ಕುವೆಂಪು ಸೃಜಿಸಿದ ‘ಶ್ರೀರಾಮಾಯಣದರ್ಶನಂ’ ಮಹಾಕಾವ್ಯದಲ್ಲಿ ರಾಮನ ವಿರುದ್ಧದ ಯುದ್ಧಕ್ಕೆ ಅಣ್ಣ ರಾವಣನನ್ನು ಪ್ರಚೋದಿಸಿದ ತಂಗಿ ಚಂದ್ರನಖಿ ನಿರ್ಣಾಯಕ ಹಂತದಲ್ಲಿ ದಿಕ್ಕೆಟ್ಟವಳಂತೆ ಬಂದು ರೋದಿಸುತ್ತಾಳೆ. ಪಶ್ಚಾತ್ತಾಪದಿಂದ ಬೆಂದಿರುವ ಅವಳು ‘ಸಮರಾಗ್ನಿಯನ್ನು ಹೊತ್ತಿಸಿದ ನನಗೆ ಪ್ರಾಯಃಶ್ಚಿತ್ತವಾಗಬೇಕು, ಈಗ ಆಗಿರುವ ಅನಾಹುತವೇ ಸಾಕು, ಇದನ್ನು ಇಲ್ಲಿಗೇ ನಿಲ್ಲಿಸಿಬಿಡು' ಎಂದು ಆಲಾಪಿಸುತ್ತಾಳೆ. ಅವಳ ಬೇಗುದಿಯನ್ನು ತಣಿಸುವ ಪ್ರಯತ್ನದಲ್ಲಿ ರಾವಣ ‘ನೀನು ಹಚ್ಚಿರುವ ಬೆಂಕಿಯಾದರೂ ಅದೀಗ ಎಲ್ಲರ ಕೈಮೀರಿದೆ. ಅದನ್ನು ಆರಿಸಲು ಹೋದರೆ ಅದು ನಿನ್ನ ಸಮೇತ ನಮ್ಮೆಲ್ಲರನ್ನೂ ಆವರಿಸಿಕೊಂಡು ನುಂಗಿಬಿಡುತ್ತದೆ. ಈ ಯುದ್ಧವನ್ನು ಗೆದ್ದು ಜಾನಕಿಯನ್ನು ಶ್ರೀರಾಮನಿಗೆ ಉಡುಗೊರೆಯಾಗಿ ಒಪ್ಪಿಸುವ ಮಹದಾಸೆ ನನಗಿದೆ’ ಎಂದು ತಂಗಿಯನ್ನು ಸಮಾಧಾನಪಡಿಸುತ್ತಾನೆ. ಸೀತೆಯ ಬಗೆಗಿದ್ದ ತನ್ನ ಮನೋಧರ್ಮ ಬದಲಾಗಿ ಅವಳಲ್ಲಿ ತಾಯಿಯನ್ನು ಕಾಣುತ್ತಿರುವುದಾಗಿ ಸ್ಪಷ್ಟಪಡಿಸಿ ತಂಗಿಯ ಅಭಿಮಾನಕ್ಕೆ ಪಾತ್ರನಾಗುತ್ತಾನೆ.

ದೇಶದೇಶಗಳ ನಡುವೆ ನಡೆಯುತ್ತಿರುವ ಯುದ್ಧಗಳಿಗೆ ಮತ್ತು ಆ ಸಂಬಂಧದ ಹಿಂಸೆಗೆ ಸಾಕ್ಷಿಯಾಗಿರುವ ಮನುಷ್ಯ ಜಗತ್ತು, ವಿಚಿತ್ರವಾಗಿ ಪ್ರತಿಕ್ರಿಯಿಸುತ್ತಿದೆ. ಪ್ರಕೃತಿ ವಿಕೋಪಗಳಿಗಿಂತ ಹೆಚ್ಚಾಗಿ ಮನುಷ್ಯ ಯೋಜಿತ ಯುದ್ಧಗಳಿಂದ ಜಗತ್ತು ಜರ್ಝರಿತಗೊಂಡಿದೆ. ಮನೆಯಲ್ಲಿ ತಣ್ಣಗೆ ಕುಳಿತು ಸಮರೋನ್ಮಾದವನ್ನು ಪ್ರಚೋದಿಸುವ ವೀರಾಧಿವೀರರ ಗಂಟಲಿನಲ್ಲಿ ಬರೀ ಫಿರಂಗಿಗಳೇ ತುಂಬಿವೆ. ಭಗತ್ ಸಿಂಗ್ನಂತಹ ಕ್ರಾಂತಿಕಾರಿ ಪಕ್ಕದ ಮನೆಯಲ್ಲಿರಲಿ ಎಂಬ ಧೋರಣೆಯ ಜನ ಇವರು. ರಣರಂಗಕ್ಕೆ ಇಳಿಯದೆ ಜನಾಂಗೀಯ ದ್ವೇಷವನ್ನೇ ದೇಶಪ್ರೇಮವೆಂದು ಸಾರಹೊರಟವರಿಗೆ ಜೀವಗಳ ಬೆಲೆ ತಿಳಿಯುವುದಿಲ್ಲ.

ವಿಶ್ವದ ಇತಿಹಾಸದಲ್ಲಿ ನಡೆದಿರುವ ಎಲ್ಲ ಯುದ್ಧಗಳ ಹಿಂದೆ ಮನುಕುಲದ ಹಿತಾಸಕ್ತಿಯ ಉದಾತ್ತ ಆಶಯಗಳು ಹುಡುಕಿದರೂ ಸಿಗುವುದಿಲ್ಲ. ಅಹಂಕಾರದಿಂದ, ಸ್ವಾರ್ಥದಿಂದ ಮೆರೆಯುತ್ತಾ ಸಾರ್ವಜನಿಕ ಸಂಪತ್ತನ್ನು ಕೊಳ್ಳೆ ಹೊಡೆದು ರಾಜ್ಯಾಧಿಕಾರ ವಿಸ್ತರಿಸಿಕೊಳ್ಳುವ ಪ್ರಯತ್ನಗಳೇ ಅಲ್ಲಿ ಕಾಣುತ್ತವೆ. ಬಲಿಷ್ಠರು ದುರ್ಬಲರ ಮೇಲೆ ನಡೆಸುವ ದಬ್ಬಾಳಿಕೆಯನ್ನು ಶೌರ್ಯದ ಹೆಸರಿನಲ್ಲಿ ವೈಭವೀಕರಿಸಲಾಗಿದೆ. ರಾಜಕೀಯ ಅನಾಚಾರಗಳನ್ನು ನೈತಿಕವಾಗಿ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿದೇ ಧಾರ್ಮಿಕ ಸನಾತನತೆಯನ್ನು ಮತ್ತದರ ಘೋಷಿತ ಪಾವಿತ್ರ್ಯವನ್ನು ದೇಶ ಪ್ರೇಮದೊಂದಿಗೆ ತಳುಕುಹಾಕಿ ಮರೆಸುವ ವಿದ್ರೋಹದ ಸಂಗತಿ ಯಾವ ಕಾಲಕ್ಕೂ ಹೊಸದಲ್ಲ. ಆದರೆ ಬಾಹ್ಯಾಕಾಶದಲ್ಲಿ ಶಾಶ್ವತ ನೆಲೆ ಕಂಡುಕೊಳ್ಳುವಷ್ಟು ಮತ್ತು ಪಕ್ಕದ ಊರಿಗೆ ಹೋಗಿ ಬಂದಷ್ಟು ಸಲೀಸಾಗಿ ಚಂದ್ರನಲ್ಲಿಗೆ ಹೋಗಿ ಬರುವಷ್ಟು ತಾಂತ್ರಿಕ ಉನ್ನತಿಯನ್ನು ಸಾಧಿಸಿದ ಮನುಷ್ಯ ದಿನಬೆಳಗಾದರೆ ಧರ್ಮ ಜಾತಿಗಳ ಕೆಸರೆರಚಾಟದಲ್ಲಿ ಹಿಂಸಾಪರ ಧೋರಣೆಗಳನ್ನು ಬೆಳೆಸಿಕೊಂಡು ನರಳುತ್ತಿದ್ದಾನೆ. ಚರಿತ್ರೆಯಲ್ಲಿನ ವಿಕೃತಿಗಳನ್ನು ಹಸಿಹಸಿಯಾಗಿ ತಂದು ಸುರಿಯುತ್ತಾ ವರ್ತಮಾನದ ನೆಮ್ಮದಿಗೆ ಕಂಟಕವಾಗಿದ್ದಾನೆ. ಹೀಗೆ ಪೀಳಿಗೆಯಿಂದ ಪೀಳಿಗೆಗೆ ಹಿಂಸೆಯನ್ನು ದಾಟಿಸುತ್ತಾ ಹೋಗುವುದರ ಪರಿಣಾಮ ಕ್ರೂರವಾಗಬಹುದು. ವರ್ತಮಾನದ ಚಾರಿತ್ರ್ಯವನ್ನು ರೂಪಿಸಿಕೊಳ್ಳಲು ಅಗತ್ಯವಾದ ವಿದ್ಯಮಾನಗಳನ್ನು ಇತಿಹಾಸದಿಂದ ಆಯ್ದುಕೊಳ್ಳಬೇಕಾದುದು ಮನುಕುಲದ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು.

ಹಿಂಸೆಯಿಂದ ಆಗುವ ಸಾವು ನೋವು ಮಾನವತೆಯ ಕುಸಿತಕ್ಕೆ ಕಾರಣವಾಗುತ್ತದೆ. ಹಿಂಸೆಯು ಕೊಲೆ ಎಂಬ ಮರಿಯನ್ನು ಹಾಕುತ್ತಾ ಸೇಡಿನ ಹೀನ ಸಂತಾನವನ್ನು ಬೆಳೆಸುತ್ತದೆ. ಮನುಷ್ಯ ಹುಟ್ಟಿದ ಧರ್ಮ,ಜಾತಿ, ಬಣ್ಣದ ಹೆಸರಿನಲ್ಲಿ ತಿನ್ನುವ ಅನ್ನದ ವಿಷಯದಲ್ಲಿ ಶ್ರೇಷ್ಠತೆಯ ಅಹಂಕಾರ ಬೆಳೆಸಿಕೊಂಡು ಸಾಮಾಜಿಕ ತರತಮಕ್ಕೆ ಕಾರಣನಾಗಿದ್ದಾನೆ. ಹಸಿವು ಮತ್ತು ಹಿಂಸೆ ಮನುಷ್ಯ ಕುಲದ ಪರಮಶತ್ರುಗಳು. ಹಸಿವಿಗೆ ಅನ್ನದ ಭೇದವಿಲ್ಲ. ಹಿಂಸೆಗೆ ತನ್ನವರು ಅನ್ಯರು ಎಂಬ ಭೇದವಿಲ್ಲ. ಆದರೆ, ಇಂದಿನ ಜಗತ್ತು ರಾಕ್ಷಸ ರಾವಣತ್ವದಿಂದ ತುಂಬಿದೆ. ಶ್ರೀಸಾಮಾನ್ಯನ ನೆಮ್ಮದಿಯ ಬದುಕಿಗೆ ಯುದ್ಧಗಳು ತೊಡಕಾಗಿವೆ. ರಾಜಕಾರಣದ ದುಷ್ಟ ಮೋಹಕ್ಕೆ ಈ ನೆಲ ನೆತ್ತರಿನಿಂದ ತೊಯ್ದು ಕೆಂಪಾಗುತ್ತಿದೆ. ಪಾವಿತ್ರ್ಯದ ನೆಪದಲ್ಲಿ ಕೆಂಪಾದ ಇದೇ ಮಣ್ಣಿನಲ್ಲಿ ಮಾನವತೆಯು ಸೊಂಪಾಗಿ ಬೆಳೆದಿದ್ದ ಅನಂತಕಾಲದ ಪರಂಪರೆಯು ಮರುಹುಟ್ಟು ಪಡೆಯಬೇಕು. ಚರಿತ್ರೆಯುದ್ದಕ್ಕೂ ಭೂಮಿಗೆ ಬಿದ್ದ ರಕ್ತವನ್ನು ತೊಳೆಯಲು ಆಗದಿರಬಹುದು. ಹೊಸದಾಗಿ ನೆತ್ತರು ಹರಿಯುವುದನ್ನು ತಡೆಯಬಹುದು. ಇಡೀ ಭೂಮಿ ಮಸಣಮಯವಾಗುವುದನ್ನು ತಪ್ಪಿಸಬಹುದು. ನೆಲದ ಒಡಲಿಂದ ಕಸಿದ ಹಸಿರನ್ನು ಹಿಂತಿರುಗಿಸುವಂತಾಗಬೇಕು. ಪ್ರಪಂಚದ ಎಲ್ಲ ರಾವಣರ ಎದೆಯಲ್ಲಿ ಶಾಂತಿಗೀತೆ ಗುನುಗುವಂತಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.