ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಮತ್ತೆ ನೆನಪಾಗುವ ‘ಗೋಡೊ’

ಸಾಂಕ್ರಾಮಿಕ ರೋಗದ ಬಗ್ಗೆ ಗಾಂಧಿ ನೀಡಿದ್ದ ಸಲಹೆಗಳಿಗೆ ಇಂದಿಗೂ ಮಹತ್ವ ಇರುವುದೇಕೆ?
Last Updated 23 ಜುಲೈ 2020, 19:32 IST
ಅಕ್ಷರ ಗಾತ್ರ

ಕಳೆದ ಶತಮಾನದಲ್ಲಿ ಕಾಣಿಸಿಕೊಂಡಿದ್ದ ಪ್ಲೇಗ್ ಸಾಂಕ್ರಾಮಿಕ ರೋಗದ ಕುರಿತು ಚರ್ಚಿಸುವಾಗ, ಗಾಂಧಿಯವರ ಮೇಲೆ ಎರಡು ಗುರುತರ ಆಪಾದನೆಗಳನ್ನುಹೊರಿಸಲಾಗುತ್ತದೆ. ಅವೆಂದರೆ, ದಕ್ಷಿಣ ಆಫ್ರಿಕಾದಲ್ಲಿ ಸಾಂಕ್ರಾಮಿಕ ರೋಗವನ್ನು ಎದುರಿಸಲು ಗಾಂಧಿ ತೋರಿದ ಕಾಳಜಿಯನ್ನು ಭಾರತದಲ್ಲಿ ತೋರಿಸಲಿಲ್ಲ ಅಥವಾ ಆ ಕಾಳಜಿ ಕನಿಷ್ಠವಾಗಿತ್ತು. ಎರಡನೆಯದಾಗಿ, ಈ ಸಾಂಕ್ರಾಮಿಕ ರೋಗ ಭಾರತದಲ್ಲಿ ಹರಡದೇ ಇದ್ದಿದ್ದರೆ, ಗಾಂಧಿಯವರು ರಾಷ್ಟ್ರೀಯ ಹೋರಾಟದ ನಾಯಕರಾಗುತ್ತಿರಲಿಲ್ಲ.

ದಕ್ಷಿಣಾ ಆಫ್ರಿಕಾಕ್ಕೆ ಗಾಂಧಿ ಹೋದದ್ದು 1893ರಲ್ಲಿ. ಅಲ್ಲಿ ಭಾರತೀಯರಿದ್ದ ಕಾಲೊನಿಗೆಪ್ಲೇಗ್ ಹರಡಿದ್ದು 1904ರಲ್ಲಿ. ಭಾರತೀಯರು ಆ ಸಂದರ್ಭದಲ್ಲಿ ವರ್ಣಭೇದ ನೀತಿಯ ಕಾರಣದಿಂದಾಗಿ, ಜಾನ್ಸನ್‌ಬರ್ಗ್ ಪಟ್ಟಣದಿಂದ ಕೆಲ ಮೈಲಿ ದೂರದ ಚಿನ್ನದ ಗಣಿಗಾರಿಕೆ ಪಕ್ಕದಲ್ಲಿದ್ದ ಕಾಲೊನಿಯಲ್ಲಿ ಅಸ್ಪೃಶ್ಯರಂತೆ ಜೀವಿಸುತ್ತಿದ್ದರು. ಇದು, ಸಾಂಕ್ರಾಮಿಕ ರೋಗ ವೇಗವಾಗಿ ಹರಡಲು ಕಾರಣವಾಯಿತು ಎಂಬುದು ಗಾಂಧಿಯವರ ವಾದ. ಈ ರೋಗಕ್ಕೆ ಒಟ್ಟಾರೆ 84 ಜನ ಬಲಿಯಾದರು. ಮದನ್‌ಜಿತ್ ಎಂಬುವರ ಕರೆಗೆ ಓಗೊಟ್ಟು ಸಾಂಕ್ರಾಮಿಕ ರೋಗದ ವಿಷಯವನ್ನು ಸರ್ಕಾರದ ಮುಂದೆ ಗಾಂಧಿ ಎತ್ತಬೇಕಾಯಿತು.

ಈ ಸಂದರ್ಭದಲ್ಲಿ ಅವರಿಗೆ ಎರಡು ಸ್ಪಷ್ಟವಾದ ಕಾಳಜಿಗಳಿದ್ದವು ಮತ್ತು ಗಾಂಧಿ ತಮ್ಮ ಆತ್ಮಕಥನದಲ್ಲಿ ಹೇಳಿದಂತೆ, ಆ ಕಾಳಜಿಗಳಿಗೆ ‘ಧಾರ್ಮಿಕತೆಯ ಮೌಲ್ಯವಿತ್ತು’. ಮೊದಲನೇ ಕಾಳಜಿ, ರೋಗವು ಭಾರತೀಯರ ಕಾಲೊನಿಯಲ್ಲಿ ಹರಡುವುದನ್ನು ತಡೆಯುವುದು, ಅಲ್ಲದೆ ವರ್ಣಭೇದದ ವಿರುದ್ಧ ಸೂಕ್ಷ್ಮವಾಗಿ ಪ್ರತಿಭಟಿಸುವುದು. ಇವೆರಡೂ ಜೊತೆಜೊತೆಯಾಗಿ ಸಾಗಿದವು. ಈ ವಿಷಯದಲ್ಲಿ ಸರ್ಕಾರಕ್ಕೆ ಗಾಂಧಿ ಕೆಲವು ಪತ್ರಗಳನ್ನು ಬರೆದು, ಗಮನ ಸೆಳೆದರು. ಗಾಂಧಿಯವರ ಹಸ್ತಕ್ಷೇಪದಿಂದಾಗಿ, ರೋಗಿಗಳಿಗೆ ಒಂದು ಉಗ್ರಾಣದಲ್ಲಿ ಚಿಕಿತ್ಸೆ ನೀಡಲು ಅವಕಾಶ ನೀಡಲಾಯಿತು. ಆದರೆ, ಸರ್ಕಾರ ಯಾವುದೇ ವೈದ್ಯಕೀಯ ಸಹಕಾರ ನೀಡಲು ನಿರಾಕರಿಸಿತು. ಮುಂದೆ ಅದೇ ಉಗ್ರಾಣವು ಭಾರತೀಯರ ಧನಸಹಾಯದಿಂದ, ಗಾಂಧಿಪ್ರಣೀತ ಆಸ್ಪತ್ರೆಯಾಗಿ ಪರಿವರ್ತಿತವಾಯಿತು. ದುರಂತವೆಂದರೆ, ಭಾರತೀಯರ ಕಾಲೊನಿಯನ್ನು ಸರ್ಕಾರ ತನ್ನ ಅಧೀನಕ್ಕೆ ತೆಗೆದುಕೊಂಡು, ಪರ್ಯಾಯ ಕಾಲೊನಿಯನ್ನು ನಿರ್ಮಿಸಿತು. ಗಾಂಧಿ ಪ್ರಕಾರ, ಹೊಸ ಕಾಲೊನಿಯು ಒಂದು ಮಿಲಿಟರಿ ಕ್ಯಾಂಪಿಗೆ ಸಮನಾಗಿತ್ತು.

ಗಾಂಧಿ ವಾಸ್ತವವಾಗಿ ಆಸ್ಪತ್ರೆ, ಅಲೋಪಥಿ ಮತ್ತು ವೈದ್ಯರ ಕಟು ವಿಮರ್ಶಕರು. ಈ ವಿಮರ್ಶೆಯು ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ವ್ಯಕ್ತವಾದರೂ ಸರಿಯಾದ ವಿಶ್ಲೇಷಣೆ ನಮಗೆ ಸಿಗುವುದು 1909ರಲ್ಲಿ ಬರೆದ ‘ಹಿಂದ್ ಸ್ವರಾಜ್‍’ನಲ್ಲಿ. ಅವರ ಪ್ರಕಾರ, ಆಸ್ಪತ್ರೆಗಳು ‘ಪಾಪಗಳನ್ನು ಪ್ರಚಾರ ಮಾಡುವ ಸಂಸ್ಥೆ’ಗಳಾಗಿದ್ದವು, ವೈದ್ಯಕೀಯ ವೃತ್ತಿ ‘ಜನರನ್ನು ಅಧೀನತೆಗೆ ಬಳಸಿ
ಕೊಂಡಿತ್ತು’. ವಿಚಿತ್ರವೆಂದರೆ ರೈಲು ಗಾಂಧಿಯವರಿಗೆ, ‘ಬಬೋನಿಕ್‌ ಪ್ಲೇಗ್‍ ಹರಡುವ ಯಂತ್ರ’ವಾಗಿತ್ತು.

ಪ್ಲೇಗ್‍ನಿಂದ ಬಳಲುತ್ತಿದ್ದವರಿಗೆ ದಾದಿಯಂತೆ ಗಾಂಧಿ ಆರೈಕೆ ಮಾಡುವಾಗ ಆಧುನಿಕ ವೈದ್ಯಕೀಯ ಮದ್ದುಗಳನ್ನು ನಿರಾಕರಿಸಲಿಲ್ಲ. ಅವರೊಂದಿಗೆ ಆಸ್ಪತ್ರೆಯ ವೈದ್ಯ ಡಾ. ವಿಲಿಯಂ ಗಾಡ್‌ಫ್ರಿ ಅವರು ಕೈಜೋಡಿಸದಿದ್ದರೆ ಇನ್ನಷ್ಟು ಅನಾಹುತವಾಗುವ ಸಾಧ್ಯತೆ ಇತ್ತು. ಈ ಸಂದರ್ಭದಲ್ಲಿ ಗಾಂಧಿ ಮತ್ತು ಆಧುನಿಕ ವೈದ್ಯಕೀಯದ ನಡುವಿನ ಮುಖಾಮುಖಿ ಸ್ಪಷ್ಟವಾಗಿ ಗೋಚರಿಸುತ್ತದೆ. ಪ್ಲೇಗ್‌ಗೆ ಬ್ರ್ಯಾಂಡಿ ಅಥವಾ ಇತರ ಮದ್ಯ ಸೇವನೆ ಉತ್ತಮ ಮದ್ದು ಎಂಬ, ವೈದ್ಯರು ಮತ್ತು ದಾದಿಯರ ಶಿಫಾರಸನ್ನು ಗಾಂಧಿ ನಿರಾಕರಿಸಿದರು. ಏಕೆಂದರೆ ಗಾಂಧಿಗೆ ಅದರಿಂದ ಗುಣವಾಗುವ ನಂಬಿಕೆಯಿರಲಿಲ್ಲ. ವಿಚಿತ್ರವೆಂದರೆ ಗಾಂಧಿ ಪ್ಲೇಗ್ ರೋಗಿಯಾಗಲೇ ಇಲ್ಲ! ಇದು, ಗಾಂಧಿಯವರ ನೈಸರ್ಗಿಕತೆ ಮತ್ತು ಆಧುನಿಕ ಚಿಕಿತ್ಸಾ ವಿಧಾನದ ನಡುವಿನ ಪ್ರಯೋಗ, ನಾಗರಿಕತೆ ಜತೆಗಿನ ಮುಖಾಮುಖಿ ಎಂದರೂ ತಪ್ಪಾಗಲಾರದು.

ತಮ್ಮ ಆರೈಕೆಯಲ್ಲಿದ್ದ ರೋಗಿಗಳ ತಲೆ ಮತ್ತು ಎದೆಗೆ ಒದ್ದೆ ಮಣ್ಣನ್ನು ಬ್ಯಾಂಡೇಜ್ ರೂಪದಲ್ಲಿ ಕಟ್ಟಿದ್ದದ್ದೇ ಗಾಂಧಿ ಮಾಡಿದ ಪ್ರಯೋಗ. ಆಶ್ಚರ್ಯವೆಂದರೆ, ಆಸ್ಪತ್ರೆಯಲ್ಲಿ ಆಧುನಿಕ ಚಿಕಿತ್ಸೆ ಪಡೆಯುತ್ತಿದ್ದ ಇಪ್ಪತ್ತು ರೋಗಿಗಳು ಸತ್ತು ಹೋದರೆ, ಗಾಂಧಿ ಆರೈಕೆಯಲ್ಲಿದ್ದ ಮೂವರು ರೋಗಿಗಳಲ್ಲಿ ಇಬ್ಬರು ಬದುಕುಳಿದರು. ಅವರು ಹೇಗೆ ಉಳಿದರು ಎಂಬ ಪ್ರಶ್ನೆಗೆ ಗಾಂಧಿಯವರಿಗೆ ಉತ್ತರವೇ ಸಿಗಲಿಲ್ಲ. ತಮ್ಮ ಆತ್ಮಚರಿತ್ರೆ ‘ಮೈ ಎಕ್ಸ್‌ಪೆರಿಮೆಂಟ್‌ ವಿತ್‌ ಟ್ರೂತ್’ನಲ್ಲಿ ಇದು ನಿಚ್ಚಳವಾಗಿ ಕಂಡುಬರುತ್ತದೆ. ‘ಇಬ್ಬರು ರೋಗಿಗಳು ಹೇಗೆ ರೋಗನಿರೋಧಕ ಶಕ್ತಿ ಗಳಿಸಿದರು ಎಂಬುದನ್ನು ಅರ್ಥಮಾಡಿಕೊಳ್ಳಲು ನಮಗೆ ಅಸಾಧ್ಯವಾಯಿತು. ಆದರೆ ಮಣ್ಣಿನ ಪ್ರಯೋಗದ ಬಗ್ಗೆ ನನ್ನ ನಂಬಿಕೆ ಇನ್ನಷ್ಟು ಹೆಚ್ಚಾಯಿತು. ಮದ್ಯವು ಔಷಧಿಯಾಗುವ ವಿಚಾರದ ಬಗ್ಗೆ ನನಗಿದ್ದ ಸಂದೇಹ ಗಟ್ಟಿಯಾಯಿತು’. ಈ ಮಣ್ಣಿನ ಪ್ರಯೋಗವನ್ನು ಮುಂದೆ ಗಾಂಧಿ ಬಹಳಷ್ಟು ಸಲ ಮಾಡುತ್ತಾರೆ. 1942ರಲ್ಲಿ ಅವರು ಬರೆದ ‘ಎ ಕೀ ಟು ಹೆಲ್ತ್’ನಲ್ಲಿ ಅದರ ಬಗ್ಗೆ ಸ್ಪಷ್ಟವಾಗಿ ಹೇಳುತ್ತಾರೆ.

ಸಾಂಕ್ರಾಮಿಕ ರೋಗಿಗಳಿಗೆ ಗಾಂಧಿ ನೀಡಿದ 21 ಸಲಹೆಗಳು ಇಂದಿನ ಸಂದರ್ಭಕ್ಕೂ ಮಹತ್ವದ್ದೆನಿಸುತ್ತವೆ. ಈ ಸಲಹೆಗಳನ್ನು ‘ಇಂಡಿಯನ್ ಒಪೀನಿಯನ್’ ಎಂಬ ಪತ್ರಿಕೆಗೆ 1905ರ ಜನವರಿಯಲ್ಲಿ ಲೇಖನದ ರೂಪದಲ್ಲಿ ಗಾಂಧಿ ಬರೆಯುತ್ತಾರೆ: ರೋಗಿಯನ್ನು ಆಸ್ಪತ್ರೆಗೆ ಸೇರಿಸುವುದರ ಅರ್ಥ, ಸರ್ಕಾರ ಅವರನ್ನು ಹಿಂಸಿಸುತ್ತಿದೆ ಎಂದಲ್ಲ; ಜ್ವರ, ಅಸ್ತಮಾದ ಲಕ್ಷಣಗಳು ಕಂಡ ಕೂಡಲೇ ಮುಚ್ಚುಮರೆಯಿಲ್ಲದೆ ವಿಷಯವನ್ನು ಸರ್ಕಾರಕ್ಕೆ ತಿಳಿಸಬೇಕು, ಜನ ಭಯಭೀತರಾಗದೆ ತಮ್ಮ ಸ್ಥಳಗಳಲ್ಲಿಯೇ ಇರಬೇಕು, ಮಾರಾಟಕ್ಕಾಗಿ ವಸ್ತುಗಳನ್ನು ದಾಸ್ತಾನು ಮಾಡಬಾರದು, ಕಡಿಮೆ ಮತ್ತು ಮಿತ ಆಹಾರ ಸೇವಿಸಬೇಕು, ನೈರ್ಮಲ್ಯ ಕಾಪಾಡಬೇಕು ಇತ್ಯಾದಿ.

ಈ ಸಂದರ್ಭದಲ್ಲಿ, ಕಾಳಜಿಗೆ ಸಂಬಂಧಿಸಿದಂತೆ ಗಾಂಧಿ ಮೇಲಿದ್ದ ಆಪಾದನೆಯನ್ನು ವಸ್ತುನಿಷ್ಠವಾಗಿನೋಡುವುದಾದರೆ, ಭಾರತದಲ್ಲಿ ಹರಡುತ್ತಿದ್ದ ಪ್ಲೇಗ್ ಬಗ್ಗೆ ಅವರಿಗೆ ಅಷ್ಟೇ ಕಾಳಜಿ ಇತ್ತು ಎಂಬುದು ಸಾಬೀತಾಗುತ್ತದೆ. ಪ್ಲೇಗ್ ಹರಡುವ ಸಂದರ್ಭದಲ್ಲಿ ಗಾಂಧಿ ನೇರವಾಗಿ ರೋಗಗ್ರಸ್ತ ಕ್ಷೇತ್ರಕ್ಕೆ ಇಳಿದು ಕೆಲಸ ಮಾಡಿದ್ದು ವಾಸ್ತವ. ಬಾಂಬೆ ಪ್ರಾಂತ್ಯಕ್ಕೆ ಪ್ಲೇಗ್‌ ಹರಡಿದಾಗ, ಗುಜರಾತ್‍ನ ರಾಜ್‍ಕೋಟ್‌ನ ಜನರಲ್ಲಿ ಸ್ವಚ್ಛತೆ ಕಾಪಾಡಲು ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಗಾಂಧಿ ನೇರವಾಗಿ ಭೇಟಿ ಕೊಟ್ಟದ್ದು ಮೇಲ್ಜಾತಿಯವರು ಮತ್ತು ದಲಿತರ ಮನೆಗಳಿಗೆ ಹಾಗೂ ತಮ್ಮ ಜಾತಿಯವರ ಹವೇಲಿಗೆ. ಅವರ ಪ್ರಕಾರ, ‘ದಲಿತರ ಮನೆಗಳು ಮೇಲ್ಜಾತಿಯವರದಕ್ಕಿಂತ ಎಷ್ಟೋ ಉತ್ತಮವಾಗಿದ್ದವು’. 1935ರಲ್ಲಿ ಗುಜರಾತಿನ ಬೊರ್ಸಾಡ್‍ನಲ್ಲಿ ಮತ್ತೊಮ್ಮೆ ಸಾಂಕ್ರಾಮಿಕ ರೋಗ ಹರಡಿದಾಗ, ಗಾಂಧಿ ಮತ್ತು ಮಹದೇವ ದೇಸಾಯಿ ಅಲ್ಲಿಯೇ ಉಳಿದು, ರೋಗಗ್ರಸ್ತರಿಗೆ ಸ್ವಚ್ಛತೆ ಕುರಿತು ಸಲಹೆಗಳನ್ನು ನೀಡಿದರು. ಇಲ್ಲಿ ಅವರು ಕೈಜೋಡಿಸಿದ್ದು ಬಾರ್ಡೋಲಿ ಸತ್ಯಾಗ್ರಹದ ಇನ್ನೊಬ್ಬ ರೂವಾರಿ ವಲ್ಲಭಭಾಯಿ ಪಟೇಲರೊಂದಿಗೆ.

ಸಾಂಕ್ರಾಮಿಕ ರೋಗವು ಗಾಂಧಿಗೆ ಏನನ್ನು ನೀಡಿತ್ತು? ದಕ್ಷಿಣ ಆಫ್ರಿಕಾದ ಸಾಂಕ್ರಾಮಿಕ ರೋಗ ಅವರಿಗೆ ಒಳ್ಳೆಯ ಹೆಸರನ್ನು ತಂದಿತ್ತು, ಭಾರತೀಯರನ್ನು ಇನ್ನಷ್ಟು ಹತ್ತಿರದಿಂದ ನೋಡಲು ಅವಕಾಶ ಮಾಡಿಕೊಟ್ಟಿತ್ತು. ಅಲ್ಲದೆ ಅವರೇ ಹೇಳಿರುವಂತೆ, ಅವರ ವ್ಯವಹಾರವನ್ನು ಇನ್ನಷ್ಟು ವಿಸ್ತರಿಸಲು ಸಹಾಯ ಮಾಡಿತ್ತು. ಭಾರತದಲ್ಲಿ ಅವರಿಗೆ ರಾಷ್ಟ್ರೀಯ ಹೋರಾಟದ ನಾಯಕತ್ವ ನೀಡಿತ್ತೇ? ಇದಕ್ಕೆ ಪೂರಕವಾದ ವಾದಗಳಿವೆ. ಪ್ಲೇಗಿನಿಂದ ಬೇಸತ್ತ ಜನ ಬ್ರಿಟಿಷರನ್ನು ಪ್ರತಿರೋಧಿಸಲು ಕಾಯುತ್ತಿದ್ದ ಕಾಲದಲ್ಲಿ, ಗಾಂಧಿ ಆಗಮನ ದೇವರು ಕೊಟ್ಟ ವರದಂತಿತ್ತು. ಇದು, ಖ್ಯಾತ ನಾಟಕಕಾರ ಸ್ಯಾಮ್ಯುಯೆಲ್ ಬೆಕೆಟ್ ಬರೆದ ‘ವೇಟಿಂಗ್ ಫಾರ್ ಗೋಡೊ’ ನಾಟಕವನ್ನು ನೆನಪಿಸುತ್ತದೆ. ಅಲ್ಲಿ ಪಾತ್ರಧಾರಿಗಳು ಗೋಡೊ ಎಂಬ ಅಸ್ಪಷ್ಟ ವ್ಯಕ್ತಿಯ ಬರುವಿಕೆಗಾಗಿ ಕಾಯುತ್ತಿರುತ್ತಾರೆ. ಭಾರತದಲ್ಲಿ, ಬೇಸತ್ತ ಜನರಿಗೆ ಗಾಂಧಿ ಒಬ್ಬ ‘ಗೋಡೊ’ವಾಗಿ ಪ್ರತ್ಯಕ್ಷರಾಗುತ್ತಾರೆ. ಗಾಂಧಿ ಮತ್ತೆ ಮತ್ತೆ ನೆನಪಾಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT