ಮಂಗಳವಾರ, ಜೂನ್ 22, 2021
27 °C

ಅಮರ್ ಸಿಂಗ್ | ಹೀಗೆ ಸಾಗಿ ಬಂತು ವರ್ಣರಂಜಿತ ರಾಜಕಾರಣಿಯ ಬದುಕು

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

Amar singh

‘ಮುಲಾಯಂ ಸಿಂಗ್ ಅವರ ಸಮಾಜವಾದಿ ಪಕ್ಷಕ್ಕಾಗಿ ನಾನು ಎರಡೂ ಮೂತ್ರಪಿಂಡಗಳನ್ನು ಕಳೆದುಕೊಂಡೆ. ಪ್ರತಿಯಾಗಿ ನನಗೇನೂ ಸಿಗಲಿಲ್ಲ’.

-ಇದು ಇಂದು ನಿಧನರಾದ ಹಿರಿಯ ರಾಜಕಾರಣಿ ಅಮರ್‌ ಸಿಂಗ್ ಅವರು ಹಿಂದೊಮ್ಮೆ ಆಡಿದ್ದ ವಿಷಾದದ ಮಾತುಗಳು.

ಕಿಡ್ನಿ ವೈಫಲ್ಯಕ್ಕೊಳಗಾಗಿ ಸಿಂಗಪುರದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭದಲ್ಲಿ ರಾಜಕಾರಣಿಗಳ್ಯಾರೂ ಭೇಟಿಯಾಗಲು ಬರದೇ ಇದ್ದುದರ ಬಗ್ಗೆ ಅವರು ಅತೀವ ಬೇಸರ ವ್ಯಕ್ತಪಡಿಸಿದ್ದರು. ಬಂಧುಗಳನ್ನು ಹೊರತುಪಡಿಸಿದರೆ ನನ್ನಿಂದ ಲಾಭ ಪಡೆದ ರಾಜಕಾರಣಿಗಳು ಯಾರೂ ಬರಲಿಲ್ಲ ಎಂದು ದುಃಖದ ಮಾತುಗಳನ್ನು ಅವರು ಆಡಿದ್ದರು.

ಇದನ್ನೂ ಓದಿ: 

ಉದ್ಯಮಿಯಾಗಿದ್ದು ಬಳಿಕ ರಾಜಕೀಯ ಪ್ರವೇಶಿಸಿದ್ದ ಅಮರ್ ಸಿಂಗ್ ಅವರ ರಾಜಕಾರಣದ ಹಾದಿಯೂ ವರ್ಣರಂಜಿತವಾಗಿಯೇ ಇತ್ತು. 1956ರ ಜನವರಿ 27ರಂದು ಉತ್ತರ ಪ್ರದೇಶದ ಅಜಮಾಗಡದಲ್ಲಿ ಜನಿಸಿದ್ದ ಅವರು ಕೋಲ್ಕತ್ತದ ಸೇಂಟ್ ಝೇವಿಯರ್ ಕಾಲೇಜಿನಿಂದ ಕಾನೂನು ಪದವಿ ಪಡೆದಿದ್ದಾರೆ. ಬಳಿಕ ಕೋಲ್ಕತ್ತದಲ್ಲಿ ಹಾರ್ಡ್‌ವೇರ್ ವ್ಯಾಪಾರಿಯಾಗಿದ್ದರು. ಒಮ್ಮೆ ಭೋಪಾಲ್‌ನಲ್ಲಿ ಮಾಜಿ ಕೇಂದ್ರ ಸಚಿವ ದಿವಂಗತ ಮಾಧವರಾವ್ ಸಿಂಧಿಯಾ ಸಂಪರ್ಕಕ್ಕೆ ಬಂದ ಬಳಿಕ ಅವರ ಜೀವನ ರಾಜಕೀಯದತ್ತ ಹೊರಳಿತು. ಆಗ ಆರಂಭವಾದ ಅವರ ರಾಜಕೀಯ ಜೀವನಕ್ಕೆ 1996ರಲ್ಲಿ ಸಮಾಜವಾದಿ ಪಕ್ಷದಿಂದ ಭದ್ರ ಬುನಾದಿ ದೊರೆಯಿತು. ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್‌ ಆತ್ಮೀಯರಾಗಿದ್ದ ಅವರು 1996ರಲ್ಲಿ ರಾಜ್ಯಸಭೆಗೆ ಆಯ್ಕೆಯಾದರು.

ದೇವೇಗೌಡ, ಮುಲಾಯಂ ಜತೆ ಉತ್ತಮ ಬಾಂಧವ್ಯ: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗ ಅವರ ಮತ್ತು ಮುಲಾಯಂ ಸಿಂಗ್ ಯಾದವ್ ನಡುವೆ ಸಂವಹನದ ಕೊಂಡಿಯಾಗಿದ್ದವರು ಅಮರ್ ಸಿಂಗ್. ಇದು ಮುಲಾಯಂ ಹಾಗೂ ದೇವೇಗೌಡರ ಜತೆಗಿನ ಅವರ ರಾಜಕೀಯ ಬಾಂಧವ್ಯವನ್ನು ಗಟ್ಟಿಗೊಳಿಸಿತು. ದೇವೇಗೌಡರು ಕರ್ನಾಟಕದಲ್ಲಿ ಮುಖ್ಯಮಂತ್ರಿ ಆಗಿದ್ದಾಗಲೂ ಅವರಿಗೆ ಹತ್ತಿರವಾಗಲು ಅಮರ್ ಬಯಸಿದ್ದರು. ರಾಜ್ಯದಲ್ಲಿ ವಿದ್ಯುತ್ ಯೋಜನೆ ಆರಂಭಿಸುವ ನೆಪದಲ್ಲಿ ಗೌಡರ ಭೇಟಿ ಮಾಡಿದ್ದರು.

ಆದಾಗ್ಯೂ, ಅಮರ್ ರಾಜಕೀಯ ಜೀವನ ಉಜ್ವಲಗೊಳ್ಳಲು ಕಾರಣವಾಗಿದ್ದು ಮುಲಾಯಂ ಸಿಂಗ್ ಜತೆಗಿನ ಸ್ನೇಹ. ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ, ವಕ್ತಾರ ಸೇರಿದಂತೆ ಪ್ರಮುಖ ಹುದ್ದೆಗಳನ್ನೆಲ್ಲ ಯಶಸ್ವಿಯಾಗಿ ನಿಭಾಯಿಸಿದ್ದ ಅವರು ಸ್ವಂತ ಪಕ್ಷ ಕಟ್ಟಿ ವಿಫಲರಾಗಿದ್ದೂ ನಿಜ.

ಯುಪಿಎ ಸರ್ಕಾರಕ್ಕೆ ನೆರವು: ಅಮೆರಿಕದೊಂದಿಗೆ ಪ್ರಸ್ತಾವಿತ ಪರಮಾಣು ಒಪ್ಪಂದಕ್ಕೆ ಸಂಬಂಧಿಸಿ ಯುಪಿಎ ಸರ್ಕಾರಕ್ಕೆ (ಒಂದನೇ ಅವಧಿ) ನೀಡಿದ್ದ ಬೆಂಬಲವನ್ನು ಕಮ್ಯೂನಿಸ್ಟ್ ಪಾರ್ಟಿ ಆಫ್‌ ಇಂಡಿಯಾ (ಸಿಪಿಐ) ಹಿಂಪಡೆದಾಗ ಆಸರೆಯಾದವರು ಅಮರ್ ಸಿಂಗ್. ಸಮಾಜವಾದಿ ಪಕ್ಷದ 39 ಸಂಸದರು ಬೆಂಬಲ ನೀಡುವಂತೆ ಮಾಡುವ ಮೂಲಕ ಸರ್ಕಾರ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದೇ ವೇಳೆ ನಡೆದ ‘ವೋಟಿಗಾಗಿ ನೋಟು’ ಹಗರಣ ಅವರ ವರ್ಣರಂಜಿತ ರಾಜಕೀಯ ಬದುಕಿಗೆ ಮಸಿ ಬಳಿದದ್ದೂ ನಿಜ.

ಹೆಸರಿಗೆ ಮಸಿ ಬಳಿದ ‘ವೋಟಿಗಾಗಿ ನೋಟು’

ಅಮೆರಿಕದ ಜತೆ ಪರಮಾಣು ಒಪ್ಪಂದಕ್ಕೆ ಮುಂದಾದ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಎಡಪಕ್ಷಗಳು ಹಿಂದೆ ಪಡೆದ ಬಳಿಕ ಕಂಟಕ ಎದುರಾಗಿತ್ತು. ಅವಿಶ್ವಾಸದ ಸುಳಿಗೆ ಸಿಲುಕಿದ್ದ ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ಸಂಕಷ್ಟದಿಂದ ಪಾರು ಮಾಡಲು ಬಿಜೆಪಿ ಸಂಸದರ ಖರೀದಿಗೆ ನಡೆದ ಹಗರಣವೇ ‘ವೋಟಿಗಾಗಿ ನೋಟು’. ಅವಿಶ್ವಾಸ ನಿಲುವಳಿ ವೇಳೆ ಸರ್ಕಾರದ ಪರ ಮತ ಹಾಕಲು ಮೂವರು ಸಂಸದರಿಗೆ ಹಣ ನೀಡಲಾಗಿತ್ತು. ಈ ಹಗರಣವನ್ನು ‘ಸಿಎನ್‌ಎನ್ ಐಬಿಎನ್’ ಸುದ್ದಿ ವಾಹಿನಿ ರಹಸ್ಯ ಕಾರ್ಯಾಚರಣೆ (ಸ್ಟಿಂಗ್ ಆಪರೇಷನ್) ನಡೆಸಿ ಬಯಲಿಗೆಳೆದಿತ್ತು.

ಈ ಹಗರಣದ ಪ್ರಮುಖ ಸೂತ್ರದಾರ ಅಮರ್ ಎಂಬ ಆರೋಪ ವ್ಯಕ್ತವಾಗಿತ್ತು. ಅವರ ನಿಕಟವರ್ತಿ ಸಂಜೀವ್ ಸಕ್ಸೇನಾ ಮೂವರು ಸಂಸದರಿಗೆ ಒಂದು ಕೋಟಿ ರೂಪಾಯಿ ಹಸ್ತಾಂತರ ಮಾಡಿದ್ದರು ಎಂದು ಹೇಳಲಾಗಿತ್ತು. ಅಶೋಕ್ ಅಗರ್‌ವಾಲ್, ಎಫ್.ಎಸ್.ಕುಲಸ್ತೆ ಮತ್ತು ಮಹಾವೀರ್ ಬಾಗೋರ ಹಣದ ಕಂತೆಗಳನ್ನು ಲೋಕಸಭೆಗೆ ತಂದು ಪ್ರದರ್ಶಿಸಿದ್ದರು. ಹಗರಣದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಹೆಸರೂ ತಳಕು ಹಾಕಿಕೊಂಡಿತ್ತು.

ರಾಜಕೀಯ ವಲಯದಲ್ಲಿ ‘ಡೀಲ್ ಫಿಕ್ಸರ್’ ಎಂದೇ ಗುರುತಿಸಿದ್ದ ಅಮರ್‌ಸಿಂಗ್ ಇದೇ ಹಗರಣದಲ್ಲಿ ಜೈಲುಪಾಲಾಗಬೇಕಾಗಿಯೂ ಬಂದಿತ್ತು. 2011ರ ಸೆಪ್ಟೆಂರ್‌ನಲ್ಲಿ ನ್ಯಾಯಾಂಗ ಬಂಧನಕ್ಕೊಳಗಾಗಿ ದೆಹಲಿಯ ತಿಹಾರ್ ಜೈಲಿನಲ್ಲಿರಬೇಕಾಗಿ ಬಂದಿತ್ತು. ಹಗರಣ ಕುರಿತು ವಿಚಾರಣೆ ನಡೆಸಿದ್ದ ಕಿಶೋರ್‌ ಚಂದ್ರದೇವ್ ನೇತೃತ್ವದ ಸಂಸದೀಯ ಸಮಿತಿ ಅಮರ್‌ಸಿಂಗ್ ಮತ್ತು ಅಹ್ಮದ್ ಪಟೇಲ್ ವಿರುದ್ಧ ಯಾವುದೇ ಪುರಾವೆಗಳಿಲ್ಲ ಎಂದು ಕ್ಲೀನ್‌ಚಿಟ್ ನೀಡಿತ್ತು. ಪ್ರಕರಣ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಆದರೆ, ಅಮರ್‌ ಸಿಂಗ್ ವಿರುದ್ಧ ಬಲವಾದ ಸಾಕ್ಷ್ಯಾಧಾರ ದೊರೆಯದೆ ಅವರು ಖುಲಾಸೆಯಾಗಿದ್ದರು.

ನಟರೂ ಹೌದು: ರಾಜಸಭೆ ಸದಸ್ಯರೂ ಆದ ಅಮರ್ ರಾಜಕಾರಣಿಯಷ್ಟೇ ಅಲ್ಲ. ನಟರೂ ಹೌದು. ಹಲವು ಬೆಂಗಾಲಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಿಂದಿ ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ. ದೇವಾನಂದ್ ಅವರ ‘ಚಾರ್ಜ್ ಶೀಟ್’ ಚಿತ್ರದಲ್ಲಿ ಗೃಹಮಂತ್ರಿ ಪಾತ್ರದಲ್ಲಿ ಮಿಂಚಿದ್ದಾರೆ.

ಅಮರ್‌ ಸಿಂಗ್‌ಗೆ ಮಿತ್ರರಿಗಿಂತ ಶತ್ರುಗಳೇ ಹೆಚ್ಚು. ಸಮಾಜವಾದಿ ಪಕ್ಷದಲ್ಲಿದ್ದಾಗ ಮುಲಾಯಂ ನಂತರದ ಪ್ರಮುಖ ಸ್ಥಾನ ಹೊಂದಿದ್ದ ಅವರು ಜಯಪ್ರದಾ, ಜಯಾ ಬಚ್ಚನ್, ಅನಿಲ್ ಅಂಬಾನಿ ಮತ್ತಿತರರನ್ನು ಪಕ್ಷದ ತೆಕ್ಕೆಗೆ ಎಳೆದು ತಂದಿದ್ದರು.

ವಿವಾದಗಳಿಂದ ಹೊರತಲ್ಲದ ನಾಯಕ: ಅಮರ್‌ ಸಿಂಗ್‌ ಅವರು ರಾಜಕೀಯ ಜೀವನದುದ್ದಕ್ಕೂ ವಿವಾದಗಳು ಹಾಗೂ ಹಗರಣಗಳಿಂದ ಗುರುತಿಸಿಕೊಂಡಿದ್ದೇ ಹೆಚ್ಚು. ಇವುಗಳನ್ನೆಲ್ಲ ಅವರು ಸದಾ ಪ್ರಚಾರದಲ್ಲಿರಲು ಬಳಸಿಕೊಂಡಿದ್ದೂ ನಿಜ. ಜಯಪ್ರದಾ ಅವರೊಂದಿಗಿನ ಸ್ನೇಹ, ಬಿಪಾಷಾ ಜತೆ ದೂರವಾಣಿಯಲ್ಲಿ ‘ಲಲ್ಲೆ’ ಆರೋಪ ಇತ್ಯಾದಿ ಆರೋಪಗಳ ನಡುವೆ ಅವೆಲ್ಲವನ್ನೂ ಎಂಜಾಯ್ ಮಾಡಿದ್ದ ವರ್ಣರಂಜಿತ ರಾಜಕಾರಣಿ ಈ ಅಮರ್‌ಸಿಂಗ್. ಬಾಲಿವುಡ್ ‘ಬಿಗ್ ಬಿ’ ಅಮಿತಾಭ್ ಬಚ್ಚನ್, ಉದ್ಯಮಿ ಅನಿಲ್ ಅಂಬಾನಿಯಂಥ ದೊಡ್ಡ ತಾರೆಗಳ ಸಹವಾಸಕ್ಕೆ ಹಾತೊರೆದಿದ್ದವರೂ ಹೌದು.

ಬಚ್ಚನ್‌ ಕುಟುಂಬದ ವಿರುದ್ಧ ಹೇಳಿಕೆ, ವಿಷಾದ: ಹಿಂದೊಮ್ಮೆ ಅಮಿತಾಭ್ ಬಚ್ಚನ್‌ ಕುಟುಂಬಕ್ಕೆ ಅತ್ಯಾಪ್ತರಾಗಿದ್ದ ಅಮರ್‌ ಸಿಂಗ್‌ ನಂತರ ಬಚ್ಚನ್‌ ಕುಟುಂಬ ಸದಸ್ಯರ ವಿರುದ್ಧ ಬಹಿರಂಗವಾಗಿಯೇ ವಾಗ್ದಾಳಿ ನಡೆಸಿದ್ದರು. 2019ರ ಜುಲೈನಲ್ಲಿ ‘ಬೂಟಾಟಿಕೆ ನಿಲ್ಲಿಸಿ ಜಯಾ ಬಚ್ಚನ್‌ ಅವರೇ’ ಎಂಬ ಶೀರ್ಷಿಕೆಯೊಂದಿಗೆ ಟ್ವಿಟರ್‌ನಲ್ಲಿ ವಿಡಿಯೊ ಹಂಚಿಕೊಂಡಿದ್ದ ಅವರು, ಅಮಿತಾಬ್‌ ಬಚ್ಚನ್‌ ಮತ್ತು ಐಶ್ವರ್ಯಾ ರೈ ಬಚ್ಚನ್‌ ಅವರು ಸಿನಿಮಾಗಳಲ್ಲಿ ಅಸಭ್ಯ ಪಾತ್ರಗಳನ್ನು ಮಾಡಿದ್ದಾರೆ ಎಂದು ಟೀಕಿಸಿದ್ದರು. ಧೂಮ್‌ ಚಿತ್ರದ ಹಾಡೊಂದರಲ್ಲಿ ರಿಮಿ ಸೆನ್‌ ಅವರೊಂದಿಗೆ ಅಭಿನಯಿಸಿದ್ದ ಅಭಿಷೇಕ್‌ ಬಚ್ಚನ್‌ ಅವರ ಕುರಿತೂ ಈ ವಿಡಿಯೊದಲ್ಲಿ ಅವರು ಟೀಕೆ ಮಾಡಿದ್ದರು. ಬಳಿಕ ಕ್ಷಮೆಯನ್ನೂ ಕೋರಿದ್ದರು.

ಇದನ್ನೂ ಓದಿ: ಅಮರ್‌ ಸಿಂಗ್‌ ಜೀವನ್ಮರಣ ಹೋರಾಟ: ಬಚ್ಚನ್‌ ಕುಟುಂಬ ವಿರುದ್ಧದ ಹೇಳಿಕೆಗಳಿಗೆ ವಿಷಾದ

ಈ ವರ್ಷ ಫೆಬ್ರುವರಿ 18ರಂದು ಬಚ್ಚನ್ ಕುಟುಂಬದ ಕ್ಷಮೆ ಕೋರಿ ಟ್ವೀಟ್ ಮಾಡಿದ್ದ ಅವರು, ‘ಇಂದು ನನ್ನ ತಂದೆಯ ಪುಣ್ಯತಿಥಿ. ಇದೇ ವಿಚಾರವಾಗಿ ಇಂದು ಅಮಿತಾಬ್‌ ಬಚ್ಚನ್‌ ಅವರು ನನಗೆ ಸಂದೇಶ ಕಳುಹಿಸಿದ್ದರು. ಅಮಿತಾಬ್‌ ಬಚ್ಚನ್‌ ಮತ್ತು ಅವರ ಕುಟುಂಬದ ವಿರುದ್ಧ ಹಿಂದೊಮ್ಮೆ ನೀಡಿದ್ದ ಅತಿರೇಕದ ಹೇಳಿಕೆಗಳಿಗೆ ಸದ್ಯ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ನಾನು ಈಗ ವಿಷಾದ ವ್ಯಕ್ತಪಡಿಸುತ್ತೇನೆ. ಅವರಿಗೆ ದೇವರು ಒಳಿತು ಮಾಡಲಿ’ ಎಂದು ಉಲ್ಲೇಖಿಸಿದ್ದರು.

ಮುಲಾಯಂ ಪಕ್ಷದಿಂದ ಉಚ್ಚಾಟನೆ: ಸಮಾಜವಾದಿ ಪಕ್ಷದಲ್ಲಿ ಪ್ರಮುಖರಾಗಿದ್ದ ಅಮರ್ ಸಿಂಗ್ ಕೊನೆಗೊಂದು ದಿನ ಪಕ್ಷದಿಂದಲೇ ಉಚ್ಚಾಟನೆಯಾಗಬೇಕಾಗಿ ಬಂತು. ಅಮರ್ ಅವರಿಂದಾಗಿ ಬಹಳಷ್ಟು ನಾಯಕರು ಸಮಾಜವಾದಿ ಪಕ್ಷ ತೊರೆದಿದ್ದರು. ಬಳಿಕ ಹಿಂತಿರುಗಿಯೂ ಬಂದಿದ್ದರು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಮುಲಾಯಂ ಕುಟುಂಬದ ಸದಸ್ಯರೇ ಅವರನ್ನು ವಿರೋಧಿಸಿದ್ದರು. ಆಗ ಮುಸ್ಲಿಮರ ನಾಯಕ ಅಜಂಖಾನ್ ಪಕ್ಷ ತೊರೆದಿದ್ದರು. ಸಮಾಜವಾದಿ ಹಿನ್ನೆಲೆಯ ಮೋಹನ್‌ಸಿಂಗ್ ಕೂಡ ಪಕ್ಷದಿಂದ ದೂರ ಉಳಿದಿದ್ದರು. ಬೇನಿ ಪ್ರಸಾದ್ ವರ್ಮಾ ಅವರೂ ಮುಲಾಯಂ ಅವರ ಕೈ ಬಿಟ್ಟಿದ್ದರು. ಇದರಿಂದ ಪಕ್ಷ ಭಾರಿ ಬೆಲೆ ತೆರಬೇಕಾಗಿ ಬಂದಿತ್ತು. ಪರಿಣಾಮವಾಗಿ ಅಂತಿಮವಾಗಿ 2010ರ ಜನವರಿ 6ರಂದು ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು.

ರಾಷ್ಟ್ರೀಯ ಲೋಕಮಂಚ್ ಸ್ಥಾಪನೆ: 2011ರಲ್ಲಿ ಅಮರ್ ಸಿಂಗ್ ರಾಷ್ಟ್ರೀಯ ಲೋಕಮಂಚ್ ಪಕ್ಷ ಸ್ಥಾಪಿಸಿದ್ದರು. 2012ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷದಿಂದ 360 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಆದರೆ ಒಂದೇ ಒಂದು ಕ್ಷೇತ್ರದಲ್ಲಿಯೂ ರಾಷ್ಟ್ರೀಯ ಲೋಕಮಂಚ್ ಅಭ್ಯರ್ಥಿ ಜಯಗಳಿಸಲಿಲ್ಲ. 2014ರಲ್ಲಿ ರಾಷ್ಟ್ರೀಯ ಲೋಕದಳ ಪಕ್ಷ ಸೇರಿದ್ದ ಅಮರ್ ಸಿಂಗ್ ಫತೇಪುರ್ ಸಿಕ್ರಿ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನುಭವಿಸಿದ್ದರು.

2013ರಲ್ಲಿ ದುಬೈಗೆ ತೆರಳಿದ್ದಾಗ ಅವರಿಗೆ ಕಿಡ್ನಿ ವೈಫಲ್ಯ ಉಂಟಾಗಿತ್ತು. 2014ರ ಬಳಿಕವಂತೂ ರಾಜಕೀಯದಿಂದ ದೂರವುಳಿದಿದ್ದ ಅವರು 2016ರಲ್ಲಿ ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರಳಿದ್ದರು. ರಾಜ್ಯಸಭೆಗೆ ಆಯ್ಕೆಯಾಗಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯ: ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿ ಇರುತ್ತಿದ್ದ ಅಮರ್ ಸಿಂಗ್ ಜೀವನದ ಕೊನೆಯ ದಿನವೂ ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳು, ಆಪ್ತರ ಜತೆ ಸಂಪರ್ಕದಲ್ಲಿದ್ದರು. ಬಕ್ರೀದ್ ಶುಭಾಶಯ ಕೋರಿ ಟ್ವೀಟ್ ಮಾಡಿದ್ದರು. ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ತಿಲಕ್ ಅವರ ಪುಣ್ಯ ತಿಥಿ ಸಂದರ್ಭ ಅವರಿಗೆ ಗೌರವ ಸಲ್ಲಿಸಿ ಟ್ವೀಟ್ ಮಾಡಿದ್ದರು. ದುರದೃಷ್ಟವಶಾತ್, ಅದೇ ದಿನ ತಾವೂ ಇಹಲೋಕ ತ್ಯಜಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು