ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವತತ್ವ: ಭಾರತೀಯತೆಯ ಪ್ರತೀಕ

ಭಾರತೀಯ ಪ್ರತಿಭೆಯ ಸಮಸ್ತ ರೂಪ-– ವಿರೂಪಗಳನ್ನೂ ಶಿವ ತನ್ನೊಳಗೆ ಧರಿಸಿಕೊಂಡಿದ್ದಾನೆ
Last Updated 20 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ
ADVERTISEMENT
""

ಲೋಹಿಯಾ ತಮ್ಮ ‘ರಾಮ ಕೃಷ್ಣ ಶಿವ’ ಎಂಬ ಪ್ರಸಿದ್ಧ ಪ್ರಬಂಧದಲ್ಲಿ ಆ ಮೂವರು ದೇವತೆಗಳನ್ನು ಮನುಷ್ಯನ ತ್ರಿಕರಣಗಳಿಗೆ (ಕಾಯ, ವಾಕ್, ಮನಸ್ಸು) ಹೋಲಿಸಿದ್ದಾರೆ. ಸದಾ ಕರ್ತವ್ಯಕ್ಕೆ ಬದ್ಧನಾಗಿದ್ದ ರಾಮನಲ್ಲಿ ಮಾತು ಗೌಣ, ಅವನಿಗೆ ಕರ್ತವ್ಯವೇ ಪ್ರಧಾನ. ಆದ್ದರಿಂದ ಅವನ ಚಾರಿತ್ರ್ಯವು ಶಾರೀರಿಕ ವ್ಯವಹಾರವನ್ನು ಪ್ರತಿನಿಧಿಸುತ್ತದೆ. ಇನ್ನು ಜಗದ್ಗುರುವಾದ ಶ್ರೀಕೃಷ್ಣ ಒಳ್ಳೆಯ ಮಾತುಗಾರ. ತನ್ನ ಮಾತುಗಾರಿಕೆಯಿಂದ ಒಂದು ಕೌಟುಂಬಿಕ ಕಲಹವನ್ನು ಜಾಗತಿಕ ಯುದ್ಧದ ಮಟ್ಟಕ್ಕೇರಿಸಿದ ಕೀರ್ತಿ ಅವನದ್ದು. ಆದ್ದರಿಂದ ಕೃಷ್ಣನ ಚಾರಿತ್ರ್ಯವು ವಾಙ್ಮಯ ವ್ಯವಹಾರವನ್ನು ಪ್ರತಿನಿಧಿಸುತ್ತದೆ. ಇನ್ನು ಸದಾ ಚಿತ್ತವೃತ್ತಿ ನಿರೋಧ ಸಾಧನೆಯಲ್ಲಿ ನಿರತನಾಗಿರುವ ಶಿವನ ಚಾರಿತ್ರ್ಯವು ಮನೋಲೋಕವನ್ನು ಪ್ರತಿನಿಧಿಸುತ್ತದೆ ಎನ್ನುತ್ತಾರೆ.

ಶರೀರ ಮತ್ತು ಮಾತುಗಳಿಗೆ ಒಂದು ಮಿತಿಯಿದ್ದು, ಇತಿಮಿತಿಗಳಿಂದ ಕೂಡಿದ ಬದುಕಿನ ಒಂದು ನಿರ್ದಿಷ್ಟ ಹಾದಿಯನ್ನು ರಾಮ ಮತ್ತು ಕೃಷ್ಣರ ಚಾರಿತ್ರ್ಯಗಳು ಪ್ರತಿನಿಧಿಸುತ್ತವೆ. ಆದರೆ ಶಿವನ ಚಾರಿತ್ರ್ಯ ಹಾಗಲ್ಲ. ಏಕೆಂದರೆ ಮನೋಲೋಕಕ್ಕೆ ಇತಿಮಿತಿಗಳಿಲ್ಲ. ‘ಮನದ ಬಯಲಲಿ ಬವಣೆಗೊಂಡೆ’ ಎಂದು ಅಲ್ಲಮ ಉದ್ಗರಿಸುತ್ತಾನೆ ಎಂದು ಅಲ್ಲಮನ ಬಗ್ಗೆ ಬೇಂದ್ರೆ ಹೇಳುತ್ತಾರೆ. ಎಲ್ಲೆಕಟ್ಟುಗಳಿರದ ಇಂಥ ಮನೋಲೋಕವನ್ನು ಅಥವಾ ಮನದಾಚೆಯ ಬಯಲನ್ನು ಶಿವ ಪ್ರತಿನಿಧಿಸುತ್ತಾನೆ. ಲೋಹಿಯಾ ಆ ಲೇಖನದ ಕೊನೆಯಲ್ಲಿ ಭಾರತಮಾತೆಯನ್ನು ‘ನಮಗೆ ರಾಮನ ಕರ್ತವ್ಯಶೀಲತೆಯನ್ನೂ ಕೃಷ್ಣನ ಅಂತಃಕರಣವನ್ನೂ ಶಿವನ ಚಿತ್ತಸ್ಥಿತಿಯನ್ನೂ ಅನುಗ್ರ
ಹಿಸು’ ಎಂದು ಪ್ರಾರ್ಥಿಸುತ್ತಾರೆ. ದೇವರಿಗೆ ನಮ್ಮ ಭಕ್ತಿಯನ್ನು ಸಲ್ಲಿಸುವುದೆಂದರೆ, ಈ ತ್ರಿಕರಣಗಳನ್ನು ಎಲ್ಲ ಕಾಲದಲ್ಲೂ ಪಾರದರ್ಶಕವಾಗಿ, ಪರಿಶುದ್ಧವಾಗಿ ಇಟ್ಟುಕೊಳ್ಳುವುದು ಎಂದೇ ಇರಬೇಕು.

ಭಾರತೀಯತೆಯಂತಹ ವೈರುಧ್ಯಕರ (ಡಯಲೆಕ್ಟಿಕ್) ಸಂಸ್ಕೃತಿಯನ್ನು ಶಿವನಿಗಿಂತಲೂ ಮಿಗಿಲಾಗಿ ಪ್ರತಿಫಲಿಸಬಲ್ಲ ಮತ್ತೊಂದು ದೈವವನ್ನು ನಾವು ಕಾಣಲಾರೆವು. ಮೂರನೆಯ ಕಣ್ಣಿನಲ್ಲಿ ಉರಿವ ಬೆಂಕಿಯನ್ನು ಧರಿಸಿ, ಮಂಜಿನ ಮಧ್ಯೆ ಆಸೀನನಾಗಿರುವ ಶಿವ ಎಲ್ಲ ವೈರುಧ್ಯಗಳ ಸಂಕೇತದಂತೆ ಕಾಣಿಸುತ್ತಾನೆ. ತ್ರಿಮೂರ್ತಿಗಳ ಪೈಕಿ ಬ್ರಹ್ಮ- ವಿಷ್ಣು ಕ್ರಮವಾಗಿ ಸೃಷ್ಟಿ ಮತ್ತು ಸ್ಥಿತಿಕರ್ತರು ಹಾಗೂ ಶಿವ ಲಯಕರ್ತನೆಂಬ ಸಾಮಾನ್ಯ ನಂಬಿಕೆಯೊಂದಿದೆ. ಆದರೆ ಶೈವದರ್ಶನಗಳು ಈ ನಂಬಿಕೆಯನ್ನು ಒಪ್ಪುವುದಿಲ್ಲ. ಶಿವನು ಸೃಷ್ಟಿ, ಸ್ಥಿತಿ, ಲಯಗಳ ಏಕಮಾತ್ರ ಕರ್ತನಲ್ಲದೆ ಜ್ಞಾನಾಜ್ಞಾನಗಳ (ಅನುಗ್ರಹ ಮತ್ತು ತಿರೋಭಾವಗಳ) ಕರ್ತೃವೂ ಹೌದು ಎನ್ನುತ್ತವೆ. ಪಂಚಾನನನಾದ ಶಿವನ ಐದು ತಲೆಗಳು ಈ ಐದು ಲೀಲೆಗಳ ಸಂಕೇತಗಳಾಗಿವೆ ಎಂದು ಶೈವದರ್ಶನಗಳು ಪ್ರತಿಪಾದಿಸುತ್ತವೆ.

ಶಿವನು ಕುಬೇರನಂತಹ ಶ್ರೀಮಂತನನ್ನೂ ಅನುಗ್ರಹಿಸಬಲ್ಲ; ಹಾಗೆಯೇ ಪಾರ್ವತಿಯ ಎದುರು ಭಿಕ್ಷಾಪಾತ್ರೆಯನ್ನೂ ಹಿಡಿಯಬಲ್ಲ. ಅವನನ್ನು ನಿರಾಕಾರನೆಂದು ವರ್ಣಿಸುವುದೂ ಉಂಟು. ಹಾಗೆಯೇ ‘ಶಿವನು ಭಿಕ್ಷಕೆ ಬಂದ ನೀಡು ಬಾರೇ ತಂಗಿ, ಅವನಿಗಿಂತ ಚೆಲುವನಿಲ್ಲ ನೋಡು ಬಾರೇ ತಂಗಿ’ ಎಂದು ನಮ್ಮ ಜನಪದರು ಅವನ ರೂಪವನ್ನು ಹಾಡಿ ಹೊಗಳುವುದೂ ಉಂಟು. ಶಿವನು ಸರ್ವಲೋಕಗಳಿಗೆ ಅಭಯಪ್ರದನೂ ಹೌದು. ಹಾಗೆಯೇ ಲೋಕವನ್ನು ಧ್ವಂಸ ಮಾಡಬಲ್ಲ ವಿಧ್ವಂಸಕಾರಕನೂ ಹೌದು. ತ್ರಿಪುರವೆಂಬ ಮೂರು ಕೋಟೆಗಳನ್ನು ಕ್ರಮವಾಗಿ ತಾರಕಾಸುರನ ಮೂವರು ಮಕ್ಕಳಾದ ವಿದ್ಯುನ್ಮಾಲಿ, ತಾರಾಕ್ಷ ಮತ್ತು ತಾರಕಾಕ್ಷರು ಆಳುತ್ತಿದ್ದರು. ಅವರು ದೇವತೆಗಳ ಮೇಲೆ ದಾಳಿ ನಡೆಸಿ ಅವರು ಆತಂಕದಿಂದ ಕಂಪಿಸುವಂತೆ ಮಾಡಿದರು.

ದೇವತೆಗಳು ಜೀವಭಯದಿಂದ ಈಶ್ವರನಿಗೆ ಮೊರೆ ಹೋದರು. ಕೊನೆಗೆ ಪರಶಿವನೇ ಖುದ್ದಾಗಿ ದಂಡೆತ್ತಿ ಬಂದು, ಒಂದೇ ಬಾಣದಿಂದ ಮೂರೂ ಕೋಟೆಗಳನ್ನು ಸುಟ್ಟು ಬೂದಿ ಮಾಡಿದನಂತೆ. ತ್ರಿಪುರಾಂತಕನಾದ ಪರಮೇಶ್ವರನು ಕೋಟೆಗಳನ್ನು ಸುಟ್ಟು ಬೂದಿ ಮಾಡಿದ ವರ್ಣನೆಯನ್ನು ಪುರಾಣಗಳಲ್ಲಿ ಓದುತ್ತಿದ್ದರೆ, ಅಣುಬಾಂಬಿನ ಸ್ಫೋಟದಿಂದ ಹಿರೋಶಿಮಾ ಮತ್ತು ನಾಗಾಸಾಕಿಯಲ್ಲಾದ ಭಯಂಕರ ದುರಂತ ನೆನಪಾಗುತ್ತದೆ:

‘ಬಾಣವು ಒಮ್ಮೆಲೇ ಪಸರಿಸುವ ಪ್ರಬಲವಾದ ಅಗ್ನಿಜ್ವಾಲೆಯನ್ನು ಸೃಷ್ಟಿಸಿತು. ಬೆಂಕಿ ಎಲ್ಲ ದಿಕ್ಕುಗಳಿಗೂ ತನ್ನ ಕೆನ್ನಾಲಗೆಗಳನ್ನು ಚಾಚಿ ಎಲ್ಲ ಜಾಗಗಳನ್ನೂ ರಕ್ತಸಿಕ್ತಗೊಳಿಸಿತು. ಮನೆಗಳು, ದೇವಸ್ಥಾನಗಳು, ಅರಮನೆಗಳು, ಗೋಪುರಗಳು ಎಲ್ಲವೂ ಒಂದೇ ಸಲಕ್ಕೆ ಕುಸಿದು ನೆಲಸಮವಾದವು. ಸರೋವರ, ಉದ್ಯಾನವನ, ಉದ್ಯಾನವನದ ಹೂವು ಹಣ್ಣಿನ ಗಿಡಗಳು, ಸರೋವರದ ಹಂಸಪಕ್ಷಿಗಳು ಎಲ್ಲವೂ ಕ್ಷಣಾರ್ಧದಲ್ಲಿ ನಿರ್ನಾಮವಾದವು, ಸಾಲದೆಂದು ಬಿರುಗಾಳಿ ಮತ್ತು ದಟ್ಟವಾದ ಹೊಗೆ ಎಲ್ಲೆಡೆ ಆವರಿಸಿ ಏನೊಂದೂ ಕಾಣಿಸದಾಯಿತು. ಗಂಡಸರು, ಹೆಂಗಸರು, ಪ್ರಾಣಿ ಪಕ್ಷಿಗಳು, ಕುದುರೆ, ಜಾನುವಾರುಗಳು, ಸಣ್ಣ ಮಕ್ಕಳು ಹೀಗೆ ಒಂದೇ ಒಂದು ಜೀವವೂ ಉಳಿಯದಂತೆ ಎಲ್ಲರೂ ಬೂದಿಯಾಗಿ ಹೋದರು.

ನಿದ್ರಿಸುತ್ತಿದ್ದವರು ನಿದ್ರಿಸುತ್ತಿದ್ದಾಗಲೇ, ಎಚ್ಚರವಿದ್ದವರು ಎಚ್ಚರದಿಂದ ಇರುವಾಗಲೇ, ಕುಳಿತವರು, ನಿಂತವರು, ನಡೆದಾಡುತ್ತಿದ್ದವರು ಎಲ್ಲರೂ ಆಯಾ ಸ್ಥಿತಿಯಲ್ಲೇ ಬೂದಿಯಾದರು. ಮಕ್ಕಳಿಗೆ ಹಾಲೂಡಿಸುತ್ತಿದ್ದ, ಎದೆಗವಚಿಕೊಂಡು ತೊಡೆ ಮೇಲೆ ತಟ್ಟಿ ಮಲಗಿಸುತ್ತಿದ್ದ ತಾಯಂದಿರು ಏನಾಗುತ್ತಿದೆ ಎಂದು ತಿಳಿವ ಮುನ್ನವೇ ಮಗುವಿನೊಂದಿಗೆ ಬೂದಿಯಾಗಿ ಹೋದರು. ಜ್ವಾಲೆಯ ತೀಕ್ಷ್ಣತೆಗೆ ಕಣ್ಣು ಕುರುಡಾಯಿತು, ಅದು ಹೊಮ್ಮಿಸುತ್ತಿದ್ದ ದಟ್ಟ ಹೊಗೆಗೆ ಉಸಿರು ಕಟ್ಟಿತು, ಮಾತು ನಿಂತಿತು, ಶರೀರದ ಮೇಲಿನ ಸ್ವಾಧೀನ ಕಳೆದುಹೋಯಿತು. ಸಾವಿರಾರು ಮಂದಿ ಅಳುತ್ತ, ಗೋಳಾಡುತ್ತ ಕ್ಷಣಮಾತ್ರದಲ್ಲಿ ನಾಶವಾಗಿ ಹೋದರು’ (ಮತ್ಸ್ಯ ಪುರಾಣ, ಅಧ್ಯಾಯ 188).

ಇಂದಿನ ಕಾಲದ ವಿಜ್ಞಾನ– ತಂತ್ರಜ್ಞಾನಗಳನ್ನು ಪ್ರಾಚೀನ ಭಾರತ ಆ ಕಾಲದಲ್ಲೇ ಕಂಡುಕೊಂಡಿತ್ತು ಎಂದು ವಾದಿಸುವ ನವಹಿಂದುತ್ವವಾದಿಗಳು ಇಂದಿನ ಕಾಲದ ಕರಾಳತೆ, ವಿಧ್ವಂಸಕತೆಗಳನ್ನೂ ಅಂದಿನ ಯುಗ ಧರಿಸಿತ್ತು ಎಂಬುದನ್ನು ಒಪ್ಪಬೇಕಾಗುತ್ತದೆ. ಸೆಮೆಟಿಕ್ ಧರ್ಮಗಳಂತೆ ಭಾರತೀಯತೆಯು ಕೇಡಿಗೆ ಅಥವಾ ಸೈತಾನನಿಗೆ ಪ್ರತ್ಯೇಕ ಅಸ್ತಿತ್ವವಿದೆ ಎಂದು ನಂಬುವುದಿಲ್ಲ. ವಿಧ್ವಂಸಕತೆ
ಯೂ ಭಗವತ್ ಸೃಷ್ಟಿಯೇ ಆಗಿದೆ ಎಂಬುದು ಭಾರತೀಯ ನಂಬಿಕೆ. ಶ್ರೀಕೃಷ್ಣನ ವಿಶ್ವರೂಪ ದರ್ಶನವನ್ನು ಕಂಡ ಅರ್ಜುನ, ಭಗವತ್ ಸೃಷ್ಟಿಯ ಮತ್ತೊಂದು ಮುಖವಾದ ಈ ವಿಧ್ವಂಸಕತೆಯನ್ನು ಕಂಡು ಹೆದರಿ ತಲ್ಲಣಿಸಿದನಂತೆ.

ಶಿವನು ನಮಗಿಂತ ಪ್ರತ್ಯೇಕವಾಗಿ ಎಲ್ಲೋ ಮೇಲಿನ ಲೋಕದಲ್ಲಿ ಕುಳಿತು ನಮ್ಮನ್ನು ಅವಲೋಕಿಸುತ್ತಿರುವ ಒಂದು ದೈವೀಶಕ್ತಿಯಲ್ಲ. ಪ್ರತಿಯೊಂದು ಜನಾಂಗವೂ ತನ್ನ ಕಲ್ಪನೆಯಿಂದಲೋ ಭ್ರಮೆಯಿಂದಲೋ ತನ್ನ ವಿವೇಚನೆಯಿಂದಲೋ ಅವಿವೇಕದಿಂದಲೋ ತನಗೆ ಅನುರೂಪನಾದ, ತನ್ನನ್ನು ಹೋಲುವ ದೈವವನ್ನು ಸೃಷ್ಟಿಸಿಕೊಳ್ಳುತ್ತದೆ. ಒಂದು ಜನಾಂಗದ ದೈವವು ಆ ಜನಾಂಗದ ಪ್ರತಿಭೆ, ಕಲ್ಪನಾಶಕ್ತಿ, ವಿವೇಕಗಳನ್ನು ಪ್ರತಿನಿಧಿಸುತ್ತದೆ ಎಂಬುದು ಲೋಹಿಯಾರ ಅಭಿಪ್ರಾಯವಾಗಿದೆ. ಕಾರಂತರ ‘ನಮ್ಮ ಅಳತೆಯನ್ನು ಮೀರಲಾರದ ದೇವರು’ ಲೇಖನವೂ ಇದನ್ನೇ ಪ್ರತಿಪಾದಿಸುವುದು.

ಈ ಹಿನ್ನೆಲೆಯಲ್ಲಿ ಎಲ್ಲವನ್ನೂ ಕಥೆ, ದೃಷ್ಟಾಂತ, ಪುರಾಣಗಳ ಮೂಲಕ ನಿರೂಪಿಸುವ ಭಾರತೀಯ ಪ್ರತಿಭೆಯ ಸಮಸ್ತ ರೂಪ-ವಿರೂಪಗಳನ್ನೂ ಶಿವ ತನ್ನೊಳಗೆ ಧರಿಸಿಕೊಂಡಿದ್ದಾನೆ ಮತ್ತು ಇವೆರಡನ್ನೂ ಮೀರಿದ ಮುಗ್ಧರೂಪವನ್ನೂ ಧರಿಸಿದ್ದಾನೆ. ಅವನ ಚಾರಿತ್ರ್ಯವು ವೈದಿಕ ಧರ್ಮದಿಂದ ಜಾನಪದ ಪರಂಪರೆಯವರೆಗೆ, ತಂತ್ರ ಯೋಗ ವಾಮಮಾರ್ಗಗಳಿಂದ ಹಿಡಿದು ವೇದಾಂತ, ಅದ್ವೈತಗಳವರೆಗೆ ವ್ಯಾಪಿಸಿದೆ. ಕನ್ನಡ ವಿವೇಕದ ಅತ್ಯುನ್ನತ ಫಲವಾದ ವಚನ ಚಳವಳಿಗೂ ಶಿವನನ್ನು ತೊರೆದುಕೊಳ್ಳಲು ಸಾಧ್ಯವಾಗಲಿಲ್ಲ.

ಶಿವನನ್ನು ರಾತ್ರಿಯ ವೇಳೆ ಪೂಜಿಸಲು ಕಾರಣ ಇಲ್ಲದಿಲ್ಲ. ಬುದ್ಧ, ಮಹಾವೀರರಾದಿಯಾಗಿ ಅಸಂಖ್ಯ ಅನುಭಾವಿಗಳಿಗೆ, ಯೋಗಿಗಳಿಗೆ, ನೂರಾರು ಝೆನ್‌ ಗುರುಗಳಿಗೆ ರಾತ್ರಿಯ ನೀರವತೆಯಲ್ಲೇ ಜ್ಞಾನೋದಯ ಪ್ರಾಪ್ತಿಯಾದದ್ದು. ಅಲೌಕಿಕವಾದ ಆ ಜ್ಞಾನೋದಯವು ಹಗಲ ಬೆಳಕಿನ ನಿಖರತೆಗೆ ಸಂಬಂಧಿಸಿದ್ದಲ್ಲ, ಅದು ರಾತ್ರಿಯ ನಿಗೂಢಕ್ಕೆ ಹೆಚ್ಚು ಸಮೀಪವಾದುದು. ಆ ನಿಗೂಢವನ್ನು ಒಂದು ಸಿದ್ಧಾಂತವನ್ನಾಗಿಸುವ, ಶಬ್ದಗಳಲ್ಲಿ ನಿರ್ವಚಿಸುವ ಪ್ರಯತ್ನಕ್ಕೆ ಕೈಹಾಕುವ ಶಕ್ತಿಗಳು ಶಿವತತ್ವಕ್ಕೆ ಅಪಚಾರವನ್ನೇ ಮಾಡುತ್ತವೆ.

ಟಿ.ಎನ್‌. ವಾಸುದೇವಮೂರ್ತಿ, ಸಹಾಯಕ ಪ್ರಾಧ್ಯಾಪಕ ಜ್ಯೋತಿನಿವಾಸ್‌ ಕಾಲೇಜ್‌, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT