಶೈಕ್ಷಣಿಕ ನೀತಿಯಾಗಬೇಕಾಗಿದೆ.

ಆದರೆ ಏಕರೂಪ ಪಠ್ಯಕ್ರಮವು ವಿವಿಧ ವಿಶ್ವವಿದ್ಯಾಲಯಗಳ ವೈವಿಧ್ಯ ಮತ್ತು ಉನ್ನತ ಶಿಕ್ಷಣದ ವಿಕೇಂದ್ರೀಕರಣಕ್ಕೆ ವಿರುದ್ಧವಾಗಿದೆ. ಇದರಿಂದ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಸ್ವಾಯತ್ತತೆಗೆ ಧಕ್ಕೆಯಾಗುತ್ತದೆ. ರಾಜ್ಯ ಹಾಗೂ ರಾಷ್ಟ್ರದ ಪ್ರಾತಿನಿಧಿಕ ವಿಷಯಗಳ ಜೊತೆಗೆ ಪ್ರಾದೇಶಿಕ ಪ್ರಾತಿನಿಧಿಕತೆಯನ್ನು ಒಳಗೊಳ್ಳುವ ಅವಕಾಶ ಇಲ್ಲವಾಗುತ್ತದೆ. ವಿಶೇಷವಾಗಿ, ಭಾಷೆ ಮತ್ತು ಸಮಾಜವಿಜ್ಞಾನ ವಿಷಯಗಳು ವೈವಿಧ್ಯದ ಅವಕಾಶದಿಂದ ವಂಚಿತವಾಗುತ್ತವೆ.

ಮುಂದೇನಾದರೂ ‘ನೀಟ್’ ಪರೀಕ್ಷೆಯಂತೆ, ‘ಒಂದು ದೇಶ ಒಂದು ಪಠ್ಯಕ್ರಮ’ ಎಂದಾದರೆ ಗತಿಯೇನೆಂದು ಯೋಚಿಸಿ. ಕೇಂದ್ರ ಪಠ್ಯಕ್ರಮದ ಒಂದು ಸಮಾಜವಿಜ್ಞಾನ ಪುಸ್ತಕದಲ್ಲಿ ಇಡೀ ದಕ್ಷಿಣ ಭಾರತಕ್ಕೆ ಕೇವಲ ಹನ್ನೊಂದು ಪುಟಗಳ ವಿಷಯ ಇದೆ. ಕರ್ನಾಟಕಕ್ಕೆ ಒಂದೂವರೆ ಪುಟವನ್ನು ದಯಪಾಲಿಸಲಾಗಿದೆ. ಈಗ ರಾಜ್ಯಕ್ಕೆ ಏಕಪಠ್ಯವಾದದ್ದು ಮುಂದೆ ರಾಷ್ಟ್ರಕ್ಕೆ ಏಕಪಠ್ಯವಾದರೆ ಇಂಥ ಅಪಾಯವಿರುತ್ತದೆ. ಇದರರ್ಥ ಪ್ರತಿ ವಿಶ್ವವಿದ್ಯಾಲಯವೂ ತಾನಿರುವ ಪ್ರದೇಶದ ವಿಷಯಗಳನ್ನು ‘ಮಾತ್ರ’ ಒಳಗೊಳ್ಳಬೇಕೆಂದಲ್ಲ. ಪ್ರಾದೇಶಿಕವಾದ ಸಾಮಾಜಿಕ -ಸಾಂಸ್ಕೃತಿಕ ಪ್ರಾತಿನಿಧ್ಯಕ್ಕೆ ಅವಕಾಶವಿರಬೇಕು ಎಂದಷ್ಟೇ ಅರ್ಥ. ಎಲ್ಲಾ ಮಾನವಿಕ ಪಠ್ಯವಿಷಯಗಳೂ ಈ ವ್ಯಾಪ್ತಿಗೆ ಬರುತ್ತವೆ.

ಬರಗೂರು ರಾಮಚಂದ್ರಪ್ಪ

ಏಕಪಠ್ಯಕ್ರಮದ ಜೊತೆಗೆ ಏಕರೂಪಿ ಪಠ್ಯಪುಸ್ತಕಗಳನ್ನು ಅಳವಡಿಸಿದರೆ ಇನ್ನೊಂದು ಅಪಾಯವಿದೆ. ಕನ್ನಡ ಭಾಷಾ ಪಠ್ಯಗಳಲ್ಲಿ ಪ್ರಾದೇಶಿಕ ಅಸ್ಮಿತೆಗೆ ಅವಕಾಶ ಇಲ್ಲದಂತಾಗುವುದಲ್ಲದೆ ಬೋಧನೆಯ ಪೀರಿಯಡ್‍ಗಳು ಕಡಿಮೆಯಾಗುತ್ತವೆ. ಈಗಿರುವ ಅಧ್ಯಾಪಕರಿಗೇ ಕೆಲಸ ಕಡಿಮೆಯಾಗಿ, ಹೊಸ ಉದ್ಯೋಗ ಸೃಷ್ಟಿ ಅಸಾಧ್ಯವಾಗುತ್ತದೆ. ಈ ಮೂಲಕ ಉನ್ನತ ಶಿಕ್ಷಣವು ಕನ್ನಡ ವಿರೋಧಿಯಾಗುತ್ತದೆ. ಇತರೆ ಭಾಷಾ ವಿಷಯಗಳೂ ಇದೇ ತೊಂದರೆಗೆ ಒಳಗಾಗುತ್ತವೆ. ಜೊತೆಗೆ ಎಲ್ಲಾ ಅಧ್ಯಯನ ಮಂಡಳಿಗಳ ಅಸ್ತಿತ್ವವೇ ಅಪ್ರಸ್ತುತವಾಗುತ್ತದೆ. ಆಯಾ ಪ್ರದೇಶಕ್ಕೆ ವಿಶಿಷ್ಟವಾದ ಕೆಲವು ಕೋರ್ಸ್‌ಗಳನ್ನು ಆರಂಭಿಸುವುದು ಕಷ್ಟವಾಗುತ್ತದೆ. ಉದಾಹರಣೆಗೆ, ಕರಾವಳಿಯಲ್ಲಿ ಮೀನುಗಾರಿಕೆ, ಮತ್ತೊಂದು ಕಡೆ ಪ್ರವಾಸೋದ್ಯಮ, ಗಣಿವಿಜ್ಞಾನ ಮುಂತಾದ ವಿಶೇಷ ವಿಷಯಗಳ ಅಧ್ಯಯನಾವಕಾಶ ಏಕರೂಪ ಪಠ್ಯಕ್ರಮದ ವ್ಯಾಪ್ತಿಗೆ ಬರುವುದಿಲ್ಲ.

ರಾಜ್ಯದಲ್ಲಿ ಅಂದಾಜು 17 ಸರ್ಕಾರಿ, 34 ಡೀಮ್ಡ್ ಮತ್ತು ಖಾಸಗಿ ಹಾಗೂ ಒಂದು ಕೇಂದ್ರೀಯ ವಿಶ್ವವಿದ್ಯಾಲಯವಿದ್ದು, ಸರ್ಕಾರಿ ವಿಶ್ವವಿದ್ಯಾಲಯಗಳಿಗೆ ಮಾತ್ರ ಏಕರೂಪ ಪಠ್ಯಕ್ರಮ ತರಲು ಸಾಧ್ಯ. ಇತರ ವಿಶ್ವವಿದ್ಯಾಲಯಗಳಿಗೆ ಸಾಧ್ಯವಾಗುವುದಿಲ್ಲವಲ್ಲ! ಆಗ ‘ಪಠ್ಯಕಂದಕ’ ಇದ್ದೇ ಇರುತ್ತದೆ. ಇತರ ವಿಶ್ವವಿದ್ಯಾಲಯಗಳಿಗೆ ಮತ್ತು ಸ್ವಾಯತ್ತ ಕಾಲೇಜುಗಳಿಗೆ ಇರುವ ಸ್ವಾತಂತ್ರ್ಯವು ಸರ್ಕಾರಿ ವಿಶ್ವವಿದ್ಯಾಲಯಗಳಿಗೆ ಇರುವುದಿಲ್ಲ. ಶೈಕ್ಷಣಿಕ ವೈವಿಧ್ಯಕ್ಕೆ ಅವಕಾಶವಾಗದ ಏಕರೂಪತೆಯೇ ಆದ್ಯತೆಯಾದರೆ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತನ್ನು ಮಾತ್ರ ಉಳಿಸಿಕೊಂಡು ವಿಶ್ವವಿದ್ಯಾಲಯಗಳ ಬದಲು ಎಲ್ಲಾ ಕಡೆ, ಆಡಳಿತಾಧಿಕಾರಿಗಳು ಮತ್ತು ಪರೀಕ್ಷಾಧಿಕಾರಿಗಳನ್ನು ನೇಮಿಸಿದರೆ ಸಾಕು. ಕುಲಪತಿಗಳೆಂಬ ಶೈಕ್ಷಣಿಕ ಸ್ಥಾನಕ್ಕೆ ‘ಮಾನ’ವೇ ಇಲ್ಲದಾಗ ಅದು ಯಾಕಾದರೂ ಬೇಕು?

ಏಕರೂಪ ಪಠ್ಯಕ್ರಮದ ಬದಲು ಉನ್ನತ ಶಿಕ್ಷಣದಲ್ಲಿ ಅನೇಕ ಆದ್ಯತೆಯ ಕೆಲಸಗಳಿವೆ. ಸಾಮಾನ್ಯ ಪದವಿ ಶಿಕ್ಷಣ ಮತ್ತು ವೃತ್ತಿ ಶಿಕ್ಷಣದ ನಡುವೆ ದೊಡ್ಡ ಕಂದಕ ನಿರ್ಮಾಣವಾಗಿದ್ದು, ಪದವಿ ಶಿಕ್ಷಣವು ಕೀಳರಿಮೆಗೆ ತುತ್ತಾಗಿದೆ. ಪದವಿ ಶಿಕ್ಷಣದಲ್ಲೂ ವಾಣಿಜ್ಯಪರ ವಿಷಯಗಳತ್ತಲೇ ಎಲ್ಲರ ಆದ್ಯತೆ. ಹೀಗಾಗಿ ಮಾನವಿಕ ಮತ್ತು ವಿಜ್ಞಾನದ ವಿಷಯಗಳು ಹಿನ್ನಡೆ ಅನುಭವಿಸುತ್ತಿವೆ. ವಿಜ್ಞಾನ, ತಂತ್ರಜ್ಞಾನ, ಮಾನವಿಕ, ವಾಣಿಜ್ಯ ಸಂಬಂಧಿ ವಿಷಯಗಳನ್ನು ಉಚಿತ ರೀತಿಯಲ್ಲಿ ಮರು ಸಂಯೋಜಿಸಿ ಎಲ್ಲ ವಿಷಯಗಳ ಬೇಡಿಕೆಯನ್ನು ತಕ್ಕಮಟ್ಟಿಗಾದರೂ ಹೆಚ್ಚಿಸಲು ಸಾಧ್ಯವಿಲ್ಲವೇ? ಪಿಯುಸಿ ನಂತರದಲ್ಲಿ ವೃತ್ತಿಶಿಕ್ಷಣವೇ ಶ್ರೇಷ್ಠ ಎಂಬ ಭಾವನೆಗೆ ಬಿಡುಗಡೆ ಬೇಕಲ್ಲವೇ? ಎಲ್ಲಿಯವರೆಗೆ ಜ್ಞಾನಮುಖಿ ಮತ್ತು ಎಲ್ಲಿಂದ ಉದ್ಯೊಗಮುಖಿ ಶಿಕ್ಷಣ ಎಂಬ ಖಚಿತ ನೀತಿಯೊಂದು ಬೇಕಲ್ಲವೇ? ಸಾಮಾನ್ಯ ಪದವಿ ಶಿಕ್ಷಣಕ್ಕೆ ಮಹತ್ವ ತರುವ ಮರುಚಿಂತನೆ ಮತ್ತು ಮರು ಸಂಯೋಜನೆ ಅಗತ್ಯವಲ್ಲವೇ?

ನಮ್ಮ ರಾಜ್ಯದಲ್ಲಿ ಅಂದಾಜು 430ರಷ್ಟು ಸರ್ಕಾರಿ, 32 ಅನುದಾನಿತ, 1,803 ಖಾಸಗಿ, 24 ವಿಶ್ವವಿದ್ಯಾಲಯ ಕಾಲೇಜುಗಳಿದ್ದು, ಬಹಳಷ್ಟು ಸರ್ಕಾರಿ, ಅನುದಾನಿತ ಕಾಲೇಜುಗಳು ಹನ್ನೊಂದು ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರಿಂದ ನಡೆಯುತ್ತಿವೆ. ಹತ್ತಾರು ವರ್ಷಗಳಿಂದ ದುಡಿಯುತ್ತಿರುವ ಅತಿಥಿ ಉಪನ್ಯಾಸಕರಿಗೆ ಮೀಸಲಾತಿಗೆ ಧಕ್ಕೆ ತಾರದಂತೆ ಸೇವಾ ಭದ್ರತೆ ಒದಗಿಸುವ ಕ್ರಮವನ್ನು ಯಾವ ಸರ್ಕಾರವೂ ಆದ್ಯತೆಯಾಗಿ ಪರಿಗಣಿಸಲಿಲ್ಲ. ಜೊತೆಗೆ ಸೆಮಿಸ್ಟರ್ ಬೋಧನಾವಧಿ ತೀರಾ ಕಡಿಮೆಯಾಗಿದ್ದು ಪದವಿ ಶಿಕ್ಷಣವು ಕಾಟಾಚಾರಕ್ಕೆ ಎಂಬಂತೆ ಆಗಿರುವುದನ್ನು ಗಮನಿಸುತ್ತಿಲ್ಲ. ಐ.ಎಸ್.ಬಿ.ಎನ್. ಮುದ್ರೆ ಇರುವ ಪುಸ್ತಕ ಮತ್ತು ಪತ್ರಿಕೆಗಳು ಮಾತ್ರ ಮಾನ್ಯವೆಂಬ ಯುಜಿಸಿ ಮಾನದಂಡವನ್ನು ರಾಜ್ಯ ಸರ್ಕಾರಗಳೂ ವಿಶ್ವವಿದ್ಯಾಲಯಗಳೂ ಪ್ರಶ್ನಿಸುತ್ತಿಲ್ಲ. ಐ.ಎಸ್.ಬಿ.ಎನ್. ಮುದ್ರೆ ಇಲ್ಲದೆ ಪ್ರಕಟಿಸಿದವರು ವಿದ್ವಾಂಸರೇ ಅಲ್ಲವೆಂದರೆ ಹೇಗೆ?

ಇಂದಿನ ದಿನಗಳಲ್ಲಿ ‘ಆನ್‍ಲೈನ್’ ಎನ್ನುವ ತಂತ್ರಜ್ಞಾನವು ಶಿಕ್ಷಣ ಕ್ಷೇತ್ರದಲ್ಲಿ ಆದ್ಯತೆಯ ವಿಷಯವಾಗಿಬಿಟ್ಟಿದೆ. ಹೊಸ ತಂತ್ರಜ್ಞಾನದ ಬಳಕೆ ಆಗಬೇಕು ನಿಜ. ಆದರೆ ಯಾವುದಕ್ಕೆ ಎಷ್ಟು ಎಂಬ ಔಚಿತ್ಯ ಬೇಕು. ಅನೇಕ ವಿಶ್ವವಿದ್ಯಾಲಯಗಳು ಹುದ್ದೆಯ ಸಂದರ್ಶನಕ್ಕೆ ಕೂಡ ಪತ್ರ ಬರೆಯುವುದಿಲ್ಲ. ಆನ್‍ಲೈನ್ ಸಂದೇಶ ಮಾತ್ರ ಕಳಿಸುತ್ತವೆ! ಮೊಬೈಲ್ ದೂರವಾಣಿ ಸಂಪರ್ಕವೇ ಸರಿಯಾಗಿ ಸಿಗದ ಸ್ಥಿತಿ ಇರುವಾಗ, ತಡೆರಹಿತ ಮತ್ತು ವೇಗವಾದ ಇಂಟರ್‌ನೆಟ್ ಸೌಲಭ್ಯವು ಸದ್ಯಕ್ಕೆ ಮರೀಚಿಕೆಯೇ ಸರಿ. ಬ್ರಾಡ್‌ ಬ್ಯಾಂಡ್‌ ಸೇವೆಯು ಗ್ರಾಮೀಣ ಪ್ರದೇಶಗಳಿಂದ ಇನ್ನೂ ದೂರವೇ ಉಳಿದಿದೆ. ಹೀಗಿರುವಾಗ ಆನ್‍ಲೈನ್ ಶಿಕ್ಷಣ ಮತ್ತು ಆನ್‍ಲೈನ್ ಸಂದೇಶಗಳು ಮಾತ್ರ ಆದ್ಯತೆಯಾದರೆ ದೇಶದ ಮುಕ್ಕಾಲುಪಾಲು ಜನರಿಗೆ ವಂಚನೆಯೇ ಸರಿ.

ಪ್ರಜಾಪ್ರಭುತ್ವದಲ್ಲಿ ಏಕಪಕ್ಷೀಯ ಸಾಧನಗಳಿಂದ ಪ್ರಜೆಗಳನ್ನು ವಂಚಿಸಬಾರದು. ಅಸಂಖ್ಯಾತರಿಗೆ ಆನ್‍ಲೈನ್ ಸಾಧನ ದಕ್ಕದಿರುವ ವಾಸ್ತವದಲ್ಲಿ, ಹಾಳೆಗೆ ಆದ್ಯತೆ ಇರಬೇಕು. ನೇರ ತರಗತಿಯೇ ಆದರ್ಶ ಮಾದರಿಯಾಗಬೇಕು. ಆನ್‍ಲೈನ್ ಎಂಬುದು ಪೂರಕವೇ ಹೊರತು ಆದ್ಯತೆಯೂ ಅಲ್ಲ, ಅಂತಿಮವೂ ಅಲ್ಲ. ಈ ವಿವೇಕವಿಲ್ಲದೆ ಇರುವುದರಿಂದ ವರ್ಗೀಕೃತ ‘ಆನ್‍ಲೈನ್ ಅಗ್ರಹಾರ’ಗಳ ಮೂಲಕ ‘ಹೊಸ ವರ್ಣಾಶ್ರಮ’ ರೂಪುಗೊಳ್ಳುತ್ತಿದೆ. ತಂತ್ರಜ್ಞಾನವು ‘ಜ್ಞಾನ ತಂತ್ರ’ವಾಗುತ್ತದೆ, ವಿಜ್ಞಾನ ಸೊರಗುತ್ತಿದೆ. ಒಟ್ಟಾರೆ ಹೇಳುವುದಾದರೆ, ಉನ್ನತ ಶಿಕ್ಷಣದಲ್ಲಿ ಹಿಂದಿನಿಂದಲೂ ಆದ್ಯತೆಗಳ ಪಲ್ಲಟವಾಗಿದೆ, ಸಮತೋಲಿತ ಆಶಯಕ್ಕೆ ಆದ್ಯತೆ ಸಿಗಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT