ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಧರೆ ಕುಸಿದು ತಲ್ಲಣಿಸಿದ ಬದುಕು

ಪಶ್ಚಿಮ ಘಟ್ಟದ ಹಲವು ತಾಲ್ಲೂಕುಗಳಲ್ಲಿ ಭೂಕುಸಿತ: ಆತಂಕದಲ್ಲಿ ಜೀವನ
Last Updated 1 ಆಗಸ್ಟ್ 2021, 2:52 IST
ಅಕ್ಷರ ಗಾತ್ರ

ಕಾರವಾರ: ಕಣ್ಣು ಹಾಯಿಸಿದಷ್ಟೂ ದೂರ ಬೆಟ್ಟಗಳ ಸಾಲಿನಲ್ಲಿ ಕಾಣುವ ಹಚ್ಚ ಹಸಿರ ವನರಾಶಿ. ದೂರದಲ್ಲಿ ಕಾಳಿ ನದಿ ನೀರಿನ ಓಟವನ್ನು ತಡೆಯಲು ಅಡ್ಡಲಾಗಿ ನಿಂತಿರುವ ಕೊಡಸಳ್ಳಿ ಜಲಾಶಯ. ಇಂಥ ಪ್ರಕೃತಿ ಸೌಂದರ್ಯವನ್ನು ಸವಿಯಲು ಕಳಚೆಯಲ್ಲಿ ಈಗ ಯಾರೂ ಇಲ್ಲ. ಈ ಪುಟ್ಟ ಹಳ್ಳಿ ನಾಗರಿಕ ಪ್ರಪಂಚದ ಸಂಪರ್ಕ ಕಳಚಿಕೊಂಡಿದೆ.

ಜುಲೈ 22 ಮತ್ತು 23ರ ಭೂಕುಸಿತ ಸ್ಥಳೀಯರ ಜೀವನಾಧಾರವನ್ನೇ ಕಸಿದುಕೊಂಡಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರತಿ ಮಳೆಗಾಲದಲ್ಲೂ ರಸ್ತೆಗಳು ಕುಸಿಯುತ್ತವೆ. ಸಂಚಾರ ಸ್ಥಗಿತವಾಗುತ್ತದೆ. ಕೆಲತಿಂಗಳುಗಳವರೆಗೆ ಜೀವನ ಅಘೋಷಿತ ಲಾಕ್‌ಡೌನ್‌ ಅನುಭವಿಸುತ್ತದೆ. ಆದರೆ ಈ ವರ್ಷ ಮಾತ್ರ ಊರಿಗೆ ಊರೇ ನೆಲಸಮವಾಗಿದೆ. ತೋಟ, ಬೆಟ್ಟ ಎಲ್ಲವೂ ಇಳಿಜಾರಿನಿಂದಾಚೆ ಜಾರಿ ಹೋಗಿವೆ.

ಯಲ್ಲಾಪುರ ತಾಲ್ಲೂಕಿನ ವಜ್ರಳ್ಳಿ ಗ್ರಾಮ ಪಂಚಾಯಿತಿಯ ಕಳಚೆ, ತಳಕೇಬೈಲ್, ಅರಬೈಲ್, ಹೆಗ್ಗಾರ, ಕೋಮಾರಕುಂಬ್ರಿ, ದಬ್ಬೇಸಾಲ್, ಡಬ್ಗುಳಿ, ತಾರಗಾರ, ಬೀಗಾರ್, ಬಾಗಿನಕಟ್ಟ ಮೊದಲಾದ ಕಡೆ ಸಂಭವಿಸಿದ ಭೂಕುಸಿತ ಇಲ್ಲಿನ ಚಿತ್ರಣವನ್ನೇ ಸಂಪೂರ್ಣ ಬದಲಿಸಿದೆ. ಅತಿಥಿ ಸತ್ಕಾರಕ್ಕೆ ಹೆಸರಾಗಿರುವ ಕಳಚೆ ಪ್ರದೇಶಕ್ಕೆ ‘ಪ್ರಜಾವಾಣಿ’ ಪ್ರತಿನಿಧಿ ಭೇಟಿ ನೀಡಿದಾಗ ಎಲ್ಲರ ಮುಖಗಳಲ್ಲೂ ದುಗುಡ, ಆತಂಕ ಮನೆಮಾಡಿದ್ದವು.

ಕಳಚೆ ಭಾಗದ 19 ಮಜಿರೆಗಳ ಉದ್ದಕ್ಕೂ ಚಿರೆಕಲ್ಲು ಮಿಶ್ರಿತ ಕೆಂಪು ಮಣ್ಣು ಮತ್ತು ಮ್ಯಾಂಗನೀಸ್ ಅಂಶವಿರುವ ಕಪ್ಪು ಮಣ್ಣಿನ ರಾಡಿಯೇ ದುರಂತವನ್ನು ವಿವರಿಸುತ್ತಿತ್ತು. ಸಣ್ಣದಾಗಿ ಹರಿಯುತ್ತಿದ್ದ ತೊರೆಗಳು ಈಗ ಹತ್ತಾರು ಅಡಿಗಳಷ್ಟು ವಿಶಾಲ ಕಣಿವೆಗಳಾಗಿವೆ.

ಊರಿನ ಏಕೈಕ ರಸ್ತೆಯಲ್ಲೇ ಸುಮಾರು 30 ಮೀಟರ್ ಆಳದ ಕಂದಕ ಉಂಟಾಗಿದೆ.

ದೂರ ದೂರದಲ್ಲಿರುವ ಮನೆಗಳ ಪೈಕಿ ಹಲವು ಭೂಸಮಾಧಿಯಾಗಿವೆ. ಬಿರುಕು ಬಿಟ್ಟ ಬೆಟ್ಟದಲ್ಲಿ ಮತ್ತೊಂದಿಷ್ಟು ಬೀಳುವಂತಿವೆ. ತೋಟದಲ್ಲಿ ಕಾಲಿಟ್ಟರೆ ಎಲ್ಲಿ ಕುಸಿದು ಬೀಳುವುದೋ ಎಂಬ ಆತಂಕದಲ್ಲೇ ಹೆಜ್ಜೆ ಹಾಕಬೇಕು. ಎದುರಿಗೇ, ದೊಡ್ಡದಾಗಿ ಬಾಯ್ತೆರೆದ ಗುಡ್ಡದ ಅಂಚು! ಒಂದೇ ರಾತ್ರಿಯಲ್ಲಾದ ಈ ವರುಣಾಘಾತದಿಂದ ಬೆಚ್ಚಿಬಿದ್ದ ಗ್ರಾಮಸ್ಥರು, ಸಾಕುಪ್ರಾಣಿಗಳೊಂದಿಗೆ ಊರು ತೊರೆದಿದ್ದು, ಸದ್ಯ ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ.

ಸರ್ವನಾಶವಾದ ಸರ್ವಋತು ರಸ್ತೆ: ಪ್ರಾಥಮಿಕ ಮಾಹಿತಿಯಂತೆ,ಕಳಚೆಯಲ್ಲಿ 10 ಕಿಲೋಮೀಟರ್ ವ್ಯಾಪ್ತಿಯಲ್ಲಿ 15 ಮನೆಗಳು ಸಂಪೂರ್ಣ ಕುಸಿದಿವೆ. ಒಬ್ಬರು ಮೃತಪಟ್ಟಿದ್ದಾರೆ. ಈ ವರ್ಷ ಮೇ–ಜೂನ್‌ನಲ್ಲಿ ಸುಮಾರು ₹ 2.50 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಸರ್ವಋತು ರಸ್ತೆಯು ಕುರುಹೂ ಇಲ್ಲದಂತೆ ನಾಶವಾಗಿದೆ.

ಬೆಟ್ಟದ ಮೇಲಿದ್ದ ನೂರಾರು ಎಕರೆ ಅಡಿಕೆ, ತೆಂಗು ತೋಟ, ಅರಣ್ಯ ಪ್ರದೇಶವು ಎಂಟು ಕಿಲೋಮೀಟರ್ ದೂರದ ತಪ್ಪಲಿಗೆ ಜಾರಿದೆ. ಕೈಗಾ– ಇಳಕಲ್ ರಾಜ್ಯ ಹೆದ್ದಾರಿ ನಡುವೆ ಬರುವ ತಳಕೆಬೈಲ್ ಎಂಬಲ್ಲಿ ಅಂದಾಜು 100 ಮೀಟರ್ ಉದ್ದಕ್ಕೆ ಗುಡ್ಡ ಕುಸಿದಿದೆ. ಪರ್ಯಾಯ ರಸ್ತೆ ಅನಿವಾರ್ಯವಾಗಿದೆ.

ಜುಲೈ 29ರಂದು ಸ್ಥಳಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇಡೀ ಗ್ರಾಮವನ್ನೇ ಸ್ಥಳಾಂತರಿಸಲು ಸೂಚಿಸಿದ್ದಾರೆ.ಇಲ್ಲಿ 283 ಮನೆಗಳಿದ್ದು, 998 ಜನರಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 63ರ ಅರಬೈಲ್ ಘಟ್ಟದಲ್ಲೂ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿದಿದೆ. ಜೊಯಿಡಾ ತಾಲ್ಲೂಕಿನ ಅಣಶಿ ಬಳಿ ನಾಲ್ಕು ಕಡೆ ಮಣ್ಣಿನ ರಾಶಿ ಬಿದ್ದಿದೆ. ಶಿರಸಿ ತಾಲ್ಲೂಕಿನ ಮತ್ತಿಘಟ್ಟದಲ್ಲಿ ಫೆಬ್ರುವರಿಯಲ್ಲಿ ಹಾಗೂ ವಾರದ ಹಿಂದೆ ಗುಡ್ಡ ಕುಸಿದಿದೆ. ಕಕ್ಕಳ್ಳಿ ಭಾಗದಲ್ಲೂ ಹೀಗೇ ಆಗಿದೆ. ಗಣೇಶಪಾಲ್‌ನಲ್ಲಿ ರಸ್ತೆ ಬಿರುಕು ಬಿಟ್ಟಿದ್ದರೆ, ಕುಮಟಾ ತಾಲ್ಲೂಕಿನ ಯಾಣದ ಸುತ್ತ ಎರಡು ವರ್ಷಗಳಿಂದ ಕುಸಿತ ಹೆಚ್ಚಾಗಿದೆ.

ಕಾರವಾರ ತಾಲ್ಲೂಕಿನ ಕಡವಾಡ ಸಮೀಪದ ಮಹಡಿಬಾಗ್‌ನಲ್ಲಿ 2009ರಲ್ಲಿ ಮನೆಗಳ ಮೇಲೆ ಗುಡ್ಡ ಕುಸಿದು 19 ಜನ ಮೃತಪಟ್ಟಿದ್ದರು. 2017ರ ಜೂನ್‌ನಲ್ಲಿ ಕುಮಟಾ ತಾಲ್ಲೂಕಿನ ದುಂಡುಕುಳಿಯಲ್ಲಿ ಬಂಡೆ–ಮಣ್ಣು ಬಿದ್ದು ಮೂವರು ಮಕ್ಕಳು ಮೃತಪಟ್ಟಿದ್ದರು.

ಮೂರು ವರ್ಷಗಳಿಂದ ಕೊಡಗು ಜಿಲ್ಲೆಯನ್ನು ಭೂಕುಸಿತವೆಂಬ ಭೂತ ಕಾಡುತ್ತಿದೆ. ಇಲ್ಲಿ ಬೆಟ್ಟಗಳೇ ಕುಸಿಯುತ್ತಿವೆ. ಕರಾವಳಿಯನ್ನು ಸಂಪರ್ಕಿಸುವ ಚಾರ್ಮಾಡಿ ಘಾಟ್‌, ಶಿರಾಡಿ ಘಾಟ್‌ ಪ್ರದೇಶಗಳಲ್ಲಿ ಪ್ರತಿ ಮಳೆಗಾಲದಲ್ಲಿ ಭೂಕುಸಿತ ಸಾಮಾನ್ಯವೆಂಬಂತಾಗಿದೆ. ಕೆಲವೇ ದಿನಗಳ ಹಿಂದೆ ಶಿರಾಡಿ ಭಾಗದ ದೋಣಿಗಾಲ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ರಸ್ತೆ ಕುಸಿದಿತ್ತು.

ಆಗಬೇಕಾಗಿರುವುದೇನು?: ಸಂತ್ರಸ್ತರ ಸ್ಥಳಾಂತರದ ವ್ಯವಸ್ಥೆ ತುರ್ತಾಗಿ ಆಗಬೇಕಾಗಿದೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮುಂದುವರಿಸಲು ಕ್ರಮ ಕೈಗೊಳ್ಳಬೇಕು, ಮಾನಸಿಕವಾಗಿ ಕುಗ್ಗಿ ಹೋಗಿರುವ ಜನರಿಗೆ ಸ್ಥೈರ್ಯ ತುಂಬಬೇಕಿದೆ.

ಪಟ್ಟಿಯಲ್ಲಿ ಏಳು ಜಿಲ್ಲೆಗಳು

ಇಸ್ರೊ ಅಂಗಸಂಸ್ಥೆಯಾದ ನ್ಯಾಷನಲ್ ರಿಮೋಟ್ ಸೆನ್ಸಿಂಗ್ಸೆಂಟರ್ (ಎನ್.ಆರ್.ಎಸ್.ಸಿ) ಮತ್ತು ಭಾರತೀಯ ಭೂಗರ್ಭ ಸರ್ವೇಕ್ಷಣಾ ಸಂಸ್ಥೆ (ಜಿ.ಎಸ್.ಐ), ಪಶ್ಚಿಮಘಟ್ಟದಲ್ಲಿ ಈವರೆಗೆ ಆಗಿರುವ ಭೂ ಕುಸಿತಗಳ ಸಮಗ್ರ ಅಧ್ಯಯನ ಮಾಡಿವೆ. ಅದನ್ನು ಆಧರಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿವೆ. ಕೊಡಗು, ದಕ್ಷಿಣ ಕನ್ನಡ, ಹಾಸನ, ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗ ಮತ್ತು ಉತ್ತರ ಕನ್ನಡದಲ್ಲಿ ಭೂ ಕುಸಿತ ಆಗಬಹುದು ಎಂದು ವರದಿಯಲ್ಲಿ ತಿಳಿಸಿವೆ.

ಭವಿಷ್ಯದಲ್ಲಿ ಭೂ ಕುಸಿತ ಆಗಬಹುದಾದ ರಾಜ್ಯದ 23 ತಾಲ್ಲೂಕುಗಳನ್ನು ಗುರುತಿಸಲಾಗಿದೆ. ಉತ್ತರ ಕನ್ನಡದಲ್ಲಿ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಸಿದ್ದಾಪುರ, ಶಿರಸಿ, ಯಲ್ಲಾಪುರ ಮತ್ತು ಜೊಯಿಡಾ ತಾಲ್ಲೂಕುಗಳು ಪಟ್ಟಿಯಲ್ಲಿವೆ. ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರ ಅಧ್ಯಕ್ಷತೆಯಲ್ಲಿ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯು ರಚಿಸಿದ ಭೂಕುಸಿತ ಅಧ್ಯಯನ ಸಮಿತಿಯ ವರದಿಯಲ್ಲಿ ಇದರ ಉಲ್ಲೇಖವಿದೆ.

‘ಜಲ ಎಂಜಿನಿಯರಿಂಗ್ ಗೊತ್ತಿರಲಿ’

‘ಮಲೆನಾಡಿನಲ್ಲಿ ಮಣ್ಣಿನ ರಚನೆ ಇತರ ಪ್ರದೇಶಗಳಿಗಿಂತ ವಿಭಿನ್ನವಾಗಿದೆ. ಹಾಗಾಗಿ, ಇಲ್ಲಿ ರಸ್ತೆಗಳ ನಿರ್ಮಾಣ ಮಾಡುವವರು ಜಲ ಎಂಜಿನಿಯರಿಂಗ್ ತಿಳಿದಿರಬೇಕು’ ಎಂದು ಪರಿಸರ ಬರಹಗಾರ ಶಿವಾನಂದ ಕಳವೆ ಹೇಳುತ್ತಾರೆ.

‘ಘಟ್ಟ ಪ್ರದೇಶದಲ್ಲಿ ಮಳೆಗಾಲದ 114ರಿಂದ 118 ದಿನಗಳಲ್ಲಿ 90 ಲಕ್ಷದಿಂದ 1.25 ಕೋಟಿ ಲೀಟರ್ ನೀರು ಬೀಳುತ್ತದೆ. ಅವುಗಳನ್ನು ಮರಗಳೇ ತಡೆದು ನಿಲ್ಲಿಸುತ್ತವೆ. ಆಯಾ ಭಾಗದ ನೀರು ಅಲ್ಲೇ ಇಂಗುತ್ತದೆ. ಆದರೆ, ರಸ್ತೆಗಳ ಬಳಿ ಕಾಂಕ್ರೀಟ್ ಚರಂಡಿಗಳನ್ನು ನಿರ್ಮಿಸಿ ಕಿಲೋಮೀಟರ್‌ಗಟ್ಟಲೆ ದೂರ ನೀರು ಸಾಗಿಸಲಾಗುತ್ತದೆ. ಕಳಚೆಯ ಮೇಲಿನ ಗುಡ್ಡದಲ್ಲಿ ಹೀಗೇ ಆಗಿದೆ. ಈಗ ಅಲ್ಲಿ ನೀರಿನ ಸೆಲೆ ಸುಮಾರು 40 ಅಡಿಗಳಷ್ಟು ಕೆಳಗೆ ಹೋಗಿದೆ’ ಎಂದು ಅವರು ವಿಶ್ಲೇಷಿಸುತ್ತಾರೆ.

‘ಮೂರು ಅಂಶದ ಅಧ್ಯಯನ ಮುಖ್ಯ’

‘ಸಾಮಾನ್ಯವಾಗಿ ಗುಡ್ಡಗಳು ಕುಸಿದಾಗ ಮೂರು ಅಂಶಗಳನ್ನು ಅಧ್ಯಯನ ಮಾಡಬೇಕಾಗುತ್ತದೆ. ಭೂ ವೈಜ್ಞಾನಿಕ ಲಕ್ಷಣಗಳು, ಶಿಲಾ ಸಮೂಹದ ರಚನೆ ಮತ್ತು ಲಕ್ಷಣಗಳು‌ ಹಾಗೂ ಆ ಪ್ರದೇಶದಲ್ಲಿ ಮಾನವ ನಿರ್ಮಿತ ಅಪರಾಧಗಳನ್ನು ನೋಡಬೇಕು’ ಎನ್ನುತ್ತಾರೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿವೃತ್ತ ಹಿರಿಯ ವಿಜ್ಞಾನಿ ಡಾ.ಜಿ.ವಿ.ಹೆಗಡೆ.

‘45 ಡಿಗ್ರಿಗಿಂತ ಹೆಚ್ಚು ಇಳಿಜಾರು ಇಲ್ಲದ ಪ್ರದೇಶದ ಕೆಳಭಾಗದಲ್ಲಿ ಬೆಟ್ಟವನ್ನು ವಿವಿಧ ಕಾರ್ಯಗಳಿಗೆ ಕತ್ತರಿಸುವುದು ಮಾನವ ನಿರ್ಮಿತ ಅಪರಾಧ ಎಂದೇ ಕರೆಯಬಹುದು. ಬೇಸಿಗೆಯಲ್ಲಿ ಅಲ್ಲಿ ಸಮಸ್ಯೆಯಾಗದು. ಆದರೆ, ಮಳೆಗಾಲದಲ್ಲಿ ಬಿದ್ದ ನೀರು, ಬೆಟ್ಟದಲ್ಲಿರುವ ಜೇಡಿ ಮಣ್ಣಿನ ಪದರದಿಂದ ಕೆಳಗೆ ಇಳಿಯುವುದಿಲ್ಲ. ಜೊತೆಗಿರುವ ಚಿರೆಕಲ್ಲಿನ ಮಾದರಿಯ ಮಣ್ಣು, ಬೇಸಿಗೆಯಲ್ಲಿ ಸಂಕುಚಿತವಾಗುತ್ತದೆ. ಮಳೆಗಾಲದಲ್ಲಿ ಹಿಗ್ಗುತ್ತದೆ. ಅದರ ಒತ್ತಡಕ್ಕೆ ಮಣ್ಣು ಕುಸಿಯುತ್ತದೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT