ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಗಾಲಾಗಿದೆ ‘ಕಾರ್ಮಿಕ ಭಾರತ’

ಕೊರೊನಾ ಸಂದರ್ಭವು ‘ಕಾರ್ಮಿಕ ಕಲ್ಪನೆ’ಯನ್ನು ತಾತ್ಕಾಲಿಕವಾಗಿಯಾದರೂ ವಿಸ್ತರಿಸಿದೆ
Last Updated 30 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ

ಕೊರೊನಾ ಕರಾಳ ಸಂದರ್ಭದ ನಡುವೆ ಇನ್ನೊಂದು ಮೇ ದಿನಾಚರಣೆ ಬಂದಿದೆ. ಲಾಕ್‌ಡೌನ್ಇರುವುದರಿಂದ, ಅಷ್ಟಿಷ್ಟು ಉಳಿದಿರುವ ಕೆಂಪು ಬಾವುಟಗಳು ಈ ಸಾರಿ ಬೀದಿಗೆ ಬರುವುದಿಲ್ಲ. ಆದರೆಕಾರ್ಮಿಕರನೇಕರ ಬದುಕು ಬೀದಿಗೆ ಬಂದುಬಿಟ್ಟಿದೆ. ಈ ಮಧ್ಯೆ ಮಾನವೀಯತೆಯ ಪ್ರಶ್ನೆಯೂ ಬೀದಿಬಾವುಟ ಹಾರಿಸಿದೆ.

ಹಾಗೆ ನೋಡಿದರೆ, ಹೀಗೆ ಬಾವುಟ ಹಾರಿಸುತ್ತಲೇ ನಡೆದ ಹೋರಾಟಗಳ ಫಲವಾಗಿ ಮೇ ದಿನದ ಆಚರಣೆಯು 1890ರಲ್ಲಿ ಅಧಿಕೃತ ಮುದ್ರೆಯನ್ನು ಪಡೆಯಿತು. ಇದಕ್ಕೂ ಮುಂಚೆ 1866ರಲ್ಲೇ ಕಾರ್ಮಿಕರ ದುಡಿಮೆಯ ಅವಧಿಯನ್ನು ದಿನಕ್ಕೆ 8 ಗಂಟೆಗೆ ಮಿತಿಗೊಳಿಸಬೇಕೆಂಬ ಹೋರಾಟ ಆರಂಭವಾಗಿ, ಅಮೆರಿಕದ ಬಾಲ್ಟಿಮೋರ್‌ನಲ್ಲಿ ನಡೆದ ಅಧಿವೇಶನದಲ್ಲಿಒಂದು ನಿರ್ಣಯವನ್ನು ಸ್ವೀಕರಿಸಲಾಯಿತು. ಅದೇ ವರ್ಷದ ಆಗಸ್ಟ್‌ನಲ್ಲಿ ಕಾರ್ಲ್ ‌ಮಾರ್ಕ್ಸ್‌ ಮುಂದಾಳತ್ವದ ಅಂತರರಾಷ್ಟ್ರೀಯ ಅಧಿವೇಶನವು ಈ ಬೇಡಿಕೆಯನ್ನು ಪುನರುಚ್ಚರಿಸಿತು.

1866ರಿಂದ ಅನೇಕ ಹೋರಾಟಗಳು ನಡೆಯುತ್ತಿದ್ದರೂ 1886ರ ಮೇ ಒಂದರಂದು ಷಿಕಾಗೊದಲ್ಲಿ ನಡೆದ ಬೃಹತ್ ಮುಷ್ಕರವು ಮೇದಿನಾಚರಣೆಯ ಮೂಲ ನೆಲೆಯಾಯಿತು. ಈ ಮುಷ್ಕರದ ಮೂರನೇ ದಿನ ನಡೆದ ಗೋಲಿಬಾರ್‌ಗೆ ಆರು ಕಾರ್ಮಿಕರು ಬಲಿಯಾದರು. 1889ರಲ್ಲಿ ನಡೆದ ‘ಅಂತರರಾಷ್ಟ್ರೀಯ ಸಮಾಜವಾದಿ ಕಾಂಗ್ರೆಸ್’ ಮೇ ಒಂದರಂದು ಕಾರ್ಮಿಕ ದಿನವನ್ನಾಗಿ ಆಚರಿಸುವ ಕರೆ ಕೊಟ್ಟು, ಅದು 1890ರಿಂದ ಜಾರಿಗೆ ಬಂದಿತು.

ಹೀಗೆ ಆರಂಭವಾದ ಮೇ ದಿನಾಚರಣೆಯು ದುಡಿಯುವ ವರ್ಗದ ವಿಮೋಚನಾ ದಿನವಾಗಿ ಆಚರಿಸಲ್ಪಡುತ್ತ ಬಂದಿದೆ. ವಿಮೋಚನೆಯ ವಿವೇಕವನ್ನು ವಿಸ್ತರಿಸುತ್ತ ಬಂದಿದೆ. ಈ ವಿವೇಕದ ಫಲವಾಗಿ ಕಾರ್ಮಿಕರ ವಲಯಕ್ಕೆ ಕೆಲ ಕಾಲಾನಂತರ ಕೃಷಿ ವಲಯವೂ ಸೇರಲ್ಪಟ್ಟಿತು. ಸಿ.ಐ.ಟಿ.ಯು. ಸಂಘಟನೆಯು 1986ರಲ್ಲಿ ಬಿಡುಗಡೆ ಮಾಡಿದ ಮೇ ದಿನದ ಪ್ರಣಾಳಿಕೆಯಲ್ಲಿ ರೈತ ವಲಯ ಹಾಗೂ ಗ್ರಾಮೀಣ ಜನಸಮೂಹದ ಪರವಾದ ಆಂದೋಲನಗಳಿಗೆ ಕರೆ ಕೊಟ್ಟಿತು. ಆದರೆ ಎಡಪಕ್ಷಗಳು ದುಡಿಯುವ ವರ್ಗಗಳನ್ನು ಸೈದ್ಧಾಂತಿಕವಾಗಿ ಸಿದ್ಧ ಮಾಡಲು ಸಾಧ್ಯವಾಯಿತೇ? ಬೇಡಿಕೆಗಳ ಈಡೇರಿಕೆಯ ಹಂತದಲ್ಲೇ ಕಾರ್ಮಿಕ ಚಳವಳಿ ನಿಂತುಹೋಯಿತೇ? ಈ ಪ್ರಶ್ನೆಗಳನ್ನು ಕಾರ್ಮಿಕ ನೇತಾರರು ಮತ್ತು ಎಡಪಕ್ಷಗಳು ಕೇಳಿಕೊಳ್ಳಬೇಕಾಗಿದೆ.

1900ರಲ್ಲಿ ಕ್ರಾಂತಿಕಾರಿ ನೇತಾರ ಲೆನಿನ್ ಅವರು, ಕಾರ್ಮಿಕ ಚಳವಳಿ ಎಂಬುದು ಸಣ್ಣ ಪುಟ್ಟ ಬೇಡಿಕೆಗಳ ಈಡೇರಿಕೆಗೆ ಸೀಮಿತವಾಗಬಾರದು ಎಂದು ಎಚ್ಚರಿಸಿದ್ದರು. 1900ರ ಮೇ ದಿನದ ಕರಪತ್ರದಲ್ಲಿ- ದುಡಿಯುವ ಜನರ ಹೋರಾಟಕ್ಕೆ ವಿವಿಧ ದೇಶಗಳ ಚಳವಳಿಗಳ ಜೊತೆ ಸಂಬಂಧವನ್ನು ಸ್ಥಾಪಿಸಿಕೊಂಡು, ಬಂಡವಾಳಶಾಹಿ ಶೋಷಣೆಯ ವ್ಯವಸ್ಥೆಯನ್ನು ಬದಲಾಯಿಸುವ ದೂರಗಾಮಿ ದೃಷ್ಟಿಕೋನ ಇರಬೇಕೆಂದು ಸ್ಪಷ್ಟಪಡಿಸಿದ್ದರು.

ನಿಜ; ಎಡಪಕ್ಷಗಳು ಸೈದ್ಧಾಂತಿಕ ನಿಷ್ಠೆಯಿಂದಲೇ ಕಾರ್ಮಿಕ ಚಳವಳಿಯನ್ನು ಕಟ್ಟಿ ಬೆಳೆಸುತ್ತ ಬಂದವು. ಕಾಲಾನುಕ್ರಮದಲ್ಲಿ ಬೇರೆ ರಾಜಕೀಯ ಪಕ್ಷಗಳಲ್ಲೂ ಕಾರ್ಮಿಕ ವಿಭಾಗಗಳು ಆರಂಭವಾದವು. ಆದರೆ, ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ಒಂದೇ ವೇದಿಕೆಗೆ ಬಂದು, ಆಳುವ ವರ್ಗಕ್ಕೆ ಪ್ರತಿರೋಧ ಒಡ್ಡಿದವು. ಉಳಿದಂತೆ ಅನೇಕ ಸಾರಿ ವಿಭಿನ್ನ ನಿಲುವುಗಳಿಗೆ ಅಂಟಿಕೊಂಡವು. ಬೇರೆ ಪಕ್ಷಗಳ ವಿಷಯವಿರಲಿ, ಎಡಪಕ್ಷಗಳ ಶಕ್ತಿಯೇ ಕುಂಠಿತವಾಯಿತು.

ಮನಮೋಹನ್ ಸಿಂಗ್ ನೇತೃತ್ವದ ಮೊದಲ ಅವಧಿಯ ಯು.ಪಿ.ಎ. ಸರ್ಕಾರವಿದ್ದಾಗ ಎಡಪಕ್ಷಗಳ 60 ಜನ ಲೋಕಸಭಾ ಸದಸ್ಯರಿದ್ದರು. ಆದರೆ, ಈಗ 6 ಜನರನ್ನು ಗೆಲ್ಲಿಸಿಕೊಳ್ಳುವುದೂ ಸಾಧ್ಯವಾಗಿಲ್ಲ. ಈ ಹಿನ್ನಡೆಗೆ ಭಾರತವನ್ನೇ ಭಾವೋದ್ರೇಕಿಸುವ ಸಮೂಹ ಸನ್ನಿ ರಾಜಕೀಯದ ಮುನ್ನಡೆಯೂ ಒಂದು ಕಾರಣವಿರಬಹುದು. ಸಮೂಹ ಸನ್ನಿಯ ಎದುರು ಸಮೂಹ ಪ್ರಜ್ಞೆಯನ್ನು ಉಳಿಸಿ, ಬೆಳೆಸುವುದು ಕಷ್ಟವೂ ಇರಬಹುದು. ಆದರೆ ಇದೊಂದೇ ಕಾರಣವಾಗುವುದಿಲ್ಲ.

‘ಸ್ವಯಂ ಚಾರಿತ್ರಿಕ ಪ್ರಮಾದ’ಗಳ ಚರಿತ್ರೆಯೊಂದು ಎಡಪಕ್ಷಗಳಿಗೆ ಇರುವುದನ್ನು ಮರೆಯಲಾಗುವುದಿಲ್ಲ. ಜ್ಯೋತಿ ಬಸು ಅವರು ಪ್ರಧಾನಿಯಾಗಲು ಬಿಡದೇ ಇದ್ದದ್ದು, ಸೋಮನಾಥ ಚಟರ್ಜಿಯವರನ್ನು ಪಕ್ಷದಿಂದ ಉಚ್ಚಾಟಿಸಿದ್ದು, ಅಮೆರಿಕದ ಅಣು ಒಪ್ಪಂದವನ್ನು ವಿರೋಧಿಸಿ ಯು.ಪಿ.ಎ. ಬಿಟ್ಟದ್ದು ಇತ್ಯಾದಿ. ನಾನಿಲ್ಲಿ ಹೇಳಹೊರಟದ್ದು, ಕಮ್ಯುನಿಸಂ ಕರ್ಮಠತೆ ಮತ್ತು ಕಮ್ಯುನಿಸಂ ಕ್ರಿಯಾಶೀಲತೆಯ ನಡುವೆ ಇರುವ ವ್ಯತ್ಯಾಸ. ಕರ್ಮಠತೆಯು ಸ್ಥಗಿತತೆ, ಕ್ರಿಯಾಶೀಲತೆಯು ಚಲನಶೀಲತೆ. ಸೈದ್ಧಾಂತಿಕ ಸ್ಥಗಿತತೆಯು ಕರ್ಮಠತೆಗೆ ಕಾರಣವಾಗುತ್ತದೆ. ಇಷ್ಟಾದರೂ ಎಡಪಕ್ಷಗಳು ಉಸಿರು ಹಿಡಿದು ಒಂದಷ್ಟು ಹೋರಾಟ ಮಾಡುತ್ತಿರುವುದು ಸಮಾಧಾನಕರ.

ಸಮಾಧಾನ ಎನ್ನುವುದು ಸಂತೃಪ್ತಿಯೂ ಅಲ್ಲ, ಸಂಭ್ರಮವೂ ಅಲ್ಲ. ಈ ಕಟುವಾಸ್ತವವನ್ನು ಕೊರೊನಾ ಸೋಂಕಿನ ಸನ್ನಿವೇಶವು ಮನಕಲಕುವಂತೆ ಬಯಲು ಮಾಡಿದೆ. ಆಡಳಿತ ಪಕ್ಷಗಳಿಗಷ್ಟೇ ಅಲ್ಲ, ಎಲ್ಲ ರಾಜಕೀಯ ಪಕ್ಷಗಳು ಮತ್ತು ಕಾರ್ಮಿಕ ಸಂಘಟನೆಗಳ ವಿವೇಕಕ್ಕೆ ಎದುರಾಗಿ ನಿಂತಿದೆ. ಈಗ ಲಾಕ್‌ಡೌನ್ ಮಾತ್ರವಿದ್ದು ‘ಟಾಕ್ ಡೌನ್’ ಇಲ್ಲವಾದ್ದರಿಂದ, ಕೆಲವು ಸತ್ಯಗಳನ್ನು ಹೇಳಲೇಬೇಕಾಗಿದೆ.

ಮೊದಲಿಗೆ, ಲಾಕ್‌ಡೌನ್ ಜಾರಿಗೊಳಿಸಿದ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಅಭಿನಂದಿಸಬೇಕು. ಲಾಕ್‌ಡೌನ್ ಕ್ರಮಗಳನ್ನೂ ಬೆಂಬಲಿಸಬೇಕು. ಇದೇ ಸಂದರ್ಭದಲ್ಲಿ, ಲಾಕ್‌ಡೌನ್ ಜಾರಿಗೆ ಮೂರು ದಿನವಾದರೂ ಮುಂಚೆ ‘ಮೇದಿನದ ಮನುಷ್ಯರು’ ನೆನಪಾಗಿದ್ದರೆ ಉತ್ತಮವಾಗಿತ್ತಲ್ಲವೇ ಎಂದು ಪ್ರಶ್ನಿಸಬೇಕು. ‘ಮೇ ದಿನದ ಮನುಷ್ಯರು’ ಎಂದರೆ ಕೇವಲ ಕೆಂಪು ಬಾವುಟದ ಕಾರ್ಮಿಕರಲ್ಲ. ದುಡಿಯುವ ಬಡವರೆಲ್ಲ ಮೇ ದಿನದ ಮನುಷ್ಯರು.

ಲಾಕ್‌ಡೌನ್ ನಂತರ ನಮ್ಮಂಥ ಮಧ್ಯಮವರ್ಗ ಮತ್ತು ಅದರ ಮೇಲಿನವರೆಲ್ಲ ಮನೆಯಲ್ಲಿ ಲಾಕ್ ಆಗಿದ್ದರೆ, ಕಡುಬಡವರು ಬೀದಿಗೆ ಬಿದ್ದಿದ್ದಾರೆ. ಊಟವಿಲ್ಲದವರು ಅಸಂಖ್ಯಾತರಿದ್ದಾರೆ. ಇಲ್ಲಿರಲಾಗದು, ಅಲ್ಲಿಗೆ ಹೋಗಲಾಗದು ಎಂಬ ಸ್ಥಿತಿಯಲ್ಲಿ ವಲಸಿಗರಿದ್ದಾರೆ. ಊರಿಗೆ ನೂರಾರು ಕಿಲೊಮೀಟರ್ ನಡೆದುಹೋಗುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ, ನಮ್ಮ ದೇಶದಲ್ಲಿ 13 ಕೋಟಿ ವಲಸಿಗರಿದ್ದಾರೆ.

ಬಿಕೂರಾಂ ಇಹಾಸೆ ಆಯೋಗವು 2017ರಲ್ಲಿ ಹೇಳಿದಂತೆ, 11 ಕೋಟಿ ಬುಡಕಟ್ಟು ಜನರಿದ್ದಾರೆ. ಇವರಲ್ಲಿ ಅಲೆಮಾರಿ, ಅರೆಅಲೆಮಾರಿಗಳ ಸಂಖ್ಯೆ ಸಾಕಷ್ಟಿದೆ. ಜೊತೆಗೆ ಸಂಘಟಿತ ಕಾರ್ಮಿಕರಿಗಿಂತ ಅಸಂಘಟಿತ ಕಾರ್ಮಿಕರೇ ಹೆಚ್ಚಾಗಿದ್ದು, ಆ ಸಂಖ್ಯೆ ಶೇ 95ನ್ನೂ ಮೀರುತ್ತದೆಯೆಂದು ಅರ್ಜುನ್ ಸೇನ್ ಗುಪ್ತ ಆಯೋಗ ಹೇಳಿದೆ. ಇಂತಹ ಕೋಟ್ಯಂತರ ಜನರಿರುವ ದೇಶದಲ್ಲಿ ಹಸಿದವರಿಗೆ ಆದ್ಯತೆ ನೀಡುವ ಮತ್ತು ಅವರ ನೆಲೆಯಿಂದಚಿಂತಿಸುವ ದೃಷ್ಟಿಕೋನ ಅಗತ್ಯವಿತ್ತು. ಕೇರಳ ಸರ್ಕಾರದ ಮಾದರಿಯನ್ನು ಅನುಸರಿಸಿದ್ದರೂ ಸಾಕಾಗಿತ್ತು.

ಈಗಂತೂ ಸೇವಾ ಸಂಸ್ಥೆಗಳೋ ನೇತಾರರೋ ಕೊಡುವ ಆಹಾರದ ಪೊಟ್ಟಣಕ್ಕಾಗಿ ಓಡುವ ತಾಯಂದಿರು ಮತ್ತು ಮಕ್ಕಳ ದೃಶ್ಯವನ್ನು ನೋಡಿದಾಗ ಕರುಳು ತೇವಗೊಳ್ಳುತ್ತದೆ. ಕಾರ್ಮಿಕ ಭಾರತದ ಬವಣೆ ಬಟಾಬಯಲಾಗಿದೆ. ಇನ್ನೊಂದು ಕಡೆ ನೋಡಿ: ಕೊರೊನಾ ಸಂದರ್ಭವು ‘ಕಾರ್ಮಿಕ ಕಲ್ಪನೆ’ಯನ್ನು ತಾತ್ಕಾಲಿಕವಾಗಿಯಾದರೂ ವಿಸ್ತರಿಸಿದೆ. ಹಗಲಿರುಳು ದುಡಿಯುತ್ತಿರುವ ವೈದ್ಯರು, ದಾದಿಯರು, ಆಸ್ಪ‍ತ್ರೆ ಸಿಬ್ಬಂದಿ, ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಆರೋಗ್ಯಾಧಿಕಾರಿಗಳು, ಪೊಲೀಸರು, ಪೌರಕಾರ್ಮಿಕರು ಎಲ್ಲರೂ ನಿಜವಾಗಿಯೂ ಈಗ ಕಾರ್ಮಿಕರೇ ಆಗಿದ್ದಾರೆ. ಒಟ್ಟಿನಲ್ಲಿ ಕಂಗಾಲಾಗಿರುವ ‘ಕಾರ್ಮಿಕ ಭಾರತ’ಕ್ಕೆ ಸೂಕ್ತ ಚಿಕಿತ್ಸೆ ಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT