ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ–ಬೆಳಗು | ಹುಟ್ಟಾ ಸತ್ಯವಂತನೇನಲ್ಲ ಹರಿಶ್ಚಂದ್ರ

Published 30 ನವೆಂಬರ್ 2023, 20:11 IST
Last Updated 30 ನವೆಂಬರ್ 2023, 20:11 IST
ಅಕ್ಷರ ಗಾತ್ರ

ಚಂದ್ರಮತಿಯನ್ನು ಮದುವೆಯಾದ ಮೇಲೆ ಬಹುಕಾಲ ಹರಿಶ್ಚಂದ್ರನಿಗೆ ಮಕ್ಕಳಿರಲಿಲ್ಲ. ನಾರದರ ಸಲಹೆಯಂತೆ ವರುಣನನ್ನು ಪ್ರಾರ್ಥಿಸಿದ. ವರುಣ ಸಂತಾನವನ್ನೇನೋ ಕೊಟ್ಟ. ಆದರೆ ಒಂದು ಕರಾರು- ಹುಟ್ಟಿದ ಮಗುವನ್ನು ತನಗೇ ಕೊಡಬೇಕು. ಸದ್ಯಕ್ಕೆ ಸಂತಾನ ಬೇಕಿತ್ತು ಹರಿಶ್ಚಂದ್ರನಿಗೆ. ಕರಾರಿಗೆ ಒಪ್ಪಿಕೊಂಡ.

ಕೆಲದಿನಗಳಲ್ಲೇ ಲೋಹಿತಾಶ್ವ ಹುಟ್ಟಿದ. ಮಗನ ಬಾಲಲೀಲೆಗಳಲ್ಲಿ ಮೈಮರೆತಿದ್ದ ರಾಜ. ಅದೊಂದು‌ ದಿನ ವರುಣ ಬಂದು ಅರಮನೆ ಬಾಗಿಲು ತಟ್ಟಿದ. ಕರಾರಿನಂತೆ ಮಗನನ್ನು ಕೊಡು ಅಂದ. ಹರಿಶ್ಚಂದ್ರ, ಮಗುವಿಗೆ ಹಲ್ಲು ಮೊಳೆತ ಮೇಲೆ ಕೊಡುವೆ ಅಂದ. ಮತ್ತೆ ಬಂದ ವರುಣ. ನಡೆಗಲಿತ ಮೇಲೆ ಕೊಡುವೆ ಅಂದ ರಾಜ. ವರುಣ ಮತ್ತೊಮ್ಮೆ ಬರುವ ಹೊತ್ತಿಗೆ ಲೋಹಿತಾಶ್ವ ದೊಡ್ಡ ಹುಡುಗನಾಗಿದ್ದ. ತನ್ನನ್ನು ವರುಣ ಕೇಳುತ್ತಿದ್ದಾನೆ ಎಂಬುದು ಅರ್ಥವಾಗಿ ಎಲ್ಲಿಗೋ ಹೋಗಿ ಅವಿತುಕೊಂಡು ಬಿಟ್ಟ. ಹರಿಶ್ಚಂದ್ರನಿಗೆ ವರುಣ ಜಲೋದರ ರೋಗ ಕೊಟ್ಟ.

ಆಗ ಹರಿಶ್ಚಂದ್ರ ಬೇರೊಂದು ಉಪಾಯ ಮಾಡಿದ. ಸಾವಿರಾರು ವರಹ ಮತ್ತು ಕೆಲವು ಹಸುಗಳನ್ನು ಕೊಟ್ಟು ಶುನಶ್ಶೇಪ ಎಂಬ ಬಡಬ್ರಾಹ್ಮಣನ ಮಗನನ್ನು ಖರೀದಿ ಮಾಡಿ ಅವನನ್ನು ವರುಣನಿಗೆ ಬಲಿಕೊಡಲು ಏರ್ಪಾಡು ಮಾಡಿದ. ಹುಡುಗನನ್ನು ಬಲಿಕೊಡಲು ಕರೆದೊಯ್ಯುತ್ತಿದ್ದಾಗ ದಾರಿಯಲ್ಲಿ ವಿಶ್ವಾಮಿತ್ರ ಎದುರಾದ. ಹುಡುಗ ತನ್ನ ಕತೆಯನ್ನೆಲ್ಲಾ ವಿಶ್ವಾಮಿತ್ರ ಋಷಿಯೊಂದಿಗೆ ಹೇಳಿಕೊಂಡ...   

ಮುಂದಿನ‌ ಕತೆ ಹಾಗಿರಲಿ. ಹರಿಶ್ಚಂದ್ರನ ಕತೆ ಕೇಳಿ ಬಲ್ಲ ನಾವು‌ ಒಪ್ಪುವ‌ ಮಾತಾ ಇದು... ಒಪ್ಪಬೇಕು ನೀವು. ಯಾಕೆಂದರೆ ಈ ಕತೆ ಹರಿಶ್ಚಂದ್ರನ ಕತೆಯೊಳಗೇ ಇದೆ.

ಇಂಥ ಪೂರ್ವ ಚರಿತ್ರೆಯುಳ್ಳ ಹರಿಶ್ಚಂದ್ರ ಸತ್ಯಕ್ಕಾಗಿ ಕಾಡಿಗೆ ಹೋದ. ಪಡಬಾರದ ಕಷ್ಟ ಪಟ್ಟ. ತನ್ನ ಹೆಂಡತಿ ಮಗನನ್ನು ಮಾರಿದ. ಕಡೆಗೆ ತನ್ನನ್ನೇ ಮಾರಿಕೊಂಡು ಸ್ಮಶಾನ ಕಾದ.

ಹರಿಶ್ಚಂದ್ರನ ಕತೆ ಹೇಳುವ ಮುಖ್ಯ ವಿಷಯವೇ ಅದು. ಮಹಾತ್ಮರೆಲ್ಲರೂ ಹುಟ್ಟಿನಿಂದಲೇ ಮಹಾತ್ಮರಾಗಿರಬೇಕಿಲ್ಲ. ಯಾವ ಸಾಮಾನ್ಯ ಮನುಷ್ಯನೂ ಮಹಾತ್ಮನಾಗಬಹುದು. ಆ ಚೇತನಕ್ಕೆ ಅಂಥದೊಂದು ಕಿಡಿ ತಾಕಬೇಕು, ಅದೊಂದು ರಸ‌ ಸೋಕಬೇಕು. ಸೃಷ್ಟಿಯ ಮಹಾವ್ಯೂಹ ರಚನೆಯಲ್ಲಿ ಪಾಪಿಗೂ ಉದ್ಧಾರ ಸಾಧ್ಯವಿದೆ- ಎಂಬುದು ಕುವೆಂಪು ಅವರ ಶ್ರೀರಾಮಾಯಣ ದರ್ಶನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT