ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಬೆಳಗು | ಸಮಸ್ಯೆ ಆಗಬೇಡ ಪರಿಹಾರವಾಗು

Published 22 ಜನವರಿ 2024, 21:54 IST
Last Updated 22 ಜನವರಿ 2024, 21:54 IST
ಅಕ್ಷರ ಗಾತ್ರ

ಪಿ. ಚಂದ್ರಿಕಾ

ಮರವೊಂದು ಸಿಡಿಲಿನ ಹೊಡೆತಕ್ಕೆ ಸಿಕ್ಕು ನೆಲಕ್ಕುರುಳಿತ್ತು. ಅದು ಜನ ಓಡಾಡುವ ದಾರಿಯೇ ಆದರೂ ಕಾಡಿನ ಮಧ್ಯೆ ಇತ್ತು. ಉದ್ದಕ್ಕೆ ವಾಹನಗಳು ನಿಂತಿದ್ದವು. ಒಬ್ಬ, ‘ಈ ಅಕಾಲದಲ್ಲಿ ಯಾಕೆ ಮಳೆ ಬಂತು?’ ಎಂದು ಚರ್ಚಿಸುತ್ತಿದ್ದ, ಇನ್ನೊಬ್ಬ ತನ್ನ ವಿಧಿಯನ್ನು ಹಳಿಯುತ್ತಿದ್ದ. ಮತೊಬ್ಬ ತನಗೆ ಕೆಲಸಕ್ಕೆ ಹೊತ್ತಾಗುತ್ತಿದೆ ಎಂದು ಚಡಪಡಿಸುತ್ತಿದ್ದ. ಮತ್ತೊಬ್ಬ ಸಿಗದ ಫೋನ್ ಲೈನನ್ನು ಹಳಿಯುತ್ತಿದ್ದರೆ, ಮಗದೊಬ್ಬ ರಸ್ತೆಯ ಬದಿ ಮರವನ್ನು ಹಾಕುವಾಗ ಸ್ವಲ್ಪ ಹಿಂದೆ ಹಾಕದೆ ಈ ಸ್ಥಿತಿಯನ್ನು ತಂದಿಟ್ಟವನನ್ನು ಬಯ್ಯುತ್ತಿದ್ದ. ಮರ ಮಾತ್ರ ರಸ್ತೆಯ ಮಧ್ಯದಲ್ಲೆ ಬಿದ್ದಿತ್ತು. ವಾಹನಗಳ ಸಂಖ್ಯೆ ಜಾಸ್ತಿ ಆಗುತ್ತಲೇ ಇತ್ತು. 

ಒಬ್ಬ ಬಂದು, ‘ನೀವೆಲ್ಲಾ ಹೀಗೆ ಬಯ್ಯುವುದರ ಬದಲಿಗೆ ಒಂದು ಕೈ ಜೋಡಿಸಿ ಸಣ್ಣ ಕೊಂಬೆಗಳನ್ನಾದರೂ ಕತ್ತರಿಸಿ, ಒಂದು ವಾಹನವಾದರೂ ಓಡಾಡುವಷ್ಟು ದಾರಿ ಮಾಡಿಕೊಳ್ಳುವ’ ಎಂದ.

‘ಅದೆಲ್ಲಾ ಆಗುವ ಕೆಲಸ ಅಲ್ಲ’ ಎಂದು ಕೆಲವರು ಗೊಣಗಿದರು. ಇನ್ನು ಕೆಲವರು, ‘ಇದು ನಮ್ಮ ಕೆಲಸ ಅಲ್ಲ. ಸಂಬಂಧ ಪಟ್ಟ ಇಲಾಖೆಯವರು ಮಾಡಬೇಕು’ ಎಂದರು. ಮತ್ತೆ ಕೆಲವರು, ‘ನಮ್ಮ ಬಳಿ ಯಾವ ಹತಾರಗಳು ಇಲ್ಲ’ ಎಂದರು.

ಪ್ರಯತ್ನ ಪಡದೆ ಏನೂ ಆಗುವುದಿಲ್ಲ ಎಂದು ಹುರಿದುಂಬಿಸಿದ್ದಕ್ಕೆ ಕೆಲ ಯುವಕರು ಮುಂದಾದರು ಅರ್ಧ ಗಂಟೆ ಎನ್ನುವುದರೊಳಗೆ ಸ್ವಲ್ಪ ಜಾಗ ತೆರವಾಗಿ, ವಾಹನಗಳು ಓಡಾಡಲಿಕ್ಕೆ ಆರಂಭವಾಯಿತು. 

ಇದನ್ನೆಲ್ಲಾ ಗಮನಿಸಿದ ಯುವಕ ಆ ವ್ಯಕ್ತಿಯ ಬಳಿಗೆ ಬಂದು, ‘ನೀವು ಇಲ್ಲ ಅಂದಿದ್ದರೆ ನಾವು ಇನ್ನೆಷ್ಟು ಕಾಲ ಹೀಗೆ ನಿಲ್ಲ ಬೇಕಾಗುತ್ತಿತ್ತೋ ಥ್ಯಾಂಕ್ಸ್ ಸರ್’ ಎಂದ. ಆಗ ಆ ವ್ಯಕ್ತಿ, ‘ನಾವೆಲ್ಲಾ ಸಮಸ್ಯೆಯ ಕಡೆಗೆ ನೋಡುತ್ತಾ ನಾವೇ ಸಮಸ್ಯೆ ಆಗಬಯಸುತ್ತೇವೆ. ಮತ್ತು ಸಮಸ್ಯೆಯೊಂದು ಅಲ್ಲಿದ್ದರೆ ಚಡಪಡಿಸುತ್ತೇವೆ. ಆದರೆ ಪರಿಹಾರ ಆಗಬೇಕು ಎಂದು ಅಂದುಕೊಂಡುಬಿಟ್ಟರೆ ದಾರಿಗಳು ತಾನಾಗೇ ತೆರೆದುಕೊಳ್ಳುತ್ತವೆ’ ಎನ್ನುತ್ತಾನೆ.

ಈ ಮಾತನ್ನು ಕೇಳಿದ ಯುವಕ, ‘ನಿಜ ಸರ್ ನಿಮ್ಮ ಈ ಮಾತು ಯಾವ ಕಾಲಕ್ಕೂ ನೆನಪಿಟ್ಟುಕೊಳ್ಳಬೇಕು’ ಎಂದು ಕೃತಜ್ಞತೆಯನ್ನು ಸೂಚಿಸುತ್ತಾನೆ. ಸಮಸ್ಯೆ ನಮ್ಮ ಕಾರಣಕ್ಕೆ ಆಗದಿದ್ದರೂ ಪರಿಹಾರವನ್ನು ಕಂಡುಕೊಳ್ಳಬೇಕಾದವರು ನಾವೇ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT