ನಮ್ಮ ನೆಲದ ಕಥನ ಪರಂಪರೆ ಬಹುಮುಖಿಯಾಗಿದೆ. ರಾಜ-ರಾಣಿ, ದೇವತೆ-ರಾಕ್ಷಸ, ಪ್ರಾಣಿ-ಪಕ್ಷಿ ಕಥೆಗಳೆಲ್ಲ ರಂಜನೆ ಮಾತ್ರವಲ್ಲದೆ ಮನುಷ್ಯ ಸಮಾಜದ ವಿವೇಕವನ್ನು ಚೂಪುಗೊಳಿಸಿವೆ. ಕೆಲವು ಕತೆಗಳು ಆಯಾ ಕಾಲದ ಮನೋಧರ್ಮಕ್ಕೆ ಅನುಗುಣವಾಗಿ ಹೇಳಬೇಕಾದದ್ದನ್ನು ಹೇಳಿ ಮುಗಿಸಿಬಿಟ್ಟಿವೆ. ಅವುಗಳಿಂದ ನಾವೆಷ್ಟು ಕಲಿತಿದ್ದೇವೆ, ನಮ್ಮ ನಡವಳಿಕೆಗಳನ್ನು ಎಷ್ಟರಮಟ್ಟಿಗೆ ತಿದ್ದಿಕೊಂಡಿದ್ದೇವೆ ಅಂತ ನಮ್ಮ ನಮ್ಮ ಎದೆಯನ್ನು ಮುಟ್ಟಿ ನೋಡಿಕೊಳ್ಳಬೇಕಾಗಿದೆ. ಇನ್ನೂ ಕೆಲವು ಕತೆಗಳನ್ನು ವ್ಯಕ್ತಿತ್ವ ನಿರ್ಮಾಣದ ದೃಷ್ಟಿಯಿಂದ ಅವು ನಿಂತಲ್ಲಿಂದ ಬೆಳೆಸುವ ಅಗತ್ಯವಿದೆ.

ಒಂದು ಕಾಡಿನ ದೊಡ್ಡ ಮರವೊಂದರಲ್ಲಿ ಗುಬ್ಬಿ ಗೂಡು ಕಟ್ಟಿಕೊಂಡಿತ್ತು. ಅದೊಂದು ದಿನ ಸಾಯಂಕಾಲವಾಗುತ್ತಿದ್ದಂತೆಯೇ ಬಿರುಗಾಳಿ ಬೀಸಿ ದೈತ್ಯ ಮಳೆ ಸುರಿಯಲಾರಂಭಿಸಿತು. ಗೂಡಿನಲ್ಲಿದ್ದ ಮರಿಗುಬ್ಬಿಯನ್ನು ನೆನೆದು ತಾಯಿ ಗುಬ್ಬಿ ತಾನೂ ವೇಗವಾಗಿ ಹಾರಿ ಬಂದು ಗೂಡು ಸೇರಿಕೊಂಡಿತು. ಮರಿಗುಬ್ಬಿಯನ್ನು ರೆಕ್ಕೆಯಲ್ಲಿ ಬೆಚ್ಚಗೆ ಬಚ್ಚಿಟ್ಟುಕೊಂಡಿತು. ಕೆಲ ಹೊತ್ತಿನಲ್ಲಿ ಹೊರಗಡೆಯಿಂದ ಯಾರೋ ಗಡಗಡ ನಡುಗುವ ಸದ್ದು ಕೇಳಿಸಿತು. ತಾಯಿ ಗುಬ್ಬಿ ಗೂಡಿನಿಂದ ಇಣುಕಿ ನೋಡಿತು. ಮೂರು ದಢೂತಿ ಮಂಗಗಳು ಮಳೆಯಲ್ಲಿ ತೊಪ್ಪನೆ ತೊಯ್ದು ನಡುಗುವುದನ್ನು ಕಂಡ ಗುಬ್ಬಿ ಕನಿಕರದಿಂದ ಒಂದು ಮಾತು ಹೇಳಿತು. ‘ನನ್ನಂಥ ಸಣ್ಣ ಗುಬ್ಬಿ ಎಂಥ ಬಿರುಗಾಳಿ ಮಳೆಗೂ ಅಲ್ಲಾಡದಂತಹ ಗೂಡು ಕಟ್ಟಿಕೊಂಡು ಬೆಚ್ಚಗಿದ್ದೇನೆ. ನೀವೂ ಒಂದು ಒಳ್ಳೆಯ ಗೂಡು ಕಟ್ಟಿಕೊಂಡಿದ್ದರೆ ಹೀಗೆ ನಡುಗುವುದು ತಪ್ಪುತ್ತಿತ್ತು.'

ಗುಬ್ಬಿಯ ಮಾತನ್ನು ಕೇಳಿ ಕೋಪಗೊಂಡು ನಡುಗುತ್ತಲೇ ಮರ ಹತ್ತಿದ ಮೂರೂ ಮಂಗಗಳು ಗುಬ್ಬಿ ಗೂಡನ್ನು ಕಿತ್ತು ಎಸೆದು ಬಿಟ್ಟವು.

‘ಅವಿವೇಕಿಗಳಿಗೆ ಬುದ್ಧಿ ಮಾತು ಹೇಳಬಾರದು’ ಅಂತ ನೀತಿ ಹೇಳಿ ಕತೆ ಅಲ್ಲಿಗೆ ಮುಗಿಯುತ್ತದೆ.

ನಿಜ, ನಮ್ಮ ಬದುಕಿನಲ್ಲಿ ಕೆಲವೊಮ್ಮೆ ಸಹವಾಸಿಗಳೇ ನಾವು ನಡೆಯುವ ಹಾದಿಯಲ್ಲಿ ಮುಳ್ಳುಕಲ್ಲುಗಳಾಗಿ ನಮ್ಮ ನೆಮ್ಮದಿಗೆ ಅಡ್ಡಿಯಾಗುತ್ತಾರೆ. ಕಲ್ಲುಮುಳ್ಳುಗಳೊಂದಿಗೆ ಸೆಣಸಾಡುವುದು ವಿವೇಕವಲ್ಲ. ಜೀವನದುದ್ದಕ್ಕೂ ಎದುರಾಗುವ ಅವುಗಳನ್ನು ಪಕ್ಕಕ್ಕೆ ಸರಿಸುತ್ತಲೇ ಮುಂದೆ ಸಾಗಬೇಕಾಗುತ್ತದೆ. ಅಂದುಕೊಂಡ ಗುರಿಯನ್ನು ತಲುಪಬೇಕಾದರೆ ನಮಗಾದ ಗಾಯಗಳೇ ನಮ್ಮ ಹೆಜ್ಜೆಗಳು ಇನ್ನಷ್ಟು ದೃಢವಾಗಲು ಪ್ರೇರಣೆಯಾಗಬೇಕು. ನಮ್ಮ ವಿವೇಕ ಮತ್ತು ಬುದ್ಧಿಮಾತುಗಳು ನಿಷ್ಪ್ರಯೋಜಕವೆಂದು ಭಾವಿಸಬೇಕಾಗಿಲ್ಲ. ನ್ಯಾಯದ ನಿಷ್ಠುರ ಹಾದಿ ಕಠಿಣವಾಗಿದ್ದರೂ ಅಲ್ಲಿನ ಪ್ರತಿ ಹೆಜ್ಜೆ ಆತ್ಯಂತಿಕ ಸುಖದತ್ತ ಕರೆದೊಯ್ಯುತ್ತದೆ. ಧೃತಿಗೆಡದ ನಿರಂತರ ಪ್ರಯತ್ನಶೀಲತೆ ನಮ್ಮನ್ನು ಸೋಲು ಮತ್ತು ಅವಮಾನಗಳಿಂದ ರಕ್ಷಿಸುತ್ತದೆ, ನಮ್ಮ ಸಾಮರ್ಥ್ಯದ ಮೇಲೆ ಭರವಸೆ ಹುಟ್ಟಿಸುತ್ತದೆ. ನಮ್ಮ ಬೌದ್ಧಿಕ ತಿಳಿವಳಿಕೆಯು ವಿಸ್ತಾರವಾದಷ್ಟೂ ಗೆಲುವು ನಮ್ಮನ್ನು ಹಿಂಬಾಲಿಸುತ್ತದೆ.

ಗೂಡು ಕಳೆದುಕೊಂಡ ತಾಯಿ ಗುಬ್ಬಿ ಮರಿಯೊಂದಿಗೆ ಇನ್ನಷ್ಟು ಮೇಲೆ ಹಾರುತ್ತಾ ಮಂಗಗಳಿಗೆ ಹೇಳುತ್ತದೆ: ‘ನನಗೆ ರೆಕ್ಕೆಗಳಿವೆ. ನಾನು ರೆಕ್ಕೆ ಬಡಿದಷ್ಟೂ ಮೇಲೇರುತ್ತೇನೆ. ನನ್ನ ಕೊಕ್ಕು ಮತ್ತು ಕಾಲುಗಳಲ್ಲಿ ಬಲವಿದೆ, ನಾನು ಮತ್ತೆ ಗೂಡು ಕಟ್ಟುತ್ತೇನೆ. ನೀವು ಎಷ್ಟು ಗೂಡುಗಳನ್ನು ಕಿತ್ತು ಹಾಕಬಲ್ಲಿರಿ? ನೀವು ನೆಗೆಯಬಲ್ಲಿರಿ ಅಷ್ಟೇ. ನೆಗೆದಷ್ಟೂ ಕೆಳಕ್ಕೆ ಬೀಳುತ್ತೀರಿ. ನೀವು ನೆಗೆಯುವ ಎತ್ತರಕ್ಕಿಂತ ನಾನು ಹಾರುವ ಎತ್ತರ ದೊಡ್ಡದು. ಕಿತ್ತು ಹಾಕುವ ನಿಮ್ಮ ಪ್ರಯತ್ನದಲ್ಲಿ ನೀವು ಸೋಲುತ್ತಲೇ ಇರುತ್ತೀರಿ.’

ಇದು ಕತೆಯನ್ನು ಬೆಳೆಸುವ ರೀತಿ. ನೊಂದವರು ಕೊಡಬೇಕಾದ ಉತ್ತರ. ಕಟ್ಟುವ ಕಲೆ ಕೆಡವಿ ಕೊಲ್ಲುವ ಕುಬ್ಜತೆಗೆ ಎಂದೆಂದೂ ಒಲಿಯುವುದಿಲ್ಲ. ಕಡಿದಷ್ಟೂ ಹಲವು ಚಿಗುರುಗಳಾಗಿ ಅಗಲಕ್ಕೆ ಹರಡಿ ನೆರಳಾಗುವ ಬೇರಿನ ಬಲ ಇದು. ನಮ್ಮ ಅಂತಃಶಕ್ತಿಯನ್ನು ಜಾಗೃತಗೊಳಿಸಿಕೊಳ್ಳಬೇಕಾದ ಬಗೆ. ನಮ್ಮ ನೆಲಮೂಲದ ಸಾಂಸ್ಕೃತಿಕ ನೆಲೆಗಟ್ಟು. ನಾವೆಲ್ಲ ವ್ಯಕ್ತಿಗಳಾಗಿ, ಸಮುದಾಯವಾಗಿ ತಳೆಯಬೇಕಾದ ನಿಲವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.