ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಬೆಳಗು | ಅನಾಥ ಭಾವದ ನೆನಪುಗಳು

Published 23 ಏಪ್ರಿಲ್ 2024, 21:19 IST
Last Updated 23 ಏಪ್ರಿಲ್ 2024, 21:19 IST
ಅಕ್ಷರ ಗಾತ್ರ

ಗೆಳೆಯರು ಸಿಕ್ಕಾಗ ಹೀಗೆ ಬಾಲ್ಯದ ನೆನಪುಗಳಿಗೆ ಜಾರುವುದು ವಾಡಿಕೆ. ಒಬ್ಬರೆಂದರು ‘ನನ್ನನ್ನು ಅಪ್ಪ ಒಂದನೇ ತರಗತಿಗೇನೆ ಹಾಸ್ಟೆಲ್‌ಗೆ ಸೇರಿಸಿದರು. ನಾನು ಆ ದಿನ ಅಳತೊಡಗಿದೆ. ವಾರ್ಡನ್‌ ನಿನ್ನ ತಂದೆ ಸಂಜೆಯೊತ್ತಿಗೆ ಬರುತ್ತಾರೆ ಎಂದು ಸಮಾಧಾನ ಹೇಳಿದರು. ರಾತ್ರಿ ತನಕ ಕಾದರೂ ಅವರು ಬರಲಿಲ್ಲ. ಅವರಿಗೆ ಹಳ್ಳೀಲಿ ಕೆಲಸವಿದೆಯಂತೆ ನಾಳೆ ಬರುತ್ತಾರೆ ಎಂದರು. ಆ ನಾಳೆಯೂ ಮುಗಿಯಿತು. ಮುಂದಿನ ವಾರ ಎಂದರು. ನಂತರ ಅನೇಕ ವಾರಗಳು ಹೀಗೆ ಉರುಳಿದವು. ಕಾದು ಸುಸ್ತಾಗಿ ನಾನು ಆ ಜಾಗಕ್ಕೆ ಅನಿವಾರ್ಯವಾಗಿ ಒಗ್ಗತೊಡಗಿದ್ದೆ. ಮನೆಯ ನೆನಪು ತುಂಬಾ ಕಾಡಿಸುತ್ತಿತ್ತು. ಅಪ್ಪ ಅಮ್ಮ ಯಾಕೆ ನನ್ನ ಹೀಗೆ ಹೊರಗಟ್ಟಿದರು ಎಂದು ಸಿಟ್ಟು ಬರುತ್ತಿತ್ತು. ಅವರಿಗೆ ನನ್ನ ಮೇಲೆ ಪ್ರೀತಿ ಇಲ್ಲ ಎಂದು ಮನಸ್ಸು ಹೇಳುತ್ತಿತ್ತು. ನನ್ನ ಹಾಗೆಯೇ ಮನೆ ಬಿಟ್ಟು ಬಂದ ಜೊತೆಗಾರರ ಅಳಲು ಒಂದು ಬಗೆಯ ಸಮಾಧಾನ ಕೊಡುತ್ತಿತು. ಆ ದಿನ ಅಪ್ಪನಿಗೆ ನನ್ನ ಅಟ್ಟಿದ್ದು ಸರಿ ಎಂದು ಈಗ ಅನ್ನಿಸುತಿದೆ. ಹಳ್ಳೀಲಿ ಇದಿದ್ದರೆ ನಾನು ಈ ಮಟ್ಟಕ್ಕೆ ಓದಿ ಬೆಳೆದು ವೈದ್ಯನಾಗಲು ಸಾಧ್ಯವಿರಲಿಲ್ಲ.

ನಮ್ಮೂರಲ್ಲೇ ಉಳಿದ ನನ್ನ ಓರಗೆಯವರು ರೈತಾಪಿಗಳಾದರು. ಕೂಲಿಯಾಳುಗಳಾದರು. ಬಸ್ಸೂ ಇಲ್ಲದ, ಶಾಲೆಯೂ ಇಲ್ಲದ, ದಾರಿಯೂ ಕಾಣದ ಆ ಕುಗ್ರಾಮದಿಂದ ನಾನು ಬರುವಾಗ ಅತ್ತಿದ್ದೆ. ಈಗ ಅದೇ ಹಳ್ಳಿಯ ಜನರನ್ನು ಹೋಗಿ ಕಂಡು ಮಾತಾಡುವಾಗ ಸಂತಸ ಎನಿಸುತ್ತೆ. ಅವರ ಆರೋಗ್ಯ ವಿಚಾರಿಸಿ, ನನ್ನ ಕೈಲಾದ ಚಿಕಿತ್ಸೆ ಕೊಡುವುದು ತೃಪ್ತಿ ಎನಿಸುತ್ತದೆ. ನಮ್ಮೂರಿನ ಜನರ ಸೇವೆ ನೀನು ಮಾಡಬೇಕು ಎಂದು ಅಪ್ಪ ಹೇಳಿದ ಮಾತನ್ನು ಈಗಲೂ ನೆರವೇರಿಸುತ್ತಿದ್ದೇನೆ’ ಎಂದರು.

ಮತ್ತೊಬ್ಬರು ‘ನಾನು ಹೆಣ್ಣು ಮಗಳಾದ ಕಾರಣ ಅಪ್ಪ ನೆಂಟರಿಷ್ಟರ ಮನೆಗಳಲ್ಲಿ ಬಿಟ್ಟರು. ಅವರಿಗೆ ಆಗ ಮಕ್ಕಳಿರಲಿಲ್ಲ. ಆಗ ನನ್ನ ಚೆನ್ನಾಗಿ ನೋಡಿಕೊಂಡರು. ಅವರಿಗೇ ಮಕ್ಕಳಾದಾಗ ಸಹಜವಾಗಿ ನನ್ನ ಮೇಲಿನ ಕರುಣೆ ಮತ್ತು ಕಾಳಜಿ ಕಡಿಮೆಯಾಯಿತು.

ಮನೆಗೆಲಸದಲ್ಲಿ ಕೈ ಜೋಡಿಸಿ ಓದುತ್ತಿದ್ದೆ. ಏನೋ ಒಂದು ಅನಾಥ ಭಾವ ಕಾಡುತ್ತಿತ್ತು. ಪ್ರೀತಿಯ ಕೊರತೆ ಕಾಡಿಸುತ್ತಿತ್ತು. ಮುಂದೆ ಮತ್ತೊಂದು ಸಂಬಂಧಿಕರ ಮನೆಯಲ್ಲಿ ಇದ್ದು ಓದು ಮುಂದುವರಿಸುವಾಗ ಅವರ ಮನೆಗೆ ಬರುವ ನೆಂಟರು ನನ್ನ ಕೆಲಸದಾಳಿನಂತೆ ಕಾಣುತ್ತಿದ್ದರು. ಒಂದು ಬಗೆಯ ಬಲವಂತದಲ್ಲೇ ಅವರು ನನಗೆ ಇರಲು ಜಾಗ ಕೊಟ್ಟಿದ್ದರು. ಅನೇಕ ಸಲ ಅವರ ಮಾತು, ವರ್ತನೆ ಹಿಂಸೆ ಎನಿಸುತ್ತಿತ್ತು. ಏನೂ ಹಿಂತಿರುಗಿ ಮಾತಾಡಲು ಸಾಧ್ಯವಿರಲಿಲ್ಲ. ಮೂಕಿಯಂತೆ ಇದ್ದುಬಿಟ್ಟೆ. ಆ ವಿಚಿತ್ರ ಸಂಕಷ್ಟಗಳು ನನ್ನ ಛಲವನ್ನು ಗಟ್ಟಿ ಮಾಡಿದವು. ಚೆನ್ನಾಗಿ ಓದಿ ಒಳ್ಳೆಯ ಕೆಲಸ ಪಡೆಯಬೇಕೆಂಬ ದೃಢತೆಯನ್ನು ಹುಟ್ಟಿಸಿದವು. ಈ ಕ್ಷಣಕ್ಕೂ ಅವೆಲ್ಲಾ ನೆನಪಾಗುತ್ತವೆ’ ಎಂದರು.

ಮನೆ ತೊರೆದು ಅನ್ಯರ ಮನೆಗಳಲ್ಲಿ, ಹಾಸ್ಟೆಲ್‌ಗಳಲ್ಲಿ ಇದ್ದು ಓದಿದವರ ಅನುಭವಗಳು ಹೆಚ್ಚು ಕಡಿಮೆ ಹೀಗೆ ಇದ್ದೀತು. ಬಾಲ್ಯದಲ್ಲೇ ಮನೆಯ ಪ್ರೀತಿ ಕಳಕೊಂಡವರು ತಮ್ಮ ಬದುಕಿನ ಸಾಧನೆಯಲ್ಲಿ ಈಗ ಮುಂದಿರಬಹುದು. ಆದರೆ ಅಂದು ಸಿಗದೆ ಹೋದ ಅವ್ವ ಅಪ್ಪನ ಬೆಚ್ಚಗಿನ ಪ್ರೀತಿ, ಬಾಂಧವ್ಯ ನೆನೆದು ಈಗಲೂ ಭಾವುಕರಾಗುತ್ತಾರೆ. ಜಗದ ಪ್ರೀತಿ ಪ್ರೇಮದ ಸಣ್ಣ ಹನಿಗೂ ಜಾತಕ ಪಕ್ಷಿಯಂತೆ ಕಾಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT